ಇಲ್ಲ, ಆಜ್ ತಕ್ ಎಎಪಿ ಗೆಲುವಿನ ಮುನ್ಸೂಚನೆ ನೀಡುವ ದೆಹಲಿಯ ಎಕ್ಸಿಟ್ ಪೋಲ್ ಅನ್ನು ಬಿಡುಗಡೆ ಮಾಡಿಲ್ಲ
ಸಾರಾಂಶ:
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮೂರು ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳುವ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ತೋರಿಸುವ ಆಜ್ ತಕ್ ಸುದ್ದಿ ವರದಿಯ ಉದ್ದೇಶಿತ ವೀಡಿಯೋವನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಅಂತಹ ಯಾವುದೇ ನಿರ್ಗಮನ ಸಮೀಕ್ಷೆ (ಎಕ್ಸಿಟ್ ಪೋಲ್) ಅನ್ನು ಆಜ್ ತಕ್ ಪ್ರಸಾರ ಮಾಡಿಲ್ಲ ಮತ್ತು ಭಾರತದ ಚುನಾವಣಾ ಆಯೋಗವು (ಇಸಿಐ) ಜೂನ್ ೧, ೨೦೨೪ ರ ಸಂಜೆಯವರೆಗೆ ಅಂತಹ ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸುವುದನ್ನು ನಿಷೇಧಿಸಿದೆ. ಆಜ್ ತಕ್ ವರದಿಯದ್ದು ಎಂದು ಹಂಚಿಕೊಂಡಿರುವ ವೀಡಿಯೋ ನಕಲಿಯಾಗಿದೆ.
ಹೇಳಿಕೆ:
೨೦೨೪ ರ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಮೂರು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಆಜ್ ತಕ್ ಎಕ್ಸಿಟ್ ಪೋಲ್ ವರದಿ ತೋರಿಸಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಆಜ್ ತಕ್ ಶೋ ಹೋಸ್ಟ್ ಸುಧೀರ್ ಚೌಧರಿ ಕಾಣಿಸಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಈಗ ದೇಶದ ರಾಷ್ಟ್ರೀಯ ಮಾಧ್ಯಮಗಳು ಸಹ ಪಶ್ಚಿಮ ದೆಹಲಿಯಲ್ಲಿ ಮಹಾಬಲ್ ಮಿಶ್ರಾ ಪ್ರಬಲವಾಗಿ ಗೆಲ್ಲುತ್ತಿದ್ದಾರೆ ಎಂದು ಒಪ್ಪಿಕೊಂಡಿವೆ. ಪ್ರತಿ ಸಮೀಕ್ಷೆಯಲ್ಲಿ ಫಾರ್ವರ್ಡ್. ಇದು ಮಹಾಬಲ್ ಮಿಶ್ರಾ ಜಿಯವರ ಜನಪ್ರಿಯತೆ, ಇಂದು ಅವರು ಇಡೀ ದೇಶದ ಮಾಧ್ಯಮಗಳ ನಾಲಿಗೆಯಲ್ಲಿದ್ದಾರೆ. ನೀವು ಕೂಡ ವೀಡಿಯೋವನ್ನು ವೀಕ್ಷಿಸಿ (ಕನ್ನಡಕ್ಕೆ ಅನುವಾದಿಸಲಾಗಿದೆ).”
ವೈರಲ್ ವೀಡಿಯೋ ಹೊಂದಿರುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಆಜ್ ತಕ್‌ನ ನಿರ್ಗಮನ ಸಮೀಕ್ಷೆಯು ಫೇಸ್‌ಬುಕ್ ಮತ್ತು ಎಕ್ಸ್ ನಲ್ಲಿ (ಹಿಂದೆ ಟ್ವಿಟರ್) ಎಎಪಿಗೆ ಮೇಲುಗೈ ತೋರಿಸುತ್ತದೆ ಎಂದು ಹೇಳುವ ಇದೇ ರೀತಿಯ ಪೋಷ್ಟ್ ಗಳನ್ನು ಹಂಚಿಕೊಳ್ಳಲಾಗಿದೆ.
ಪುರಾವೆ:
ವೈರಲ್ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ಲೇ ಆಗುತ್ತಿರುವ ಆಡಿಯೋ ಸುಧೀರ್ ಚೌಧರಿ ಅವರ ತುಟಿಗಳ ಚಲನೆಗೆ ಹೊಂದಿಕೆಯಾಗಿಲ್ಲ ಎಂದು ಕಂಡುಬಂದಿದೆ. ಇದನ್ನು ಪರಿಶೀಲಿಸಲು, ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಮೇ ೧೬, ೨೦೨೪ ರಂದು ಯೂಟ್ಯೂಬ್‌ನಲ್ಲಿ ಆಜ್ ತಕ್ ಹಂಚಿಕೊಂಡ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಅದರ ಶೀರ್ಷಿಕೆ ಹೀಗಿದೆ, “ಬ್ಲ್ಯಾಕ್ ಅಂಡ್ ವೈಟ್ ವಿಥ್ ಸುಧೀರ್ ಚೌಧರಿ ಲೈವ್: PM Modi EXCLUSIVE Interview | ಲೋಕಸಭೆ ಚುನಾವಣೆ ೨೦೨೪ (ಕನ್ನಡಕ್ಕೆ ಅನುವಾದಿಸಲಾಗಿದೆ)." ಈ ವೀಡಿಯೋದಲ್ಲಿ, ಸುಧೀರ್ ಚೌಧರಿ ಅವರ ಕ್ಲಿಪ್ ಅನ್ನು ಈ ವೀಡಿಯೋದಿಂದ ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸುವ ಅದೇ ಹಿನ್ನೆಲೆ, ಚೌಧರಿ ಅವರ ಉಡುಪು ಮತ್ತು ವೀಡಿಯೋದ ಕೆಳಗಿನ ಬಲಭಾಗದಲ್ಲಿರುವ ಜಾಹೀರಾತನ್ನು ನಾವು ನೋಡಬಹುದು. ಆದರೆ, ವೈರಲ್ ವೀಡಿಯೋದಲ್ಲಿ ಕಂಡುಬರುವಂತೆ ಈ ವೀಡಿಯೋದಲ್ಲಿ ಎಎಪಿ ಅಭ್ಯರ್ಥಿ ಮಹಾಬಲ್ ಮಿಶ್ರಾ ಅವರ ಬಗ್ಗೆಯ ವರದಿಯನ್ನು ಒಳಗೊಂಡಿಲ್ಲ.
ಮೇ ೧೬, ೨೦೨೪ ರಂದು ಆಜ್ ತಕ್ ಹಂಚಿಕೊಂಡ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಆಜ್ ತಕ್ ಅದೇ ದಿನ ಎಕ್ಸ್ ನಲ್ಲಿ ಈ ವೀಡಿಯೋದ ೫೨ ನಿಮಿಷಗಳ ಆವೃತ್ತಿಯನ್ನು ಹಂಚಿಕೊಂಡಿದೆ.
ಜೂನ್ ೧, ೨೦೨೪ ರಂದು ಸಂಜೆ ೬:೩೦ ರ ಮೊದಲು ಯಾವುದೇ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸುವುದನ್ನು ಭಾರತದ ಚುನಾವಣಾ ಆಯೋಗವು ನಿಷೇಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಇಸಿಐ ಇದನ್ನು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದೆ.
ಏಪ್ರಿಲ್ ೧೯, ೨೦೨೪ ರಂದು ಇಸಿಐ ಫೇಸ್‌ಬುಕ್ ನಲ್ಲಿ ಹಂಚಿಕೊಂಡ ಪೋಷ್ಟ್ ನಲ್ಲಿನ ಚಿತ್ರದ ಸ್ಕ್ರೀನ್‌ಶಾಟ್.
ಇದಲ್ಲದೆ, ಡೀಪ್‌ಫೇಕ್ಸ್ ಅನಾಲಿಸಿಸ್ ಯುನಿಟ್ (ಡಿಎಯು) ಎಕ್ಸ್ ನಲ್ಲಿ ಪೋಷ್ಟ್ ಒಂದನ್ನು ಹಂಚಿಕೊಂಡಿದೆ. ಅಲ್ಲಿ ಅವರು ಆಜ್ ತಕ್‌ನ ವೀಡಿಯೋ ಸೇರಿದಂತೆ ಇನ್ನಿತರ ವಿಡಿಯೋಗಳನ್ನು ಉದ್ಧರಿಸಿ, ಅವುಗಳನ್ನು ವೀಡಿಯೋವಿಗೆ ಎಐ-ರಚಿತ ಆಡಿಯೋವನ್ನು ಸೇರಿಸಿ ಸಂಪಾದಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ದೆಹಲಿಯ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ತೋರಿಸುವ ವೀಡಿಯೋ ನಕಲಿ ಎಂಬುದನ್ನು ಇದು ದೃಢಪಡಿಸುತ್ತದೆ.
ತೀರ್ಪು:
ದೆಹಲಿಯಲ್ಲಿ ೨೦೨೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಎಎಪಿ ಮೇಲುಗೈ ಸಾಧಿಸುತ್ತದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿರುವ ಆಜ್ ತಕ್ ವರದಿಯ ವೀಡಿಯೋ ನಕಲಿಯಾಗಿದೆ. ಎಎಪಿ ಅಭ್ಯರ್ಥಿ ಮಹಾಬಲ್ ಮಿಶ್ರಾ ಅವರಿಗೆ ಮೇಲುಗೈ ಎಂದು ಹೇಳುವ ನಿರೂಪಕ ಮತ್ತು ಸುದ್ದಿ ಸಂಪಾದಕ ಸುಧೀರ್ ಚೌಧರಿಯವರನ್ನು ಒಳಗೊಂಡ ವೈರಲ್ ವೀಡಿಯೋವನ್ನು ಎಐ ಬಳಸಿ ಎಡಿಟ್ ಮಾಡಲಾಗಿದೆ ಮತ್ತು ಜೂನ್ ೧, ೨೦೨೪ ರವರೆಗೆ ಇಸಿಐ ವಿಧಿಸಿದ ನಿಷೇಧದ ನಂತರ ಯಾವುದೇ ನಿರ್ಗಮನ ಸಮೀಕ್ಷೆಯ ಫಲಿತಾಂಶಗಳನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ.