ಹೈದರಾಬಾದ್‌ನಲ್ಲಿ ಒವೈಸಿಯ ಎಐಎಂಐಎಂ ಅನ್ನು ಪ್ರಧಾನಿ ಮೋದಿ ಬೆಂಬಲಿಸುತ್ತಿದ್ದಾರೆಂದು ತೋರಿಸಲು ಎಡಿಟ್ ಮಾಡಿದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
೨೦೨೪ ರ ಲೋಕಸಭಾ ಚುನಾವಣೆಯ ವೇಳೆ ಹೈದರಾಬಾದ್‌ನಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅನ್ನು ಬೆಂಬಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ತೋರಿಸುವ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದರೆ, ಎಐಎಂಐಎಂಗೆ ಪ್ರಧಾನಿ ತಮ್ಮ ಬೆಂಬಲವನ್ನು ನೀಡಿದ್ದಾರೆ ಎಂದು ತೋರಿಸಲು ಒಂದು ಎಡಿಟ್ ಮಾಡಿದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಹೇಳಿಕೆ:
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂಗೆ ಬೆಂಬಲ ನೀಡುವುದಾಗಿ ಪ್ರಧಾನಿ ಮೋದಿ ಹೇಳುತ್ತಿರುವ ಉದ್ದೇಶಿತ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿರುವ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು, “ಮೋದಿ ನೆ ಹೈದರಾಬಾದ್ ಮೇ ಎಐಎಂಐಎಂ ಕೊ ಕಿಯಾ ಸಪೋರ್ಟ್ (ಕನ್ನಡಕ್ಕೆ ಅನುವಾದಿಸಲಾಗಿದೆ),” ಎಂದು ಓದುತ್ತದೆ, ಇದು ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿಯವರು ಹೈದರಾಬಾದ್‌ನಲ್ಲಿ ಎಐಎಂಐಎಂ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಸೂಚಿಸುತ್ತದೆ.
ಅದೇ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಸಮಾನ ರೀತಿಯ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.
ವೈರಲ್ ವೀಡಿಯೋದೊಂದಿಗೆ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಮೇ ೧೦, ೨೦೨೪ ರಂದು 'ಕೋಕ್ ಖೊರಾಂಗ್' ಹೆಸರಿನ ಚಾನಲ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಈ ವೀಡಿಯೋದಲ್ಲಿ, ವೈರಲ್ ವೀಡಿಯೋದಲ್ಲಿರುವಂತೆಯೇ ಪ್ರಧಾನಿಯವರು ಧರಿಸಿರುವ ಬಟ್ಟೆ ಮತ್ತು ಶಾಲ್ ಅನ್ನು ನಾವು ನೋಡಬಹುದು.
ವೈರಲ್ ವೀಡಿಯೋ ಮತ್ತು 'ಕೋಕ್ ಖೊರಾಂಗ್' ನ ಯೂಟ್ಯೂಬ್ ವೀಡಿಯೋಗಳ ಸ್ಕ್ರೀನ್‌ಶಾಟ್ ಮಧ್ಯೆ ಹೋಲಿಕೆ.
ವೀಡಿಯೋದ ಸುಮಾರು ೧೦:೦೬ ನಿಮಿಷಗಳಲ್ಲಿ, "ತೆಲಂಗಾಣ ಹೇಳುತ್ತಿದೆ, ಕಾಂಗ್ರೆಸ್ ಇಲ್ಲ, ಬಿಆರ್‌ಎಸ್ ಇಲ್ಲ, ಎಐಎಂಐಎಂ ಇಲ್ಲ, ಆದರೆ ಬಿಜೆಪಿಗೆ ಮಾತ್ರ ಮತ ಹಾಕುತ್ತೇವೆ," ಎಂದು ಪ್ರಧಾನಿ ಮೋದಿ ಹೇಳಿದರು. ವೈರಲ್ ವೀಡಿಯೋದಲ್ಲಿ ನಾವು ಬಹುಪಾಲು ಕೇಳುವ ನಿಖರವಾದ ಪದಗಳು ಇವು. ಆದರೆ, "ಎಐಎಂಐಎಂ ಇಲ್ಲ" ಎಂದು ಪ್ರಧಾನಿ ಹೇಳುವ ಭಾಗದಲ್ಲಿ, "ಎಐಎಂಐಎಂಗೆ ಮಾತ್ರ ಮತ ಹಾಕುತ್ತೇವೆ" ಎಂಬ ಪದಗುಚ್ಛವನ್ನು ಸೇರಿಸಲು ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ.
ಇದಲ್ಲದೆ, ಪ್ರಧಾನಿಯವರು ತಮ್ಮ ಭಾಷಣದಲ್ಲಿ ಎಲ್ಲಿಯೂ ತಾವು ಅಥವಾ ತಮ್ಮ ಪಕ್ಷ ಎಐಎಂಐಎಂ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಿಲ್ಲ. ಬಿಜೆಪಿ ತನ್ನ ಹೈದೆರಾಬಾದ್ ನ ಅಭ್ಯರ್ಥಿಯಾಗಿ ನಟಿ ಮತ್ತು ರಾಜಕಾರಣಿ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ. ಅವರು ಎಐಎಂಐಎಂ ನಾಯಕ ಮತ್ತು ಹಾಲಿ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
'ಕೋಕ್ ಖೋರಾಂಗ್' ಹಂಚಿಕೊಂಡಿರುವ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಹೆಚ್ಚಿನ ಹುಡುಕಾಟವು ಮೇ ೧೦, ೨೦೨೪ ರಂದು ಎಎನ್‌ಐ ಹಂಚಿಕೊಂಡ ಯೂಟ್ಯೂಬ್ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋದಲ್ಲಿ ನಾವು ಪ್ರಧಾನಿಯವರ ಭಾಷಣವನ್ನು ನೋಡಬಹುದು. ಅದರಲ್ಲಿ ತೆಲಂಗಾಣದ ಜನರು ಬಿಜೆಪಿಗೆ ಮತ ಹಾಕುತ್ತಾರೆ (೧೨:೦೬-ನಿಮಿಷಗಳ ಟೈಮ್‌ಸ್ಟ್ಯಾಂಪ್) ಎಂದು ಅವರು ಹೇಳುವುದನ್ನು ನೋಡಬಹುದು. ಈ ವೀಡಿಯೋದ ಲೈವ್‌ಸ್ಟ್ರೀಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳಲ್ಲಿಯೂ ಕಾಣಬಹುದು.
ಎಎನ್‌ಐ ಹಂಚಿಕೊಂಡ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಮೇ ೧೦, ೨೦೨೪ ರಂದು ತೆಲಂಗಾಣದಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಮೂಲ ವೀಡಿಯೋವನ್ನು ಅವರು ಪ್ರಸ್ತುತ ಲೋಕಸಭಾ ಚುನಾವಣೆಯ ಸಮಯದಲ್ಲಿ ಹೈದರಾಬಾದ್‌ನಲ್ಲಿ ಎಐಎಂಐಎಂ ಅನ್ನು ಬೆಂಬಲಿಸುತ್ತಾರೆ ಎಂದು ತೋರಿಸಲು ಎಡಿಟ್ ಮಾಡಲಾಗಿದೆ ಎಂದು ಇದು ತೋರಿಸುತ್ತದೆ.
ತೀರ್ಪು:
ಎಐಎಂಐಎಂಗೆ ಪ್ರಧಾನಿ ಮೋದಿ ಬೆಂಬಲ ನೀಡುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಮೇ ೧೦, ೨೦೨೪ ರಂದು ಹೈದರಾಬಾದ್‌ನಲ್ಲಿ ತಮ್ಮ ರ‍್ಯಾಲಿಯಲ್ಲಿ ಪ್ರಧಾನಿಯವರು ಮಾಡಿದ ಭಾಷಣದ ಕ್ಲಿಪ್ ಅನ್ನು ಅವರು ಹೈದರಾಬಾದ್‌ನಲ್ಲಿ ಎಐಎಂಐಎಂ ಅನ್ನು ಬೆಂಬಲಿಸುತ್ತಾರೆ ಎಂದು ತೋರಿಸಲು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.