ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಇವಿಎಂ ಬ್ಯಾಲೆಟ್ ಬಟನ್ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂಬುವುದು ನಿಜವೇ?
ಏಪ್ರಿಲ್ 26ರಂದು ಲೋಕಸಭೆ ಚುನಾವಣೆಯ ಮತದಾನದ ವೇಳೆ ಬೆಂಗಳೂರಿನ 163 ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 17 ರಲ್ಲಿ ಇವಿಎಂನ ಬ್ಯಾಲೆಟ್ ಬಟನ್ ಸಕ್ರಿಯವಾಗಿರಲಿಲ್ಲ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ ಆಡಿಯೋ ವಾಟ್ಸಾಪ್‌ನಲ್ಲಿ ವೈರಲ್ ಆಗಿತ್ತು.
ಆಡಿಯೋದಲ್ಲಿ ಈ ರೀತಿ ಹೇಳಲಾಗಿತ್ತು.. “ಶುಭೋದಯ, ನಾನು ನನ್ನ ಮತದಾನ ಮಾಡಿ ಬಂದಿದ್ದೇನೆ. ನನ್ನ ಜಿಲ್ಲೆ 163 ಶಾಂತಿನಗರ, ಭಾಗ ಸಂಖ್ಯೆ 17, ಸೇಂಟ್ ಅಣ್ಣಾ ಕಾನ್ವೆಂಟ್. ನಾನು ಮತಗಟ್ಟೆಗೆ ಹೋದಾಗ ರಿಜಿಸ್ಟರ್‌ನಲ್ಲಿ ನನ್ನ ಹೆಸರು ಎಲ್ಲಿದೆ ಎಂದು ಪರಿಶೀಲಿಸಲು ಮೊದಲ ವ್ಯಕ್ತಿ ಭಾಗ ಸಂಖ್ಯೆಯನ್ನು ತೆಗೆದುಕೊಂಡರು, ಎರಡನೆಯವರು ಸಹಿ ಮಾಡಿದರು ಮತ್ತು ಮೂರನೇ ವ್ಯಕ್ತಿ ಬೆರಳಿಗೆ ಗುರುತು ಹಾಕಿದರು. ದಯವಿಟ್ಟು ಈಗ ಎಚ್ಚರಿಕೆಯಿಂದ ಆಲಿಸಿ, ಹಿಡನ್ ಪ್ಯಾನೆಲ್‌ಗಳ ಹಿಂದೆ ಇರುವ ನಿಜವಾದ ಮತದಾನ ಯಂತ್ರವನ್ನು ಸಕ್ರಿಯಗೊಳಿಸಲು ಸಿಬ್ಬಂದಿ ತಮ್ಮ ಮಾಸ್ಟರ್ ನಿಯಂತ್ರಣ ಯೂನಿಟ್‌ನ ಬಟನ್ ಅನ್ನು ಒತ್ತಬೇಕಾಗುತ್ತದೆ. ನಾನು ಹೋಗಿ ಇವಿಎಂ ಬಟನ್ ಒತ್ತಿದಾಗ ನನಗೆ ಯಾವುದೇ ಶಬ್ದ ಕೇಳಿಲ್ಲ. ನನ್ನ ಅಭ್ಯರ್ಥಿಯ ಚಿತ್ರವನ್ನು ತೋರಿಸುವ ವಿವಿಪ್ಯಾಟ್‌ನಲ್ಲೂ ಶಬ್ದ ಕೇಳಿಲ್ಲ. ಹಾಗಾಗಿ 10-15 ಸೆಕೆಂಡ್ ಕಾದು ಮತ್ತೆ ಬಟನ್ ಒತ್ತಿದರೂ, ವಿವಿಪ್ಯಾಟ್‌ನಲ್ಲಿ ಶಬ್ದ ಬರಲಿಲ್ಲ, ಚಿತ್ರ ಪ್ರದರ್ಶನವಾಗುತ್ತಿತ್ತು. ಹಾಗಾಗಿ ಸ್ವಲ್ಪ ಸಿಟ್ಟಾಗಿ ಮೂರನೇ ವ್ಯಕ್ತಿಯ ಬಳಿ ಹೋದೆ, ಕಂಟ್ರೋಲ್ ಯೂನಿಟ್‌ನಲ್ಲಿರುವ ಆಕ್ಟಿವೇಟ್ ಬಟನ್ ಒತ್ತುವ ಮೂಲಕ ಮತ ಯಂತ್ರವನ್ನು ಸಕ್ರಿಯಗೊಳಿಸುವುದು ಅವರ ಕೆಲಸವಾಗಿತ್ತು. ನಾನು ಬಟನ್ ಏಕೆ ಒತ್ತಲಿಲ್ಲ? ಎಂದು ಕೇಳಿದೆ ಮತ್ತು ಚುನಾವಣಾಧಿಕಾರಿಯನ್ನು ಮಾತನಾಡಿಸಿದೆ. ಮೂರನೇ ವ್ಯಕ್ತಿ ಮತದಾನ ಯಂತ್ರವನ್ನು ಸಕ್ರಿಯಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ. ಅವರು ಯಂತ್ರವನ್ನು ಸಕ್ರಿಯಗೊಳಿಸಿದ್ದಾರೆ ಎಂದು ನೀವು ಖಚಿತಪಡಿಸಿಕೊಂಡ ಬಳಿಕ ಮತದಾನದ ಮಾಡುವ ಜಾಗಕ್ಕೆ ಹೋಗಿ ಬಟನ್ ಒತ್ತಿ. ಹಸಿರು ದೀಪ ಆನ್ ಆಗಿರಬೇಕು. ಎರಡೂ ಸಂದರ್ಭಗಳಲ್ಲಿ ಹಸಿರು ದೀಪವನ್ನು ನೀವು ನೋಡಲು ಸಾಧ್ಯವಾಗುತ್ತದೆ. ದುರಂತವೆಂದರೆ, ನನ್ನ ಕೈಗೆ ಗುರುತು ಹಾಕುವ ಮೊದಲು ಗುರುತು ಹಾಕಿಸಿಕೊಂಡ ವ್ಯಕ್ತಿಗಳನ್ನು ನಾನು ಗಮನಿಸಿದ್ದೇನೆ. ಅವರು ಮತದಾನ ಮಾಡುವಾಗ ಇವಿಎಂನಿಂದ ಯಾವುದೇ ಶಬ್ದ ಬಂದಿಲ್ಲ. ಹಾಗಾಗಿ, ನಾನು ವಿನಂತಿಸುವುದೇನೆಂದರೆ ದಯವಿಟ್ಟು ನೀವು ಮೂರನೇ ವ್ಯಕ್ತಿಯ ಬಳಿ ಇರುವಾಗ ದಯವಿಟ್ಟು ಆ ವ್ಯಕ್ತಿ ಮತ ಯಂತ್ರವನ್ನು ಸಕ್ರಿಯಗೊಳಿಸಿದ್ದಾರೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ ನೀವು ಹಿಡನ್ ಪ್ಯಾನೆಲ್‌ನ ಹಿಂದೆ ಹೋಗಿ ಇವಿಎಂನ ಹಸಿರು ದೀಪ ಆನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಅದು ಆನ್ ಆಗದಿದ್ದರೆ ಮತ್ತೆ ಹಿಂತಿರುಗಿ ಮತ್ತು ಆನ್ ಮಾಡಲು ಹೇಳಿ. ಉಳಿದ ಪ್ರಕ್ರಿಯೆ ನಿಮಗೆ ತಿಳಿದಿದೆ”
ಫ್ಯಾಕ್ಟ್‌ಚೆಕ್ : ವೈರಲ್ ಆಡಿಯೊದ ಹೇಳಿಕೆಯನ್ನು ಚುನಾವಣಾ ಆಯೋಗವು ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದೆ.ಬೆಂಗಳೂರಿನ ಜಿಲ್ಲಾ ಚುನಾವಣಾಧಿಕಾರಿಯೂ ಇದನ್ನು ದೃಢಪಡಿಸಿದ್ದು, ಏಪ್ರಿಲ್ 26, 2024 ರಂದು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಮತಗಟ್ಟೆಯಲ್ಲಿ ಬ್ಯಾಲೆಟ್ ಬಟನ್ ಸಕ್ರಿಯಗೊಳಿಸದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಎಎನ್‌ಐ ಮತ್ತು ಡೆಕ್ಕನ್ ಹೆರಾಲ್ಡ್‌ನಂತಹ ಸುದ್ದಿ ಸಂಸ್ಥೆಗಳು ಕೂಡ ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಪ್ರಕರಣದ ಕುರಿತು ವರದಿ ಮಾಡಿವೆ.
ಚುನಾವಣಾ ಆಯೋಗ ನೀಡಿರುವ ಸ್ಪಷ್ಟೀಕರಣದಂತೆ ವೈರಲ್ ಆಡಿಯೋದಲ್ಲಿರುವ ಆರೋಪ ಸುಳ್ಳು ಎಂದು ಖಚಿತಪಡಿಸಬಹುದು. ಏಕೆಂದರೆ, ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯ ಅಧಿಕೃತ ಸಂಸ್ಥೆಯಾಗಿದೆ.