ಇಲ್ಲ, ಆಕ್ಸಿಸ್-ಮೈ ಇಂಡಿಯಾ ಎಕ್ಸಿಟ್ ಪೋಲ್ ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ೧೩-೧೫ ಸ್ಥಾನಗಳು ಸಿಗುತ್ತದೆ ಎಂದು ಹೇಳಿಕೊಂಡಿಲ್ಲ
ಸಾರಾಂಶ:
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಆಜ್ ತಕ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ ನಿರ್ಗಮನ ಸಮೀಕ್ಷೆಗಳ ಮೇಲೆ ಅವಲಂಬನೆಯನ್ನು ಲೇವಡಿ ಮಾಡಿದ್ದಾರೆ ಮತ್ತು ಒಂಬತ್ತು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದ್ದರೂ, ಆಕ್ಸಿಸ್-ಮೈ ಇಂಡಿಯಾ ಎಕ್ಸಿಟ್ ಪೋಲ್‌ಗಳು ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೩ ರಿಂದ ೧೫ ಸ್ಥಾನಗಳನ್ನು ಗೆಲ್ಲಬಹುದು ಭವಿಷ್ಯ ನುಡಿದಿವೆ ಎಂದು ಆರೋಪಿಸಿದ್ದಾರೆ. ಆದರೆ, ಈ ಎಕ್ಸಿಟ್ ಪೋಲ್ "ಕಾಂಗ್ರೆಸ್ +" ಅನ್ನು ಉಲ್ಲೇಖಿಸಿದೆ, ಇದು ಡಿಎಂಕೆ (ದ್ರಾವಿಡ ಮುನ್ನೇತ್ರ ಕಜಕಂ) ಹೊರತುಪಡಿಸಿ, ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳಿಗೆ ನೀಡಿರುವ ಸಂಖ್ಯೆಯಾಗಿದೆ ಎಂದು ಕಂಡುಬಂದಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಭವಿಷ್ಯ ನುಡಿದಿರುವ ಎಕ್ಸಿಟ್ ಪೋಲ್‌ಗಳ ಬಗ್ಗೆ ಕಂಡುಬಂದ ಆರೋಪಗಳು ತಪ್ಪುದಾರಿಗೆಳೆಯುವಂತಿವೆ ಎಂಬುದನ್ನು ಇದು ತೋರಿಸುತ್ತದೆ.
ಹೇಳಿಕೆ:
ಎಕ್ಸಿಟ್ ಪೋಲ್‌ಗಳ ಕುರಿತು ಆಜ್ ತಕ್ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ವೈರಲ್ ಆಗಿದ್ದು, ಆಕ್ಸಿಸ್-ಮೈ ಇಂಡಿಯಾ ಸಮೀಕ್ಷೆಯು ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ೧೩-೧೫ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ರಾಜ್ಯದಿಂದ ಕೇವಲ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಸಹ ಭವಿಷ್ಯ ನುಡಿದಿದೆ, ಎಂದು ಹೇಳಿಕೊಳ್ಳಲಾಗಿದೆ. ಅಂತಹ ಪೋಷ್ಟ್ ಗಳು ಈ ವ್ಯತ್ಯಾಸವನ್ನು ಎತ್ತಿ ತೋರಿಸುವ ಮೂಲಕ ನಿರ್ಗಮನ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಸಹ ಪ್ರಶ್ನಿಸಿವೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಪಾಪಾ ಕಿ ಪರಿ" ಕಾಂಗ್ರೆಸ್ 9 ಸ್ಥಾನಗಳಲ್ಲಿ ಹೋರಾಡುತ್ತಿದೆ ಮತ್ತು ಅವರು ಕಾಂಗ್ರೆಸ್ ಗೆ ೧೩-೧೫ ಸ್ಥಾನಗಳನ್ನು ನೀಡುತ್ತಿದ್ದಾರೆ. ಇದು ಅವರ "ವಿಶ್ವಾಸಾರ್ಹತೆ" #ExitPoll 😂."
ಎಕ್ಸ್ ನಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಇನ್ನೂ ಹಲವರು ಅದೇ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ಆಜ್ ತಕ್‌ನ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಹುಡುಕಿದ್ದೇವೆ ಮತ್ತು ಅವರು ಎಕ್ಸ್ ನಲ್ಲಿ ಜೂನ್ ೧, ೨೦೨೪ ರಂದು ಹಂಚಿಕೊಂಡ ವೀಡಿಯೋವೊಂದನ್ನು ಕಂಡುಕೊಂಡಿದ್ದೇವೆ. ಅದರ ಶೀರ್ಷಿಕೆ ಹೀಗಿದೆ “बिहार में NDA और INDIA गठबंधन को कितनी सीटें? आ गया Exit Poll का आंकड़ा.” #IndiaTodayAxisExitPoll #ExitPoll #loksabhaelaction2024 ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಸಹ ಈ ಪೋಷ್ಟ್ ಹೊಂದಿತ್ತು ಮತ್ತು @AxisMyIndia ಎಂದು ಟ್ಯಾಗ್ ಕೂಡ ಮಾಡಲಾಗಿದೆ. ಈ ವೀಡಿಯೋದಲ್ಲಿ, ಪರದೆಯ ಎಡಭಾಗದಲ್ಲಿ ಅದೇ ಸುದ್ದಿ ನಿರೂಪಕ ಮತ್ತು ಆಕ್ಸಿಸ್-ಮೈ ಇಂಡಿಯಾ ನ ತಮಿಳುನಾಡು ರಾಜ್ಯದ ಎಕ್ಸಿಟ್ ಪೋಲ್ ನಾವು ನೋಡಿದ್ದೇವೆ.
ರಾಜ್ಯದ ೩೯ ಸ್ಥಾನಗಳ ಪೈಕಿ ಈ ಎಕ್ಸಿಟ್ ಪೋಲ್ ಬಿಜೆಪಿಗೆ ೨-೪ ಸ್ಥಾನಗಳು, ಕಾಂಗ್ರೆಸ್‌ಗೆ ೧೩-೧೫ ಸ್ಥಾನಗಳು, ಡಿಎಂಕೆಗೆ ೨೦-೨೨ ಸ್ಥಾನಗಳು, ಎಐಎಡಿಎಂಕೆಗೆ ೦-೨ ಸ್ಥಾನಗಳು (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) , ಮತ್ತು ಇತರ ಪಕ್ಷಗಳಿಗೆ ೦ ಸ್ಥಾನಗಳು ಸಗಬಹುದೆಂದು ಈ ಎಕ್ಸಿಟ್ ಪೋಲ್ ಹೇಳಿಕೊಂಡಿದೆ.
ಜೂನ್ ೧, ೨೦೨೪ ರಂದು ಆಜ್ ತಕ್ ಎಕ್ಸ್ ನಲ್ಲಿ ಹಂಚಿಕೊಂಡ ಸುದ್ದಿ ವರದಿಯ ವೀಡಿಯೋದ ಸ್ಕ್ರೀನ್‌ಶಾಟ್.
ಆಜ್ ತಕ್ ಪ್ರಸಾರ ಮಾಡಿದ ತಮಿಳುನಾಡಿನ ಆಕ್ಸಿಸ್-ಮೈ ಇಂಡಿಯಾ ಎಕ್ಸಿಟ್ ಪೋಲ್‌ಗಾಗಿ ನಡೆಸಿದ ಹೆಚ್ಚಿನ ಹುಡುಕಾಟವು ಜೂನ್ ೧, ೨೦೨೪ ರಂದು ಅವರು ಹಂಚಿಕೊಂಡ ಯೂಟ್ಯೂಬ್ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು. “Lok Sabha Election Exit Poll 2024: Tamil Nadu के एग्जिट पोल में NDA को 2-4 सीटें मिलने जा रही हैं,” ಎಂಬ ಶೀರ್ಷಿಕೆಯ ಈ ವೀಡಿಯೋ, ವೈರಲ್ ವಿಡಿಯೋದಂತೆಯೇ ನಿಖರವಾದ ದೃಶ್ಯಗಳನ್ನು ಒಳಗೊಂಡಿದೆ.
ಜೂನ್ ೧, ೨೦೨೪ ರಂದು ಆಜ್ ತಕ್ ಹಂಚಿಕೊಂಡ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಆಜ್ ತಕ್ ಹಂಚಿಕೊಂಡ ಎರಡೂ ವೀಡಿಯೋಗಳಲ್ಲಿ, ಆಕ್ಸಿಸ್-ಮೈ ಇಂಡಿಯಾ ಸಮೀಕ್ಷೆಯು ಕಾಂಗ್ರೆಸ್‌ಗೆ ೧೩-೧೫ ಸ್ಥಾನಗಳು ಸಿಗುತ್ತದೆ ಎಂದು ಅವರು ಹೇಳಿಕೊಂಡಿಲ್ಲ. "ಕಾಂಗ್ರೆಸ್ +" ಎಂದು ವೀಡಿಯೋದಲ್ಲಿ ಸ್ಕ್ರೀನ್ ನ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅದರರ್ಥ ಡಿಎಂಕೆ (ಈ ನಿರ್ಗಮನ ಸಮೀಕ್ಷೆಯಲ್ಲಿ ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ) ಹೊರತುಪಡಿಸಿ, ಇಂಡಿಯಾ ಒಕ್ಕೊಟದಿಂದ ತಮಿಳು ನಾಡಿನಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ಸ್ಪರ್ಧಿಸಿದ ಎಲ್ಲಾ ಪಕ್ಷಗಳಿಗೆ ಮೊತ್ತ ಸಿಗುವ ಸ್ಥಾನಗಳ ಸಂಖ್ಯೆ.
ತಮಿಳು ನಾಡಿನ ೩೯ ಕ್ಷೇತ್ರಗಳಲ್ಲಿ, ಇಂಡಿಯಾ ಒಕ್ಕೂಟ ಹಂಚಿಕೊಂಡಿರುವ ಸ್ಥಾನಗಳು ಹೀಗಿವೆ: ಡಿಎಂಕೆ - ೨೧, ಕಾಂಗ್ರೆಸ್ - ೯, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್‌ಸ್ಟ್ (ಸಿಪಿಐಎಂ) - ೨, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) - ೨, ವಿದುತಲೈ ಚಿರುತೈಗಲ್ ಕಚ್ಚಿ ( ವಿಸಿಕೆ) - ೨, ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ), ಮತ್ತು ಕೊಂಗುನಾಡು ಮಕ್ಕಳ್ ದೇಶಿಯ ಕಚ್ಚಿ (ಕೆಡಿಎಂಕೆ) ಗೆ ತಲಾ ಒಂದು ಸ್ಥಾನ.
ಇದರರ್ಥ ಆಜ್ ತಕ್‌ನ ಸ್ಕ್ರೀನ್ ಮೇಲೆ ತೋರಿಸಿರುವ "ಕಾಂಗ್ರೆಸ್ +" ಎಂಬುದು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಯಿಂದ ಸ್ಪರ್ಧಿಸುವ ಏಳು ವಿಭಿನ್ನ ಪಕ್ಷಗಳಿಗೆ ನುಡಿದ ಒಟ್ಟು ಸ್ಥಾನಗಳ ಸಂಖ್ಯೆಯಾಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು, ತಮಿಳುನಾಡಿನಲ್ಲಿ ಸ್ಪರ್ಧಿಸಿದ ಒಟ್ಟು ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್‌ಗೆ ಸಿಗುತ್ತದೆ ಎಂದು ಎಕ್ಸಿಟ್ ಪೋಲ್ ಹೇಳಿಕೊಂಡಿದೆ ಎಂದು ಆರೋಪಿಸಿದ್ದಾರೆ.
ತೀರ್ಪು:
ತಮಿಳುನಾಡಿನಲ್ಲಿ ಒಂಬತ್ತು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದ್ದರೂ ಆಕ್ಸಿಸ್-ಮೈ ಇಂಡಿಯಾ ಎಕ್ಸಿಟ್ ಪೋಲ್ ೧೩-೧೫ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರ ಆರೋಪಗಳು ತಪ್ಪುದಾರಿಗೆಳೆಯುವಂತಿವೆ. ಎಕ್ಸಿಟ್ ಪೋಲ್ ಏಳು ವಿಭಿನ್ನ ಪಕ್ಷಗಳಿಗೆ ಸೇರಿ, ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ೧೩-೧೫ ಸ್ಥಾನಗಳು ಸಿಗಬಹುದು ಎಂದು ಭವಿಷ್ಯ ನುಡಿದಿದೆ. ಅವುಗಳನ್ನು "ಕಾಂಗ್ರೆಸ್ +" ಎಂಬ ಒಂದೇ ಹೆಸರಿನಲ್ಲಿ ಉಲ್ಲೇಖಿಸಿದೆ. ಇದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತಪ್ಪಾಗಿ ಅರ್ಥೈಸಿದ್ದಾರೆ ಮತ್ತು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.