ಇಂಡಿಯಾ ಟುಡೇಯ ವಾರ್ತಾ ಪ್ರಸಾರದ ಎಡಿಟ್ ಮಾಡಲಾದ ವೀಡಿಯೋವನ್ನು ಕರ್ನಾಟಕದಲ್ಲಿ ಹೆಚ್ಚಿನ ಜನರು ಕೇವಲ ಮೋದಿ ಪರವಾಗಿ ಮಾತನಾಡಿದರೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಸಾರಾಂಶ:
ಇಂಡಿಯಾ ಟುಡೇ ಕನ್ಸಲ್ಟಿಂಗ್ ಎಡಿಟರ್ ರಾಜ್‌ದೀಪ್ ಸರ್ದೇಸಾಯಿ ಚಿಕ್ಕಬಳ್ಳಾಪುರದ ಜನರೊಂದಿಗೆ ಮಾತನಾಡಿರುವ ವೀಡಿಯೋದಲ್ಲಿ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಜನರು ಮಾತನಾಡಿದ ಭಾಗಗಳನ್ನು ಎಡಿಟ್ ಮಾಡಿ ತೆಗೆದು ಹಾಕಲಾಗಿದೆ. ಎಡಿಟ್ ಮಾಡಿರುವ ವೀಡಿಯೋ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಬಿಜೆಪಿ ಮತ್ತು ಪ್ರಧಾನಿ ಮೋದಿ ಪರವಾಗಿ ಜನರು ಮಾತನಾಡುತ್ತಿರುವುದನ್ನು ಮಾತ್ರ ತೋರಿಸಲಾಗಿದೆ. ಜನಸಾಮಾನ್ಯರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ಎಡಿಟ್ ಮಾಡಿದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಹೇಳಿಕೆ:
ಇಂಡಿಯಾ ಟುಡೆಯ ರಾಜ್‌ದೀಪ್ ಸರ್ದೇಸಾಯಿ ಅವರು ಕರ್ನಾಟಕದ ಜನರೊಂದಿಗೆ ಮಾತನಾಡುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಒಂದು ನಿಮಿಷದ ವೀಡಿಯೋದಲ್ಲಿ, ಬೆಂಗಳೂರು ಸಮೀಪದ ಚಿಕ್ಕಬಳ್ಳಾಪುರದ ಹಲವಾರು ಮಹಿಳೆಯರು ಪ್ರಧಾನಿ ಮೋದಿ ಪರವಾಗಿ ಮಾತನಾಡುವುದನ್ನು ಮತ್ತು ೨೦೨೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಅವರನ್ನು ಬೆಂಬಲಿಸುವುದನ್ನು ಕಾಣಬಹುದು. ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗೆ ಹೇಳುತ್ತದೆ, “ಮೋದಿ ಅವರು ಖಚಿತವಾಗಿ ಭರವಸೆ ನೀಡುತ್ತಾರೆ. ರಾಜು (ರಾಜದೀಪ್ ಸರ್ದೇಸಾಯಿ) ಇದನ್ನು ಕೇಳಿ ಆಘಾತಕ್ಕೊಳಗಾದರು (ಕನ್ನಡಕ್ಕೆ ಅನುವಾದಿಸಲಾಗಿದೆ)."
ಎಕ್ಸ್ ನಲ್ಲಿ ಕಂಡುಬಂದ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಏಪ್ರಿಲ್ ೧೬, ೨೦೨೪ ರಂದು ಫೇಸ್‌ಬುಕ್‌ನಲ್ಲಿ ಇಂಡಿಯಾ ಟುಡೇ ಹಂಚಿಕೊಂಡ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಈ ವೀಡಿಯೋ ಐದು ನಿಮಿಷಗಳಷ್ಟು ಉದ್ದವಾಗಿದೆ ಮತ್ತು ವೈರಲ್ ವಿಡಿಯೋದಲ್ಲಿನ ಅದೇ ದೃಶ್ಯಗಳು ಈ ದೀರ್ಘ ಆವೃತ್ತಿಯಲ್ಲಿಯೂ ಕಂಡುಬಂದಿವೆ.
ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಇಂಡಿಯಾ ಟುಡೇ ಹಂಚಿಕೊಂಡಿರುವ ವೀಡಿಯೋದ ಸ್ಕ್ರೀನ್‌ಶಾಟ್‌ಗಳು.
ಇಂಡಿಯಾ ಟುಡೆಯ ಫೇಸ್‌ಬುಕ್ ಪುಟದಲ್ಲಿ ಕಂಡುಬಂದ ವೀಡಿಯೋದಲ್ಲಿ, ಬೆಂಗಳೂರು ಸಮೀಪದ ಚಿಕ್ಕಬಳ್ಳಾಪುರದಲ್ಲಿ ಬಸ್ ಒಂದರಲ್ಲಿ ಮಹಿಳೆಯರನ್ನು ರಾಜದೀಪ್ ಸರ್ದೇಸಾಯಿ ಮಾಯಾನಾದಿಸುತ್ತಿರುವ ಮತ್ತು ಇನ್ನೊಬ್ಬ ವ್ಯಕ್ತಿ ಅವರ ಮಾತುಗಳನ್ನು ಭಾಷಾಂತರಿಸುತ್ತಿರುವುದನ್ನು ನಾವು ನೋಡಬಹುದು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಉಚಿತ ಬಸ್ ಪ್ರಯಾಣ ಮತ್ತು ವಿದ್ಯುತ್ ಶುಲ್ಕ ಕಡಿತದಿಂದ ತುಂಬಾ ಸಂತೋಷವಾಗಿದೆ ಎಂದು ಕೆಲವು ಮಹಿಳೆಯರು ಹೇಳುವುದನ್ನು ಕೇಳಬಹುದು. ಒಬ್ಬರು ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಾಗಿ ಕೂಡ ಹೇಳಿದ್ದಾರೆ.
ಇಂಡಿಯಾ ಟುಡೇ ಅದೇ ವೀಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಕೂಡ ಏಪ್ರಿಲ್ ೧೬, ೨೦೨೪ ರಂದು ಹಂಚಿಕೊಂಡಿದೆ.
ಕಾಂಗ್ರೆಸ್ ಪಕ್ಷ ಅಥವಾ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಮಹಿಳೆಯರು ಮಾತನಾಡುತ್ತಿದ್ದ ಈ ಭಾಗವನ್ನು ಎಡಿಟ್ ಮಾಡಲಾಗಿದೆ, ಮತ್ತು ಮಹಿಳೆಯರು ಪ್ರಧಾನಿ ಮೋದಿಯನ್ನು ಹೊಗಳುವುದನ್ನು ಕೇಳಬಹುದಾದ ಭಾಗಗಳನ್ನು ಮಾತ್ರ ಒಂದು ನಿಮಿಷದ ವೈರಲ್ ವೀಡಿಯೋವಾಗಿ ಹಂಚಿಕೊಳ್ಳಲಾಗಿದೆ.
ಇದಲ್ಲದೆ, ರಾಜದೀಪ್ ಸರ್ದೇಸಾಯಿ ಅವರು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ಅನ್ನು ಸಹ ನಾವು ನೋಡಿದ್ದೇವೆ. ಅದರಲ್ಲಿ ಬಿಜೆಪಿ ಐಟಿ ಸೆಲ್ ಸಿದ್ದರಾಮಯ್ಯ ಅವರ ಪರವಾಗಿ ಮಹಿಳೆಯರು ಮಾತನಾಡುವ ಭಾಗವನ್ನು ಎಡಿಟ್ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಅವರ ಕಾರ್ಯಕ್ರಮಗಳ ವೀಡಿಯೋಗಳನ್ನು ಎಡಿಟ್ ಮಾಡುವ ಮೂಲಕ ತಮ್ಮ ರಾಜಕೀಯ ಅಜೆಂಡಾಕ್ಕೆ ಬಳಸದಂತೆ ಬಿಜೆಪಿಯನ್ನು ಈ ಪೋಷ್ಟ್ ಮೂಲಕ ಕೇಳಿಕೊಂಡಿದ್ದಾರೆ.
ರಾಜ್‌ದೀಪ್ ಸರ್ದೇಸಾಯಿ ಅವರು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಹೀಗಾಗಿ, ಕೆಲವು ಮಹಿಳೆಯರು ಪ್ರಧಾನಿ ಮೋದಿ ಪರವಾಗಿ ಮಾತನಾಡಿರುವ ದೀರ್ಘ ವೀಡಿಯೋದ ಆಯ್ದ ಭಾಗಗಳನ್ನು ಮಾತ್ರ ಎಡಿಟ್ ಮಾಡಿಕೊಳ್ಳುವ ಮೂಲಕ ಕರ್ನಾಟಕದಲ್ಲಿ ಜನ ಹೆಚ್ಚಾಗಿ ಬಿಜೆಪಿ ಮತ್ತು ನರೇಂದ್ರ ಮೋದಿ ಪರವಾಗಿದ್ದರೆ ಎಂದು ತೋರಿಸಲು ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.
ತೀರ್ಪು:
ಇಂಡಿಯಾ ಟುಡೇ ಚುನಾವಣಾ ಕಾರ್ಯಕ್ರಮವೊಂದರ ವೀಡಿಯೋವನ್ನು ಕೌಶಲ್ಯದಿಂದ ಎಡಿಟ್ ಮಾಡಲಾಗಿದೆ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಜನರು ಸಿದ್ದರಾಮಯ್ಯನವರಿಗಿಂತ ಮೋದಿಯವರನ್ನು ಬೆಂಬಲಿಸುತ್ತಾರೆ ಎಂದು ಜನರನ್ನು ತಪ್ಪುದಾರಿಗೆಳೆಯುವ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ. ಆದರೆ, ಇಂಡಿಯಾ ಟುಡೇ ಶೇರ್ ಮಾಡಿರುವ ಮೂಲ ವೀಡಿಯೋದಲ್ಲಿ ಜನರು ಮೋದಿ, ಸಿದ್ದರಾಮಯ್ಯ ಮತ್ತು ಜನತಾ ದಳ ಜಾತ್ಯಾತೀತ (ಜೆಡಿಎಸ್) ಪರವಾಗಿ ಮಾತನಾಡಿದ್ದಾರೆ. ಹೀಗಾಗಿ, ಎಡಿಟ್ ಮಾಡಿದ ವೀಡಿಯೋವನ್ನು ಬಳಸಿಕೊಂಡು ಮಾಡಿದ ಹೇಳಿಕೆಗಳು ತಪ್ಪು.