ಇಲ್ಲ, ಬಸ್ಸಿನಲ್ಲಿ ಸೋರಿಕೆಯಾದ ಕಾರಣ ಕರ್ನಾಟಕದ ಬಸ್ ಡ್ರೈವರ್ ಒಬ್ಬರಿ ಚಾಲನೆ ಮಾಡುವಾಗ ಛತ್ರಿ ಬಳಸುತ್ತಿರಲಿಲ್ಲ
ಸಾರಾಂಶ:
ಎನ್‌ಡಬ್ಲ್ಯುಕೆಆರ್‌ಟಿಸಿ (ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಬಸ್ ಡ್ರೈವರ್ ಚಾಲನೆ ಮಾಡುವಾಗ ಛತ್ರಿ ಹಿಡಿದುಕೊಂಡಿರುವ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮಳೆಯ ಸಮಯದಲ್ಲಿ ಬಸ್‌ನೊಳಗೆ ಸೋರಿಕೆಯಾಗಿರುವುದರಿಂದ ಅವರು ಹಾಗೆ ಮಾಡುತ್ತಿದ್ದಾರೆ ಎಂದು ಕೆಲವು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಅದೇ ಬಸ್ ನ ಕಂಡಕ್ಟರ್ ಚಾಲಕನನ್ನು ಚಿತ್ರಿಸುತ್ತಿದ್ದು, ಇದನ್ನು "ಮನರಂಜನೆ" ಉದ್ದೇಶಕ್ಕಾಗಿ ಮಾಡಲಾಗಿದೆ ಮತ್ತು ಅಧಿಕಾರಿಗಳು ಇವರಿಬ್ಬರನ್ನೂ ಅಮಾನತುಗೊಳಿಸಿದ್ದಾರೆ. ಬಸ್‌ನ ಮೇಲ್ಛಾವಣಿ ಸೋರಿಕೆಯಿಂದಾಗಿ ಚಾಲಕರು ಛತ್ರಿ ಬಳಸಿದ್ದಾರೆ ಎಂಬ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ.
ಹೇಳಿಕೆ:
ಹೊರಗೆ ಮಳೆ ಸುರಿಯುತ್ತಿದ್ದಾಗ ಬಸ್ ಚಾಲಕನೊಬ್ಬ ಛತ್ರಿ ಹಿಡಿದುಕೊಂಡು ಬಸ್ ಚಲಾಯಿಸುತ್ತಿರುವ ವೀಡಿಯೋವನ್ನು ಕೆಲವು ಸಾಮಾಜಿಕ ಮಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಬಸ್‌ನ ಮೇಲ್ಛಾವಣಿ ಸೋರುತ್ತಿರುವ ಕಾರಣ ಅವರು ಹಾಗೆ ಮಾಡುತ್ತಿದ್ದಾರೆ ಎಂದು ವಿಡಿಯೋದ ಕಾಮೆಂಟ್‌ಗಳಲ್ಲಿ ಕೆಲವರು ಗಮನಿಸಿದರೆ, ಇತರರು ಈ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಮಲಯಾಳಂನಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅಂತಹ ಒಂದು ವೀಡಿಯೋ ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಕರ್ನಾಟಕದ ಸರ್ಕಾರಿ ಬಸ್‌ನೊಳಗಿನ ದೃಶ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ (ಅನುವಾದಿಸಲಾಗಿದೆ)."
ಫೇಸ್‌ಬುಕ್ ನಲ್ಲಿ ಹಂಚಿಕೊಂಡ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಮತ್ತು ಅದರಲ್ಲಿನ ಆಡಿಯೋವನ್ನು ಆಲಿಸಿದ ನಂತರ, ಮಹಿಳೆಯೊಬ್ಬರು ಘಟನೆಯನ್ನು ಚಿತ್ರಿಸುತ್ತ ವೀಡಿಯೋದ ಹಿನ್ನಲೆಯಲ್ಲಿ ಮಾತನಾಡುವುದನ್ನು ನಾವು ಗಮನಿಸಿದ್ದೇವೆ. ವೀಡಿಯೋದ ಸುಮಾರು ೪೦ ಸೆಕೆಂಡುಗಳ ಸಮಯದಲ್ಲಿ, "ನಾನು ಅದನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತೇನೆ ಮತ್ತು ಗುಂಪಿನಲ್ಲಿರುವ ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ಸ್ಥಳೀಯ ಕನ್ನಡದಲ್ಲಿ ಹೇಳುವುದನ್ನು ನಾವು ಕೇಳಬಹುದು. ಬಸ್ಸಿನ ಮುಂಭಾಗದ ಗಾಜಿನ ಮೇಲೆ “ವಾಯವ್ಯ ಕರ್ನಾಟಕ ಸಾರಿಗೆ” (ನಾರ್ತ್ ವೆಸ್ಟರ್ನ್ ಕರ್ನಾಟಕ ಸಾರಿಗೆ) ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ. ಈ ಬಸ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಸೇರಿದ್ದು ಎಂದು ಆಡಿಯೋ ಮತ್ತು ಬಸ್‌ನಲ್ಲಿರುವ ಬರಹಗಳು ದೃಢಪಡಿಸಿವೆ.
"ಎನ್‌ಡಬ್ಲ್ಯುಕೆಆರ್‌ಟಿಸಿ," "ಡ್ರೈವರ್," "ಛತ್ರಿ," ಮತ್ತು "ಮಳೆ" ಮೊದಲಾದ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟ ನಡೆಸಿದಾಗ, ಬಸ್ ಡ್ರೈವರ್ ಮತ್ತು ಕಂಡಕ್ಟರ್ ಅನ್ನು ಛತ್ರಿ ಹಿಡಿದುಕೊಂಡು ವೀಡಿಯೋ ಚಿತ್ರೀಕರಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ಹೇಳುವ ಹಲವಾರು ಸುದ್ದಿ ವರದಿಗಳನ್ನು ನಾವು ನೋಡಿದ್ದೇವೆ. ಮೇ ೨೪, ೨೦೨೪ ರಂದು ಹುಬ್ಬಳ್ಳಿ ಟೈಮ್ಸ್‌ನ ಅಂತಹ ಒಂದು ಸುದ್ದಿ ವರದಿಯು ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿದೆ.
ಮೇ ೨೪, ೨೦೨೪ ರ ಹುಬ್ಬಳ್ಳಿ ಟೈಮ್ಸ್ ಸುದ್ದಿ ವರದಿಯ ಸ್ಕ್ರೀನ್‌ಶಾಟ್.
ಮೇ ೨೩, ೨೦೨೪ ರಂದು ಸಂಜೆ ೪.೩೦ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಚಾಲಕನನ್ನು ಹನುಮತಪ್ಪ ಕಿಲ್ಲೇದಾರ್ ಎಂದು ಮತ್ತು ಕಂಡಕ್ಟರ್ ಎಚ್.ಬಿ. ಅನಿತಾ ಎಂದೂ ಗುರುತಿಸಲಾಗಿದ್ದು, ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಬಸ್ ಉಪ್ಪಿನಬೆಟಗೇರಿಯಿಂದ ಧಾರವಾಡಕ್ಕೆ ಹೋಗುತ್ತಿತ್ತು ಎಂದು ವರದಿಯು ಹೇಳಿಕೊಂಡಿದೆ. ವೀಡಿಯೊವನ್ನು ಚಿತ್ರೀಕರಿಸುವಾಗ ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಮತ್ತು ಅವರು ಮೋಜಿಗಾಗಿ ಹಾಗೆ ಮಾಡಿದ್ದಾರೆ ಎಂದು ಎನ್‌ಡಬ್ಲ್ಯೂಕೆಆರ್‌ಟಿಸಿ ನಿರ್ದೇಶಕಿ ಪ್ರಿಯಾಂಗ ಎಂ ಅವರನ್ನು ಉದ್ದೇಶಿಸಿ ವರದಿ ಮಾಡಲಾಗಿದೆ.
ಎನ್‌ಡಬ್ಲ್ಯೂಕೆಆರ್‌ಟಿಸಿ ಮೇ ೨೪, ೨೦೨೪ ರಂದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಈ ಘಟನೆಯ ಕುರಿತು ಹೀಗೆ ಹೇಳಿಕೊಂಡು ಸ್ಪಷ್ಟೀಕರಣ ನೀಡಿದೆ, "ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ಕರ್ತವ್ಯ ನಿರತ ಚಾಲನಾ ಸಿಬ್ಬಂದಿಗಳು ಹೇಳಿಕೆ ನೀಡಿದ್ದು, ಈ ರೀತಿ ಸಂಸ್ಥೆಯ ಕುರಿತು ತಪ್ಪು ಅಭಿಪ್ರಾಯ ಮೂಡಲು ಕಾರಣರಾದ ಸದರಿ ಸಿಬ್ಬಂದಿಗಳನ್ನು ಕೂಡಲೇ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲಾಗಿದೆ ಎಂದು ಈ ಮೂಲಕ ಸ್ಪಷ್ಟೀಕರಣ ನೀಡಲಾಗಿದೆ." ಕನ್ನಡ ಸುದ್ದಿ ವಾಹಿನಿ ಟಿವಿ9 ಎಕ್ಸ್‌ನಲ್ಲಿ ಹಂಚಿಕೊಂಡ ಈ ಘಟನೆಯ ವೀಡಿಯೋವಿಗೆ ಪ್ರತಿಕ್ರಿಯೆಯಾಗಿ ಅವರ ಸ್ಪಷ್ಟನೆ ಬಂದಿದೆ.
ಮೇ ೨೪, ೨೦೨೪ ರಂದು ಎಕ್ಸ್ ನಲ್ಲಿ ಎನ್‌ಡಬ್ಲ್ಯೂಕೆಆರ್‌ಟಿಸಿ ನೀಡಿದ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್.
ಇದಲ್ಲದೆ, ಟೈಮ್ಸ್ ಆಫ್ ಇಂಡಿಯಾದ ಸುದ್ದಿ ವರದಿಯು ಘಟನೆಯ ಬಗ್ಗೆ ವರದಿ ಮಾಡಿದೆ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ಯ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ, “ಬಸ್‌ನ ಛಾವಣಿಯಲ್ಲಿ ಯಾವುದೇ ಸೋರಿಕೆ ಇರಲಿಲ್ಲ. ಕೇವಲ ಮನರಂಜನೆಯ ಉದ್ದೇಶದಿಂದ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ" ಎಂದು ಹೇಳಿಕೊಂಡಿದೆ.
ತೀರ್ಪು:
ಚಾವಣಿ ಸೋರಿಕೆಯಿಂದಾಗಿ ಕರ್ನಾಟಕ ಬಸ್ ಚಾಲಕರು ಚಾಲನೆ ಮಾಡುವಾಗ ಕೊಡೆ ಹಿಡಿದಿರುವ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಮಾಡಲಾದ ಆರೋಪಗಳು ತಪ್ಪುದಾರಿಗೆಳೆಯುವಂತಿವೆ. ಹೊರಗೆ ಜೋರಾಗಿ ಮಳೆ ಸುರಿಯುತ್ತಿದ್ದಾಗ, ಧಾರವಾಡಕ್ಕೆ ಹೊರಟಿದ್ದ ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ನ ಚಾಲಕ ಮತ್ತು ಕಂಡಕ್ಟರ್ ಮನರಂಜನೆ ಉದ್ದೇಶಕ್ಕಾಗಿ ಈ ವೀಡಿಯೋವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಇಬ್ಬರನ್ನು ಅಮಾನತು ಮಾಡಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.