ಇಲ್ಲ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಓರ್ವ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿಲ್ಲ.
ಸಾರಾಂಶ:
ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಾಯಿ ಪ್ರಸಾದ್ ಎಂಬ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಏಪ್ರಿಲ್ ೫, ೨೦೨೪ ರಂದು ಹೇಳಿಕೊಂಡಿದ್ದಾರೆ. ಆದರೆ, ಅವರನ್ನು ಬಂಧಿಸಲಾಗಿಲ್ಲ; ಅವರನ್ನು ಕೇವಲ ಪ್ರಕರಣವನ್ನು ಕುರಿತು ವಿಚಾರಣೆ ನಡೆಸಲಾಯಿತು. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮುಸ್ಸಾವಿರ್ ಹುಸೇನ್ ಶಾಜಿಬ್ ಎಂಬ ವ್ಯಕ್ತಿಯನ್ನು ಆರೋಪಿಯಾಗಿ ಗುರುತಿಸಿದೆ.
ಹೇಳಿಕೆ:
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಸಾಯಿ ಪ್ರಸಾದ್ ಎಂಬ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ಬಂಧಿಸಿದೆ ಎಂದು ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿನ ಪೋಷ್ಟ್ ಗಳು ಹೇಳಿಕೊಂಡಿವೆ. ಈ ಹೇಳಿಕೆಯನ್ನು ಮಾಡುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಸುದ್ದಿ ಲೇಖನಗಳು ಮತ್ತು ಈ ಮಾಹಿತಿಯನ್ನುಳ್ಳ ಚಿತ್ರಗಳನ್ನು ಹಂಚಿಕೊಂಡಿವೆ. ಈ ವ್ಯಕ್ತಿ ಹಿಂದೂ, ಮುಸ್ಲಿಂ ಅಲ್ಲ ಮತ್ತು ಬಿಜೆಪಿ ಕಾರ್ಯಕರ್ತನಾಗಿರುವುದರಿಂದ ಈ ಸುದ್ದಿಗೆ ಹೆಚ್ಚಿನ ವ್ಯಾಪ್ತಿ ಸಿಗುವುದಿಲ್ಲ ಎಂದು ಈ ಪೋಷ್ಟ್ ಗಳು ಪ್ರತಿಪಾದಿಸುತ್ತವೆ. ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದೂ ಕೆಲವರು ಹೇಳಿದ್ದಾರೆ. ಈ ಹೇಳಿಕೆಯನ್ನು ಹಂಚಿಕೊಳ್ಳುವ ಅಪ್ರಧಾನ ಸುದ್ದಿ ಮಾಧ್ಯಮ ಲೇಖನಗಳ ಉದಾಹರಣೆಗಳನ್ನೂ ಆನ್‌ಲೈನ್‌ನಲ್ಲಿ ನೋಡಬಹುದು.
ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ ಬಿಜೆಪಿ ಕಾರ್ಯಕರ್ತರೊಬ್ಬರನ್ನು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೊಳ್ಳುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ಈ ಆಪಾದಿತ ಘಟನೆಯ ಬಗ್ಗೆ ನಂಬಲರ್ಹ ಸುದ್ದಿ ವರದಿಗಳನ್ನು ಹುಡುಕಿದಾಗ, ಆರಂಭಿಕ ಲೇಖನಗಳಲ್ಲಿ ಒಂದಾದ ಏಪ್ರಿಲ್ ೫ ರ ಸಂಜೆ ಪಬ್ಲಿಕ್ ಟಿವಿ ನ್ಯೂಸ್ ಪ್ರಕಟಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಸಾಯಿ ಪ್ರಸಾದ್ ಶಿವಮೊಗ್ಗದ ತೀರ್ಥಹಳ್ಳಿಯ ಒಬ್ಬ ಬಿಜೆಪಿ ಕಾರ್ಯಕರ್ತ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರನ್ನು ಏನ್ಐಎ ಸ್ಫೋಟ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿ ವಶಕ್ಕೆ ತೆಗೆದುಕೊಂಡಿದ ಎಂದು ವರದಿ ಹೇಳುತ್ತದೆ.
ಅದೇ ದಿನ ಸಂಜೆ ೫:೩೧ಕ್ಕೆ, ಎನ್‌ಐಎ ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಹೇಳಿಕೆಯೊಂದನ್ನು ಹಂಚಿಕೊಂಡಿದೆ. ಈ ಹೇಳಿಕೆಯು, “ಐಇಡಿ ಸ್ಫೋಟವನ್ನು ನಡೆಸಿದ ಆರೋಪಿ ಶಿವಮೊಗ್ಗದ ತೀರ್ಥಹಳ್ಳಿ ಜಿಲ್ಲೆಯ ಮುಸ್ಸಾವಿರ್ ಹುಸೇನ್ ಶಾಜಿಬ್ ಎಂಬ ವ್ಯಕ್ತಿ ಮತ್ತು ಸಹ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎಂದು ಗುರುತಿಸಿದೆ," ಮತ್ತು "ಪರಿಶೀಲಿಸದ ಸುದ್ದಿಗಳು ಪ್ರಕರಣದ ಪರಿಣಾಮಕಾರಿ ತನಿಖೆಗಳಿಗೆ ಅಡ್ಡಿಯಾಗುತ್ತವೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಎನ್‌ಐಎ ಎಲ್ಲರ ಸಹಕಾರವನ್ನು ಕೋರುತ್ತದೆ," ಎಂದು ಹೇಳುತ್ತದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳ ಗುರುತಿಸುವ ಏನ್ಐಎನ ಹೇಳಿಕೆಯನ್ನು ಹೊಂದಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಶಿವಮೊಗ್ಗದಲ್ಲಿರುವ ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಎಂಬ ಇಬ್ಬರು ವ್ಯಕ್ತಿಗಳ ನಿವಾಸಗಳು ಹಾಗೂ ಮೊಬೈಲ್ ಅಂಗಡಿಯೊಂದರಲ್ಲಿ ಎನ್‌ಐಎ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಇಂಡಿಯಾ ಟುಡೇ ಆ ಸಂಜೆ ವರದಿ ಮಾಡಿದೆ. ಈ ಕ್ರಮಗಳು ಮಾರ್ಚ್ ೨೮ ರಂದು ಪ್ರಮುಖ ಶಂಕಿತ ಮುಝಮ್ಮಿಲ್ ಶರೀಫ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದವು. ದಾಳಿಯ ಸಂದರ್ಭದಲ್ಲಿ, ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಅವರು ಮೂಲತಃ ಮುಸಾವಿರ್ ಮತ್ತು ತಾಹಾ ಅವರೊಂದಿಗೆ ಸಂವಹನಕ್ಕಾಗಿ ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಹೊಂದಿದ್ದರು ಎಂದು ಕಂಡುಬಂದಿದೆ. "ಪ್ರಶ್ನೆ ಮಾಡಿದ ನಂತರ, ಸಾಯಿ ಪ್ರಸಾದ್ ತನ್ನ ಹಳೆಯ ಫೋನ್ ಅನ್ನು ಮೊಬೈಲ್ ಅಂಗಡಿಯ ಮಾಲೀಕರಿಗೆ ಮಾರಾಟ ಮಾಡಿದ್ದಾನೆ ಎಂದು ಎನ್ಐಎಗೆ ತಿಳಿಯಿತು, ನಂತರ ಅದನ್ನು ಮುಝಮ್ಮಿಲ್ ಗೆ ಮಾರಾಟ ಮಾಡಿದ್ದಾನೆ" ಎಂದು ಮೂಲಗಳು ತಿಳಿಸಿವೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಎನ್‌ಐಎನ ಪತ್ರಿಕಾ ಹೇಳಿಕೆಯ ಬಗ್ಗೆ ವರದಿ ಮಾಡಿದೆ ಮತ್ತು "ಎನ್‌ಐಎ ಹೇಳಿಕೆಯು ವಶಕ್ಕೆ ತೆಗೆದುಕೊಳ್ಳಲಾದ ವ್ಯಕ್ತಿಯ ವಿವರಗಳನ್ನು ನೇರವಾಗಿ ನಿರಾಕರಿಸದಿದ್ದರೂ, ಆ ವ್ಯಕ್ತಿ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾನೆ ಮತ್ತು ಅವನನ್ನು ವಿಚಾರಣೆಗೊಳಪಡಿಸಲಾಗಿದೆ, ಆತನನ್ನು ಬಂಧಿಸಲಾಗಿಲ್ಲ ಎಂದು ಸೂಚಿಸಿದೆ" ಎಂದು ವರದಿ ಹೇಳುತ್ತದೆ.
ಎನ್‌ಐಎ ತನ್ನ ಅಧಿಕೃತ ಜಾಲತಾಣದಲ್ಲಿ ಮುಸ್ಸಾವಿರ್ ಹುಸೇನ್ ಶಾಜಿಬ್ ಗೆ "ವಾಂಟೆಡ್" ಪೋಸ್ಟರ್ ಅನ್ನು ಸಹ ಪ್ರಕಟಿಸಿದೆ.
ಏನ್ಐಎ ತನ್ನ ಅಧಿಕೃತ ಜಾಲತಾಣದಲ್ಲಿ ನೀಡಿರುವ ವಾಂಟೆಡ್ ಪೋಸ್ಟರ್‌ನ ಸ್ಕ್ರೀನ್‌ಶಾಟ್.
ಈ ವಿವರಗಳ ಪ್ರಕಾರ, ಸ್ಫೋಟ ಪ್ರಕರಣದಲ್ಲಿ ಸಾಯಿ ಪ್ರಸಾದ್ ಅವರನ್ನು ಬಂಧಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ; ಆತನನ್ನು ಆ ಕೇಸ್ ಬಗ್ಗೆ ಮಾತ್ರ ಪ್ರಶ್ನಿಸಲಾಯಿತು. ಏಪ್ರಿಲ್ ೭ ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಕಟಿಸಿದ ವರದಿಯ ಪ್ರಕಾರ, ವಿಚಾರಣೆಯ ನಂತರ ಆತನನ್ನು ಬಿಡಲಾಗಿದೆ.
ತೀರ್ಪು:
ಈ ಹೇಳಿಕೆಯನ್ನು ವಿಶ್ಲೇಷಿಸಿದಾಗ ಸಾಯಿ ಪ್ರಸಾದ್ ಎಂಬ ಬಿಜೆಪಿ ಕಾರ್ಯಕರ್ತನ ವಿಚಾರಣೆಯ ಕುರಿತಾದ ಸುದ್ದಿ ವರದಿಗಳನ್ನು ಆನ್‌ಲೈನ್‌ನಲ್ಲಿ ಅದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಾಗ ಅನುಪಾತದಿಂದ ಹೊರಹಾಕಲ್ಪಟ್ಟಿದೆ ಎಂದು ತಿಳಿದುಬರುತ್ತದೆ. ಆತ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಶಂಕಿತ ಅಥವಾ ಆರೋಪಿ ಅಲ್ಲ. ಆರೋಪಿಯನ್ನು ಮುಸ್ಸಾವಿರ್ ಹುಸೇನ್ ಶಾಜಿಬ್ ಎಂದು ಎನ್‌ಐಎ ಗುರುತಿಸಿದೆ. ಆದ್ದರಿಂದ, ಈ ಹೇಳಿಕೆ ತಪ್ಪು.