ಬೆಳಗಾವಿಯಲ್ಲಿ ಐಯುಎಂಎಲ್ ನ ಬೀಸುವ ಹಳೆಯ ವೀಡಿಯೋವನ್ನು ತುಮಕೂರಿನಲ್ಲಿ ಇತ್ತೀಚಿಗೆ ಕಾಂಗ್ರೆಸ್ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಬೀಸಲಾಯಿತೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಸಾರಾಂಶ:
ವೀಡಿಯೋದಲ್ಲಿ ಕಾಣಿಸಿಕೊಂಡಿರುವುದು ಪಾಕಿಸ್ತಾನದ ಧ್ವಜವಲ್ಲ, ಬದಲಿಗೆ ಕರ್ನಾಟಕದ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ರ‍್ಯಾಲಿಯಲ್ಲಿ ಬೀಸಲಾದ ಐಯುಎಂಎಲ್ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್) ಧ್ವಜಕ್ಕೆ ಸಮಾನವಾಗಿ ಕಾಣುವ ಧ್ವಜ ಎಂದು ಕಂಡುಬಂದಿದೆ. ಈ ವೀಡಿಯೋ ೨೦೧೮ ರಿಂದ ಆನ್‌ಲೈನ್‌ನಲ್ಲಿದೆ ಮತ್ತು ತುಮಕೂರಿನ ಯಾವುದೇ ರ‍್ಯಾಲಿಗಳಿಗೆ ಸಂಬಂಧಿಸಿಲ್ಲ. ಆದ್ದರಿಂದ, ಬೆಳಗಾವಿಯದ್ದಾದ ಮತ್ತು ಕನಿಷ್ಠ ೨೦೧೮ರಿಂದ ಆನ್ಲೈನ್ ನಲ್ಲಿರುವ ವೀಡಿಯೋವನ್ನು ತುಮಕೂರಿನದು ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಹೇಳಿಕೆ:
ಇತ್ತೀಚೆಗಷ್ಟೇ ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಕಂಡುಬಂದಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ತುಮಕೂರಿನ ಗುಬ್ಬಿ ಗೇಟ್ ಬಳಿ ನಡೆದ ಘಟನೆಯೆಂದು ಹೇಳಿಕೊಂಡು ವಾಟ್ಸಾಪ್‌ನಲ್ಲಿಯೂ ಇದೇ ರೀತಿಯ ಪೋಷ್ಟ್ ಗಳನ್ನು ಹಂಚಿಕೊಳ್ಳಲಾಗಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಕನ್ನಡದಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗಿದೆ, "ತುಮಕೂರಿನಲ್ಲಿ ಕಾಂಗ್ರೆಸ್ ಘೋಷಣೆಗಳೊಂದಿಗೆ ಪಾಕಿಸ್ತಾನದ ಧ್ವಜ, ಕರ್ನಾಟಕ ಎಲ್ಲಿಗೆ ಬಂದಿದೆ..."
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಕನ್ನಡದಲ್ಲಿ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಈ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ೨೦೧೮ ಮತ್ತು ೨೦೧೯ ರಲ್ಲಿ ತುಮಕೂರಿನ ಗುಬ್ಬಿ ಗೇಟ್ ಬಳಿ ಕಾಂಗ್ರೆಸ್ ಪಕ್ಷದ ರ‍್ಯಾಲಿಯೊಂದರಲ್ಲಿ ಪಾಕಿಸ್ತಾನಿ ಧ್ವಜವನ್ನು ಬೀಸಲಾಗಿದೆ ಎಂದು ಹೇಳುವ ಹಲವಾರು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳನ್ನು ನಾವು ಕಂಡುಕೊಂಡಿದ್ದೇವೆ.
೨೦೧೮ ಮತ್ತು ೨೦೧೯ ರ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಇದಲ್ಲದೆ, ವೀಡಿಯೋ ಕ್ಲಿಪ್‌ನಲ್ಲಿ ಕಾಣಿಸಿಕೊಂಡಿರುವ ಧ್ವಜವನ್ನು ಪರಿಶೀಲಿಸುವ ಮೂಲಕ, ಅದು ಪಾಕಿಸ್ತಾನದ ಧ್ವಜಕ್ಕಿಂತ ಭಿನ್ನವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ - ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಧ್ವಜಗಳಲ್ಲಿ ಲಂಬವಾದ ಬಿಳಿ ಕಾಲಮ್ ಇಲ್ಲ. ಆದರೆ, ರ‍್ಯಾಲಿಯ ವೀಡಿಯೋದಲ್ಲಿ ಕಂಡುಬರುವ ಹಸಿರು ಧ್ವಜವು ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಅಧಿಕೃತ ಧ್ವಜಕ್ಕೆ ಸಮಾನವಾಗಿದೆ.
ಪಾಕಿಸ್ತಾನ ಧ್ವಜ ಮತ್ತು ಐಯುಎಂಎಲ್ ನ ಅಧಿಕೃತ ಧ್ವಜದ ವಿಕಿಪೀಡಿಯ ಚಿತ್ರಗಳ ಹೋಲಿಕೆ.
ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಮಸುಕಾಗಿಕಾಣಿಸಿಕೊಂಡಿರವ ಆಸ್ಪತ್ರೆಯೊಂದರ ಹೆಸರನ್ನು ಗಮನಿಸಿದ್ದೇವೆ. ಹೆಚ್ಚಿನ ವಿಶ್ಲೇಷಣೆಯು ಆಸ್ಪತ್ರೆಯ ಹೆಸರು "ಸಲೀಕ್ ಆಸ್ಪತ್ರೆ" ಎಂದು ತೋರಿಸಿದೆ.
"ಸಲೀಕ್ ಆಸ್ಪತ್ರೆ" ಎಂಬ ಹೆಸರಿನ ಫಲಕವನ್ನು ನೋಡಬಹುದಾದ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.
ಈ ಆಸ್ಪತ್ರೆಯ ಹೆಸರನ್ನು ಹುಡುಕುವ ಮೂಲಕ, ನಾವು ವೆಬ್‌ಸೈಟ್ ಒಂದರಲ್ಲಿ ಸಲೀಕ್ ಆಸ್ಪತ್ರೆಯ ವಿಳಾಸವನ್ನು ಕಂಡುಕೊಂಡಿದ್ದೇವೆ. ಅದು ಬೆಳಗಾವಿ (ಹಿಂದೆ ಬೆಳಗಾಂ ಎಂದು ಕರೆಯಲಾಗಿತ್ತು) ಜಿಲ್ಲೆಯಲ್ಲಿದೆ.
Bharatibiz.com ನಲ್ಲಿ ಕಾಣಿಸಿಕೊಂಡಂತೆ ಸಲೀಕ್ ಆಸ್ಪತ್ರೆಯ ವಿಳಾಸದ ಸ್ಕ್ರೀನ್‌ಶಾಟ್.
ಸಲೀಕ್ ಆಸ್ಪತ್ರೆಯ ಈ ವಿಳಾಸವನ್ನು ಬಳಸಿಕೊಂಡು, ನಾವು ಗೂಗಲ್ ಮ್ಯಾಪ್ ಮೂಲಕ ಬೆಳಗಾವಿಯ ನವ ಗಾಂಧಿ ನಗರಕ್ಕೆ ಕಟ್ಟಡವನ್ನು ಜಿಯೋಲೊಕೇಟ್ ಮಾಡಲು ಸಾಧ್ಯವಾಯಿತು. ಆದರೂ ಆಸ್ಪತ್ರೆಯ ನಾಮಫಲಕ ಅಲ್ಲಿ ಕಾಣಲಿಲ್ಲ. ಆದರೆ. ಟ್ಟಡದ ನೋಟ ಮತ್ತು ಹತ್ತಿರದ ರಚನೆಗಳು ವೈರಲ್ ವೀಡಿಯೋವನ್ನು ಚಿತ್ರೀಕರಿಸಿದ ಅದೇ ಸ್ಥಳವಿದು ಎಂದು ದೃಢಪಡಿಸಿತು.
ವೈರಲ್ ವೀಡಿಯೋ ಮತ್ತು ಗೂಗಲ್ ಮ್ಯಾಪ್ ಚಿತ್ರಗಳ ನಡುವಿನ ಹೋಲಿಕೆ.
ಬೆಳಗಾವಿಯಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ತೀರ್ಪು:
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಬೀಸುತ್ತಿರುವುದನ್ನು ತೋರಿಸುವ ವೀಡಿಯೋ ಎಂದು ತಪ್ಪು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ವೀಡಿಯೋ ಕನಿಷ್ಠ ೨೦೧೮ ರ ಹಿಂದಿನದು ಮತ್ತು ವೀಡಿಯೋದ ವಿಶ್ಲೇಷಣೆಯು ಇದನ್ನು ಕರ್ನಾಟಕದ ಬೆಳಗಾವಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸುತ್ತದೆ.