ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರು ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ” ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ ಹಾಕುವುದಕ್ಕಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ” ಎಂದು ಅಧೀರ್ ರಂಜನ್ ಚೌಧರಿ ಹೇಳಿರುವುದನ್ನು ನೋಡಬಹುದು.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಈ ವೈರಲ್ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಮಮತಾ ಬ್ಯಾನರ್ಜಿಯವರ ಟಿಎಂಸಿ ಸರ್ಕಾರದ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ಅಧೀರ್ ರಂಜನ್ ಚೌಧರಿಗೆ ಸರಿಯಾಗಿ ಗೊತ್ತಿದೆ. ಹಾಗಾಗಿ, ಅವರು ತಮ್ಮ ತವರು ರಾಜ್ಯಕ್ಕೆ ಶುಭ ಹಾರೈಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ಅಧೀರ್ ರಂಜನ್ ಚೌಧರಿ ನಿಜವಾಗಿಯೂ ಬಿಜೆಪಿ ಪರ ಮಾತನಾಡಿದ್ದಾರಾ? ಎಂಬುವುದರ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ.
ಗೂಗಲ್‌ನಲ್ಲಿ ಕೀವರ್ಡ್ಸ್ ಬಳಸಿ ಹುಡುಕಾಡಿದಾಗ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ 'ನ್ಯೂಸ್ ಚೆಕ್ಕರ್' ಈ ಕುರಿತು ವರದಿ ಮಾಡಿರುವುದು ಲಭ್ಯವಾಗಿದೆ.
ವರದಿಯಲ್ಲಿ ಹೇಳಿರುವಂತೆ, “ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಜಂಗೀಪುರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲಾಲ್‌ಗೋಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುರ್ತಜಾ ಹುಸ್ಸೇನ್ ಪರ ಪ್ರಚಾರ ಮಾಡಿದ್ದರು. ಈ ವೇಳೆ ಅವರು ಬಿಜೆಪಿ ಕುರಿತಾಗಿ ಮಾತನಾಡಿದ್ದಾರೆ.
“ಮೋದಿಯವರು ಮೊದಲು ಇದ್ದಷ್ಟು ಆತ್ಮ ವಿಶ್ವಾಸದಿಂದ ಈಗ ಇಲ್ಲ. ಈ ಮುನ್ನ ಅವರು 400 ಸ್ಥಾನ ದಾಟುತ್ತೇವೆ ಎನ್ನುತ್ತಿದ್ದರು. ಆದರೆ, ಈಗ ಹೇಳುತ್ತಿಲ್ಲ. ಇತ್ತೀಚಿನ ಸರ್ವೆ ಪ್ರಕಾರ 100 ಸ್ಥಾನಗಳು ಈಗಾಗಲೇ ಮೋದಿ ಅವರ ಕೈಬಿಟ್ಟು ಹೋಗಿದೆ. ಇನ್ನಷ್ಟು ಕಡಿಮೆ ಆಗುತ್ತಲೇ ಇದೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಗೆಲ್ಲಲೇ ಬೇಕು. ನಮ್ಮ ಗೆಲುವಾಗದೇ ಇದ್ದರೆ ಭಾರತದಲ್ಲಿ ಜಾತ್ಯತೀತತೆ ಇಲ್ಲವಾಗುತ್ತದೆ. ಹಾಗೆ ನೋಡಿದರೆ ಟಿಎಂಸಿಗೆ ಮತ ಹಾಕೋದಕ್ಕಿಂತ ಬಿಜೆಪಿಗೆ ಹಾಕೋದು ಉತ್ತಮ. ಹೀಗಾಗಿ, ಈ ಬಾರಿ ಬಿಜೆಪಿ ಅಥವಾ ಟಿಎಂಸಿಗೆ ಮತ ಹಾಕಬೇಡಿ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ. ಅವರು ಎಂದೆಂದಿಗೂ ನಿಮ್ಮ ಜೊತೆ ಇರುತ್ತಾರೆ” ಎಂದು ಚೌಧರಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಮೇ 1,2024ರಂದು ಚೌಧರಿ ಅವರ ಈ ಭಾಷಣದ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು. ಕಾಂಗ್ರೆಸ್ ಪಕ್ಷ ಈ ವೈರಲ್ ವಿಡಿಯೋ ಕುರಿತಾಗಿ ಈಗಾಗಲೇ ದೂರು ನೀಡಿದೆ. ಅಧೀರ್ ರಂಜನ್ ಚೌಧರಿ ಅವರ ಭಾಷಣದ ಕ್ಲಿಪ್‌ಅನ್ನು ಎಡಿಟ್ ಮಾಡುವ ಮೂಲಕ ತಿರುಚಿ ಬಿಜೆಪಿಗೆ ಮತ ಹಾಕುವಂತೆ ಚೌಧರಿ ಹೇಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.