ಲೈವ್ ಟಿವಿಯಲ್ಲಿ ಡಾ. ದೇವಿ ಶೆಟ್ಟಿಯವರಿಗೆ ಕಪಾಳಮೋಕ್ಷ ಮಾಡಲಾಗಿದೆ ಎಂದು ಹೇಳಲು ಎಡಿಟ್ ಮಾಡಿದ ವೀಡಿಯೋ ಕ್ಲಿಪ್ ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿಯವರನ್ನು ಲೈವ್ ಟಿವಿ ಯಲ್ಲಿ ಕಪಾಳಮೋಕ್ಷ ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡು ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಈ ವೈರಲ್ ಕ್ಲಿಪ್ ಅನ್ನು ವಿಶ್ಲೇಷಿಸಿದಾಗ, ಡಾ. ಶೆಟ್ಟಿ ಅವರು ಘಟನೆ ನಡೆದ ಕಾರ್ಯಕ್ರಮದಲ್ಲಿ ಇರಲಿಲ್ಲ ಮತ್ತು ಅವರ ನಕಲಿ ಆಡಿಯೋ ಕ್ಲಿಪ್ ಅನ್ನು ಸೇರಿಸಿ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ನಾವು ಗುರುತಿಸಿದ್ದೇವೆ. ಹೀಗಾಗಿ, ಈ ಹೇಳಿಕೆಗಳು ತಪ್ಪು.
ಹೇಳಿಕೆ:
ಫಾರ್ಮಾಸ್ಯುಟಿಕಲ್ ಕಂಪನಿಯ ಸದಸ್ಯರೊಬ್ಬರು ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಲೈವ್ ಟಿವಿಯಲ್ಲಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದನ್ನು ನೋಡಬಹುದು. ಆಜ್ ತಕ್ ಎಂಬ ಹಿಂದಿ ಸುದ್ದಿ ವಾಹಿನಿಯ ಸುದ್ದಿ ವರದಿಯನ್ನು ತೋರಿಸಲು ವೀಡಿಯೋ ಉದ್ದೇಶಿಸಿದೆ. ವೈರಲ್ ವೀಡಿಯೋ ಡಾ. ದೇವಿ ಶೆಟ್ಟಿ ಅವರನ್ನು ಒಳಗೊಂಡ ಕ್ಲಿಪ್ ಅನ್ನು ಕೂಡ ಒಳಗೊಂಡಿದೆ.
ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು "ಪ್ರಸಿದ್ಧ ಹೃದ್ರೋಗ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಅವರ ಮೇಲಿನ ದಾಳಿಯ ಆಘಾತಕಾರಿ ಘಟನೆ" ಎಂದು ಓದುತ್ತದೆ. ಫಾರ್ಮಾ ಕಂಪನಿಯ ಸದಸ್ಯರೊಬ್ಬರು ಹೃದ್ರೋಗ ತಜ್ಞರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿ ಅದೇ ವೀಡಿಯೋವನ್ನು ಇನ್ನಿತರರು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ವೀಡಿಯೊವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ, ಆಡಿಯೋ ಮತ್ತು ಸುದ್ದಿ ನಿರೂಪಕರ ತುಟಿ ಚಲನೆಯ ನಡುವೆ ಯಾವುದೇ ಸಿಂಕ್ ಇಲ್ಲ ಎಂಬುದು ಸ್ಪಷ್ಟವಾಗಿದೆ. ಡಾ. ದೇವಿ ಶೆಟ್ಟಿ ಅವರೊಂದಿಗಿನ ವಾಗ್ವಾದದ ಕುರಿತು ಸುದ್ದಿ ವರದಿಗಳಿಗಾಗಿ ನಡೆಸಿದ ಹುಡುಕಾಟವು ಯಾವುದೇ ಫಲಿತಾಂಶವನ್ನು ನೀಡಲಿಲ್ಲ.
ನಾವು ಕಪಾಳಮೋಕ್ಷ ಘಟನೆಯ ವೈರಲ್ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಜನವರಿ ೧೪, ೨೦೧೭ ರಂದು ಯೂಟ್ಯೂಬ್‌ನಲ್ಲಿ ಜೆಕೆ ನ್ಯೂಸ್ ನೆಟ್‌ವರ್ಕ್ ಅಪ್‌ಲೋಡ್ ಮಾಡಿದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋದ ಶೀರ್ಷಿಕೆಯು “ಲೈವ್ ಟಿವಿಯಲ್ಲಿ ಸ್ಲ್ಯಾಪ್ ಮಾಡಿದ ಓಂ ಸ್ವಾಮಿ” ಎಂದು ಓದಿದೆ. ಈ ವೀಡಿಯೋ ಮೇಲಿನ ಎಡ ಮೂಲೆಯಲ್ಲಿ ನ್ಯೂಸ್ ನೇಷನ್‌ನ ಲೋಗೋವನ್ನು ಸಹ ಒಳಗೊಂಡಿದ್ದು, ಈ ವೀಡಿಯೋವನ್ನು ಮೂಲತಃ ಅವರೇ ಪ್ರಸಾರ ಮಾಡಿರಬಹುದು ಎಂದು ಸೂಚಿಸುತ್ತದೆ.
ಜನವರಿ ೧೪, ೨೦೧೭ ರಂದು ಜೆಕೆ ನ್ಯೂಸ್ ನೆಟ್‌ವರ್ಕ್ ಯೂಟ್ಯೂಬ್ ನಲ್ಲಿ ಹಂಚಿಕೊಂಡ ವೀಡಿಯೋದ ಸ್ಕ್ರೀನ್‌ಶಾಟ್.
ಈ ವೀಡಿಯೋದಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಹುಡುಕಿದ್ದೇವೆ ಮತ್ತು ಅದೇ ದೃಶ್ಯಗಳನ್ನು ಒಳಗೊಂಡ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ನ್ಯೂಸ್ ನೇಷನ್ ಜನವರಿ ೧೩, ೨೦೧೭ ರಂದು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಈ ವೀಡಿಯೊದ ಶೀರ್ಷಿಕೆಯು ಹೀಗೆ ಹೇಳುತ್ತದೆ, “ಮಾಜಿ ಬಿಗ್ ಬಾಸ್ ೧೦ ಸ್ಪರ್ಧಿ ಸ್ವಾಮಿ ಓಂ ಅವರು ಜಗಳದಲ್ಲಿ ತೊಡಗಿದ್ದಾರೆ, ಸ್ಟುಡಿಯೋದಲ್ಲಿ ಪ್ರತಿಭಟನೆಗಳನ್ನು ಎದುರಿಸಿದ್ದಾರೆ (ಭಾಗ ೫)." ಈ ವೀಡಿಯೋದ ವಿವರಣೆಯು ಓಂ ಸ್ವಾಮಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಎಂದು ಸಹ ಗಮನಿಸಿದೆ.
ಜನವರಿ ೧೩, ೨೦೧೭ ರಂದು ನ್ಯೂಸ್ ನೇಷನ್ ಯೂಟ್ಯೂಬ್ ನಲ್ಲಿ ಹಂಚಿಕೊಂಡ ವೀಡಿಯೋದ ಸ್ಕ್ರೀನ್‌ಶಾಟ್.
ಜನವರಿ ೧೪, ೨೦೧೭ ರಂದು ನ್ಯೂಸ್ ನೇಷನ್ ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ಘಟನೆಯ ಕೆಲವು ಚಿತ್ರಗಳನ್ನು ಕೂಡ ನಾವು ನೋಡಿದ್ದೇವೆ.
ವೈರಲ್ ವೀಡಿಯೋದಲ್ಲಿ ಡಾ. ದೇವಿ ಶೆಟ್ಟಿ ಅವರ ಕ್ಲಿಪ್ ಅನ್ನು ಮತ್ತಷ್ಟು ವಿಶ್ಲೇಷಿಸಿದ ನಂತರ, ಆಡಿಯೋ ಮತ್ತೆ ಡಾ. ದೇವಿ ಶೆಟ್ಟಿಯವರ ತುಟಿ ಚಲನೆಯೊಂದಿಗೆ ಸಿಂಕ್ ಆಗಿರಲಿಲ್ಲ. ವೈರಲ್ ವೀಡಿಯೋದಿಂದ ಅವರ ಕ್ಲಿಪ್‌ನ ರಿವರ್ಸ್ ಇಮೇಜ್ ಸರ್ಚ್, ನವೆಂಬರ್ ೨೪, ೨೦೨೨ ರಂದು ಹಂಚಿಕೊಂಡ ಎನ್‌ಡಿಟಿವಿ ಪ್ರಾಫಿಟ್ ನ ಯೂಟ್ಯೂಬ್ ವೀಡಿಯೋದತ್ತ ನಮ್ಮನ್ನು ಕರೆದೊಯ್ಯಿತು. “ಬಿಕ್ಯೂ ಎಕ್ಸ್‌ಕ್ಲೂಸಿವ್: ಡಾ. ದೇವಿ ಶೆಟ್ಟಿ ಆರೋಗ್ಯ, ಹೃದಯ ಮತ್ತು ಹೀಲಿಂಗ್,” ಎಂಬ ಶೀರ್ಷಿಕೆಯ ಈ ವೀಡಿಯೋ ಡಾ. ದೇವಿ ಶೆಟ್ಟಿಯವರು ಹೇಳುವುದಾಗಿ ವೈರಲ್ ವೀಡಿಯೋದಲ್ಲಿ ತೋರಿಸುವ ಯಾವುದೇ ಮಾತುಗಳನ್ನು ಒಳಗೊಂಡಿಲ್ಲ.
ಡಾ. ದೇವಿ ಪ್ರಸಾದ್ ಶೆಟ್ಟಿ ಅವರನ್ನು ಒಳಗೊಂಡ ಎನ್‌ಡಿಟಿವಿ ಪ್ರಾಫಿಟ್‌ನ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಲೈವ್ ಟಿವಿಯಲ್ಲಿ ಡಾ. ದೇವಿ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ತೋರಿಸುವ ಆಜ್ ತಕ್ ವರದಿಯ ಉದ್ದೇಶಿತ ವೀಡಿಯೋ ನಕಲಿ ಎಂದು ಇದು ತೋರಿಸುತ್ತದೆ. ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲು ನಕಲಿ ಆಡಿಯೋ ಸೇರಿಸಿ ಎಡಿಟ್ ಮಾಡಿದ ವೀಡಿಯೋವನ್ನು ತಪ್ಪು ಮಾಹಿತಿ ಪ್ರಚಾರ ಮಾಡಲು ಬಳಸಲಾಗುತ್ತದೆ.
ತೀರ್ಪು:
ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದಾಗಿ ಟಿವಿ ಲೈವ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಹೇಳಿಕೆಗಳು ತಪ್ಪು. ಇದು ನಿಜವಾದ ಸುದ್ದಿ ವರದಿಯಂತೆ ತೋರಿಸಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಡಾ. ದೇವಿ ಶೆಟ್ಟಿ ಅವರನ್ನು ಒಳಗೊಂಡ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಮತ್ತು ಅನೇಕ ವೀಡಿಯೋಗಳ ಕ್ಲಿಪ್ಪಿಂಗ್‌ಗಳು, ನಕಲಿ ವಾಯ್ಸ್‌ಓವರ್‌ಗಳನ್ನು ವೈರಲ್ ವೀಡಿಯೋದಲ್ಲಿ ಬಳಸಲಾಗಿದೆ.