ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಮಳಿಗೆಯಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಂಚಿಕೊಳ್ಳಲಾಗಿದೆ.
“ಮತ್ತೊಂದು ದಿನ, ಕರ್ನಾಟಕದಲ್ಲಿ ಮತ್ತೊಂದು ಭಯಾನಕ ಘಟನೆ. ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಶೋ ರೂಮ್‌ನಲ್ಲಿ ಸ್ಪೋಟ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಈ ರಾಜ್ಯ ಬದುಕಲು ಅತ್ಯಂತ ಅಸುರಕ್ಷಿತವಾಗುತ್ತಿದೆ. 2014ಕ್ಕಿಂತ ಹಿಂದಿನ ಪರಿಸ್ಥಿತಿ ನೆನಪಿಸುತ್ತಿದೆ.” ಎಂದು ಕೆಲ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದು, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
“ಮತ್ತೊಂದು ದಿನ, ಮತ್ತೊಂದು ಸ್ಫೋಟ. ಕರ್ನಾಟಕದ ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್‌ನಲ್ಲಿ ಸ್ಫೋಟ. ಬಿಟ್ಟಿ ಭಾಗ್ಯದ ಕಾಂಗ್ರೆಸ್ ಕರ್ನಾಟಕಕ್ಕೆ ಸ್ವಾಗತ” ಎಂದು ಇನ್ನೂ ಕೆಲವರು ಪೋಸ್ಟ್ ಹಾಕಿದ್ದಾರೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳ ಪೋಸ್ಟ್‌ನಲ್ಲಿರುವುದು ಸಂಪೂರ್ಣ ಸುಳ್ಳು ಮಾಹಿತಿಯಾಗಿದೆ. ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಶಾಖೆಯಲ್ಲಿ ನಡೆದಿರುವುದು ಯಾವುದೇ ಬಾಂಬ್ ಸ್ಪೋಟ ಅಲ್ಲ. ಶೋರೂಂನ ಎಸಿ ಸ್ಪೋಟಗೊಂಡು ದುರ್ಘಟನೆ ಸಂಭವಿಸಿದೆ. ಈ ಕುರಿತು ಕನ್ನಡದ ಅನೇಕ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.
‘ಈಟಿವಿ ಭಾರತ್ ಕರ್ನಾಟಕ‘ ಪ್ರಕಟಿಸಿದ ಸುದ್ದಿಯಲ್ಲಿ “2 ಮೇ 2024ರಂದು ಬಳ್ಳಾರಿ ನಗರದ ತೇರು ಬೀದಿಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಸಿ ಸ್ಪೋಟಗೊಂಡು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಡಿವೈಎಸ್‌ಪಿ, ಬ್ರೂಸ್‌ಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ” ಎಂದು ತಿಳಿಸಿದೆ.
‘ಕನ್ನಡ ಪ್ರಭ‘ ಪ್ರಕಟಿಸಿದ ವರದಿಯಲ್ಲಿ “ಗಣಿ ಜಿಲ್ಲೆ ಬಳ್ಳಾರಿಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡ ಪರಿಣಾಮ ಅಲ್ಲಿದ್ದವರ ಪೈಕಿ 6 ಮಂದಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ”.
“ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದ್ದು, ಬಳ್ಳಾರಿ ನಗರದ ರಥಬೀದಿಯ ಮಾರ್ಟಿನ್ ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡಿದೆ” ಎಂದು ತಿಳಿಸಿದೆ.
ಘಟನೆಯ ಕುರಿತು ಇಂಗ್ಲಿಷ್ ವೆಬ್‌ಸೈಟ್ ‘ಫ್ರೀ ಪ್ರೆಸ್ ಜರ್ನಲ್‘ ಕೂಡ ಸುದ್ದಿ ಪ್ರಕಟಿಸಿದ್ದು, ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಚಿನ್ನದ ಮಳಿಗೆಯಲ್ಲಿ ಎಸಿ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ.
ಹಾಗಾಗಿ, ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಶೋರೂಂನಲ್ಲಿ ನಡೆದಿರುವುದು ಎಸಿ ಸ್ಪೋಟವೇ ಹೊರತು ಯಾವುದೇ ಬಾಂಬ್ ಸ್ಪೋಟವಲ್ಲ.