ಭಾರತದ ರೋಹಿಂಗ್ಯಾ ಶಿಬಿರಗಳಲ್ಲಿ ಒಂದು ವರ್ಷದಲ್ಲಿ 60,000 ಶಿಶುಗಳು ಜನಿಸಿವೆ ಎಂಬುವುದು ಸುಳ್ಳು
“ಭಾರತದ ರೋಹಿಂಗ್ಯಾ ಶಿಬಿರಗಳಲ್ಲಿ ಒಂದು ವರ್ಷಕ್ಕೆ ಸುಮಾರು 60,000 ಶಿಶುಗಳು ಜನಿಸಿವೆ. ದೇಶದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ” ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.
ಫ್ಯಾಕ್ಟ್‌ಚೆಕ್ : ವೈರಲ್ ಪೋಸ್ಟ್ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಕೀವರ್ಡ್ ಬಳಸಿ ಗೂಗಲ್‌ನಲ್ಲಿ ಮಾಹಿತಿ ಹುಡುಕಿದಾಗ ಫೆಬ್ರವರಿ 28, 2018ರಲ್ಲಿ ಇಂಡಿಯಾ ಟಿವಿ ವೆಬ್ ಸೈಟ್‌ನಲ್ಲಿ ಪ್ರಕಟಗೊಂಡ ವರದಿಯೊಂದು ಲಭ್ಯವಾಗಿದೆ.
ವರದಿಯಲ್ಲಿ “ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿನ ಶೋಚನೀಯ ಪರಿಸ್ಥಿತಿಗಳನ್ನು ಚರ್ಚಿಸಿದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಅವರು, ಮ್ಯಾನ್ಮಾರ್‌ನಿಂದ ಪಲಾಯನ ಮಾಡಿರುವ ರೋಹಿಂಗ್ಯಾಗಳ ಪರಿಸ್ಥಿತಿಯನ್ನು ಭಯಾನಕ ಎಂದು ವಿವರಿಸಿದ್ದಾರೆ. ಮುಂದಿನ ವರ್ಷದಲ್ಲಿ ಈ ನಿರಾಶ್ರಿತರ ಶಿಬಿರಗಳಲ್ಲಿ 60,000 ಶಿಶುಗಳು ಜನಿಸಬಹುದು ಎಂದು ಅವರು ಅಂದಾಜಿಸಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
ಡಾ. ಖೇತ್ರಪಾಲ್ ಅವರು ಬಾಂಗ್ಲಾ ದೇಶದ ರೋಹಿಂಗ್ಯಾ ಶಿಬಿರಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆಯೇ ಹೊರತು ಭಾರತದ್ದಲ್ಲ ಎಂಬುವುದು ವರದಿಯಿಂದ ತಿಳಿದು ಬಂದಿದೆ. ಡಾ. ಖೇತ್ರಪಾಲ್ ಅವರ ಈ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರಬಹುದು.
ಯುಎನ್‌ಹೆಚ್‌ಸಿಆರ್‌ನ ಅಧಿಕೃತ ಅಂಕಿ ಅಂಶಗಳು ರೋಹಿಂಗ್ಯಾ ಶಿಬಿರಗಳಲ್ಲಿನ ಪರಿಸ್ಥಿತಿಗಳು ಆತಂಕಕಾರಿಯಾಗಿದೆ ಎಂದಿತ್ತು. ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ಪ್ರತಿದಿನ 60ಕ್ಕೂ ಹೆಚ್ಚು ರೋಹಿಂಗ್ಯಾ ಶಿಶುಗಳು ಜನಿಸುತ್ತಿವೆ ಎಂದು ಯುಎನ್‌ಹೆಚ್‌ಸಿಆರ್ 2018ರಲ್ಲಿ ವರದಿ ಮಾಡಿತ್ತು.
ಭಾರತದಲ್ಲಿ ರೋಹಿಂಗ್ಯಾಗಳ ಪರಿಸ್ಥಿತಿ ಹೇಗಿದೆ?
ಯುಎನ್‌ಹೆಚ್‌ಸಿಆರ್ ಪ್ರಕಾರ, 31 ಜನವರಿ 2022ರಂತೆ, 46,000 ಕ್ಕೂ ಹೆಚ್ಚು ನಿರಾಶ್ರಿತರು ಮತ್ತು ಮುಖ್ಯವಾಗಿ ಮ್ಯಾನ್ಮಾರ್ ಮತ್ತು ಅಫ್ಘಾನಿಸ್ತಾನದಿಂದ ಆಶ್ರಯ ಹುಡುಕಿಕೊಂಡು ಬಂದವರು ಭಾರತದಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಆದರೆ, ಭಾರತದಲ್ಲಿನ ರೋಹಿಂಗ್ಯಾ ಶಿಬಿರಗಳಲ್ಲಿ ಎಷ್ಟು ಹೆರಿಗೆಗಳು ನಡೆಯುತ್ತಿವೆ ಎಂಬುವುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ದೇಶದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿ ಅಂಶಗಳಿಲ್ಲ ಎಂದು ಭಾರತ ಸರ್ಕಾರ ಹಲವಾರು ಸಂದರ್ಭಗಳಲ್ಲಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ಮ್ಯಾನ್ಮಾರ್‌ನಿಂದ ಸುಮಾರು 40,000 ರೋಹಿಂಗ್ಯಾಗಳು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ನಾವು ನಡೆಸಿದ ಪರಿಶೀಲನೆಯಲ್ಲಿ ತಿಳಿದು ಬಂದಂತೆ, ಒಂದು ವರ್ಷಕ್ಕೆ 60 ಸಾವಿರ ರೋಹಿಂಗ್ಯಾ ಶಿಶುಗಳ ಜನಿಸಿವೆ ಎಂಬ ವರದಿ ಭಾರತಕ್ಕೆ ಸಂಬಂಧಿಸಿದ್ದಲ್ಲ. ಬಾಂಗ್ಲಾದೇಶದ ರೋಹಿಂಗ್ಯಾ ಶಿಬಿರಗಳ ಕುರಿತಾಗಿದೆ. ಅಲ್ಲಿಯೂ ಮುಂದಿನ ವರ್ಷದಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ 60,000 ಶಿಶುಗಳು ಜನಿಸಬಹುದು ಎಂದು ಡಾ. ಪೂನಂ ಖೇತ್ರಪಾಲ್ 2018ರಲ್ಲಿ ಅಂದಾಜಿಸಿದ್ದರು. ಅಷ್ಟು ಶಿಶುಗಳ ಜನಿಸಿವೆಯೇ? ಎಂಬುವುದು ಖಚಿತವಾಗಿಲ್ಲ.