ಕೇರಳದ ಚರ್ಚ್‌ನಲ್ಲಿ ₹ 7 ಸಾವಿರ ಕೋಟಿ ಕಪ್ಪು ಹಣ ಪತ್ತೆಯಾಗಿದೆ ಎಂಬುವುದು ಸುಳ್ಳು

Update: 2024-06-24 07:34 GMT

ಕೇರಳದ ಚರ್ಚ್ ಒಂದರ ಮೇಲೆ ಇತ್ತೀಚೆಗೆ ಇಡಿ ದಾಳಿ ನಡೆಸಿದ ವೇಳೆ 7,000 ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದ್ದು, 500 ರೂಪಾಯಿ ನೋಟುಗಳ ದೊಡ್ಡ ರಾಶಿ ಮತ್ತು ಪಾದ್ರಿಯೊಬ್ಬರ ಫೋಟೋವನ್ನು ಹಂಚಿಕೊಳ್ಳಲಾಗ್ತಿದೆ.

“ಇಡಿ ಕೇರಳದ ಲಿನಿ ಬೆಲರೂಸಿಯನ್ ಎಂಬ ಚರ್ಚ್‌ನಿಂದ 7000 ಕೋಟಿ ರೂಪಾಯಿ ಮೌಲ್ಯದ ಕಪ್ಪು ಹಣವನ್ನು ವಶಪಡಿಸಿಕೊಂಡಿದೆ. ಇದನ್ನು ಯೋಹಾನನ್ ಎಂಬ ಬಿಷಪ್ ನಡೆಸುತ್ತಾರೆ. ಇದುವರೆ ಈ ವಿಷಯ ಎಲ್ಲಿಯೂ ಸುದ್ದಿಯಾಗಿಲ್ಲ. ಯಾವುದಾದರು ಹಿಂದೂ ಸ್ವಾಮಿ ಬಳಿ 700 ಕೋಟಿಯ ಬಿಡಿ, 7 ಕೋಟಿ ರೂ. ಸಿಕ್ಕಿದ್ದರೆ ಸುದ್ದಿ ವಾಹಿನಿಗಳು 48 ಗಂಟೆಗಳ ಕಾಲ ಬೆತ್ತಲೆಯಾಗಿ ಕುಣಿಯಲು ಪ್ರಾರಂಭಿಸುತ್ತಿದ್ದವು” ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಟೋ ಮತ್ತು ಬರಹದ ಸತ್ಯಾಸತ್ಯತೆಯನ್ನು ನಾವು ಪರಿಶೀಲನೆ ನಡೆಸಿದ್ದೇವೆ. ಗೂಗಲ್‌ನಲ್ಲಿ ಕೀ ವರ್ಡ್ಸ್ ಬಳಸಿ ಈ ಕುರಿತು ಮಾಹಿತಿ ಹುಡುಕಿದಾಗ ನವೆಂಬರ್ 7, 2020ರಂದು ಲೈವ್ ಹಿಂದುಸ್ತಾನ್ ಸುದ್ದಿ ವೆಬ್‌ಸೈಟ್‌ ಪ್ರಕಟಿಸಿದ ಸುದ್ದಿ ಲಭ್ಯವಾಗಿದೆ.

ಈ ಸುದ್ದಿಯಲ್ಲಿ ನವೆಂಬರ್ 5, 2020 ರಂದು ಆದಾಯ ತೆರಿಗೆ ಇಲಾಖೆ ಕೇರಳದ ತಿರುವಲ್ಲಾದಲ್ಲಿರುವ ಬಿಲೀವರ್ಸ್ ಈಸ್ಟರ್ನ್ ಚರ್ಚ್‌ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಕೇರಳ ಈ ಚರ್ಚ್ ಮೆಟ್ರೋಪಾಲಿಟನ್ ಬಿಷಪ್ ಕೆ.ಪಿ ಯೋಹಾನನ್ ಅವರ ನೇತೃತ್ವದಲ್ಲಿ ನಡೆಯುತ್ತದೆ. ಐಟಿ ಇಲಾಖೆಯು ಚರ್ಚ್‌ನಿಂದ 5 ಕೋಟಿ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ” ಎಂದು ತಿಳಿಸಲಾಗಿತ್ತು.

ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ ನವೆಂಬರ್ 6, 2020ರಂದು ಹಣಕಾಸು ಇಲಾಖೆಯ ಪರವಾಗಿ ಪ್ರೆಸ್ ಇನ್ಫರ್‌ಮೇಶನ್ ಬ್ಯೂರೋ (ಪಿಐಬಿ) ಪ್ರಕಟಿಸಿದ್ದ ಮಾಹಿತಿ ಲಭ್ಯವಾಗಿದೆ.

ಪ್ರಕಟಣೆಯಲ್ಲಿ “ಆದಾಯ ತೆರಿಗೆ ಇಲಾಖೆಯು ನವೆಂಬರ್ 5, 2020ರಂದು ಕೇರಳದ ತಿರುವಲ್ಲಾದ ಪ್ರಸಿದ್ಧ ಸುವಾರ್ತಾಬೋಧಕ ಟ್ರಸ್ಟ್ ಮತ್ತು ಅದರ ಸಂಸ್ಥೆಗಳಲ್ಲಿ ಆದಾಯ ತೆರಿಗೆ ಕಾಯ್ದೆ, 1961ರ ಅಡಿ ಶೋಧ ನಡೆಸಿದೆ. ಇ ಧಾರ್ಮಿಕ ಟ್ರಸ್ಟ್ ಶಾಲಾ, ಕಾಲೇಜುಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಮತ್ತು ಕೇರಳದಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಿವೆ. ಐಟಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ, ಚಂಡೀಗಢ, ಪಂಜಾಬ್ ಮತ್ತು ತೆಲಂಗಾಣದಲ್ಲಿರುವ ಸಂಸ್ಥೆಯ 66 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ದೆಹಲಿಯ ಪ್ರಾರ್ಥನಾ ಸ್ಥಳದಲ್ಲಿ 3.85 ಕೋಟಿ ರೂ. ಸೇರಿದಂತೆ ಅಂದಾಜು 6 ಕೋಟಿಯಷ್ಟು ದಾಖಲೆಯಿಲ್ಲದ ಹಣ ಪತ್ತೆಯಾಗಿದೆ ಎಂದು ತಿಳಿಸಿತ್ತು.

ನಾವು ನಡೆಸಿದ ಪರಿಶೀಲನೆಯಲ್ಲಿ ಇತ್ತೀಚೆಗೆ ಕೇರಳದ ಚರ್ಚ್‌ ಮೇಲೆ ಇಡಿ ದಾಳಿ ನಡೆಸಿರುವುದು ಮತ್ತು ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಸುಳ್ಳು ಎಂಬುವುದು ಖಚಿತವಾಗಿದೆ.

Claim :  It is a lie that 7000 rupees crore black money was found in a church in Kerala
Claimed By :  Facebook User
Fact Check :  False
Tags:    

Similar News