ಕುರಾನ್ ಬೋಧಿಸುವ ಭಾರತದ ವಿವಿಗಳಲ್ಲಿ ಭಗವದ್ಗೀತೆ, ರಾಮಾಯಣ ಅಧ್ಯಯನಕ್ಕೆ ಕೋರ್ಸ್‌ಗಳಿಲ್ಲ ಎನ್ನುವುದು ಸುಳ್ಳು

Update: 2024-06-18 10:34 GMT

“ಭಾರತದಲ್ಲಿ 20 ಸರ್ಕಾರಿ ಅನುದಾನಿತ ವಿಶ್ವ ವಿದ್ಯಾನಿಲಯಗಳು ಕುರಾನ್ ಅಧ್ಯಯನ ಮಾಡಲು ಕೋರ್ಸ್‌ಗಳನ್ನು ನೀಡುತ್ತಿವೆ. ಆದರೆ, ಭಗವದ್ಗೀತೆ ಅಥವಾ ರಾಮಾಯಣವನ್ನು ಅಧ್ಯಯನ ಮಾಡಲು ಯಾವುದೇ ಕೋರ್ಸ್‌ಗಳಿಲ್ಲ” ಎಂಬ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಅನೇಕ ಬಳಕೆದಾರರು ಈ ರೀತಿಯ ಪೋಸ್ಟ್‌ಗಳನ್ನು ತಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ಹಾಕಿದ್ದಾರೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿರುವಂತೆ ಭಾರತದ ವಿವಿಧ ವಿಶ್ವ ವಿದ್ಯಾನಿಲಯಗಳು ಇಸ್ಲಾಮಿಕ್ ಅಧ್ಯಯನದ ಭಾಗವಾಗಿ ಕುರಾನ್ ಬೋಧಿಸುತ್ತಿರುವುದು ನಿಜ. ಆದರೆ, ಯಾವುದೇ ವಿವಿಗಳು ಭಗವದ್ಗೀತೆ ಅಥವಾ ರಾಮಾಯಣ ಬೋಧಿಸುತ್ತಿಲ್ಲ ಎನ್ನುವುದು ಸುಳ್ಳು.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಮೊಹಮ್ಮದ್ ಅಲಿ ಜೌಹರ್ ಮತ್ತು ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಂತಹ ಭಾರತದ ಅನೇಕ ವಿಶ್ವವಿದ್ಯಾನಿಲಯಗಳು ತಮ್ಮ ಇಸ್ಲಾಮಿಕ್ ಅಧ್ಯಯನ ಪಠ್ಯಕ್ರಮದ ಭಾಗವಾಗಿ ಕುರಾನ್ ಕಲಿಸುತ್ತಿವೆ.

ಅದೇ ರೀತಿ, ದೇಶದ ಅನೇಕ ವಿಶ್ವ ವಿದ್ಯಾಲಯಗಳು ಭಗವದ್ಗೀತೆಯ ಕೋರ್ಸ್‌ಗಳನ್ನೂ ನೀಡುತ್ತಿವೆ. ಉದಾಹರಣೆಗೆ : ಕುರುಕ್ಷೇತ್ರ ವಿಶ್ವವಿದ್ಯಾನಿಲಯವು 2012ರಲ್ಲಿ ಭಗವದ್ಗೀತೆಯ ಕುರಿತು ಕೋರ್ಸ್ ಪರಿಚಯಿಸಿದೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (IGNOU)ಭಗವದ್ಗೀತೆ ಕುರಿತು ಸ್ನಾತಕೋತ್ತರ ಪ್ರಮಾಣಪತ್ರ ಕೋರ್ಸ್‌ ನೀಡುತ್ತಿದೆ. ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಕೂಡ ಹಲವು ವರ್ಷಗಳಿಂದ ರಾಮಾಯಣ ಮತ್ತು ಮಹಾಭಾರತ ಕೋರ್ಸ್ ಅನ್ನು ನೀಡುತ್ತಿದೆ.

ಲಕ್ನೋ ವಿಶ್ವವಿದ್ಯಾಲಯವು 2020 ರಲ್ಲಿ ಭಗವದ್ಗೀತೆಯ ಆನ್‌ಲೈನ್ ಕೋರ್ಸ್ ಪರಿಚಯಿಸಿದೆ. ಗುಜರಾತ್, ಕರ್ನಾಟಕದಂತಹ ರಾಜ್ಯಗಳು ತಮ್ಮ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸಿವೆ ಎಂದು ವರದಿಗಳಿವೆ.

ಡಿಸೆಂಬರ್ 2021 ರಲ್ಲಿ, ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವರು ಭಗವದ್ಗೀತೆಗೆ ಸಂಬಂಧಿಸಿದ ವಿಷಯವು ಈಗಾಗಲೇ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE)ನಲ್ಲಿ ವಿವಿಧ ತರಗತಿಗಳ ಭಾಗವಾಗಿದೆ ಎಂದು ತಿಳಿಸಿದ್ದರು.

ಇದಲ್ಲದೆ, ಯೋಗ ವಿಷಯಕ್ಕಾಗಿ ಯುಜಿಸಿ-ನೆಟ್ ಪರೀಕ್ಷೆಯ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗಿದೆ. ರಾಜ್ಯಗಳು ತಮ್ಮ ಪಠ್ಯಕ್ರಮದಲ್ಲಿ ಭಗವದ್ಗೀತೆ, ರಾಮಾಯಣ ಕುರಿತ ವಿಷಯಗಳನ್ನು ಸೇರಿಸಲು ಅಧಿಕಾರ ಹೊಂದಿವೆ.

ನಾವು ಮೇಲೆ ಉಲ್ಲೇಖಿಸಿದ ಮಾಹಿತಿಯ ಪ್ರಕಾರ, ಭಾರತದ ವಿವಿದ ವಿಶ್ವವಿದ್ಯಾಲಯಗಳು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಭಗವದ್ಗೀತೆ, ರಾಮಾಯಣ ಬೋಧಿಸುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಸಾಮಾಜಿಕ ಜಾಲತಾಣದ ಪೋಸ್ಟ್ ಸುಳ್ಳು.

Claim :  It is a lie that there are no courses for studying Bhagavad Gita, Ramayana in Indian universities
Claimed By :  Facebook User
Fact Check :  False
Tags:    

Similar News