ಚುನಾವಣೆ ಭರವಸೆಗಳಿಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಾರೆ ಎನ್ನುವುದು ಸುಳ್ಳು
“ಮಾಸಿಕ 8,500 ರೂಪಾಯಿ ಮತ್ತು ವಾರ್ಷಿಕವಾಗಿ 100,000 ರೂ. ಸಹಾಯಧನ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯ ಪೂರ್ವ ಭರವಸೆ ನೀಡಿದ್ದರು. ಈ ವಿಚಾರಕ್ಕೆ ಅವರು ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಸುಳ್ಳುಗಳ ಮೂಲಕ ಅವರು (ಕಾಂಗ್ರೆಸ್) ಸಾರ್ವತ್ರಿಕ ಚುನಾವಣೆಯಲ್ಲಿ 99 ಸೀಟ್ ಪಡೆದಿದೆ. ಇದು ಸ್ಪಷ್ಟವಾಗಿ ಜನರನ್ನು ದಾರಿತಪ್ಪಿಸುವ ಮೂಲಕ ನಡೆಸಿದ ಚುನಾವಣಾ ವಂಚನೆಯಾಗಿದೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪೋಸ್ಟ್ ಹಾಕಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಹೇಳಿದಂತೆ ರಾಹುಲ್ ಗಾಂಧಿ ಚುನಾವಣಾ ಪೂರ್ವ ಭಾಷಣಗಳಲ್ಲಿ ಧನ ಸಹಾಯದ ಭರವಸೆಗಳನ್ನು ನೀಡಿರುವುದು ಹೌದು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೂ ಅದನ್ನು ಉಲ್ಲೇಖಿಸಿತ್ತು. ಆದರೆ, ಈ ವಿಚಾರಕ್ಕೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಿದ್ದಾರಾ? ಎಂಬುವುದನ್ನು ನಾವು ಪರಿಶೀಲಿಸಿದ್ದೇವೆ.
ಜೂನ್ 4,2024ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ರಾಹುಲ್ ಗಾಂಧಿ ಚುನಾವಣಾ ಭರವಸೆಗಳಿಗಾಗಿ ಜನರ ಕ್ಷಮೆ ಯಾಚಿಸಿರುವುದು ಎಲ್ಲೂ ವರದಿಯಾಗಿಲ್ಲ. ತನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ರಾಹುಲ್ ಗಾಂಧಿ ಕ್ಷಮೆ ಯಾಚಿಸಿ ಪೋಸ್ಟ್ ಹಾಕಿಲ್ಲ.
ಇತ್ತೀಚೆಗೆ, ಮಹಿಳೆಯರು ಕಾಂಗ್ರೆಸ್‌ನ ಗ್ಯಾರಂಟಿ ಹಣಕ್ಕಾಗಿ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ ಎಂದು ಸುಳ್ಳು ಸುದ್ದಿಯೊಂದು ಹಬ್ಬಿತ್ತು. ಅದರಂತೆ ಇದೂ ಕೂಡ ಸುಳ್ಳು ಸುದ್ದಿ ಎಂಬುವುದು ಖಚಿತವಾಗಿದೆ.
ಚುನಾವಣೆಯ ಫಲಿತಾಂಶದ ಬಳಿಕ ಲಕ್ನೋದ ಕಾಂಗ್ರೆಸ್ ಕಚೇರಿ ಮುಂದೆ ಗ್ಯಾರಂಟಿ ಕಾರ್ಡ್ ಹಿಡಿದು ಕೆಲ ಮಹಿಳೆಯರು ಗುಂಪು ಸೇರಿದ್ದರು. ಮಾಧ್ಯಮದವರು ಕೇಳಿದ್ದಕ್ಕೆ ಕಾಂಗ್ರೆಸ್ ಚುನಾವಣಾ ಪೂರ್ವ ಭರವಸೆ ನೀಡಿದ್ದ ಗ್ಯಾರಂಟಿ ಹಣಕ್ಕಾಗಿ ಆಗಮಿಸಿದ್ದೇವೆ ಎಂದಿದ್ದರು.
ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಹ್ರೂಫ್ ಖಾನ್ ” ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದರೆ ಹಣ ನೀಡುವುದಾಗಿ ನಾವು ಭರವಸೆ ನೀಡಿದ್ದೆವು. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಮಹಿಳೆಯರು ಕಾಂಗ್ರೆಸ್ ಕಚೇರಿ ಬಳಿಗೆ ಆಗಮಿಸಿದ್ದಾರೆ. ಅವರಿಗೆ ನಾವು ತಿಳಿ ಹೇಳಿದ್ದೇವೆ ಎಂದಿದ್ದರು.
ಇದನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಚುನಾವಣಾ ಪೂರ್ವ ಭರವಸೆ ನೀಡಿದ್ದ ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯಾಗಲಿ, ಇತರ ಕಾಂಗ್ರೆಸ್ ನಾಯಕರಾಗಲಿ ಕ್ಷಮೆಯಾಚನೆ ಮಾಡಿಲ್ಲ.