ಅಪಾರ್ಟ್‌ಮೆಂಟ್ ಒಂದರ ಮುಂಭಾಗದಲ್ಲಿ ನೂರಾರು ಜಾನುವಾರುಗಳನ್ನು ಹತ್ಯೆ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ಪಶ್ಚಿಮ ಬಂಗಾಳದಲ್ಲಿ ಬಕ್ರೀದ್ ಪ್ರಯುಕ್ತ ಜಾನುವಾರುಗಳ ಹತ್ಯೆ ಮಾಡಲಾಗಿದೆ’ ಎಂದು ಬರೆದುಕೊಳ್ಳಲಾಗಿದೆ.
“ಮಮತಾ ಬ್ಯಾನರ್ಜಿಗೆ ಯಾರಾದರೂ ಬೀಫ್ ಖಾದ್ಯವನ್ನು ಉಡುಗೊರೆಯಾಗಿ ನೀಡಿದ್ರಾ?
ಪಶ್ಚಿಮ ಬಂಗಾಳವನ್ನು ನೋಡಿ. ಇದು ಪಶ್ಚಿಮ ಬಂಗಾಳದಲ್ಲಿ ಈದ್ ಆಚರಿಸಿರುವುದು” ಎಂದು
Gayatri (@changu311) ಎಂಬ ಎಕ್ಸ್ ಬಳಕೆದಾರರು ವಿಡಿಯೋ ಸಹಿತ ಪೋಸ್ಟ್ ಹಾಕಿದ್ದಾರೆ.
JIX5A (@changu311) ಎಂಬ ಮತ್ತೊಬ್ಬರು ಬಳಕೆದಾರರು ಕೂಡ “ಇದು ಹಾಲಿವುಡ್ ಸಿನಿಮಾದ ಹಾರರ್ ದೃಶ್ಯಗಳು ಎಂದು ತಪ್ಪಾಗಿ ಗ್ರಹಿಸಬಹುದು. ವಾಸ್ತವದಲ್ಲಿ, ಇದು ಪಶ್ಚಿಮ ಬಂಗಾಳದ ಬೀದಿಗಳು ಮುಗ್ಧ ಜೀವಿಗಳ ಹತ್ಯೆಯಿಂದ ರಕ್ತಸಿಕ್ತವಾಗಿರುವುದು. ಮಮತಾ ಜಿ-ಹದನ್ ಅವರ ಮತ ಬ್ಯಾಂಕ್” ಎಂದು ಬರೆದುಕೊಂಡು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ Ashwini Shrivastava (@AshwiniSahaya) ಎಂಬ ಎಕ್ಸ್ ಬಳಕೆದಾರರು ಜುಲೈ 1,2023ರಲ್ಲಿ ಇದೇ ವೈರಲ್ ವಿಡಿಯೋ ಪೋಸ್ಟ್ ಮಾಡಿ “ಇದು ಭಾರತದಲ್ಲಿ ಹಿಂದೂಗಳು ಬಣ್ಣದ ಹಬ್ಬ ಹೋಳಿ ಆಚರಿಸುತ್ತಿರುವುದು? ಅಲ್ಲ, ಈ ದೃಶ್ಯ ಬಾಂಗ್ಲಾ ದೇಶದ ಢಾಕಾದಲ್ಲಿರುವ ವಸತಿ ಸಂಕೀರ್ಣದ ಈದುಲ್ ಅದ್ಹಾದ (ಬಕ್ರೀದ್ 2023) ದೃಶ್ಯವಾಗಿದೆ” ಎಂದು ಬರೆದುಕೊಂಡಿದ್ದಾರೆ.
ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ, ಅಕ್ಟೋಬರ್ 24,2022 ರಂದು ‘ಅಮರ್ ಚೋಖ್‘ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋದಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿರುವ ವಸತಿ ಸಂಕೀರ್ಣವನ್ನು ಕಾಣಬಹುದು.
ವಿಡಿಯೋದಲ್ಲಿ ಬಂಗಾಳಿ ಭಾಷೆಯಲ್ಲಿ ‘ದೃಷ್ಟಿನಂದನ್ ಮಿರ್ಪುರ್ ಸಗುಫ್ತಾ ಸ್ವಪ್ನಾನಗರ ರೆಸಿಡೆನ್ಶಿಯಲ್ ಫ್ಲಾಟ್ ಪ್ರಾಜೆಕ್ಟ್‌ನ ಡ್ರೀಮ್ ಸಿಟಿ ವಸತಿ ಯೋಜನೆ” ಎಂದು ಕ್ಯಾಪ್ಶನ್ ಕೊಡಲಾಗಿದೆ.
ಒಟ್ಟು 3 ನಿಮಿಷ 43 ಸೆಕೆಂಡ್‌ನ ಯೂಟ್ಯೂಬ್ ವಿಡಿಯೋದಲ್ಲಿ 1 ನಿಮಿಷ 6 ಸೆಕೆಂಡ್‌ನಿಂದ 3 ನಿಮಿಷದ ನಡುವೆ ನಾವು ವೈರಲ್ ವಿಡಿಯೋದಲ್ಲಿರುವ ವಸತಿ ಸಂಕೀರ್ಣವನ್ನು ನೋಡಬಹುದು. ಅಲ್ಲದೆ, ವೈರಲ್ ವಿಡಿಯೋದಲ್ಲಿ ಕಟ್ಟಡದ ಮುಂದೆ ಕೆಂಪು ಬಣ್ಣದ ಟೈಲ್ಸ್ ಹಾಕಲಾಗಿದೆ. ಅದೇ ಬಣ್ಣದ ಟೈಲ್ಸ್ ಯೂಟ್ಯೂಬ್ ವಿಡಿಯೋದಲ್ಲೂ ಇದೆ.
ಅಷ್ಟೇ ಅಲ್ಲದೆ ಗೂಗಲ್ ಮ್ಯಾಪ್‌ನಲ್ಲೂ ಸಂಪೂರ್ಣ ವಸತಿ ಸಮುಚ್ಚಯದ ಫೋಟೋಗಳನ್ನು ನೋಡಬಹುದು.
ಗೂಗಲ್ ಅರ್ಥ್‌ನಲ್ಲೂ ಕಟ್ಟಡದ ಬಗ್ಗೆ ನಾವು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಅದು ವೈರಲ್ ವಿಡಿಯೋದಲ್ಲಿರುವ ಕಟ್ಟಡದ ಮುಂಭಾಗದ ಮೈದಾನವನ್ನು ಬಾಂಗ್ಲಾದೇಶದ ರಾಜಧಾನಿ ಢಾಕಾದ ಸ್ವಪ್ನ ನಗರ ರೆಸಿಡೆನ್ಶಿಯಲ್ ಏರಿಯಾದ ಆಟದ ಮೈದಾನ ಎಂದು ತೋರಿಸಿದೆ.
ನಾವು ವಿವಿಧ ಆಯಾಮಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ, ಜಾನುವಾರುಗಳನ್ನು ಹತ್ಯೆ ಮಾಡಿರುವ ವೈರಲ್ ವಿಡಿಯೋದಲ್ಲಿರುವ ಕಾಣಿಸಿಕೊಂಡಿರುವ ಕಟ್ಟಡ ಬಾಂಗ್ಲಾದೇಶದ್ದು ಎಂದು ತಿಳಿದು ಬಂದಿದೆ. ಹಾಗಾಗಿ, ಜಾನುವಾರುಗಳ ಹತ್ಯೆಯ ವಿಡಿಯೋ ಕೂಡ ಪಶ್ಚಿಮ ಬಂಗಾಳದಲ್ಲ ಬಾಂಗ್ಲಾದೇಶದ್ದು ಎಂದು ಖಚಿತಪಡಿಸಬಹುದು.