ಕಾಂಗ್ರೆಸ್‌ಗೆ ಮತ ಹಾಕಲು ವಿದೇಶದಿಂದ ಬರುವ ಮುಸ್ಲಿಮರಿಗೆ ಆರ್ಥಿಕ ನೆರವು ಘೋಷಣೆ ಮಾಡಿರುವ ವೈರಲ್ ಪತ್ರ ನಕಲಿ

Update: 2024-05-11 07:00 GMT

ಅಸೋಸಿಯೇಷನ್ ​​ಆಫ್ ಸುನ್ನಿ ಮುಸ್ಲಿಂ (ಸುನ್ನಿ ಮುಸ್ಲಿಂ ಮಜ್ಲಿಸ್) ಎಂಬ ಸಂಘಟನೆಯೊಂದರ ಲೆಟರ್ ಹೆಡ್‌ನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲು ತೆರಳುವ ಮುಸ್ಲಿಮರಿಗೆ ಟಿಕೆಟ್ ಬುಕಿಂಗ್ ಮತ್ತು ಮುಂಗಡ ಬುಕ್ಕಿಂಗ್ ಟಿಕೆಟ್‌ನ ಸಂಪೂರ್ಣ ಹಣವನ್ನು ಈ ಸಂಘಟನೆ ನೀಡಲಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಏಪ್ರಿಲ್ 29ರ ದಿನಾಂಕದಲ್ಲಿ ಪತ್ರವನ್ನು ಮುದ್ರಿಸಲಾಗಿದೆ.

ಪತ್ರದಲ್ಲಿ ‘ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವುದು ಮತ್ತು ಮುಸ್ಲಿಮರ ನಿಜವಾದ ಹಿತೈಷಿಯಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಈ ಸಹಾಯದ ಉದ್ದೇಶವಾಗಿದೆ’ ಎಂದು ಹೇಳಲಾಗಿದೆ. ಈ ಪತ್ರವನ್ನು ಹಂಚಿಕೊಂಡಿರುವ ಅನೇಕರು ‘ಕಾಂಗ್ರೆಸ್ ಪಕ್ಷಕ್ಕೆ ಅಂತಾರಾಷ್ಟ್ರೀಯ ಮುಸ್ಲಿಂ ಸಂಘಟನೆಗಳ ಬೆಂಬಲ ಸಿಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಅರುಣ್ ಪುದೂರ್ ಎಂಬವರು ಮೇ 7ರಂದು ಎಕ್ಸ್‌ನಲ್ಲಿ ಈ ಪತ್ರವನ್ನು ಪೋಸ್ಟ್ ಮಾಡಿದ್ದರು. “ದುಬೈನ ಸುನ್ನಿ ಮುಸ್ಲಿಮರ ಸಂಘವು ಮತ್ತೆ ಕಾಂಗ್ರೆಸ್ ಸರ್ಕಾರ ರಚಿಸಲು ಕರ್ನಾಟಕದ ಮುಸ್ಲಿಮರಿಗೆ ಸಂಪೂರ್ಣ ಆರ್ಥಿಕ ನೆರವು ನೀಡುತ್ತಿದೆ. ಆದರೆ, ಇಲ್ಲಿನ ಹಿಂದೂಗಳು ಈ ಬಿರು ಬೇಸಿಗೆಯಲ್ಲೂ ಮನೆಯಲ್ಲಿ ಹೊದ್ದು ಮಲಗಿದ್ದಾರೆ ಅಥವಾ ಮೌಲಾನಾ ಮೋದಿ ಹಿಂದೂಗಳಿಗೆ ಏನೂ ಮಾಡಿಲ್ಲ” ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದು ಬರೆದುಕೊಂಡಿದ್ದರು.

“ಕರ್ನಾಟಕದ ಮುಸ್ಲಿಂ ಸಂಘಟನೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ಮುಸ್ಲಿಮರು ತಾಯ್ನಾಡಿಗೆ ಬಂದು ಕಾಂಗ್ರೆಸ್‌ಗೆ ಮತ ಹಾಕಲು ತಗಲುವ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುತ್ತಿದೆ” ಎಂದು ‘ಇಂದು ಮಕ್ಕಳ್ ಕಚ್ಚಿ‘ ಎಂಬ ಎಕ್ಸ್‌ ಹ್ಯಾಂಡಲ್‌ನಲ್ಲಿ ವೈರಲ್ ಲೆಟರ್ ಹೆಡ್ ಪೋಸ್ಟ್ ಮಾಡಲಾಗಿತ್ತು.

ಅನೇಕ ಬಾರಿ ತಪ್ಪು ಮಾಹಿತಿಗಳನ್ನು ಹಂಚಿಕೊಂಡಿರುವ ಬಾಯ್ಲ್ಡ್ ಅಂಡ (@AmitLeliSlayer)ಎಂಬ ಎಕ್ಸ್ ಖಾತೆಯಲ್ಲಿ ಮೇ 7, 2024ರಂದು ವೈರಲ್ ಪತ್ರವನ್ನು ಹಂಚಿಕೊಂಡು ‘ಕಾಂಗ್ರೆಸ್ ಅಂತಾರಾಷ್ಟ್ರೀಯ ಬೆಂಬಲ ಪಡೆಯುತ್ತಿದೆ’ ಎಂದು ಬರೆದುಕೊಳ್ಳಲಾಗಿತ್ತು.

ಫ್ಯಾಕ್ಟ್‌ಚೆಕ್ : ವೈರಲ್ ಪತ್ರದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಪತ್ರದಲ್ಲಿ ಉಲ್ಲೇಖಿಸಲಾದ ಸಂಘಟನೆಯ ಹೆಸರನ್ನು ನೋಡಿ ಗೂಗಲ್‌ನಲ್ಲಿ ಅದರ ವಿಳಾಸ (#2-11TH STREET KHALID BIN WALEED ROAD PLOT NO. UMM HURAIR ONE DUBAI-UNITED ARAB EMIRATES)ಹುಡುಕಿದ್ದೇವೆ. ಈ ವೇಳೆ ಪತ್ರದಲ್ಲಿ ಉಲ್ಲೇಖಿಸಲಾದ ಸಂಘಟನೆಯ ವಿಳಾಸವು ದುಬೈನಲ್ಲಿರುವ ಪಾಕಿಸ್ತಾನದ ಕಾನ್ಸುಲೇಟ್ ಜನರಲ್‌ನ ವೆಬ್‌ಸೈಟ್‌ನಲ್ಲಿ ಅವರ ಕಚೇರಿಯ ವಿಳಾಸವಾಗಿ ಇರುವುದು ಕಂಡು ಬಂದಿದೆ. ಇದರಿಂದ ಆ ವಿಳಾಸ ವೈರಲ್ ಪತ್ರದಲ್ಲಿರುವ ಸುನ್ನಿ ಮುಸ್ಲಿಂ ಸಂಘಟನೆಯದ್ದಲ್ಲ ಎಂದು ಗೊತ್ತಾಗಿದೆ. ಇದರ ಹೊರತಾಗಿ ವೈರಲ್ ಪತ್ರದಲ್ಲಿ ಉಲ್ಲೇಖಿಸಲಾದ ಸಂಘಟನೆಯ ಬಗ್ಗೆ ಅಂತರ್ಜಾಲದಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ.

ಪತ್ರದಲ್ಲಿ ಮೂರು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ನಾವು ಈ ಸಂಖ್ಯೆಗಳನ್ನು ಹುಡುಕಿದಾಗ, ಪತ್ರದಲ್ಲಿರುವ ಮೊದಲ ಸಂಖ್ಯೆ ದುಬೈ ಮೂಲದ ಕಾಫಿ ವಿತರಣಾ ಯಂತ್ರ ಉತ್ಪಾದನಾ ಕಂಪನಿಯಾದ ಡಾಲ್ಮೇರ್ ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿರುವುದು ಕಂಡು ಬಂದಿದೆ. ಅಂದರೆ, ಈ ಸಂಖ್ಯೆ ಯಾವುದೇ ಮುಸ್ಲಿಂ ಸಂಘಟನೆಗೆ ಸೇರಿಲ್ಲ ಎಂಬುವುದು ಇದರ ಖಚಿತವಾಗಿದೆ. “ಪತ್ರದಲ್ಲಿ ಉಲ್ಲೇಖಿಸಲಾದ ಉಳಿದ 2 ಮೊಬೈಲ್ ಸಂಖ್ಯೆಗಳನ್ನು ನಾವು ಸಂಪರ್ಕಿಸಿದ್ದೇವೆ, ನಮಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅಲ್ಟ್‌ ನ್ಯೂಸ್ ಹಿಂದಿ ತಿಳಿಸಿದೆ.

ಲಭ್ಯವಿರುವ ಮೂಲಗಳನ್ನು ಬಳಸಿ ನಾವು ನಡೆಸಿದ ಪರಿಶೀಲನೆಯಲ್ಲಿ ವೈರಲ್ ಆದ ಮುಸ್ಲಿಂ ಸಂಘಟನೆಯ ಹೆಸರಿನ ಲೆಟರ್ ಹೆಡ್ ನಕಲಿ ಎಂದು ತಿಳಿದು ಬಂದಿದೆ.


Claim :  Viral letter announcing financial assistance to Muslims coming from abroad to vote for Congress is fake
Claimed By :  X user
Fact Check :  Fake
Tags:    

Similar News