ಮೋದಿ ಮೇಲಿನ ರಾಜಕೀಯ ದ್ವೇಷಕ್ಕೆ ರೈಲು ಅಪಘಾತಗಳನ್ನು ನಡೆಸಲಾಗ್ತಿದೆ ಎಂಬುವುದಕ್ಕೆ ಆಧಾರವಿಲ್ಲ
ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ರಾಜಕೀಯ ದ್ವೇಷಕ್ಕೆ ರೈಲು ಅಪಘಾತಗಳನ್ನು ಮಾಡಿಸಲಾಗ್ತಿದೆ ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
“ಎಂಥಾ ನಾಚಿಕೆಗೇಡು!! ನಮೋ ಮೇಲಿನ ಹೊಟ್ಟೆಕಿಚ್ಚಿಗೆ ಆಗ್ತಿದೆ ಹಲವು ರೈಲು ಅಪಘಾತಗಳು!? ಹೌದು, ಭಾರತದಲ್ಲಿ ಆಗಿರೋ ಹಲವು ರೈಲು ಅಪಘಾತಗಳಿಗೆ ಮನುಷ್ಯರೇ ಕಾರಣ ಎನ್ನಲಾಗ್ತಿದೆ. ಎಷ್ಟೋ ಕಡೆ ಬೇಕಂತಲೇ ಹಳಿಗಳ ಮೇಲೆ ಕಲ್ಲುಗಳನ್ನು ಇಡಲಾಗಿದೆ. ಕೆಲವೆಡೆ ಹಳಿಗಳ ಕೊಂಡಿಗಳನ್ನು ಮುರಿಯಲಾಗಿದೆ. ಇನ್ನೂ ಕೆಲವೆಡೆ ಸಿಗ್ನಲ್ ಕಾಣದಂತೆ ಲೈಟ್‌ಗಳಿಗೆ ಬಟ್ಟೆ ಮುಚ್ಚಲಾಗಿದೆ. ಇದು ಕಲ್ಪನೆ ಅಲ್ಲ, ನಿಜವಾಗಿಯೂ ನಡೆದಿರೋದು. ಹಾಗಿದ್ರೆ ಇದಕ್ಕೆಲ್ಲಾ ಯಾರು ಕಾರಣ?” ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಪೋಸ್ಟರ್‌ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋ ಹಾಕಿ ಇತ್ತೀಚೆಗೆ ನಡೆದ ಕಾಂಚನ್‌ಜುಂಗಾ ರೈಲು ಅಪಘಾತವನ್ನು ರಾಜಕೀಯ ಕಾರಣಕ್ಕೆ ಮಮತಾ ಬ್ಯಾನರ್ಜಿ ಅವರೇ ಮಾಡಿಸಿದ್ದಾರೆ ಎಂದು ಪರೋಕ್ಷವಾಗಿ ಬಿಂಬಿಸಲಾಗಿದೆ.
ಇತ್ತೀಚೆಗೆ, ಕೆಲ ವ್ಯಕ್ತಿಗಳು ರೈಲ್ವೆಯ ಸಿಗ್ನಲ್ ಲೈಟ್‌ಗೆ ಬಟ್ಟೆ ಕಟ್ಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರ ಸ್ಕ್ರೀನ್ ಹಂಚಿಕೊಂಡಿರುವ ಕೆಲವರು, “ಮೋದಿ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಮುಂದಾಗಿರುವ ಈ ಜಿಹಾದಿ ಮನಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ರೈಲು ಸಿಗ್ನಲ್ ಕಾಣದಂತೆ ಮಾಡಿ ರೈಲುಗಳ ನಡುವೆ ಆಕ್ಸಿಂಡೆಂಟ್ ಆಗುವಂತೆ ಮಾಡುವ ಕುತಂತ್ರ ಮಾಡಿದ್ದಾರೆ” ಎಂದು ಬರೆಯಲಾಗಿದೆ.
ಫ್ಯಾಕ್ಟ್‌ಚೆಕ್ : ನರೇಂದ್ರ ಮೋದಿಯವರ ಮೇಲಿನ ರಾಜಕೀಯ ದ್ವೇಷಕ್ಕೆ ರೈಲು ಅಪಘಾತಗಳನ್ನು ಮಾಡಿಸಲಾಗಿದೆ ಎಂಬುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ರಾಜಕೀಯ ದ್ವೇಷಕ್ಕೆ ರೈಲು ಅಪಘಾತ ನಡೆಸಿರುವ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಪ್ರಾಥಮಿಕ ವರದಿಗಳು, ಪಶ್ಚಿಮ ಬಂಗಾಳದಲ್ಲಿ ನಡೆದ ಕಾಂಚನ್‌ಜುಂಗಾ ರೈಲು ಅಪಘಾತಕ್ಕೆ ಮಾನವ ದೋಷದ ಸಾಧ್ಯತೆಯನ್ನು ಸೂಚಿಸುತ್ತವೆ. ಆದರೆ, ರೈಲ್ವೆ ಸುರಕ್ಷತಾ ಆಯುಕ್ತರ ತನಿಖೆ ಪೂರ್ಣಗೊಂಡ ನಂತರವೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿಯಲಿದೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜಿಹಾದಿ ಮನಸ್ಥಿತಿಯವರು ರೈಲ್ವೆಯ ಸಿಗ್ನಲ್ ಲೈಟ್‌ಗೆ ಬಟ್ಟೆ ಕಟ್ಟಿ ಅಪಘಾತ ಆಗುವಂತೆ ಮಾಡಿದ್ದಾರೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿಪಾದಿಸಲಾಗಿದೆ. ಈ ಮೂಲಕ ಮುಸ್ಲಿಮರು ದುಷ್ಕೃತ್ಯವೆಸಗಿದ್ದಾರೆ ಎಂದು ಬಿಂಬಿಸಲಾಗಿದೆ.
ಆದರೆ, ಕಾಂಚನ್‌ಜುಂಗಾ ರೈಲು ಅಪಘಾತಕ್ಕೆ ಯಾರು ಕಾರಣ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಮುಸ್ಲಿಮರು ಈ ರೈಲ್ವೆ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ. ಆದರೆ, ಈ ರೈಲು ಅಪಘಾತ ಸಂಭವಿಸಿದಾಗ ಬಕ್ರೀದ್ ಹಬ್ಬದ ಸಂಭ್ರಮಾಚರಣೆ ಬಿಟ್ಟು ಮುಸ್ಲಿಮರು ಜನರ ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ
ನಾವು ನಡೆಸಿದ ಪರಿಶೀಲನೆಯಲ್ಲಿ ರಾಜಕೀಯ ದ್ವೇಷಕ್ಕೆ ರೈಲು ಅಪಘಾತಗಳನ್ನು ನಡೆಸಲಾಗಿದೆ ಎಂಬುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಮಾನವ ದೋಷಕ್ಕೆ ರೈಲು ಅಪಘಾತಗಳು ನಡೆದಿರುವ ಉದಾಹರಣೆಗಳಿವೆ. ಇನ್ನು ಜಿಹಾದಿ ಮನಸ್ಥಿತಿಯವರು ಸಿಗ್ನಲ್‌ಗೆ ಬಟ್ಟೆ ಕಟ್ಟಿ ರೈಲು ಅಪಘಾತಕ್ಕೆ ಕಾರಣರಾಗಿದ್ದಾರೆ ಎಂಬುವುದು ಆಧಾರ ರಹಿತವಾಗಿದೆ.