ಹೊಸಕೋಟೆಯ ಅವಿಮುಕ್ತೇಶ್ವರ ರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಇದೇ ಮೊದಲ ಬಾರಿಯಲ್ಲ
ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ ರಾಜ್ಯ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸದಸ್ಯನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿತ್ತು.
ಬ್ರಹ್ಮರಥೋತ್ಸವ ಸಮಿತಿ ರಚಿಸಿ ಸರ್ಕಾರ ಹೊರಡಿಸಿರುವ ಆದೇಶ ಪತ್ರ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಸಮಿತಿಯ ಪಟ್ಟಿಯೊಂದನ್ನು 8 ಏಪ್ರಿಲ್ 2024ರಂದು ಹಂಚಿಕೊಂಡಿತ್ತು. ಅದರಲ್ಲಿ ‘ನವಾಝ್’ ಎಂಬ ಸದಸ್ಯನ ಹೆಸರಿತ್ತು. ಬಿಜೆಪಿ ತನ್ನ ಪೋಸ್ಟ್‌ನಲ್ಲಿ ಈ ಕೆಳಗಿನಂತೆ ಬರೆದುಕೊಂಡಿತ್ತು.
“ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ ರಚಿಸಿರುವ ಸಮಿತಿಯ ಸದಸ್ಯನಾಗಿ ನವಾಝ್ ಎಂಬ ವ್ಯಕ್ತಿಯನ್ನು ಸರ್ಕಾರ ನೇಮಿಸಿದೆ. ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡುವ ಪ್ರಯತ್ನ ನಡೆಸಿದ ಬಳಿಕ, ಹಿಂದೂ ವಿರೋಧಿ ಸಿದ್ದರಾಮಯ್ಯ ಅವರು, ಈಗ ಹಿಂದೂಯೇತರ ವ್ಯಕ್ತಿಯನ್ನು ಸಮಿತಿಗೆ ನೇಮಿಸುವ ಮೂಲಕ ದೇವಸ್ಥಾನ ಮತ್ತು ಅದರ ಸಂಪತ್ತನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.”
“ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಹಕ್ಕು ಕಿತ್ತು ಒಂದು ಸಮುದಾಯಕ್ಕೆ ಕೊಡುವ ರಾಹುಲ್ ಗಾಂಧಿಯ ಕನಸಿನ ಯೋಜನೆಯನ್ನು ಜಾರಿಗೊಳಿಸುವ ತವಕದಲ್ಲಿದೆ. ಇಂದು ಇದು ಕರ್ನಾಟಕದ ಒಂದು ದೇವಸ್ಥಾನವಾಗಿರಬಹುದು. ಆದರೆ, ನಾಳೆ ಭಾರತದ ಎಲ್ಲಾ ದೇವಸ್ಥಾನಗಳಲ್ಲಿ ಆಗುತ್ತದೆ. ಕಾಂಗ್ರೆಸ್ ಬಗ್ಗೆ ಎಚ್ಚರವಾಗಿರಿ.”
ಪ್ರಸ್ತುತ, ಎಕ್ಸ್‌ನಿಂದ ಬಿಜೆಪಿ ತನ್ನ ಪೋಸ್ಟ್ ಡಿಲಿಟ್ ಮಾಡಿದೆ
ಫ್ಯಾಕ್ಟ್‌ಚೆಕ್ : ಬಿಜೆಪಿ ಆರೋಪಿಸಿದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದೇವಸ್ಥಾನದ ಬ್ರಹ್ಮರಥೋತ್ಸವದ ಸಮಿತಿಗೆ ಸದಸ್ಯನಾಗಿ ಮುಸ್ಲಿಂ ವ್ಯಕ್ತಿಯನ್ನು ನೇಮಿಸಿದೆಯಾ? ಎಂದು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಬಿಜೆಪಿ ಮಾಡಿರುವ ಆರೋಪ ಸುಳ್ಳು ಎಂದು ತಿಳಿದು ಬಂದಿದೆ.
ಬಿಜೆಪಿಯ ಆರೋಪದ ಕುರಿತು ಮೇ 8, 2024ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ತಿಳಿಸಿದಂತೆ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ ಸಮಿತಿ ರಚಿಸುವಾಗ ಹಿಂದುಯೇತರ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಅದರಂತೆ ಈ ಬಾರಿಯೂ ಸರ್ಕಾರ ಮುಸ್ಲಿಂ ವ್ಯಕ್ತಿಯನ್ನು ಸದಸ್ಯನನ್ನಾಗಿ ನೇಮಿಸಿದೆ.
ಗಮನಾರ್ಹವಾಗಿ, ಈ ಹಿಂದೆ (2021-22) ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೂ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿಗಳಿಗೆ ಸ್ಥಾನ ನೀಡಲಾಗಿತ್ತು. 2020ರಲ್ಲಿ ಇಮ್ತಿಯಾಝ್ ಪಾಷಾ ಎಂಬವರನ್ನು ಸದಸ್ಯರನ್ನಾಗಿ ನೇಮಿಸಿತ್ತು. 2022ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಈ ಸಮಿತಿಗೆ ಅಪ್ಸರ್ ಎಂಬವರನ್ನು ಸದಸ್ಯರನ್ನಾಗಿ ಮಾಡಿತ್ತು. ಈ ಕುರಿತ ಸರ್ಕಾರದ ಆದೇಶ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
“ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದು ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ. ಅಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಎಲ್ಲ ಧರ್ಮಗಳ ಜನತೆ ಭಕ್ತಿ-ಗೌರವದಿಂದ ಭಾಗವಹಿಸುತ್ತಾರೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿಯವರು ಕೂಡ ಎಕ್ಸ್‌ನಲ್ಲಿ ದಾಖಲೆಗಳನ್ನು ಹಂಚಿಕೊಂಡಿದ್ದು, “ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರನ್ನು ನೇಮಕಗೊಳಿಸುವುದು ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.