ಇಲ್ಲ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ೧೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ ಬಿಜೆಪಿ ೧೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿಲ್ಲ
ಸಾರಾಂಶ:
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ೨೦೨೪ ರ ಸಾರ್ವತ್ರಿಕ ಚುನಾವಣೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದ್ದಾರೆ ಮತ್ತು ಸುಮಾರು ೧೦೦ ಬಿಜೆಪಿ ಅಭ್ಯರ್ಥಿಗಳು ೧,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಹೇಳಿಕೊಂಡರು. ಆದರೆ, ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್‌ನಲ್ಲಿನ ಫಲಿತಾಂಶದ ವಿವರಗಳು ಯಾವುದೇ ಬಿಜೆಪಿ ಅಭ್ಯರ್ಥಿ ೧೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿಲ್ಲ ಎಂದು ಖಚಿತಪಡಿಸುತ್ತದೆ. ಇಲ್ಲದಿದ್ದರೆ ಇಲ್ಲಿ ಹೇಳಿಕೊಳ್ಳುವ ಅಂಕಿಅಂಶಗಳು ಆಧಾರರಹಿತ ಮತ್ತು ತಪ್ಪು.
ಹೇಳಿಕೆ:
ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ೨೪೦ ಸ್ಥಾನಗಳನ್ನು ಗೆದ್ದಿದ್ದರೂ, ಸುಮಾರು ೧೦೦ ಬಿಜೆಪಿ ಅಭ್ಯರ್ಥಿಗಳು ೧,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅಂತಹ ಕಿರಿದಾದ ಫಲಿತಾಂಶಗಳ ವಿಮರ್ಶೆಗೆ ಕರೆ ನೀಡಿದರು, ಮತ್ತು ಫಲಿತಾಂಶಗಳು ಸಜ್ಜುಗೊಳಿಸಿರಬಹುದು ಎಂದು ಊಹಿಸಿದ್ದಾರೆ. ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗೆ ಹೇಳುತ್ತದೆ, “ಇವಿಎಂ ಮತ್ತು @ECISVEEP ಯ ಮ್ಯಾಜಿಕ್ ಅನ್ನು ತನಿಖೆ ಮಾಡಬೇಕಾಗಿದೆ. ಬಿಜೆಪಿ - 500 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ೩೦ ಸ್ಥಾನಗಳನ್ನು ಗೆದ್ದಿದೆ. - ೧೦೦೦ ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ೧೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಈ ಸ್ಥಾನಗಳನ್ನು ೩ ನಿವೃತ್ತ ಎಸ್‌ಸಿ ನ್ಯಾಯಮೂರ್ತಿಗಳು ವಿಶ್ಲೇಷಿಸಬೇಕು (ಅನುವಾದಿಸಲಾಗಿದೆ)."
ಎಕ್ಸ್ ನಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಎಕ್ಸ್ ಮತ್ತು ಫೇಸ್‌ಬುಕ್ ನಲ್ಲಿನ ಇತರ ಬಳಕೆದಾರರು ಸಹ ಇದೇ ರೀತಿಯ ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ.
ಪುರಾವೆ:
೨೦೨೪ ರ ಲೋಕಸಭಾ ಚುನಾವಣೆಯ ಪೂರ್ಣ ಫಲಿತಾಂಶಗಳಿಗಾಗಿ ನಾವು ಇಸಿಐ ವೆಬ್‌ಸೈಟ್‌ನಲ್ಲಿ ಹುಡುಕಿದಾಗ ಗೆದಿರುವ ಅಭ್ಯರ್ಥಿಗಳ ಪಕ್ಷವಾರು ಪಟ್ಟಿ, ಪಡೆದುಕೊಂಡ ಒಟ್ಟು ಮತಗಳು ಮತ್ತು ಅವರ ಗೆಲುವಿನ ಅಂತರವನ್ನು ಕಂಡುಕೊಂಡಿದ್ದೇವೆ. ಈ ಪಟ್ಟಿಯನ್ನು ಬಳಸಿಕೊಂಡು, ನಾವು ಕಡಿಮೆ ಗೆಲುವಿನ ಅಂತರ ಹೊಂದಿರುವ ಬಿಜೆಪಿ ಅಭ್ಯರ್ಥಿಗಳಿಗಾಗಿ ಹುಡುಕಿದ್ದೇವೆ. ಒಡಿಶಾದ ಜಾಜ್‌ಪುರ ಕ್ಷೇತ್ರದಿಂದ ರವೀಂದ್ರ ನಾರಾಯಣ್ ಬೆಹೆರಾ ಅವರು ಅತಿ ಕಡಿಮೆ ಅಂತರದಲ್ಲಿ ಗೆದ್ದ ಪಕ್ಷದ ವಿಜೇತ ಅಭ್ಯರ್ಥಿಯಾಗಿದ್ದಾರೆ. ಇಸಿಐ ವೆಬ್‌ಸೈಟ್ ಪ್ರಕಾರ, ಅವರು ೫,೩೪,೨೩೯ ಮತಗಳನ್ನು ಪಡೆದರು ಮತ್ತು ಕೇವಲ ೧,೫೮೭ ಮತಗಳ ಅಂತರದಿಂದ ಗೆದ್ದಿದ್ದಾರೆ.
೨೦೨೪ ರ ಚುನಾವಣೆಯಲ್ಲಿ ಬೆಹೆರಾ ಅವರಿಗಿಂತ ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿಯ ಯಾವುದೇ ವಿಜೇತ ಅಭ್ಯರ್ಥಿ ಗೆದ್ದಿಲ್ಲ. ಜೈಪುರ ಗ್ರಾಮಾಂತರದ ರಾವ್ ರಾಜೇಂದ್ರ ಸಿಂಗ್ ೧,೬೧೫ ಮತಗಳ ಅಂತರದಿಂದ ಎರಡನೇ ಅತಿ ಕಡಿಮೆ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಛತ್ತೀಸ್‌ಗಢದ ಕಂಕೇರ್‌ನ ಬಿಜೆಪಿ ಅಭ್ಯರ್ಥಿ ಭೋಜರಾಜ್ ನಾಗ್ ಅವರು ೧,೮೮೪ ಮತಗಳೊಂದಿಗೆ ಮುಂದಿನ ಅತಿ ಕಡಿಮೆ ಗೆಲುವಿನ ಅಂತರವನ್ನು ಗಳಿಸಿದ್ದಾರೆ.
ಇಸಿಐ ಪ್ರಕಟಿಸಿದ ಬಿಜೆಪಿಯ ವಿಜೇತ ಅಭ್ಯರ್ಥಿಯ ಮತ ಹಂಚಿಕೆ ಮತ್ತು ಗೆಲುವಿನ ಅಂತರದ ಸ್ಕ್ರೀನ್‌ಶಾಟ್.
೧,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ ಯಾವುದೇ ಬಿಜೆಪಿ ಅಭ್ಯರ್ಥಿ ಗೆದ್ದಿಲ್ಲ. ಆದರೆ, ಬಿಜೆಪಿಯ ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಮಿತ್ರಪಕ್ಷ ಶಿವಸೇನಾ ಅಭ್ಯರ್ಥಿ ರವೀಂದ್ರ ದತ್ತಾರಾಮ್ ವೈಕರ್ ಅವರು, ಮುಂಬೈ ವಾಯುವ್ಯದಿಂದ ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರು. ಅವರು ೪,೫೨,೬೪೪ ಮತಗಳನ್ನು ಪಡೆದಿದ್ದರೂ, ಅವರ ಗೆಲುವಿನ ಅಂತರ ಕೇವಲ ೪೮ ಮತಗಳದ್ದು. ನಂತರದ ಕಡಿಮೆ ಗೆಲುವಿನ ಅಂತರವನ್ನು ಕೇರಳದ ಅಟ್ಟಿಂಗಲ್ ಕ್ಷೇತ್ರದ ಕಾಂಗ್ರೆಸ್‌ನ ಅಡೂರ್ ಪ್ರಕಾಶ್ ಅವರು ೬೪೮ ಮತಗಳ ಅಂತರದಲ್ಲಿ ಪಡೆದುಕೊಂಡಿದ್ದಾರೆ.
ಕಡಿಮೆ ಗೆಲುವಿನ ಅಂತರ ಹೊಂದಿರುವ ಇಬ್ಬರು ಅಭ್ಯರ್ಥಿಗಳ ಮತ ಹಂಚಿಕೆ ಮತ್ತು ಗೆಲುವಿನ ಅಂತರವನ್ನು ಹೈಲೈಟ್ ಮಾಡುವ ಸ್ಕ್ರೀನ್‌ಶಾಟ್‌ಗಳು.
ಕಡಿಮೆ ಅಂತರದಲ್ಲಿ ಗೆದ್ದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಂಗ್ರಹಿಸಿರುವ ಹಲವಾರು ಸುದ್ದಿ ವರದಿಗಳನ್ನು ನಾವು ನೋಡಿದ್ದೇವೆ. ಫಸ್ಟ್‌ಪೋಷ್ಟ್ ನ ಅಂತಹ ಒಂದು ವರದಿಯು ೧೦,೦೦೦ ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪಟ್ಟಿಯನ್ನು ಸಂಗ್ರಹಿಸಿದೆ. ಈ ಪಟ್ಟಿಯ ಅಡಿಯಲ್ಲಿ ಒಟ್ಟು ೨೧ ಅಭ್ಯರ್ಥಿಗಳಿದ್ದು, ಬಿಜೆಪಿಯಿಂದ ಎಂಟು ಅಭ್ಯರ್ಥಿಗಳು, ಕಾಂಗ್ರೆಸ್‌ನಿಂದ ಆರು ಅಭ್ಯರ್ಥಿಗಳು, ಸಮಾಜವಾದಿ ಪಕ್ಷದಿಂದ (ಎಸ್‌ಪಿ) ಮೂವರು ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ), ಶಿವಸೇನೆ (ಎಸ್‌ಎಸ್), ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಪಕ್ಷಗಳಿಗೆ ತಲಾ ಒಂದು ಅಭ್ಯರ್ತಿಯೂ ಮತ್ತು ಒಂದು ಸ್ವತಂತ್ರ ಅಭ್ಯರ್ಥಿ ಇದ್ದಾರೆ.
ಫಸ್ಟ್‌ಪೋಷ್ಟ್ ನ ಸುದ್ದಿ ವರದಿಯಲ್ಲಿ ಹಂಚಿಕೊಳ್ಳಲಾದ ಗ್ರಾಫಿಕ್‌ನ ಸ್ಕ್ರೀನ್‌ಶಾಟ್.
ತೀರ್ಪು:
ಬಿಜೆಪಿಯ ೧೦೦ ಅಭ್ಯರ್ಥಿಗಳು ೧೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರ ಹೇಳಿಕೆ ತಪ್ಪು. ಇಸಿಐ ಪ್ರಕಟಿಸಿದ ಅಧಿಕೃತ ಚುನಾವಣಾ ಫಲಿತಾಂಶಗಳ ಪ್ರಕಾರ, ಒಡಿಶಾದ ಜಾಜ್‌ಪುರದ ರವೀಂದ್ರ ನಾರಾಯಣ ಬೆಹೆರಾ ಅವರು ಅತಿ ಕಡಿಮೆ ಗೆಲುವಿನ ಅಂತರವನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ. ಅವರ ಗೆಲುವಿನ ಅಂತರ ೧,೫೮೭ ಮತಗಳು. ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಎಂಟು ಬಿಜೆಪಿ ಅಭ್ಯರ್ಥಿಗಳು ೧೦,೦೦೦ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ ಇವರಲ್ಲಿ ಯಾರೂ ಕೂಡ ೧೦೦೦ ಮಾತಗಳಿಗೀತ ಕಡಿಮೆ ಅಂತರದಲ್ಲಿ ಗೆದ್ದವರಲ್ಲ.