ನಕಲಿ ನೋಟ್ ಸ್ವೀಕರಿಸಿ ಮೋಸ ಹೋದ ರೈತನನ್ನು ತೋರಿಸುವ ಹಳೆಯ ವೀಡಿಯೋವನ್ನು ಇತ್ತೀಚಿನ ಘಟನೆ ಎಂದು ಹಂಚಿಕೊಳ್ಳಲಾಗಿದೆ
ಸಾರಾಂಶ:
ಇತ್ತೀಚೆಗಷ್ಟೇ ಕಲರ್ ಜೆರಾಕ್ಸ್ ನಕಲಿ ನೋಟುಗಳಿಂದ ರೈತನೊಬ್ಬನಿಗೆ ವಂಚನೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದ ಬಳಕೆದಾರರು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಘಟನೆ ನಡೆದಿದ್ದರೂ, ಈ ವೀಡಿಯೋ ಮಂಡ್ಯ ಜಿಲ್ಲೆಯಲ್ಲಿ ೨೦೨೦ ರಲ್ಲಿ ನಡೆದ ಘಟನೆಯದ್ದು ಎಂದು ನಾವು ಗುರುತಿಸಿದ್ದೇವೆ. ಆದ್ದರಿಂದ, ಈ ಘಟನೆ ಇತ್ತೀಚಿನದು ಎಂಬ ಹೇಳಿಕೆ ತಪ್ಪು.
ಹೇಳಿಕೆ:
ಕೆಲವು ವಂಚಕರು ಕುರಿಯೊಂದನ್ನು ಖರೀದಿಸಲು ಜೆರಾಕ್ಸ್ ಮಾಡಿದ ರೂ.೫೦೦ ರ ನೋಟ್ ಗಳನ್ನು ನೀಡಿ ವಂಚಿಸಿದ್ದಾರೆ ಎಂದು ಹೇಳಿಕೊಂಡು ವೀಡಿಯೋವೊಂದನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ನ ಬಳಕೆದಾರರು ಹಂಚಿಕೊಂಡಿದ್ದಾರೆ.
ಈ ಬಳಕೆದಾರರು “ಆ ಮುಗ್ಧ ಮುಖನೋಡಿನು ಮೋಸ ಮಾಡೋಕೆ ಮನಸ್ಸಾದರೂ ಹೇಗ್ ಬಂತು ಆ ಕಟುಕರಿಗೆ…” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋ ಪೋಷ್ಟ್ ಅನ್ನು ಜೂನ್ ೧೭, ೨೦೨೪ ರಂದು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ೧೮,೦೦೦ ವೀಕ್ಷಣೆಗಳು, ೩೭೬ ಲೈಕ್ಸ್ ಗಳು ಮತ್ತು ೧೨೯ ಮರುಪೋಷ್ಟ್ ಗಳನ್ನು ಗಳಿಸಿದೆ.
ಜೂನ್ ೧೭, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಐನೂರು ರೂಪಾಯಿಗಳ ನಕಲಿ ನೋಟುಗಳನ್ನು ಹಿಡಿದುಕೊಂಡು ವೀಡಿಯೋದಲ್ಲಿ ಕಂಡುಬಂದ ವ್ಯಕ್ತಿ ಹೀಗೆ ಹೇಳುತ್ತಾರೆ, “ನೋಡಿ ಸ್ನೇಹಿತರೇ, ಹಳ್ಳಿಯ ರೈತನಿಗೆ ಕಲರ್ ಜೆರಾಕ್ಸ್ ನಕಲಿ ನೋಟುಗಳನ್ನು ನೀಡಿ ಈ ರೀತಿ ವಂಚಿಸಲಾಗಿದೆ. ಹೆಚ್ಚಿನ ಜನರಿಗೆ ತಲುಪುವವರೆಗೆ ಶೇರ್ ಮಾಡಿ”.
ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ಕುರಿ ಮಾರುಕಟ್ಟೆಯಲ್ಲಿ ಕಲರ್ ಜೆರಾಕ್ಸ್ ನಕಲಿ ನೋಟು ನೀಡಿ ರೈತನಿಗೆ ವಂಚನೆ” ಎಂಬ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಇದು ಜನವರಿ ೨೮, ೨೦೨೦ ರಂದು ಫೇಸ್‌ಬುಕ್‌ನಲ್ಲಿನ ವಿಜಯ ಕರ್ನಾಟಕ ಸುದ್ದಿ ಮಾಧ್ಯಮದ ವೀಡಿಯೋ ವರದಿಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಯು ವೈರಲ್ ವೀಡಿಯೋದಲ್ಲಿನ ದೃಶ್ಯಗಳನ್ನು ಒಳಗೊಂಡಿದೆ.
ಜನವರಿ ೨೮, ೨೦೨೦ ರ ವಿಜಯ ಕರ್ನಾಟಕದ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಈ ವೀಡಿಯೋ ವರದಿಯ ಪ್ರಕಾರ, ಜನವರಿ ೨೧, ೨೦೨೦ ರಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ನಂತರ, ಈ ವೀಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದಾಗ, ಆ ರೈತನು ಜನವರಿ ೨೭, ೨೦೨೦ ರಂದು ಕೇಸ್ತುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜನವರಿ ೨೮, ೨೦೨೦ ರ ವಿಜಯ ಕರ್ನಾಟಕ ವರದಿಯು ಈ ಘಟನೆಯ ವಿವರಗಳನ್ನು ವರದಿ ಮಾಡಿರುವುದನ್ನು ಸಹ ನಾವು ಕಂಡುಕೊಂಡಿದ್ದೇವೆ.
ಜನವರಿ ೨೮, ೨೦೨೦ ರ ವಿಜಯ ಕರ್ನಾಟಕ ವರದಿಯ ಸ್ಕ್ರೀನ್‌ಶಾಟ್.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ರೈತ ಮಂಚಯ್ಯ ಎಂಬುವವರ ಕುರಿ ಖರೀದಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ತಿಳಿಸಿದೆ. ಐದು ನೂರು ರೂಪಾಯಿಯ ಕಲರ್ ಜೆರಾಕ್ಸ್ ಮಡಿದ ಹತ್ತು ನಕಲಿ ನೋಟುಗಳ್ಳನ್ನು ನೀಡಿ ಕುರಿಯೊಂದನ್ನು ಖರೀದಿಸಿದ್ದರು. ಇದೇ ತಂಡ ಗ್ರಾಮದ ಮತ್ತೊಬ್ಬ ರೈತನನ್ನು ಸಂಪರ್ಕಿಸಿದ್ದು, ಅನುಮಾನಗೊಂಡು ನೀಡಿದ್ದ ನೋಟುಗಳನ್ನು ಪರಿಶೀಲಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ. ಈ ವೈರಲ್ ವೀಡಿಯೋ ಜನವರಿ ೨೦೨೦ ರದ್ದು ಎಂದು ಈ ವರದಿಗಳು ಸ್ಪಷ್ಟಪಡಿಸುತ್ತವೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಇದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದಲ್ಲಿ ಜನವರಿ ೨೧, ೨೦೨೦ ರಂದು ಸಂಭವಿಸಿದ ಘಟನೆ ಎಂದು ಬಹಿರಂಗಪಡಿಸುತ್ತದೆ. ಇದು ಇತ್ತೀಚಿನ ಘಟನೆಯಲ್ಲ ಎಂದು ಇದು ಸಾಬೀತುಪಡಿಸುತ್ತದೆ. ಆದ್ದರಿಂದ, ಈ ವೈರಲ್ ವೀಡಿಯೋ ಇತ್ತೀಚಿನದು ಎಂಬ ಹೇಳಿಕೆ ತಪ್ಪು.