ಹಲವಾರು ಅಭ್ಯರ್ಥಿಗಳು ೧೯,೭೩೧ ಮತಗಳ ಅಂತರದಿಂದ ಸೋತಿರುವುದನ್ನು ತೋರಿಸುವ ವಾರ್ತಾ ಪತ್ರಿಕೆಯ ಕ್ಲಿಪ್ಪಿಂಗ್ ನ ಸ್ಕ್ರೀನ್‌ಶಾಟ್ ನಕಲಿಯಾಗಿದೆ
ಸಾರಾಂಶ:
೨೦೨೪ರ ಲೋಕಸಭಾ ಚುನಾವಣೆಯಲ್ಲಿ ಹಲವಾರು ಅಭ್ಯರ್ಥಿಗಳು ೧೯,೭೩೧ ಮತಗಳಿಂದ ಸೋತಿದ್ದಾರೆ ಎಂದು ಆರೋಪಿಸಿ ಪತ್ರಿಕೆಯ ಕ್ಲಿಪ್ಪಿಂಗ್‌ನ ಸ್ಕ್ರೀನ್‌ಶಾಟ್ ಹಂಚಿಕೊಳ್ಳಲಾಗಿದೆ. ವಿದ್ಯುನ್ಮಾನ ಮತಯಂತ್ರಗಳು (ಇವಿಎಂಗಳು) ವಿಶ್ವಾಸಾರ್ಹವಲ್ಲ ಮತ್ತು ಅವುಗಳನ್ನು ನಿಷೇಧಿಸಬೇಕು ಎಂದು ಹೇಳಲು ಈ ಸ್ಕ್ರೀನ್‌ಶಾಟ್ ಅನ್ನು ಬಳಸಲಾಗಿದೆ. ಆದರೆ, ಸ್ಕ್ರೀನ್‌ಶಾಟ್ ನಕಲಿಯಾಗಿದೆ ಮತ್ತು ಅಭ್ಯರ್ಥಿಗಳ ಸೋಲಿನ ಅಂತರವು ತಪ್ಪಾಗಿ ತೋರಿಸಿಕೊಳ್ಳಲಾಗಿದೆ.
ಹೇಳಿಕೆ:
೨೦೨೪ರ ಲೋಕಸಭಾ ಚುನಾವಣಾ ಫಲಿತಾಂಶಗಳ ಘೋಷಣೆಯ ನಂತರ, ಹಲವಾರು ಅಭ್ಯರ್ಥಿಗಳು ನಿಖರವಾಗಿ ೧೯,೭೩೧ ಮತಗಳ ಅಂತರದಿಂದ ಸೋತಿದ್ದಾರೆ ಎಂದು ಹೇಳಿಕೊಳ್ಳುವ ಪತ್ರಿಕೆಯ ಕ್ಲಿಪ್ಪಿಂಗ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇವಿಎಂಗಳು ವಿಶ್ವಾಸಾರ್ಹವಲ್ಲ ಮತ್ತು ಇವುಗಳನ್ನು ಚುನಾವಣೆಯಲ್ಲಿ ಬಳಸುವುದನ್ನು ನಿಷೇಧಿಸಬೇಕು ಎಂದು ಹೇಳಲು ಈ ಸ್ಕ್ರೀನ್‌ಶಾಟ್ ಬಳಸಲಾಯಿತು. ವೈರಲ್ ಸ್ಕ್ರೀನ್‌ಶಾಟ್‌ನೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಇವಿಎಂ ಮೇಲೆ ಯಾವಾಗಲೂ ಅನುಮಾನವಿರುತ್ತದೆ, ಅದನ್ನು ನಿಷೇಧಿಸುವುದು ಒಂದೇ ಉದ್ದೇಶವಾಗಿರಬೇಕು. #Ban_EVM (ಅನುವಾದಿಸಲಾಗಿದೆ)."
ವೈರಲ್ ಸ್ಕ್ರೀನ್‌ಶಾಟ್‌ನೊಂದಿಗೆ ಹಂಚಿಕೊಂಡ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಹಲವಾರು ಇತರ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್ ನಲ್ಲಿ ಇದೇ ರೀತಿಯ ಹೇಳಿಕೆಗಳೊಂದಿಗೆ ಈ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ವೈರಲ್ ಪೋಷ್ಟ್ ನಲ್ಲಿ ಉಲ್ಲೇಖಿಸಲಾದ ಅಭ್ಯರ್ಥಿಗಳ ಫಲಿತಾಂಶಗಳಿಗಾಗಿ ನಾವು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಅನ್ನು ನೋಡಿದ್ದೇವೆ. ಈ ಪೋಷ್ಟ್ ನ ಪ್ರಕಾರ, ವಿವಿಧ ರಾಜ್ಯಗಳಿಂದ ಸ್ಪರ್ಧಿಸಿದ ನಾಲ್ಕು ಅಭ್ಯರ್ಥಿಗಳು (ನವನೀತ್ ರಾಣಾ, ಮಾಧವಿ ಲತಾ, ಅಜಯ್ ಕುಮಾರ್ ಮತ್ತು ಕನ್ಹಯ್ಯಾ ಕುಮಾರ್) ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ೧೯,೭೩೧ ಮತಗಳ ಅಂತರದಿಂದ ಸೋತಿದ್ದಾರೆ. ಆದರೆ, ಇಸಿಐ ಫಲಿತಾಂಶಗಳು ಈ ನಾಲ್ಕು ಅಭ್ಯರ್ಥಿಗಳಲ್ಲಿ ಒಬ್ಬರು (ನವನೀತ್ ರಾಣಾ), ಮಹಾರಾಷ್ಟ್ರದ ಅಮರಾವತಿಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮಾತ್ರ ೧೯,೭೩೧ ಮತಗಳ ಅಂತರದಿಂದ ಸೋತಿದ್ದಾರೆ ಎಂದು ತೋರಿಸಿದೆ.
ಇಸಿಐ ವೆಬ್‌ಸೈಟ್‌ನಲ್ಲಿ ತೋರಿಸಿರುವಂತೆ ನಾಲ್ಕು ಅಭ್ಯರ್ಥಿಗಳ ಫಲಿತಾಂಶಗಳ ಸ್ಕ್ರೀನ್‌ಶಾಟ್‌ಗಳು.
ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಹೈಲೈಟ್ ಮಾಡಲಾದ ಇತರ ಮೂರು ಅಭ್ಯರ್ಥಿಗಳ ಸೋಲಿನ ಅಂತರವು ಅಲ್ಲಿ ತೋರಿಸಿರುವದಕ್ಕಿಂತ ಭಿನ್ನವಾಗಿದೆ. ಇಸಿಐ ವೆಬ್‌ಸೈಟ್ ಪ್ರಕಾರ, ಉತ್ತರ ಪ್ರದೇಶದ ಖೇರಿ (ಲಖಿಂಪುರ) ಯ ಬಿಜೆಪಿ ಅಭ್ಯರ್ಥಿ ಅಜಯ್ ತೇನಿ (ಅಜಯ್ ಕುಮಾರ್) ಅವರು ತಮ್ಮ ಎದುರು ಸ್ಪರ್ಧಿಸಿದ ಸಮಾಜವಾದಿ ಪಕ್ಷದ (ಎಸ್‌ಪಿ) ಉತ್ಕರ್ಷ್ ವರ್ಮಾ ‘ಮಾಥುರ್’ ವಿರುದ್ಧ ೩೪,೩೨೯ ಮತಗಳಿಂದ ಸೋತಿದ್ದಾರೆ.
ಅದೇ ರೀತಿ, ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಕೊಂಪೆಲ್ಲಾ ಅವರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಅಸಾದುದ್ದೀನ್ ಓವೈಸಿ ವಿರುದ್ಧ ೩,೩೮,೦೮೭ ಮತಗಳಿಂದ ಸೋತಿದ್ದಾರೆ. ಪೂರ್ವ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರು ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ವಿರುದ್ಧ ೧,೩೮,೭೭೮ ಮತಗಳಿಂದ ಸೋತಿದ್ದಾರೆ.
ವೈರಲ್ ಸ್ಕ್ರೀನ್‌ಶಾಟ್ ನ ಮೇಲೆ ನಡೆಸಿದ ಮತ್ತಷ್ಟು ಹುಡುಕಾಟವು ನಮ್ಮನ್ನು ಹಿಂದಿ ಪತ್ರಿಕೆ ಪ್ರಕಟಣೆಯಾದ "ರಾಜಸ್ಥಾನ್ ಪತ್ರಿಕಾ" ವೆಬ್‌ಸೈಟ್‌ಗೆ ಕರೆದೊಯ್ಯಿತು. ಈ ವೆಬ್‌ಸೈಟ್‌ನಲ್ಲಿ, ಜೂನ್ ೫, ೨೦೨೪ ರಂದು ಪ್ರಕಟಿಸಲಾದ ರಾಜಸ್ಥಾನ್ ಪತ್ರಿಕಾದ ಮೂಲ ಇ-ಪೇಪರ್ ಅನ್ನು ನಾವು ನೋಡಿದ್ದೇವೆ. ಈ ಇ-ಪೇಪರ್ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ವೃತ್ತಪತ್ರಿಕೆ ಕ್ಲಿಪ್ಪಿಂಗ್‌ನ ಮೂಲ ಚಿತ್ರವನ್ನು ಒಳಗೊಂಡಿದೆ. ಆದರೆ, ಮೂಲ ಇ-ಪೇಪರ್‌ನಲ್ಲಿರುವ ಅಂಕಿಅಂಶಗಳು ಇಸಿಐ ವೆಬ್‌ಸೈಟ್‌ನಲ್ಲಿರುವ ಅಂಕಿಅಂಶಗಳೊಂದಿಗೆ ಹೊಂದಿಕೆಯಾಗುತ್ತವೆ.
ಜೂನ್ ೫, ೨೦೨೪ ರಂದು ಪ್ರಕಟಿಸಲಾದ ರಾಜಸ್ಥಾನ್ ಪತ್ರಿಕಾ ಇ-ಪೇಪರ್‌ನ ಸ್ಕ್ರೀನ್‌ಶಾಟ್.
ತಪ್ಪಾದ ಸಂಖ್ಯೆಗಳನ್ನು ತೋರಿಸಲು ವೈರಲ್ ಸ್ಕ್ರೀನ್‌ಶಾಟ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಇದು ತೋರಿಸುತ್ತದೆ. ಈ ಸಂಖ್ಯೆಗಳನ್ನು ತೋರಿಸಿಕೊಂಡು ಇವಿಎಂಗಳನ್ನು ಅಪಖ್ಯಾತಿ ಮಾಡಲಾಗಿದೆ.
ತೀರ್ಪು:
ವಿವಿಧ ರಾಜ್ಯಗಳ ನಾಲ್ವರು ಅಭ್ಯರ್ಥಿಗಳು ಒಂದೇ ಅಂತರದಲ್ಲಿ ಸೋತಿರುವ ವೈರಲ್ ಸ್ಕ್ರೀನ್‌ಶಾಟ್ ನಕಲಿಯಾಗಿದೆ. ಜೂನ್ ೫, ೨೦೨೪ ರಂದು ಹೊರಡಿಸಲಾದ ರಾಜಸ್ಥಾನ್ ಪತ್ರಿಕಾದ ಮೂಲ ವೃತ್ತಪತ್ರಿಕೆ ಕ್ಲಿಪ್ಪಿಂಗ್ ಅನ್ನು ನಕಲಿ ಸ್ಕ್ರೀನ್‌ಶಾಟ್ ರಚಿಸಲು ಎಡಿಟ್ ಮಾಡಲಾಗಿದೆ. ಭಾರತೀಯ ಚುನಾವಣೆಗಳಲ್ಲಿ ಇವಿಎಂಗಳ ಪರಿಣಾಮಕಾರಿತ್ವ ಮತ್ತು ವಿಶ್ವಾಸಾರ್ಹತೆಯ ವಿರುದ್ಧ ಆರೋಪಗಳನ್ನು ಮಾಡಲು ಈ ನಕಲಿ ಸ್ಕ್ರೀನ್‌ಶಾಟ್ ತಪ್ಪಾಗಿ ಬಳಸಿಕೊಳ್ಳಲಾಗಿದೆ.