ಮಾವಿನ ಹಣ್ಣನ್ನು ಕಲಬೆರಕೆ ಮಾಡುವುದನ್ನು ತೋರಿಸುವ ಸಾಮಾಜಿಕ ಜಾಗೃತಿಗಾಗಿ ಮಾಡಿರುವ ವೀಡಿಯೋ ನೈಜ ಘಟನೆಯೆಂದು ವೈರಲ್ ಆಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಮಾವಿನ ಹಣ್ಣಿನಲ್ಲಿ ಕಲಬೆರಕೆ ಮಾಡುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡು ೪೦ ಸೆಕೆಂಡ್‌ಗಳ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ಸಾರ್ವಜನಿಕ ಜಾಗೃತಿ ಮೂಡಿಸಲು ರಚಿಸಲಾದ ಸ್ಕ್ರಿಪ್ಟ್ ಮಾಡಿದ ವೀಡಿಯೋವಾಗಿದೆ ಮತ್ತು ನೈಜ ಘಟನೆಯನ್ನು ತೋರಿಸುವುದಿಲ್ಲ. ಆದ್ದರಿಂದ, ಈ ವೀಡಿಯೋವನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಮಾಡಿರುವ ಆರೋಪಗಳು ತಪ್ಪು.
ಹೇಳಿಕೆ:
ಮಾರಾಟಗಾರರೊಬ್ಬರು ಮಾವಿನಹಣ್ಣಿಗೆ ರಾಸಾಯನಿಕಗಳನ್ನು ಚುಚ್ಚುತ್ತಿರುವುದನ್ನು ತೋರಿಸುವುದಾಗಿ ಹೇಳಿಕೊಂಡು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾವಿನ ಹಣ್ಣು ಮಾರಾಟಗಾರ ಕೃತಕ ಬಣ್ಣಗಳು ಮತ್ತು ಸಿಹಿಕಾರಕಗಳನ್ನು ಬಳಸಿ ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸುತ್ತಿದ್ದಾನೆ ಎಂದು ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಹೇಳುವುದನ್ನು ಕೂಡ ವಿಡಿಯೋದಲ್ಲಿ ಕೇಳಿಬರುತ್ತದೆ. ಯೂಟ್ಯೂಬ್ ನಲ್ಲಿ ಬಳಕೆದಾರರು ಜುಲೈ ೧೦, ೨೦೨೪ ರಂದು ಈ ವೀಡಿಯೋವನ್ನು "ಕೆಮಿಕಲ್ ಮ್ಯಾಂಗೋ #Alert (ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಜುಲೈ ೭, ೨೦೨೪ ರಂದು ಸಮಾನವಾದ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಮಾವಿನ ಹಣ್ಣಿನಲ್ಲಿ ಕಲಬೆರಕೆ ಮಾಡಲಾಗುತ್ತಿದೆ ಎಂದು ಹಂಚಿಕೊಂಡ ಜುಲೈ ೧೦, ೨೦೨೪ರ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್ ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಜೂನ್ ೨೦, ೨೦೨೪ ರಂದು ಅದೇ ವೀಡಿಯೋದ ವಿಸ್ತೃತ ಆವೃತ್ತಿಯನ್ನು "ಸೋಶಿಯಲ್ ಮೆಸೇಜ್" ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋದ ಹಿಂದಿ ಶೀರ್ಷಿಕೆಯು "ಮಾವಿನ ಹಣ್ಣಿನ ಪ್ರಿಯರೇ, ನಿಮ್ಮ ಆರೋಗ್ಯವನ್ನು ಹೇಗೆ ಅಸ್ತವ್ಯಸ್ತಗೊಳಿಸಲಾಗುತ್ತಿದೆ ನೋಡಿ (ಅನುವಾದಿಸಲಾಗಿದೆ)." ಈ ಫೇಸ್‌ಬುಕ್ ಪುಟದ "ಅಬೌಟ್" ವಿಭಾಗವು ಮನರಂಜನೆ ಮತ್ತು ಸಾಮಾಜಿಕ ಜಾಗೃತಿಗಾಗಿ ಸ್ಕ್ರಿಪ್ಟ್ ಮಾಡಿದ ವೀಡಿಯೋಗಳನ್ನು ಇಲ್ಲಿ ಹಂಚಿಕೊಳ್ಳುತ್ತದೆ ಎಂದು ಸೂಚಿಸುತ್ತದೆ.
ಜೂನ್ ೨೦, ೨೦೨೪ ರಂದು "ಸೋಶಿಯಲ್ ಮೆಸೇಜ್" ಹಂಚಿಕೊಂಡ ಫೇಸ್‌ಬುಕ್ ಪೋಷ್ಟ ನ ಸ್ಕ್ರೀನ್‌ಶಾಟ್.
ಈ ವೀಡಿಯೋದಲ್ಲಿ ಹಕ್ಕು ನಿರಾಕರಣೆಯ ಸಂದೇಶವೊಂದನ್ನು ಹೊಂದಿದ್ದು, ಇದು ಸಾಮಾಜಿಕ ಜಾಗೃತಿಗಾಗಿ ರಚಿಸಲಾದ ಸ್ಕ್ರಿಪ್ಟ್ ಮಾಡಲಾದ ವೀಡಿಯೋ ಎಂದು ಸ್ಪಷ್ಟಪಡಿಸುತ್ತದೆ. ವೀಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ, ಶೈಕ್ಷಣಿಕ ಉದ್ದೇಶಗಳಿಗಾಗಿ ಹಂಚಿಕೊಳ್ಳಲಾಗಿದೆ, ಮತ್ತು ಸಾಮಾಜಿಕ ಜಾಗೃತಿಯ ಗುರಿಯನ್ನು ಹೊಂದಿದೆ ಎಂದು ಈ ಹಕ್ಕು ನಿರಾಕರಣೆ ಸಂದೇಶವು ಸ್ಪಷ್ಟವಾಗಿ ಹೇಳಿಕೊಂಡಿದೆ.
ವೀಡಿಯೋದಲ್ಲಿ ಹಕ್ಕು ನಿರಾಕರಣೆಯ ಸಂದೇಶವನ್ನು ತೋರಿಸಿರುವುದರ ಸ್ಕ್ರೀನ್‌ಶಾಟ್.
ಮೇ ೧೩, ೨೦೨೪ ರಂದು ನಡೆದ ನೈಜ ಘಟನೆಯಾಗಿ ವೈರಲ್ ಆಗಿದ್ದ ಕಲ್ಲಂಗಡಿ ಹಣ್ಣಿನಲ್ಲಿನ ಕಲಬೆರಕೆ ಕುರಿತು ಇದೇ ರೀತಿಯ ಸಾಮಾಜಿಕ ಜಾಗೃತಿ ವೀಡಿಯೋವನ್ನು ತಪ್ಪಾಗಿ ಹಂಚಿಕೊಂಡಿದ್ದನು ನಾವು ಫ್ಯಾಕ್ಟ್-ಚೆಕ್ ಮಾಡಿದ್ದೆವು. ವೈರಲ್ ವೀಡಿಯೋವು ನೈಜ ಘಟನೆಯನ್ನು ಚಿತ್ರಿಸುವುದಿಲ್ಲ ಆದರೆ ಸ್ಕ್ರಿಪ್ಟ್ ಮಾಡಿದ ಸಾಮಾಜಿಕ ಜಾಗೃತಿಗಾಗಿ ರಚಿಸಲಾದ ವೀಡಿಯೋದ ಒಂದು ಸಣ್ಣ ಆವೃತ್ತಿಯಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಸಾಮಾಜಿಕ ಮಾಧ್ಯಮ ಬಳಕೆದಾರರು ನೈಜ ಘಟನೆಯಾಗಿ ಸಾಮಾಜಿಕ ಜಾಗೃತಿಗಾಗಿ ಸ್ಕ್ರಿಪ್ಟ್ ಮಾಡಿದ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ಮಾವಿನಹಣ್ಣು ಮಾರಾಟಗಾರರು ಅವುಗಳಲ್ಲಿ ಕಲಬೆರಕೆ ಮಾಡುವುದನ್ನು ತೋರಿಸುವ ನೈಜ ಘಟನೆಯೆಂದು ಹೇಳಿಕೊಂಡು ಮಾಡಿರುವ ಆರೋಪಗಳು ತಪ್ಪು.