ಬಾಂಗ್ಲಾದೇಶದ ಸೇನೆಯು ಲೂಟಿಕೋರರನ್ನು ಓಡಿಸುವ ವೀಡಿಯೋವನ್ನು ಹಿಂದೂಗಳನ್ನು ಗುರಿಯಾಗಿಸುವುದನ್ನು ತೋರಿಸುತ್ತದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಬಾಂಗ್ಲಾದೇಶದಲ್ಲಿನ ಇತ್ತೀಚಿನ ರಾಜಕೀಯ ಅಶಾಂತಿಯೊಂದಿಗೆ ಸಂಬಂಧ ಹೊಂದಿರುವ ಬಾಂಗ್ಲಾದೇಶ ಮಿಲಿಟರಿಯಿಂದ ಹಿಂದೂಗಳನ್ನು ಥಳಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಢಾಕಾದಲ್ಲಿ ಲೂಟಿಕೋರರು ಮತ್ತು ಅವಕಾಶವಾದಿಗಳ ವಿರುದ್ಧ ಬಾಂಗ್ಲಾದೇಶದ ಮಿಲಿಟರಿ ಕ್ರಮ ತೆಗೆದುಕೊಳ್ಳುವುದನ್ನು ಮೂಲ ವೀಡಿಯೋ ತೋರಿಸುತ್ತದೆ. ಆದ್ದರಿಂದ, ಈ ವೀಡಿಯೋದೊಂದಿಗೆ ಹಂಚಿಕೊಳ್ಳಲಾದ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಸಾಮಾಜಿಕ ಮಾಧ್ಯಮ ಬಳಕೆದಾರರು ಹಲವಾರು ಸೇನಾ ಸಿಬ್ಬಂದಿಗಳು ಜನರನ್ನು ಥಳಿಸುವ ೧-ನಿಮಿಷದ ೩೦-ಸೆಕೆಂಡ್‌ಗಳ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಕೆಲವು ಜನರು ಮಿಲಿಟರಿ ಸಿಬ್ಬಂದಿಯಿಂದ ಓಡಿಹೋಗುವುದನ್ನು ಕಾಣಬಹುದು. ವೀಡಿಯೋದ ಶೀರ್ಷಿಕೆಯು ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರವನ್ನು ಚಿತ್ರಿಸುತ್ತದೆ ಮತ್ತು ಆ ದೇಶದಲ್ಲಿ ಇತ್ತೀಚಿನ ರಾಜಕೀಯ ಅಶಾಂತಿಗೆ ಕೋಮುವಾದ ನಿರೂಪಣೆಯನ್ನು ಸೂಚಿಸುತ್ತದೆ. ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಆಗಸ್ಟ್ ೨೦, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಒಂದು ಯೂಟ್ಯೂಬ್ ಚಾನಲ್ ಕೂಡ ಇದೇ ರೀತಿಯ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದೆ. ಫೇಸ್‌ಬುಕ್ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ ೨೦, ೨೦೨೪ ರಂದು ವೈರಲ್ ವೀಡಿಯೋ ಮತ್ತು ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅದೇ ಕ್ಲಿಪ್ ಅನ್ನು ಹಂಚಿಕೊಂಡಿರುವ ಹಿಂದಿನ ಪೋಷ್ಟ್ ಗಳಿಗೆ ನಮ್ಮನ್ನು ಕರೆದೊಯ್ಯಿತು. ಬಾಂಗ್ಲಾದೇಶ ಸೇನೆಯ ವಿಡಿಯೋಗಳನ್ನು ಮತ್ತು ಪ್ರಸ್ತುತ ಘಟನೆಗಳ ಸುದ್ದಿಗಳನ್ನು ಹಂಚಿಕೊಳ್ಳುವ BDMilitary/BDOSINT ಎಂಬ ಹೆಸರಿನ ಫೇಸ್‌ಬುಕ್ ಬಳಕೆದಾರರು ಇದೇ ವೀಡಿಯೋವನ್ನು ಆಗಸ್ಟ್ ೧೦, ೨೦೨೪ ರಂದು ಹಂಚಿಕೊಂಡಿದ್ದಾರೆ. ವೀಡಿಯೋವೀನ ಶೀರ್ಷಿಕೆಯು ಹೀಗೆಂದು ಹೇಳುತ್ತದೆ, “ಬಾಂಗ್ಲಾದೇಶ ಸೇನೆಯು ಲೂಟಿಕೋರರು ಮತ್ತು ಅವಕಾಶವಾದಿಗಳ ವಿರುದ್ಧ ನೇರ ಕ್ರಮ ತೆಗೆದುಕೊಳ್ಳುತ್ತಿದೆ. #BDOSINT #Bangladesh #CaretakerGovernment #CrimeStop."
ಆಗಸ್ಟ್ ೧೦, ೨೦೨೪ ರ BDMilitary/BDOSINT ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಫೇಸ್‌ಬುಕ್ ಶೀರ್ಷಿಕೆಯಿಂದ ಕೀವರ್ಡ್‌ಗಳನ್ನು ಬಳಸಿಕೊಂಡು, ಹಿಂದೂಗಳ ವಿರುದ್ಧದ ಹಿಂಸಾಚಾರದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಹಿಂದೂವಾಯ್ಸ್ ಎಂಬ ಎಕ್ಸ್ ಬಳಕೆದಾರರಿಂದ ಆಗಸ್ಟ್ ೧೮, ೨೦೨೪ ರಂದು ಹಂಚಿಕೊಂಡ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಎಕ್ಸ್ ಪೋಷ್ಟ್ ಅದೇ ವೀಡಿಯೋವನ್ನು ಒಳಗೊಂಡಿದೆ ಮತ್ತು ಅದರ ಶೀರ್ಷಿಕೆಯು #FakeNewsAlert ಹ್ಯಾಶ್‌ಟ್ಯಾಗ್ ಅನ್ನು ಒಳಗೊಂಡಿದೆ. ವೀಡಿಯೋದಲ್ಲಿ ತೋರಿಸಿರುವ ಘಟನೆಯು ಆಗಸ್ಟ್ ೧೦ ರಂದು ನಡೆದಿದ್ದು ಢಾಕಾ ನಗರದ ಬನಾನಿಯಲ್ಲಿದೆ ಎಂದು ಅದು ಹೇಳಿದೆ. ಬಾಂಗ್ಲಾದೇಶೀಯರ ಗುಂಪೊಂದು ಬಾಂಗ್ಲಾದೇಶ್ ಅವಾಮಿ ಲೀಗ್‌ನ ರಾಜಕೀಯ ನಾಯಕ ಶೇಖ್ ಫಜಲ್ ಶಮ್ಸ್ ಪರಶ್ ಅಲಿಯಾಸ್ ಶೇಖ್ ಪರಾಸ್ ಅವರ ಮನೆಗೆ ಪ್ರವೇಶಿಸಿತು ಮತ್ತು ಅನೇಕ "ಸ್ಥಳೀಯ ಮುಸ್ಲಿಮರು" ಅವರೊಂದಿಗೆ ಸೇರಿಕೊಂಡು ಮನೆಯನ್ನು ಲೂಟಿ ಮಾಡಿತು ಮತ್ತು ಬಾಂಗ್ಲಾದೇಶ ಮಿಲಿಟರಿ ಬಂದು ಅವರನ್ನು ಓಡಿಸಿತು ಎಂದು ಅದು ಹೇಳುತ್ತದೆ.
ಆಗಸ್ಟ್ ೧೮, ೨೦೨೪ ದಿನಾಂಕದ ಹಿಂದೂವಾಯ್ಸ್‌ನ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಆಗಸ್ಟ್ ೧೦ ರಂದು ತನ್ನ ಯೂಟ್ಯೂಬ್ ಚಾನಲ್‌ಗೆ ಅದನ್ನು ಅಪ್‌ಲೋಡ್ ಮಾಡಿದ ಬಾಂಗ್ಲಾಧಾರಾ ಎಂಬ ಬಾಂಗ್ಲಾದೇಶದ ಸುದ್ದಿ ವರದಿಯಲ್ಲಿ ಬಳಸಿರುವ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೋ ಶೀರ್ಷಿಕೆಯು ಹೀಗೆಂದು ಹೇಳುತ್ತದೆ - "ಸರಕುಗಳನ್ನು ಲೂಟಿ ಮಾಡುವವಾರ ಮೇಲೆ ಸೇನೆಯ ಕ್ರಮ" (ಅನುವಾದಿಸಲಾಗಿದೆ).
ಆಗಸ್ಟ್ ೧೦, ೨೦೨೪ ರಂದು ಅಪ್‌ಲೋಡ್ ಮಾಡಲಾದ ಬಾಂಗ್ಲಾಧಾರದ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಯಾವುದೇ ಜನರನ್ನು ಅವರ ಧಾರ್ಮಿಕ ಗುರುತಿನಿಂದ ಗುರಿಯಾಗಿಸಿಕೊಂಡು ಅವರ ವಿರುದ್ಧ ವೀಡಿಯೋ ದಲ್ಲಿ ತೋರಿಸಿರುವ ಯಾವುದೇ ಕ್ರಮವನ್ನು ಬಾಂಗ್ಲಾದೇಶದ ಮಿಲಿಟರಿ ತೆಗೆದುಕೊಂಡಿದೆ ಎಂದು ಸೂಚಿಸಲು ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಮೇಲಿನ ಪುರಾವೆಗಳು ಸಾರ್ವಜನಿಕರಲ್ಲಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದರೆಂದು ಸೂಚಿಸುತ್ತವೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಸ್ಥಳೀಯ ಬಾಂಗ್ಲಾದೇಶೀಯರ ಗುಂಪು ರಾಜಕೀಯ ನಾಯಕನ ಮನೆಯನ್ನು ಲೂಟಿ ಮಾಡುವುದನ್ನು ತೋರಿಸುತ್ತದೆ ಮತ್ತು ಬಾಂಗ್ಲಾದೇಶದ ಸೇನೆಯು ಅವರನ್ನು ಓಡಿಸುವುದನ್ನು ತೋರಿಸುತ್ತದೆ ಎಂದು ಸ್ಪಷ್ಟಪಡಿಸುತ್ತದೆ. ಈ ಘಟನೆಯು ಆಗಸ್ಟ್ ೧೦, ೨೦೨೪ ರಂದು ಸಂಭವಿಸಿದೆ ಮತ್ತು ಇತ್ತೀಚಿನ ರಾಜಕೀಯ ಅಶಾಂತಿಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಆಪಾದಿತ ಹಿಂಸಾಚಾರಕ್ಕೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.