ಜೈಲಿನಲ್ಲಿದ್ದ ಅರವಿಂದ್ ಕೇಜ್ರಿವಾಲ್ ಮಾವಿನ ಹಣ್ಣಿಗಾಗಿ 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂಬುದು ಸುಳ್ಳು
ಜೈಲಿನಲ್ಲಿದ್ದ ಕೇಜ್ರಿವಾಲ್ ಮಾವಿನ ಹಣ್ಣು ತಿನ್ನಲು ಖರ್ಚು ಮಾಡಿದ್ದು 63 ಲಕ್ಷ ರೂಪಾಯಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಒಂದು ತಿಂಗಳಷ್ಟರಲ್ಲಿ ಕೇವಲ ಮಾವಿನ ಹಣ್ಣು ತಿನ್ನಲು 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
” ಒಬ್ಬ ಮನುಷ್ಯ ಒಂದು ತಿಂಗಳಿನಲ್ಲಿ 63 ಲಕ್ಷರೂಪಾಯಿಯ ಮಾವಿನ ಹಣ್ಣು ತಿನ್ನಲು ಸಾಧ್ಯವೆ? ಇದನ್ನು ಜನಸಾಮಾನ್ಯ ಪಕ್ಷದ ಅರವಿಂದ ಕೇಜ್ರಿವಾಲ್ ತಿಹಾರ ಜೈಲಿನಲ್ಲಿ ಕುಳಿತು ಸಾಧನೆ ಮಾಡಿದ್ದಾರೆ ನಂಬೊಕೆ ಆಗ್ತಾ ಇಲ್ಲವೇ ನೋಡಿ ಈ ವಿಡಿಯೋ” ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಜಗತ್ತಿನ ಅತ್ಯಂತ ದುಬಾರಿಯಾದ ಜಪಾನಿನ ಮಿಯಾಜಾಕಿ ಮಾವಿನ ಹಣ್ಣನ್ನು ತಿಂದಿದ್ದಾರೆ ಎಂದು ರಾಜೇಶ್ ಬಸಿಂದ್ ನಿಶಾನ್ ಎನ್ನುವವರು ಆರೋಪಿಸಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಆಮ್ ಆದ್ಮಿ ಪಕ್ಷದ ನಾಯಕ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇವಲ ಮಾವಿನ ಹಣ್ಣು ತಿನ್ನಲು ಬರೋಬರಿ 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನುವ ಆರೋಪದ ಸತ್ಯಾಸತ್ಯತೆಯನ್ನು ತಿಳಿಯಲು ಗೂಗಲ್ ಸರ್ಚ್ ಮಾಡಿದಾಗ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿದ್ದಾಗ ಉದ್ದೇಶಪೂರ್ವಕವಾಗಿ ಚಹಾದೊಂದಿಗೆ ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಸಕ್ಕರೆಯನ್ನು ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ ಯಾವ ವರದಿಗಳಲ್ಲಿಯೂ ಕೇಜ್ರಿವಾಲ್ ಅವರು 63 ಲಕ್ಷರೂಪಾಯಿಯ ಮಾವಿನ ಹಣ್ಣನ್ನು ಅಥವಾ ಜಗತ್ತಿನ ಅತ್ಯಂತ ದುಬಾರಿ ಮಿಯಾಜಾಕಿ ಮಾವಿನ ಹಣ್ಣನ್ನು ತಿಂದಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ.
ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ED), ಕೇಜ್ರಿವಾಲ್ ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ಸಕ್ಕರೆ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ತಮ್ಮ ವೈದ್ಯರನ್ನು ಸಂಪರ್ಕಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಇಡಿ ಈ ಮನವಿಯನ್ನು ವಿರೋಧಿಸಿತ್ತು, ಜಾಮೀನು ಪಡೆಯಲು ಅವರು ಮಾವಿನಹಣ್ಣು ಮತ್ತು ಸಿಹಿತಿಂಡಿಗಳನ್ನು ಸೇವಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
“ಅರವಿಂದ್ ಕೇಜ್ರಿವಾಲ್ ಅವರು ಸಕ್ಕರೆ, ಬಾಳೆಹಣ್ಣು, ಸಿಹಿತಿಂಡಿಗಳು, ಪೂರಿ, ಆಲೂ ಸಬ್ಜಿ ಇತ್ಯಾದಿಗಳನ್ನು ಪ್ರಜ್ಞಾಪೂರ್ವಕವಾಗಿ ಸೇವಿಸುತ್ತಿದ್ದಾರೆ, ಮಧುಮೇಹ ಮೆಲ್ಲಿಟಸ್ ಟೈಪ್ II ರ ರೋಗಿಯಾಗಿದ್ದರೂ ಮತ್ತು ಅಂತಹ ವಸ್ತುಗಳ ಸೇವನೆಯು ರಕ್ತದ ಸಕ್ಕರೆ ಹೆಚ್ಚಿಸುತ್ತದೆ ಎಂದು ಚೆನ್ನಾಗಿ ತಿಳಿದಿದ್ದರೂ ಸಹ ಹೀಗೆ ಮಾಡಿದ್ದಾರೆ”. ಎಂದು ಇಡಿ ಪರವಾದ ವಕೀಲರು ನ್ಯಾಯಲಯದ ಮುಂದೆ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ 19 ಏಪ್ರಿಲ್ 2024 ರಂದು ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ತಿಹಾರ್ ಜೈಲಿನಲ್ಲಿ ತನಗೆ ಇನ್ಸುಲಿನ್ ಒದಗಿಸುವಂತೆ ಅಧಿಕಾರಿಗಳನ್ನು ಕೇಳುವ ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರ ಊಟದ ವಿಚಾರಕ್ಕೆ ಸಂಬಂಧಿಸಿದಂತೆ “48 ಊಟಗಳಲ್ಲಿ ಕೇವಲ 3 ಮಾವಿನ ಹಣ್ಣುಗಳು. ಒಮ್ಮೆ ಆಲೂ ಪುರಿ ತಿಂದಿದ್ದು, ಅದು ನವರಾತ್ರಿಯ ಪ್ರಸಾದವಾಗಿತ್ತು, ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ(ಇಡಿ) ನನ್ನನ್ನು ಬಂಧಿಸಿದ ನಂತರ ನಮ್ಮ ಮನೆಯಿಂದ ಕೇವಲ ಮೂರು ಬಾರಿ ಮಾವಿನಹಣ್ಣುಗಳನ್ನು ಕಳುಹಿಸಲಾಗಿದೆ.” ಎಂದು ಅವರು ಹೇಳಿದ್ದಾರೆ.
ಆದ್ದರಿಂದ ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರು 63 ಲಕ್ಷದಷ್ಟು ಜಗತ್ತಿನ ಅತ್ಯಂತ ದುಬಾರಿಯಾದ ಜಪಾನಿನ ಮಿಯಾಜಾಕಿ ಮಾವಿನ ಹಣ್ಣನ್ನು ತಿಂದಿದ್ದಾರೆ ಎಂಬ ಆರೋಪ ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನವಾಗಿ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಮಾವಿನ ಹಣ್ಣುಗಳನ್ನು ತಿನ್ನಲೆಂದು ಬರೋಬರಿ 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಅವರ ಹೇಳಿಕೆಯ ಪ್ರಕಾರ ಅವರು ಜೈಲಿನಲ್ಲಿ ಸೇವಿಸಿದ್ದು ಕೇವಲ 3 ಮಾವಿನ ಹಣ್ಣು, ಅದು ಕೂಡ ಮನೆಯಿಂದ ಊಟದೊಂದಿಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.