ಉತ್ತರಪ್ರದೇಶದ ಹಾಪುರ್ ಟೋಲ್ ಪ್ಲಾಜಾದಲ್ಲಿ ಟೋಲ್ ಕೆಲಸಗಾರ ಟೋಲ್ ನೀಡುವಂತೆ ಒತ್ತಾಯಿಸಿದ್ದರಿಂದ ಜೆಸಿಬಿ ಚಾಲಕನೊಬ್ಬ ತನ್ನ ಬುಲ್ಡೋಜರ್‌ನಿಂದ ಸಂಪೂರ್ಣ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ್ದಾನೆ. ಹಾಪುರದ ಛಿಜರಾಸಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ.
ಜೂನ್ 11, ಮಂಗಳವಾರ ಬೆಳಿಗ್ಗೆ 8:30 ರ ಸುಮಾರಿಗೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾದಲ್ಲಿರುವ ಛಜರ್ಸಿ ಟೋಲ್ ಪ್ಲಾಜಾದಲ್ಲಿ ಹಣ ಪಾವತಿಸಲು ಕೇಳಿದಾಗ, ಬುಲ್ಡೋಜರ್ ಚಾಲಕ ತನ್ನ ಜೆಸಿಬಿಯಿಂದ ಎರಡು ಟೋಲ್ ಬೂತ್‌ಗಳನ್ನು ಹಾನಿಗೊಳಿಸಿದ ಘಟನೆ ನಡೆದಿದ್ದು ಈ ದೃಶ್ಯಗಳನ್ನು ಟೋಲ್ ಪ್ಲಾಜಾ ನೌಕರರು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಜೆಸಿಬಿ ಚಾಲಕ ಮುಸ್ಲಿಂ ಧರ್ಮದವನು ಎಂದು ಹೇಳಲು ಪ್ರಾರಂಭಿಸಿದ್ದಾರೆ. ಬಲಪಂಥೀಯ ಪ್ರಚಾರದ ಔಟ್ಲೆಟ್ ಸುದರ್ಶನ್ ನ್ಯೂಸ್‌ಗೆ ಸಂಬಂಧಿಸಿದ 'ಪತ್ರಕರ್ತ' ಸಾಗರ್ ಕುಮಾರ್, ವಿಡಿಯೋವನ್ನು ಟ್ವೀಟ್ ಮಾಡಿದ್ದು ಟೋಲ್ ಶುಲ್ಕ ಪಾವತಿಸಲು ಕೇಳಿದಾಗ ಕೋಪಗೊಂಡ ಚಾಲಕ ಮೊಹಮ್ಮದ್ ಸಾಜಿದ್ ಅಲಿಯ ಭಯೋತ್ಪಾದನೆಯನ್ನು ಪ್ರದರ್ಶಿಸಿದ್ದಾನೆ ಎಂದು ಒಕ್ಕಣೆಯನ್ನು ಬರೆದಿದ್ದಾರೆ.
ಬಲಪಂಥೀಯ ಪ್ರತಿಪಾದಕ ಸೋಶಿಯಲ್ ಮೀಡಿಯಾಎಕ್ಸ್ ಖಾತೆ ಮೇಘಅಪ್‌ಡೇಟ್ಸ್ ಕೂಡ ಅದೇ ವಿಡಿಯೋಗಳನ್ನು ಟ್ವೀಟ್ ಮಾಡಿದ್ದು, ಯುಪಿ ಪೊಲೀಸರು ಆರೋಪಿ ಸಾಜಿದ್‌ಗೆ ‘ಸರಿಯಾದ ಸೇವೆ’ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಆರ್ಕೈವ್ ಮಾಡಿದ ಲಿಂಕ್ ಇಲ್ಲಿ ನೋಡಬಹುದು.
ಮುಖ್ಯವಾಹಿನಿಯ ಮಾಧ್ಯಮಗಳು’ ಇಂತಹದನ್ನು ಏನನ್ನು ತೋರಿಸುವುದಿಲ್ಲ ಆದರೆ ನಾವು ಪ್ರೇಕ್ಷಕರಿಗೆ ಇದನ್ನು ತೋರಿಸುವುದಾಗಿ ಹೇಳಿಕೊಂಡಿರುವ ‘ಪತ್ರಕರ್ತೆ’ ಅಶ್ವಿನಿ ಶ್ರೀವಾಸ್ತವ, ಟ್ವೀಟ್ ಮಾಡಿದ್ದು ಘಟನೆಯಲ್ಲಿ ಭಾಗಿಯಾಗಿರುವ ಅಪರಾಧಿ ಮೊಹಮ್ಮದ್ ಸಾಜಿದ್ ಅಲಿ ಎಂಬ ಮುಸ್ಲಿಂ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ( ಆರ್ಕೈವ್ ಮಾಡಿದ ಲಿಂಕ್)
ಹಲವು ಇತರ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೃತ್ಯ ನಡೆಸಿರುವ ಆರೋಪಿ ಮುಸ್ಲಿಂ ಎಂದು ಹೇಳುವುದರೊಂದಿಗೆ ಅದೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಉತ್ತರ ಪ್ರದೇಶದ ಹಾಪುರದ ಹೆದ್ದಾರಿಯಲ್ಲಿ ಟೋಲ್ ಬೂತ್‌ನಲ್ಲಿ, ಟೋಲ್ ಪಾವತಿಸುವಂತೆ ಕೇಳಿದಕ್ಕೆ ಬುಲ್ಡೋಜರ್ ಚಾಲಕ ಮೊಹಮ್ಮದ್ ಸಾಜಿದ್ ಅಲಿ ಟೋಲ್‌ಅನ್ನು ಧ್ವಂಸಗೊಳಿಸಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಾಪುರ್ ಪೊಲೀಸರು ವೀಡಿಯೊ ಹೇಳಿಕೆಯನ್ನು ನೀಡಿದ್ದರು. ಘಟನೆಯ ನಂತರ ಜೆಸಿಬಿ ಚಾಲಕನನ್ನು ಬಂಧಿಸಿ ಜೆಸಿಬಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಭಿಷೇಕ್ ವರ್ಮಾ ತಿಳಿಸಿದ್ದಾರೆ.
ಈ ವರದಿಗಳ ಪ್ರಕಾರ, ಈ ಘಟನೆಯು 11 ಜೂನ್ 2024 ರ ಬೆಳಿಗ್ಗೆ ಹಾಪುರ್‌ನ ಪಿಲ್ಖುವಾ ಪ್ರದೇಶದ ಛಜರ್ಸಿ ಟೋಲ್ ಪ್ಲಾಜಾದಲ್ಲಿ ಸಂಭವಿಸಿದೆ. ಧೀರಜ್ ಕುಮಾರ್ ಎಂದು ಗುರುತಿಸಲಾದ ಬುಲ್ಡೋಜರ್ ಚಾಲಕ, ಮದ್ಯದ ಅಮಲಿನಲ್ಲಿ ದೆಹಲಿ-ಲಖನೌ ಹೆದ್ದಾರಿಯಲ್ಲಿರುವ ಛಜರ್ಸಿ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ್ದಾನೆ. ಟೋಲ್ ಪಾವತಿಯ ವಿವಾದದ ನಂತರ ಎರಡು ಟೋಲ್ ಬೂತ್‌ಗಳನ್ನು ಧ್ವಂಸಗೊಳಿಸಿದ್ದ, ಧೀರಜ್ ಕುಮಾರ್ ಟೋಲ್ ಸಿಬ್ಬಂದಿಯ ಮೇಲು ದಾಳಿ ಮಾಡಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರದ ಹೇಳಿಕೆಯಲ್ಲಿ, ಎಸ್ಪಿ ವರ್ಮಾ ಚಾಲಕನ ಹೆಸರು ವಿದ್ಯಾರಾಮ್ ಅವರ ಮಗ ಧೀರಜ್ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ. ಚಾಲಕ ಧೀರಜ್, 23-24 ವರ್ಷ ವಯಸ್ಸಿನವನಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದು, ಘಟನೆ ವೇಳೆ ಮದ್ಯದ ಅಮಲಿನಲ್ಲಿದ್ದ ಎಂದು ಹೇಳಿದ್ದಾರೆ.
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಹಾಪುರ್ ಟೋಲ್ ಪ್ಲಾಜಾದಲ್ಲಿ ಟೋಲ್ ಕೆಲಸಗಾರ ಟೋಲ್ ನೀಡುವಂತೆ ಒತ್ತಾಯಿಸಿದ್ದರಿಂದ ಚಾಲಕನೊಬ್ಬ ತನ್ನ ಬುಲ್ಡೋಜರ್‌ನಿಂದ ಸಂಪೂರ್ಣ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ್ದಾನೆ. ಹಾಪುರದ ಛಿಜರಾಸಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಬುಲ್ಡೋಜರ್ ಚಾಲಕ ಟೋಲ್ ಸಿಬ್ಬಂದಿ ಶುಲ್ಕ ಪಾವತಿಸುವಂತೆ ಕೇಳಿದ್ದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಆರೋಪಿ ಧೀರಜ್ ಪಿಲ್ಖುವಾ ಬದೌನ್ ನಿವಾಸಿಯಾಗಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಪುರದಿಂದ ಛಿಜರಸಿ ಸುಂಕದಕಟ್ಟೆಗೆ ಜೆಸಿಬಿಯಲ್ಲಿ ಬಂದಿದ್ದ ಆತ ಟೋಲ್ ಸಿಬ್ಬಂದಿ ಟೋಲ್ ಶುಲ್ಕ ಕೇಳಿದಾಗ ಕೋಪಗೊಂಡಿದ್ದಾನೆ. ಆಕ್ರೋಶದಿಂದ ಜೆಸಿಬಿ ಬುಲ್ಡೋಜರ್‌ನಿಂದ ಟೋಲ್ ಪ್ಲಾಜಾದ ಕ್ಯಾಬಿನ್‌ಗಳನ್ನು ಧ್ವಂಸ ಮಾಡಲು ಪ್ರಾರಂಭಿಸಿ ಕೆಲವೇ ಸಮಯದಲ್ಲಿ ಎರಡು ಕ್ಯಾಬಿನ್‌ಗಳನ್ನು ನಾಶಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಟೋಲ್ ಕಾರ್ಮಿಕರು ಓಡಿಹೋಗುವ ಮೂಲಕ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ವಿಧ್ವಂಸಕ ಕೃತ್ಯ ಎಸಗಿದ ಬಳಿಕ ಜೆಸಿಬಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಜೆಸಿಬಿ ಹುಡುಕಾಟ ಆರಂಭಿಸಿ ಚಾಲಕನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಸಮಯದಲ್ಲಿ ಆರೋಪಿ ಧೀರಜ್ ಪಾನಮತ್ತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಗೂಂಡಾ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಾಸ್ತವವಾಗಿ ಜೆಸಿಬಿ ಮಾಲೀಕ ಸಾಜಿದ್ ಅಲಿ ಎಂಬ ವ್ಯಕ್ತಿ, ಅವರು ಇಟ್ಟಿಗೆ ಗೂಡು ಹೊಂದಿದ್ದಾರೆ. ಆರೋಪಿ ಧೀರಜ್ ಮಾಲೀಕನಿಗೆ ತಿಳಿಯದಂತೆ ಜೆಸಿಬಿ ತೆಗೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಟೋಲ್ ಪಾವತಿಸುವಂತೆ ಕೇಳಿದಾಗ ಟೋಲ್ ಬೂತ್ ಗಳನ್ನು ಧ್ವಂಸ ಮಾಡಿದ ಅಮಲಿನಲ್ಲಿದ್ದ ಜೆಸಿಬಿ ಚಾಲಕನನ್ನು ಧೀರಜ್ ಎಂದು ಪೊಲೀಸರು ಗುರುತಿಸಿದ್ದಾರೆ. ಆದರೆ ಹಾಪುರ್ ಘಟನೆಯ ಅಪರಾಧಿ ಮುಸ್ಲಿಂ ಎಂದು ಬಲಪಂಥೀಯ ಪ್ರತಿಪಾದಕರು ಸುಳ್ಳು ಮತ್ತು ಕೋಮು ವೈಶಮ್ಯದ ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.