ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ ಇವಿಎಂ ಹ್ಯಾಕಿಂಗ್ ಕುರಿತು ಡೆಮೋ ತೋರಿಸಿದ್ದಾರೆ ಎಂಬ ಆರೋಪಗಳು ಸುಳ್ಳು.
ಸಾರಾಂಶ:
ಗುಜರಾತ್‌ನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಇವಿಎಂ ಹ್ಯಾಕಿಂಗ್ ಅಥವಾ ಅಸಮರ್ಪಕ ಕಾರ್ಯದ ಬಗ್ಗೆ ಯಾವುದೇ ಪ್ರದರ್ಶನಗಳನ್ನು ನಡೆಸಿಲ್ಲ. ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ "ಇವಿಎಂ ಹಟಾವೋ ಮೋರ್ಚಾ" ಎಂಬ ಇವಿಎಂ ವಿರೋಧಿ ಸಂಘಟನೆಯ ಸದಸ್ಯರಾಗಿದ್ದಾರೆ. ಇಂತಹ ಪ್ರದರ್ಶನಗಳನ್ನು ಗುಜರಾತ್‌ನ ಸಿಇಒ ನಡೆಸಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಹೇಳಿಕೆಗಳು ತಪ್ಪು.
ಹೇಳಿಕೆ:
ಗುಜರಾತ್‌ನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಇವಿಎಂ ಅಸಮರ್ಪಕ ಕಾರ್ಯವನ್ನು ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತಿರುವುದಾಗಿ ಹೇಳಿಕೊಂಡು ವೀಡಿಯೋವೊಂದನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಫೇಸ್‌ಬುಕ್‌ನಲ್ಲಿ ಹಿಂದಿಯಲ್ಲಿ ಹಂಚಿಕೊಂಡಿರುವ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಗುಜರಾತ್ ಸಿಇಒ ಇವಿಎಂ ಅಸಮರ್ಪಕ ಕ್ರಿಯೆಯ ಲೈವ್ ಡೆಮೋ ತೋರಿಸಿದ್ದಾರೆ, ಲೈವ್ ಇವಿಎಂ ಅಸಮರ್ಪಕ ಕಾರ್ಯವನ್ನು ನೋಡಿದ ನಂತರ ಬಿಜೆಪಿ ಸರ್ಕಾರ ಅಸಮಾಧಾನಗೊಂಡಿದೆ." ಇವಿಎಂಗಳನ್ನು ಟ್ಯಾಂಪರ್ ಮಾಡಬಹುದು ಮತ್ತು ಮುಖ್ಯ ಚುನಾವಣಾ ಅಧಿಕಾರಿಯು ಯಂತ್ರವನ್ನು ಹೇಗೆ ಟ್ಯಾಂಪರ್ ಮಾಡಬಹುದು ಎಂಬುದನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಇಂತಹ ಪೋಷ್ಟ್ ಗಳು ಸೂಚಿಸುತ್ತವೆ.
ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಫೆಬ್ರವರಿ ೨೧, ೨೦೨೪ ರಂದು ವಾಯ್ಸ್ ನ್ಯೂಸ್ ನೆಟ್‌ವರ್ಕ್‌ನಿಂದ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ಒಂಬತ್ತು ನಿಮಿಷಗಳ ವೀಡಿಯೋ ವೈರಲ್ ವೀಡಿಯೋದಲ್ಲಿ ನೋಡಿದ ಅದೇ ದೃಶ್ಯಗಳನ್ನು ಒಳಗೊಂಡಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಈ ವೀಡಿಯೋದಲ್ಲಿ, ಪ್ರದರ್ಶನವನ್ನು ತೋರಿಸುವ ಜನರ ಹಿಂದೆ ಬ್ಯಾನರ್‌ನಲ್ಲಿ ಹಿಂದಿಯಲ್ಲಿ “ಇವಿಎಂ ಹಟಾವೋ ಮೋರ್ಚಾ” ಎಂಬ ಪಠ್ಯವನ್ನು ನಾವು ಗಮನಿಸಿದ್ದೇವೆ. ಇದಲ್ಲದೆ, ಅವರ ಹಿಂದಿನ ಬ್ಯಾನರ್‌ನಲ್ಲಿ ಹಿಂದಿಯಲ್ಲಿ “ಜಂತರ್-ಮಂತರ್, ದೆಹಲಿ” ಎಂದು ನಮೂದಿಸಿರುವುದನ್ನು ನಾವು ನೋಡಬಹುದು ಮತ್ತು ವೀಡಿಯೋದ ಮೇಲಿನ ಎಡ ಮೂಲೆಯಲ್ಲಿ “ದೆಹಲಿ” ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಇದು ದೆಹಲಿಯಲ್ಲಿ ಕಾರ್ಯಕ್ರಮ ನಡೆದಿರುವುದನ್ನು ಸೂಚಿಸುತ್ತದೆ ಮತ್ತು ಪ್ರದರ್ಶನವನ್ನು ನಡೆಸುತ್ತಿರುವವರು ಇವಿಎಂ ವಿರೋಧಿ ಕಾರ್ಯಕರ್ತರು ಎಂದು ಬ್ಯಾನರ್ ಸ್ಪಷ್ಟಪಡಿಸುತ್ತದೆ.
ಫೆಬ್ರವರಿ ೨೧, ೨೦೨೪ ರ ಫೇಸ್‌ಬುಕ್ ವೀಡಿಯೋದ ಸ್ಕ್ರೀನ್‌ಶಾಟ್.
ಈ ವೀಡಿಯೋದಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು ಕೀವರ್ಡ್ ಸರ್ಚ್ನಡೆಸಿದ್ದೇವೆ. ವೈರಲ್ ವೀಡಿಯೋದಲ್ಲಿ ಕಂಡುಬಂದ ಅದೇ ವ್ಯಕ್ತಿಯನ್ನು ಒಳಗೊಂಡ ಹಲವಾರು ವಿಡಿಯೋಗಳನ್ನು ನಾವು ನೋಡಿದ್ದೇವೆ. ಇವುಗಳಲ್ಲಿ, ಅವರು ದೇಶದ ವಿವಿಧ ಭಾಗಗಳಲ್ಲಿ ಇವಿಎಂಗಳಲ್ಲಿನ ದೋಷಗಳನ್ನು ಪ್ರದರ್ಶಿಸುವುದನ್ನು ಕಾಣಬಹುದು. ಫೇಸ್‌ಬುಕ್‌ನಲ್ಲಿ ಇವಿಎಂ ವಿರೋಧಿ ಪುಟವೊಂದು ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಅವರು ಗುಜರಾತ್ ಮೂಲದ ಅತುಲ್ ಪಟೇಲ್ ಎಂದು ಸ್ವತಃ ಗುರುತಿಸಿಕೊಂಡಿದ್ದಾರೆ.
ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಅವರು ಅತುಲ್ ಪಟೇಲ್ ಎಂದು ಹೇಳಿಕೊಳ್ಳುವ ವೀಡಿಯೋದ ಸ್ಕ್ರೀನ್‌ಶಾಟ್‌ನೊಂದಿಗೆ ಹೋಲಿಸಿದಾಗ, ಈ ಎರಡು ವಿಡಿಯೋಗಳಲ್ಲಿನ ವ್ಯಕ್ತಿಯು ಒಬ್ಬರೇ ಎಂದು ಕಂಡುಬಂದಿದೆ.
"EVM ಹಟಾವೋ ದೇಶ್ ಬಚಾವೋ" ಫೇಸ್ಬುಕ್ ಪುಟದಲ್ಲಿನ ವೀಡಿಯೋ ಮತ್ತು ವೈರಲ್ ವೀಡಿಯೋಗಳ ಸ್ಕ್ರೀನ್‌ಶಾಟ್‌ಗಳ ಹೋಲಿಕೆ.
ಇದಲ್ಲದೆ, ಸಿಇಒ ಗುಜರಾತ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಪ್ರಸ್ತುತ ಸಿಇಒ ಭಾರತಿ ಐಎಎಸ್. ವೈರಲ್ ವೀಡಿಯೋದಲ್ಲಿ ತೋರಿಸಿರುವ ವ್ಯಕ್ತಿಯನ್ನು ನಂತರ ಅತುಲ್ ಪಟೇಲ್ ಎಂದು ಗುರುತಿಸಲಾಗಿದೆ. ವೈರಲ್ ವೀಡಿಯೋ ಗುಜರಾತ್‌ನಲ್ಲಿ ಚುನಾವಣಾ ಅಧಿಕಾರಿಗಳನ್ನು ತೋರಿಸುವುದಿಲ್ಲ ಆದರೆ ಕೆಲವು ಇವಿಎಂ ವಿರೋಧಿ ಕಾರ್ಯಕರ್ತರನ್ನು ತೋರಿಸುತ್ತದೆ ಎಂದು ಇದು ದೃಢಪಡಿಸುತ್ತದೆ.
ತೀರ್ಪು:
ವೈರಲ್ ವೀಡಿಯೋದಲ್ಲಿ ಗುಜರಾತ್ ಮುಖ್ಯ ಚುನಾವಣಾಧಿಕಾರಿ ಇವಿಎಂಗಳಲ್ಲಿನ ದೋಷಗಳನ್ನು ತೋರಿಸುತ್ತಿಲ್ಲ. ವೈರಲ್ ವೀಡಿಯೊದಲ್ಲಿರುವ ಜನರು "ಇವಿಎಂ ಹಟಾವೋ ಮೋರ್ಚಾ" ಸಂಘಟನೆಯ ಇವಿಎಂ ವಿರೋಧಿ ಕಾರ್ಯಕರ್ತರು. ಆದ್ದರಿಂದ, ಗುಜರಾತ್‌ನಲ್ಲಿ ಇವಿಎಂಗಳ ದೋಷಗಳನ್ನು ಚುನಾವಣಾ ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ ಎಂಬ ಹೇಳಿಕೆಗಳು ತಪ್ಪು.