- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ಕಾಂಗ್ರೆಸ್ ನಾಯಕ ಅಧೀರ್...
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕಿ ಎಂದು ಹೇಳಿಲ್ಲ
ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಬಿಜೆಪಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ “ಬಿಜೆಪಿಗೆ ಮತ ಹಾಕುವುದು ತೃಣ ಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದಕ್ಕಿಂತ ಉತ್ತಮ ಎಂದು ಅಧೀರ್ ರಂಜನ್ ಚೌಧರಿ ಅವರು ಹೇಳಿದ್ದಾರೆ” ಎಂದು ಪ್ರತಿಪಾದಿಸಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಅಧೀರ್ ರಂಜನ್ ಚೌಧರಿ ಅವರು ಬಂಗಾಳದಲ್ಲಿ ಬಿಜೆಪಿಯ ಕಣ್ಣು ಹಾಗೂ ಕಿವಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಚೌಧರಿ ಅವರು ಬಿಜೆಪಿ ವಿರುದ್ಧ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ಬಂಗಾಳಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನದ ವಿಚಾರದಲ್ಲಿ ದನಿ ಎತ್ತುತ್ತಿಲ್ಲ. ಬಹರಾಮ್‌ಪುರಕ್ಕೆ ಭೇಟಿ ನೀಡಿದ್ದ ವೇಳೆ ಅಧೀರ್ ರಂಜನ್ ಅವರು ಬಿಜೆಪಿ ಪರ ಪ್ರಚಾರ ಮಾಡಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಚೌಧರಿ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ ಎಂದು ಕುಟುಕಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಅಧೀರ್ ರಂಜನ್ ಚೌಧರಿ ಅವರು ಬಿಜೆಪಿಗೆ ಮತ ಹಾಕಿ ಎಂದು ಹೇಳಿದ್ದಾರೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ? ಅಧೀರ್ ರಂಜನ್ ಚೌಧರಿ ಅವರು ಬಿಜೆಪಿಗೆ ಮತ ನೀಡಿ ಎಂದು ನಿಜವಾಗಿಯೂ ಹೇಳಿದ್ದಾರೆಯೇ ಎಂದು ಪರಿಶೀಲಿಸಲು ಕೀ ವರ್ಡ್ ಬಳಸಿ ಗೂಗಲ್ ಸರ್ಚ್ ನಡೆಸಿದಾಗ, 30 ಏಪ್ರಿಲ್ 2024 ರಂದು ಪಶ್ಚಿಮ ಬಂಗಾಳ ಕಾಂಗ್ರೆಸ್‌ನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ಪೋಸ್ಟ್ ಲಭ್ಯವಾಗಿದೆ ಎಂದು ಈ ವಿಡಿಯೋ ಕುರಿತಾಗಿ ನ್ಯೂಸ್ ಚೆಕರ್ ಸಂಸ್ಥೆ ವರದಿ ಪ್ರಕಟಿಸಿದೆ.
ವಿಡಿಯೋ ವಿವರಣೆಯ ಪ್ರಕಾರ, ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಜಂಗೀಪುರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲಾಲ್‌ಗೋಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುರ್ತಜಾ ಹುಸ್ಸೇನ್ ಪರ ಪ್ರಚಾರ ಮಾಡಿದರು. ಮುರ್ತಜಾ ಅವರಿಗೆ ಎಡಪಕ್ಷಗಳೂ ಬೆಂಬಲ ನೀಡಿವೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
ಈ ವಿಡಿಯೋದ 25:09 ನಿಮಿಷದಲ್ಲಿ ಇರುವ ಭಾಷಣವೇ ಇದೀಗ ವೈರಲ್ ಆಗಿದ್ದು, ಈ ಭಾಗದಲ್ಲಿ ಚೌಧರಿ ಅವರು ಬಿಜೆಪಿ ಕುರಿತಾಗಿ ಮಾತನಾಡುತ್ತಾರೆ. ಮೋದಿ ಅವರು ಮೊದಲು ಇದ್ದಷ್ಟು ಆತ್ಮವಿಶ್ವಾಸದಿಂದ ಈಗ ಇಲ್ಲ. ಈ ಮುನ್ನ ಅವರು 400 ಸ್ಥಾನ ದಾಟುತ್ತೇವೆ ಎನ್ನುತ್ತಿದ್ದರು. ಆದರೆ ಈಗ ಹೇಳುತ್ತಿಲ್ಲ. ಇತ್ತೀಚಿನ ಸರ್ವೆ ಪ್ರಕಾರ 100 ಸ್ಥಾನಗಳು ಈಗಾಗಲೇ ಮೋದಿ ಅವರ ಕೈಬಿಟ್ಟು ಹೋಗಿದೆ. ಇನ್ನಷ್ಟು ಕಡಿಮೆ ಆಗುತ್ತಲೇ ಇದೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಗೆಲ್ಲಲೇ ಬೇಕು. ನಮ್ಮ ಗೆಲುವಾಗದೇ ಇದ್ದರೆ ಭಾರತದಲ್ಲಿ ಜಾತ್ಯತೀತತೆ ಇಲ್ಲವಾಗುತ್ತದೆ. ಹಾಗೆ ನೋಡಿದರೆ ಟಿಎಂಸಿಗೆ ಮತ ಹಾಕೋದಕ್ಕಿಂತಾ ಬಿಜೆಪಿಗೆ ಹಾಕೋದು ಉತ್ತಮ. ಹೀಗಾಗಿ, ಈ ಬಾರಿ ಬಿಜೆಪಿ ಅಥವಾ ಟಿಎಂಸಿಗೆ ಮತ ಹಾಕಬೇಡಿ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ. ಅವರು ಎಂದೆಂದಿಗೂ ನಿಮ್ಮ ಜೊತೆ ಇರ್ತಾರೆ’ ಎಂದು ಚೌಧರಿ ಹೇಳುತ್ತಾರೆ.
ಸುದ್ದಿ ಸಂಸ್ಥೆ ಎಎನ್‌ಐ ಮೇ 1, 2024ರಂದು ಚೌಧರಿ ಅವರ ಈ ಭಾಷಣದ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು. ಕಾಂಗ್ರೆಸ್ ಪಕ್ಷ ಈ ವೈರಲ್ ವಿಡಿಯೋ ಕುರಿತಾಗಿ ಈಗಾಗಲೇ ದೂರು ನೀಡಿದೆ. ಅಧೀರ್ ರಂಜನ್ ಚೌಧರಿ ಅವರ ಭಾಷಣದ ಕ್ಲಿಪ್‌ಅನ್ನು ಎಡಿಟ್ ಮಾಡುವ ಮೂಲಕ ತಿರುಚಿ ಬಿಜೆಪಿಗೆ ಮತ ಹಾಕುವಂತೆ ಚೌಧರಿ ಹೇಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಸುಳ್ಳು : ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಬಿಜೆಪಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡಿದ್ದಾರೆ. ನಿಜಾಂಶ : ಜಂಗೀಪುರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲಾಲ್‌ಗೋಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುರ್ತಜಾ ಹುಸ್ಸೇನ್ ಪರ ಪ್ರಚಾರ ಮಾಡುವ ವೇಳೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಗೆಲ್ಲಲೇ ಬೇಕು. ನಮ್ಮ ಗೆಲುವಾಗದೇ ಇದ್ದರೆ ಭಾರತದಲ್ಲಿ ಜಾತ್ಯತೀತತೆ ಇಲ್ಲವಾಗುತ್ತದೆ. ಹಾಗೆ ನೋಡಿದರೆ ಟಿಎಂಸಿಗೆ ಮತ ಹಾಕೋದಕ್ಕಿಂತಾ ಬಿಜೆಪಿಗೆ ಹಾಕೋದು ಉತ್ತಮ. ಹೀಗಾಗಿ, ಈ ಬಾರಿ ಬಿಜೆಪಿ ಅಥವಾ ಟಿಎಂಸಿಗೆ ಮತ ಹಾಕಬೇಡಿ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ. ಅವರು ಎಂದೆಂದಿಗೂ ನಿಮ್ಮ ಜೊತೆ ಇರ್ತಾರೆ’ ಎಂದು ಚೌಧರಿ ಹೇಳಿದ್ದಾರೆ. ಆಧಾರ : West Bengal Congress, dated April 30
|