- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ಗುಜರಾತಿನಲ್ಲಿ ನಡೆದ...
ಗುಜರಾತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಖಾಲಿ ಖುರ್ಚಿಗಳ ಸ್ವಾಗತ ಎಂಬುದು ಸುಳ್ಳು
‘ಇದು ಗುಜರಾತ್ ಮಾದರಿ. ಲಕ್ಷಾಂತರ ಜನರು ಪ್ರಧಾನಿ ಮೋದಿ ಅವರನ್ನು ನೋಡಲು ಸಮಾವೇಶಕ್ಕೆ ಬಂದಿದ್ದಾರೆ. ನೋಡಿ ಖುರ್ಚಿಗಳು ಹೇಗೆ ಖಾಲಿ ಆಗಿವೆ. ಆದರೆ, ಪ್ರಧಾನಿ ಮೋದಿ ಅವರು ತಮ್ಮ ಕೆಲಸ ಮುಗಿಸಿ ಹೊರಟಿದ್ದಾರೆ. ಮೋದಿಯವರೇ ಈ ಸಮಾವೇಶಕ್ಕೆ ಬರಲು ಜನರು ಜಾಸ್ತಿ ಹಣ ಕೇಳಿದ್ದರು ಅನ್ಸುತ್ತೆ. ಜಾಮ್‌ನಗರದಲ್ಲಿ ಮೋದಿ ಅವರ ಭಾಷಣ ಕೇಳಲು ಲಕ್ಷಾಂತರ ಜನ ಸೇರಿದ್ದಾರೆ. ನೋಡಿ ಹೇಗೆ ಜಾಮ್ ಆಗಿದೆ’ ಎಂದು ವ್ಯಂಗ್ಯ ಮಾಡುತ್ತ ಖಾಲಿ ಖುರ್ಚಿಗಳ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಹಾಗಿದ್ದರೆ ಪ್ರಧಾನಿ ತವರು ಗುಜರಾತ್‌ನಲ್ಲಿ ಜನರ ಬೆಂಬಲ ಕ್ಷೀಣಿಸುತ್ತಿದ್ದೆಯೇ? ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2024ರ ಮೇ 2 ರಂದು ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ಪ್ರಧಾನಿ ಮೋದಿ ಅವರು ಇತ್ತೀಚೆಗೆ ಗುಜರಾತ್‌ನ ಜಾಮ್ ನಗರದಲ್ಲಿ ಸಮಾವೇಶ ನಡೆಸಿದ್ದ ವಿಡಿಯೋ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.
2024ರ ಮೇ 2 ರಂದು ಅಪ್‌ಲೋಡ್ ಮಾಡಲಾಗಿದ್ದ ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಕೆಂಪು ವಿಶ್ರಿತ ಚಿನ್ನದ ಬಣ್ಣದ ಟರ್ಬಲ್ ಧರಿಸಿದ್ದರು. ಜೊತೆಗೆ ಬೂದು ಬಣ್ಣದ ಜಾಕೆಟ್ ಧರಿಸಿದ್ದರು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮೋದಿ ಅವರು ಕೆಂಪು ಬಣ್ಣದ ಟರ್ಬನ್ ಹಾಗೂ ಆಕಾಶ ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಇನ್ನು ಜಾಮ್‌ನಗರದಲ್ಲಿ ನಡೆದ ಸಮಾವೇಶ ಬೆಳಗಿನ ಹೊತ್ತಿನಲ್ಲಿ ನಡೆದಿತ್ತು. ಆದರೆ, ವೈರಲ್ ವಿಡಿಯೋ ರಾತ್ರಿಯ ಸಮಯದಲ್ಲಿ ಸೆರೆಹಿಡಿಯಲಾಗಿದೆ. ಹೀಗಾಗಿ, ಇದು ಜಾಮ್‌ನಗರದ ಸಮಾವೇಶದ ವಿಡಿಯೋ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಈ ವಿಡಿಯೋ ಗುಜರಾತ್‌ನ ಜಾಮ್ ನಗರದ್ದಲ್ಲ, ಬದಲಿಗೆ ಮಹಾರಾಷ್ಟ್ರದ ಪುಣೆ ನಗರದ್ದು ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ತಂಡ ವರದಿಯನ್ನು ಪ್ರಕಟಿಸಿದೆ.
ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವು ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ನಡೆಸಿದಾಗ ಏಪ್ರಿಲ್ 30 ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ವೊಂದು ಲಭ್ಯವಾಗಿದೆ. ಈ ಪೋಸ್ಟ್‌ನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಮಾವೇಶ ಎಂದು ವಿವರಿಸಲಾಗಿತ್ತು.
ಏಪ್ರಿಲ್ 29 ರಂದು ಪ್ರಧಾನಿ ಮೋದಿ ಅವರ ಪರಿಶೀಲಿಸಿದ ಯೂಟ್ಯೂಬ್ ಖಾತೆಯಲ್ಲಿಯೂ ಈ ವಿಡಿಯೋ ಪ್ರಕಟಿಸಲಾಗಿತ್ತು. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ವೈರಲ್ ವಿಡಿಯೋದಲ್ಲಿ ಇರುವಂತೆಯೇ ಕೆಂಪು ಬಣ್ಣದ ಟರ್ಬನ್ ಹಾಗೂ ಆಕಾಶ ನೀಲಿ ಬಣ್ಣದ ಜಾಕೆಟ್ ಧರಿಸಿದ್ದಾರೆ.
ಪ್ರಧಾನಿ ಮೋದಿ ಅವರ ಪರಿಶೀಲಿಸಿದ ಯೂಟ್ಯೂಬ್ ಖಾತೆಯಲ್ಲಿ ಪ್ರಕಟಿಸಿರುವ ವಿಡಿಯೋ ಹಾಗೂ ಇದೀಗ ವೈರಲ್ ಆಗಿರುವ ವಿಡಿಯೋವನ್ನು ಹೋಲಿಕೆ ಮಾಡಿದಾಗ ಎರಡೂ ಕೂಡಾ ಒಂದೇ ಅನ್ನೋದು ಖಚಿತವಾಗುತ್ತದೆ. ಜೊತೆಗೆ ಎರಡೂ ವಿಡಿಯೋಗಳಲ್ಲಿ ಕಾಣ ಸಿಗುವ ಟೆಂಟ್‌ಗಳು, ಎಲ್‌ಇಡಿ ಪ್ರೊಜೆಕ್ಟರ್ ಸ್ಟ್ರೀನ್‌ಗಳು ಎಲ್ಲವೂ ಹೋಲಿಕೆ ಆಗುತ್ತವೆ.
ಈ ಕುರಿತಾಗಿ ಮಹಾರಾಷ್ಟ್ರದ ಕರ್ಜಾತ್ – ಜಮ್‌ಖೇಡ್ ಕ್ಷೇತ್ರದ ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಅವರು ತಮ್ಮ ಪರಿಶೀಲಿಸಿದ ಎಕ್ಸ್ ಖಾತೆಯಲ್ಲಿಯಲ್ಲಿ ಇದೇ ಕಾರ್ಯಕ್ರಮದ ಮತ್ತೊಂದು ವಿಡಿಯೋ ಶೇರ್ ಮಾಡಿದ್ದು. ಇದರಲ್ಲಿಯೂ ಸಮಾವೇಶದ ಸ್ಥಳದಲ್ಲಿ ಖಾಲಿ ಖುರ್ಚಿಗಳು ಕಾಣುತ್ತವೆ. ಜೊತೆಯಲ್ಲೇ ಪ್ರಧಾನಿ ಮೋದಿ ಅವರು ಮಾತನಾಡುವಾಗ ಜನರು ಎದ್ದು ಹೋಗುವ ದೃಶ್ಯಗಳಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದ ಮೋದಿ ಕಾರ್ಯಕ್ರಮದ ವಿಡಿಯೋ ದೃಶ್ಯಾವಳಿಗಳನ್ನು ಗುಜರಾತ್‌ನ ಜಾಮ್ ನಗರ ಕಾರ್ಯಕ್ರಮದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.