- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ೨೦೨೪ರ ಲೋಕಸಭಾ ಚುನಾವಣೆಯ...
೨೦೨೪ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮೇಜಿನ ಮೇಲೆ ಕಾಂಗ್ರೆಸ್ ಏಜೆಂಟ್ ಮಲಗಿರುವುದನ್ನು ತೋರಿಸಲು ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
ಸಾರಾಂಶ:
ಕಾಂಗ್ರೆಸ್ ಸ್ವಯಂಸೇವಕರೊಬ್ಬರು ಪಕ್ಷದ ಖಾಲಿ ಮೇಜಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಘಟನೆ, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ್ದು ಎಂದು ಹೇಳಿಕೊಳ್ಳಲಾಗಿದೆ. ಆದರೆ, ಈ ಚಿತ್ರವು ೨೦೧೯ ರಿಂದ ಇಂಟರ್ನೆಟ್ ನಲ್ಲಿ ಅಸ್ತಿತ್ವದಲ್ಲಿದೆ ಮತ್ತು ಪ್ರಸ್ತುತ ನಡೆಯುತ್ತಿರುವ ೨೦೨೪ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿಲ್ಲ. ಆದ್ದರಿಂದ ಈ ಹೇಳಿಕೆ ತಪ್ಪು.
ಹೇಳಿಕೆ:
ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ಮಧ್ಯೆ, ಏಪ್ರಿಲ್ ೨೦, ೨೦೨೪ ರಂದು, ಎಕ್ಸ್ (ಹಿಂದೆ ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಹಲವಾರು ಪೋಷ್ಟ್ ಗಳು ಕಾಂಗ್ರೆಸ್ ಧ್ವಜವನ್ನು ಹೊಂದಿರುವ ಖಾಲಿ ಮೇಜನ್ನು ತೋರಿಸುವ ಚಿತ್ರವನ್ನು ಹಂಚಿಕೊಂಡಿವೆ. ಆ ಚಿತ್ರದಲ್ಲಿ ಒಬ್ಬ ವ್ಯಕ್ತಿ ಮೇಜಿನ ಮೇಲೆ ಮುಖ ಕೊಟ್ಟು ಮಲಗಿರುವುದನ್ನು ಕಾಣಬಹುದು. ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಚುನಾವಣಾ ಸಮಯದಲ್ಲಿ ಮತದಾರರಿಗೆ ಸಹಾಯ ಮಾಡಲು ಮತಗಟ್ಟೆಗಳ ಬಳಿ ಇಂತಹ ಮೇಜು ಗಳನ್ನು ಸ್ಥಾಪಿಸುತ್ತವೆ. ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹಳ ಕಡಿಮೆ ಮತದಾನವಾಗಿದೆ ಎಂದು ಟೀಕಿಸುವ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ಮತದಾನ ಚೀಟಿಗಳನ್ನು ಸಂಗ್ರಹಿಸಲು ಸಾಕಷ್ಟು ಮತದಾರರಿಲ್ಲದ ಕಾರಣ ಹತಾಶೆಗೊಂಡ ಕಾಂಗ್ರೆಸ್ ಪೋಲಿಂಗ್ ಏಜೆಂಟ್ ಅನ್ನು ಚಿತ್ರ ಸೆರೆಹಿಡಿದಿದೆ ಎಂದು ಹೇಳಿಕೊಳ್ಳಲಾಗಿದೆ.
ಎಕ್ಸ್ ನಲ್ಲಿ ಈ ಚಿತ್ರದೊಂದಿಗೆ ಹಂಚಿಕೊಳ್ಳಲಾದ ಶೀರ್ಷಿಕೆಗಳ ಕೆಲವು ಉದಾಹರಣೆಗಳು ಇಲ್ಲಿವೆ: ಒಂದು ಪೋಷ್ಟ್ ಹೇಳುತ್ತದೆ, "ಚುನಾವಣೆಗಳ ಮೊದಲ ಹಂತದಲ್ಲಿ, ಕಾಂಗ್ರೆಸ್ ನಿದ್ದೆಗೆ ಜಾರಿದೆ ಮತ್ತು ಮುಂದಿನ ಹಂತದಲ್ಲಿ ಸಂಪೂರ್ಣವಾಗಿ ಮಲಗುತ್ತದೆ." ಇನ್ನೊಂದು ಪೋಷ್ಟ್ “ಮೊದಲ ಹಂತದ “ಟ್ರೆಂಡ್.” ತುಂಬಾ ಜನಸಂದಣಿ ಇತ್ತು, ಅಸಹಾಯಕ ಮತಗಟ್ಟೆ ಏಜೆಂಟ್ ಸುಸ್ತಾಗಿ ಮಲಗಿದನು" ಎಂದು ಹೇಳಿದೆ.
೨೦೨೪ ರ ಚುನಾವಣೆಯ ಮೊದಲ ಹಂತದಲ್ಲಿ ಮತಗಟ್ಟೆಯಲ್ಲಿ ಒಬ್ಬ ಕಾಂಗ್ರೆಸ್ ಏಜೆಂಟ್ ಚಿತ್ರ ತೋರಿಸುತ್ತದೆಯೆಂದು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್ ಗಳು.
ಪುರಾವೆ:
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಏಪ್ರಿಲ್ ೧೧, ೨೦೧೯ ರಂದು ಒಬ್ಬ ಎಕ್ಸ್ ಬಳಕೆದಾರನಿಂದ ಅಪ್‌ಲೋಡ್ ಮಾಡಲಾದ ಇದೇ ರೀತಿಯ ಫೋಟೋವನ್ನು ನಾವು ಕಂಡುಕೊಂಡೆವು. ಈ ಪ್ರಾಯಶಃ ಮೂಲ ಪೋಷ್ಟ್ ನಲ್ಲಿ ಇತ್ತೀಚಿನ ವೈರಲ್ ಫೋಟೋವನ್ನು ಹಂಚಿಕೊಂಡಿರುವುದನ್ನು ಗಮನಿಸಿ ನೋಡಿದರೆ ಸ್ಕೂಟರ್‌ನ ನಂಬರ್ ಪ್ಲೇಟ್ ಅನ್ನು ಕ್ರಾಪ್ ಮಾದಿರುವುದು ಗೋಚರವಾಗುತ್ತದೆ. ಈ ನಂಬರ್ ಪ್ಲೇಟ್ "ಕೆ ಎ" ಸರಣಿಯನ್ನು ಅನುಸರಿಸುತ್ತದೆ; ಇದು ಕರ್ನಾಟಕದಲ್ಲಿ ನೋಂದಣಿಯಾಗಿದೆ ಎಂದು ಸೂಚಿಸುತ್ತದೆ. ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಾರ ಕೆ ಎ ೨೦ ಕೋಡ್ ಸಂಖ್ಯೆಯು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿ ಓ) ಗೆ ಸೇರಿದೆ.
ವಾಹನ ನೋಂದಣಿ ಫಲಕವನ್ನು ತೋರಿಸುವ ಏಪ್ರಿಲ್ ೨೦೧೯ ರಲ್ಲಿ ಹಂಚಿಕೊಂಡಿರುವ ವೈರಲ್ ಚಿತ್ರವನ್ನು ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಫೇಸ್‌ಬುಕ್ ಬಳಕೆದಾರರೊಬ್ಬರು ಇದೇ ಚಿತ್ರವನ್ನು ಏಪ್ರಿಲ್ ೧೧, ೨೦೧೯ ರಂದು "ಇಂದು ಗಾಂಧಿನಗರ ವಿಭಾಗದಲ್ಲಿ ಎಲ್ಲೋ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋದ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ನಾವು ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಆದರೆ, ಮೇಲೆ ತೋರಿಸಿರುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ೨೦೨೪ ರ ಲೋಕಸಭೆ ಚುನಾವಣೆಗಿಂತ ಹಿಂದಿನವು.
ತೀರ್ಪು:
ಈ ಹೇಳಿಕೆಯ ವಿಶ್ಲೇಷಣೆಯು ಇತ್ತೀಚೆಗೆ ಹಂಚಿಕೊಂಡಿರುವ ಕಾಂಗ್ರೆಸ್ ನ ಖಾಲಿ ಮೇಜಿನ ಚಿತ್ರವು ಕನಿಷ್ಠ ೨೦೧೯ ರಿಂದ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಇದು ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಬಹಿರಂಗಪಡಿಸಿದೆ. ಆದ್ದರಿಂದ, ಈ ಹೇಳಿಕೆಯನ್ನು ತಪ್ಪು ಎಂದು ವರ್ಗೀಕರಿಸಿದ್ದೇವೆ.