ಎಡಿಟ್ ಮಾಡಿದ ವೀಡಿಯೋವನ್ನು ಕಾಂಗ್ರೆಸ್‌ಗೆ ಮತ ಹಾಕುವಂತೆ ಪ್ರಧಾನಿ ಮೋದಿ ಜನರಲ್ಲಿ ಕೇಳಿಕೊಂಡಿದ್ದಾರೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಕಾಂಗ್ರೆಸ್‌ಗೆ ಮತ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡುವಂತೆ ಕಾಣುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಜೂನ್ ೨೦೨೩ ರಲ್ಲಿ ಹಂಚಿಕ್ಕೊಳ್ಳಲಾದ ಮೂಲ ವೀಡಿಯೋ, ಮಧ್ಯಪ್ರದೇಶದ ಸಾರ್ವಜನಿಕ ಸಭೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕಲು ಮೋದಿ ಜನರನ್ನು ಪ್ರೋತ್ಸಾಹಿಸುವುದನ್ನು ತೋರಿಸುತ್ತದೆ. ಆದ್ದರಿಂದ ಈ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋವು ಫೇಕ್ ಆಗಿದೆ.
ಹೇಳಿಕೆ:
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿನ ಪೋಷ್ಟ್ ಗಳು, ಮೋದಿ ಹಸಿರು ಬ್ಯಾಕ್ಗ್ರೌಂಡ್ ಮುಂದೆ ವೇದಿಕೆಯ ಹಿಂದೆ ನಿಂತಿರುವ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿವೆ. ಅದರಲ್ಲಿ “ನಿಮ್ಮ ಕುಟುಂಬದಲ್ಲಿನ ಮಕ್ಕಳ ಕಲ್ಯಾಣ ಆಗಬೇಕಾದರೆ, ಕಾಂಗ್ರೆಸ್ ಗೆ ಮತ ಹಾಕಿ” (ಅನುವಾಡಿಸಲಾಗಿದೆ) ಎಂದು ಹೇಳಿ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಈ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.
ಕಾಂಗ್ರೆಸ್‌ಗೆ ಮತ ನೀಡುವಂತೆ ಮೋದಿ ಕೇಳುತ್ತಿರುವ ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದಲ್ಲಿ ಮೋದಿಯವರ ಹೇಳಿಕೆಯನ್ನು ಆಧರಿಸಿ, ನಾವು “ನಿಮ್ಮ ಮಕ್ಕಳಿಗಾಗಿ ನೀವು ಕಲ್ಯಾಣವನ್ನು ಬಯಸಿದರೆ...” ಎಂದು ಹಿಂದಿಯಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಇದು ನಮ್ಮನ್ನು ಜೂನ್ ೨೭, ೨೦೨೩ ರಂದು ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೋಗೆ ಕರೆದೊಯ್ಯಿತು. ಆ ವೀಡಿಯೋದಲ್ಲಿ, ಮತದಾರರು ತಮ್ಮ ಮಕ್ಕಳ ಯೋಗಕ್ಷೇಮವನ್ನು ಬಯಸಿದರೆ ಬಿಜೆಪಿಯನ್ನು ಬೆಂಬಲಿಸುವಂತೆ ಮೋದಿ ಪ್ರೋತ್ಸಾಹಿಸಿದ್ದಾರೆ. ವೀಡಿಯೋದ ಶೀರ್ಷಿಕೆಯು "ನಿಮ್ಮ ಮಕ್ಕಳ ಯೋಗಕ್ಷೇಮವನ್ನು ನೀವು ಬಯಸಿದರೆ, ಬಿಜೆಪಿಗೆ ಮತ ನೀಡಿ" (ಅನುವಾದಿಸಲಾಗಿದೆ) ಎಂದು ಹೇಳುತ್ತದೆ. ಅದೇ ದಿನಾಂಕದಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ರ‍್ಯಾಲಿಯನ್ನು ವೀಡಿಯೋ ತೋರಿಸುತ್ತದೆ.
ಜೂನ್ ೨೭, ೨೦೨೩ ರಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾದ ಭೋಪಾಲ್‌ನಲ್ಲಿ ನಡೆದ ಮೋದಿಯವರ ಸಾರ್ವಜನಿಕ ಸಭೆಯ ವೀಡಿಯೋದ ಸ್ಕ್ರೀನ್‌ಶಾಟ್.
ಯೂಟ್ಯೂಬ್ ವೀಡಿಯೋದಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ಉಲ್ಲೇಖಿಸಿದ್ದಾರೆ. ಅವರು ಅಧಿಕಾರಕ್ಕೆ ಏರುವುದು ಹೇಗೆ ಸ್ವಜನಪಕ್ಷಪಾತದ ಮುಂದುವರಿಕೆಗೆ ಕಾರಣವಾಗುತ್ತದೆ ಎಂಬುದನ್ನು ಅವರು ಚರ್ಚಿಸುತ್ತಾರೆ.
ತಮ್ಮ ಚುನಾಯಿತ ಪ್ರತಿನಿಧಿಗಳು ಬಡ ಮಕ್ಕಳ ಕಲ್ಯಾಣವನ್ನು ಹೇಗೆ ಖಾತ್ರಿಪಡಿಸಿದರು ಎಂಬುದಕ್ಕೆ ದೇಶದ ನಾಗರಿಕರಿಗೆ ಉತ್ತರಗಳು ಬೇಕಾಗುತ್ತವೆ ಎಂದು ಮೋದಿ ಒತ್ತಿ ಹೇಳಿದರು. ಅದನ್ನು ಹೀಗೆ ಹೇಳಿದ್ದಾರೆ, “ಕುಟುಂಬದ ಹೆಸರಿನಲ್ಲಿ, ಅವರು (ವಿರೋಧ ಪಕ್ಷಗಳು) ತಮ್ಮ ಕುಟುಂಬದ ಕಲ್ಯಾಣವನ್ನು ಖಾತ್ರಿಪಡಿಸಿಕೊಂಡರು. ಈಗ, ನೀವು ಯಾರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬೇಕು. ನೀವು ಗಾಂಧಿ ಕುಟುಂಬದ ಮಕ್ಕಳ ಕಲ್ಯಾಣವನ್ನು ನೋಡಲು ಬಯಸಿದರೆ, ಕಾಂಗ್ರೆಸ್‌ಗೆ ಮತ ನೀಡಿ" (ಅನುವಾದಿಸಲಾಗಿದೆ).
ನಂತರ ಮತದಾರರು ತಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಹಿತದೃಷ್ಟಿಯಿಂದ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಆದರೆ, ವೈರಲ್ ವೀಡಿಯೋದಲ್ಲಿ ಕಂಡುಬರುವ ತಪ್ಪು ಹೇಳಿಕೆಯನ್ನು ರಚಿಸಲು ಮೂಲ ಭಾಷಣದ ಈ ಭಾಗವನ್ನು ವಿಭಜಿಸಲಾಗಿದೆ.
ತೀರ್ಪು:
ವೈರಲ್ ವೀಡಿಯೊದ ವಿಶ್ಲೇಷಣೆಯು ಬಿಜೆಪಿಗೆ ಮತ ನೀಡುವಂತೆ ಮೋದಿ ಕೇಳುವುದನ್ನು ತೋರಿಸುವ ೨೦೨೩ ರ ಮೂಲ ವೀಡಿಯೋವನ್ನು ಎಡಿಟ್ ಮಾಡಿ ರಚಿಸಲಾಗಿದೆ ಎಂದು ಬಹಿರಂಗಪಡಿಸುತ್ತದೆ. ಕಾಂಗ್ರೆಸ್ ಅನ್ನು ಆಯ್ಕೆ ಮಾಡುವಂತೆ ಅವರು ಮತದಾರರನ್ನು ಕೇಳಿಕೊಂಡಂತೆ ಎಡಿಟ್ ಮಾಡಿದ ವೀಡಿಯೋ ತೋರಿಸುತ್ತದೆ. ಆದ್ದರಿಂದ, ನಾವು ಈ ವೀಡಿಯೋ ಮತ್ತು ಹೇಳಿಕೆಯನ್ನು ನಕಲಿ ಎಂದು ವರ್ಗೀಕರಿಸಿದ್ದೇವೆ.