- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ಕರ್ನಾಟಕದ ಕಾಂಗ್ರೆಸ್...
ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಮೋದಿ ಪ್ರತಿಕೃತಿ ಸುಡಲು ಹೋಗಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದು ಸುಳ್ಳು
ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಹೋದಾಗ, ಐದು ಜನ ಕಾಂಗ್ರೆಸ್ ಕಾರ್ಯಕರ್ತರ (ಲುಂಗಿ) ಪಂಚೆಗೆ ಬೆಂಕಿ ತಗುಲಿ ಎಲ್ಲರೂ ಓಡಿ ಹೋದ ಘಟನೆ ನಡೆದಿದೆ. ಈಗ ಮೋದಿ ಪ್ರತಿಬಿಂಬ ಕೂಡ ವಿರೋಧಿಗಳಿಗೆ ಪಾಠ ಕಲಿಸಲು ಪಾರಂಭಿಸಿದೆ. ಇದೇ ಮೋದಿ ಹೆಸರಿಗಿರುವ ಶಕ್ತಿ ಎಂದು ಪ್ರತಿಪಾದಿಸಿ ಪೊಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
29 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಪ್ರತಿಭಟನಾಕಾರರ ಗುಂಪು ನೀಲಿ ಬಣ್ಣದ ಧ್ವಜಗಳನ್ನು ಹಿಡಿದು, ಘೋಷಣೆ ಕೂಗುತ್ತಾ ಬಂದು ವೃತ್ತವೊಂದರ ಬಳಿ ಪ್ರತಿಕೃತಿಯನ್ನು ದಹಿಸಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ, ಪಂಚೆ ಮತ್ತು ಬಟ್ಟೆಗೆ ಬೆಂಕಿ ತಗುಲಿ ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಆದರೆ ಕರ್ನಾಟಕದಲ್ಲಿ ಇಂತಹ ಘಟನೆ ನಡೆದ ಬಗ್ಗೆ ಯಾವುದೇ ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಈ ಘಟನೆಯ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 2012ರಲ್ಲಿ ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ, ಮಹಾತ್ಮ ಗಾಂಧಿ (ಎಂಜಿ) ವಿಶ್ವವಿದ್ಯಾನಿಲಯದ ಉಪಕುಲಪತಿ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಕೇರಳಾ ಸ್ಟೂಡೆಂಟ್ಸ್ ಯೂನಿಯನ್‌ನ ಕಾರ್ಯಕರ್ತರು ಉಪಕುಲಪತಿಗಳ ಪ್ರತಿಕೃತಿ ದಹಿಸುವಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಏಷ್ಯಾನೆಟ್ ನ್ಯೂಸ್ ವರದಿ ಪ್ರಕಾರ, ಕೆಎಸ್‌ಯು ಕಾರ್ಯಕರ್ತರು ಎಂಜಿ ವಿಶ್ವವಿದ್ಯಾಲಯದ ಉಪಕುಲಪತಿಗಳ ಪ್ರತಿಕೃತಿ ದಹಿಸುವಾಗ ಈ ಘಟನೆ ಸಂಭವಿಸಿದೆ. ಕೆಎಸ್‌ಯು ಪತ್ತನಂತಿಟ್ಟ ಜಿಲ್ಲಾ ಸಮಿತಿಯಿಂದ ನಡೆದ ಪ್ರತಿಭಟನೆ ವೇಳೆ ಸೆಂಟ್ರಲ್ ಜಂಕ್ಷನ್‌ನಲ್ಲಿ ಪ್ರತಿಕೃತಿ ದಹಿಸುವಾಗ ಕೆಎಸ್‌ಯು ಸದಸ್ಯರ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಕೆಎಸ್‌ಯು ಸದಸ್ಯರಾದ ಶ್ರೀನಾಥ್ ಮತ್ತು ವಿಷ್ಣು ಪನ್ನಕಲ್ ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದೆ.
ಮಹಾತ್ಮ ಗಾಂಧಿ ವಿವಿ ಉಪಕುಲಪತಿ ವಿರುದ್ದ ಭಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ಕೇರಳ ಸ್ಟೂಡೆಂಟ್ಸ್ ಯೂನಿಯನ್‌ನ ಕಾರ್ಯಕರ್ತರು ಉಪಕುಲಪತಿಯನ್ನು ವಜಾ ಮಾಡಬೇಕಿಂದು ಪ್ರತಿಭಟಿಸಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದಾಗ 5ಜನ ಕಾರ್ಯಕರ್ತರಿಗೆ ಬೆಂಕಿ ತಗುಲಿದ 12 ವರ್ಷದ ಹಿಂದಿನ ಘಟನೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಸಂಭವಿಸಿದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 12 ವರ್ಷದ ಹಿಂದೆ ಕೇರಳದಲ್ಲಿ ನಡೆದ ಪ್ರತಿಭಟನೆಯ ವಿಡಿಯೋವನ್ನು ಪ್ರಸ್ತುತ ಕರ್ನಾಟಕದ್ದು ಎಂದು ಎಕ್ಸ್ ಖಾತೆಯ ಬಳಕೆದಾರರು ತಪ್ಪಾಗಿ ಹಂಚಿಕೊಂಡಿದ್ದಾರೆ. 12 ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಧಾನಿಯೇ ಆಗಿರಲಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಸುಳ್ಳು : ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಹೋದಾಗ, ಐದು ಜನ ಕಾಂಗ್ರೆಸ್ ಕಾರ್ಯಕರ್ತರ (ಲುಂಗಿ) ಪಂಚೆಗೆ ಬೆಂಕಿ ತಗುಲಿ ಎಲ್ಲರೂ ಓಡಿ ಹೋದ ಘಟನೆ ನಡೆದಿದೆ.
ಸತ್ಯ : ಮಹಾತ್ಮ ಗಾಂಧಿ ವಿವಿ ಉಪಕುಲಪತಿ ವಿರುದ್ದ ಭಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ಕೇರಳ ಸ್ಟೂಡೆಂಟ್ಸ್ ಯೂನಿಯನ್‌ನ ಕಾರ್ಯಕರ್ತರು ಉಪಕುಲಪತಿಯನ್ನು ವಜಾ ಮಾಡಬೇಕಿಂದು ಪ್ರತಿಭಟಿಸಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದಾಗ 5ಜನ ಕಾರ್ಯಕರ್ತರಿಗೆ ಬೆಂಕಿ ತಗುಲಿದ 12 ವರ್ಷದ ಹಿಂದಿನ ಘಟನೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಸಂಭವಿಸಿದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಫೋಸ್ಟ್ : ಎಕ್ಸ್ ಪೋಸ್ಟ್ ಮತ್ತು ವಾಟ್ಸಾಪ್
ಆಧಾರ : Times of India |