- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ಕಾಂಗ್ರೆಸ್ ಕಾರ್ಯಕರ್ತರು...
ಕಾಂಗ್ರೆಸ್ ಕಾರ್ಯಕರ್ತರು ರಾಯಚೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬುದು ಸುಳ್ಳು
“ಅಂತೂ ಇಂತೂ ರಾಯಚೂರಿಗೂ ಬಂತು ಪಾಕಿಸ್ತಾನ್ ಜಿಂದಾಬಾದ್. ಇವತ್ತು ರಾಯಚೂರು ನಾಳೆ ನಮ್ಮ ಊರು.” ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಈ ವಿಡಿಯೋವನ್ನು ಅನೇಕರು ತಮ್ಮ ಸೊಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿರುವುದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಮಾಡುವಾಗ, ಮಾಗಡಿ ಶಾಸಕ ಬಾಲಕೃಷ್ಣ ಕಿ ಜೈ ಎಂದಿದ್ದನ್ನು ಪಾಕಿಸ್ತಾನ್ ಕಿ ಜೈ ಎಂದು ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿತ್ತು. ಈಗ ರಾಯಚೂರಿನಲ್ಲಿ ಪಾಕ್ ಪರ ಘೋಷಣೆಕೂಗಲಾಗಿದೆ ಎಂದು ಆರೋಪಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ರಾಯಚೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಕುರಿತು ಯಾವುದೇ ಪತ್ರಿಕೆಗಳು ಅಥವಾ ಸುದ್ದಿ ಮಾಧ್ಯಮಗಳು ವರದಿ ಮಾಡಿಲ್ಲ. ಇಂತಹ ದೇಶದ್ರೋಹಿ ಘೋಷಣೆ ಕೇಳಿ ಬಂದಿದ್ದರೆ ರಾಜ್ಯದ ಇತರೆ ಮಾಧ್ಯಮಗಳು ವರದಿ ಮಾಡಿರುತ್ತಿದ್ದವು, ಯಾವ ಮಾಧ್ಯಮಗಳು ಸಹ ಇಂತಹ ಪ್ರಕರಣ ನಡೆದಿರುವುದನ್ನು ವರದಿ ಮಾಡಿಲ್ಲ.
3೦ ಏಪ್ರಿಲ್ 2024ರಂದು ಕಾಂಗ್ರೆಸ್ ಮುಖಂಡ ರವಿ ಬೋಸ್ ರಾಜ್ ಅವರು ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ್ ನಾಯಕ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಬೆಂಬಲಿಗರು ರವಿ ಸಾಬ್ ಜಿಂದಾಬಾದ್ ಎಂದು ಕೂಗಿದ್ದಾರೆ. ಆ ಆಡಿಯೋವನ್ನು ನಿಧಾನ ಮಾಡಿ ಕೇಳಿದರೆ ಇದು ಸ್ಪಷ್ಟವಾಗಿ ತಿಳಿಯುತ್ತದೆ. ಹಾಗಾಗಿ ರವಿ ಸಾಬ್ ಜಿಂದಾಬಾದ್ ಎಂದು ಕೂಗಿರುವುದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.