"ಗೋ ಬ್ಯಾಕ್ ಮೋದಿ" ಪ್ರತಿಭಟನೆಯ ಹಳೆಯ ಎಡಿಟ್ ಮಾಡಿದ ದೃಶ್ಯಗಳು ಪ್ರಧಾನಿ ಮೋದಿಯವರ ಇತ್ತೀಚಿನ ಕನ್ಯಾಕುಮಾರಿ ಭೇಟಿಗೆ ಸಂಬಂಧಿಸಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಕನ್ಯಾಕುಮಾರಿ ಭೇಟಿಯ ವಿರುದ್ಧ ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆಗಳನ್ನು ತೋರಿಸಲು ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ಮೂರು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇದರಲ್ಲಿನ ಒಂದು ದೃಶ್ಯವು ಎಡಿಟ್ ಮಾಡಲಾದ ಚಿತ್ರವನ್ನು ತೋರಿಸುತ್ತದೆ, ಮತ್ತು ಇನ್ನೊಂದು ಏಪ್ರಿಲ್ ೭, ೨೦೨೩ ರ ಹಳೆಯ ಘಟನೆಯದ್ದು; ಆದ್ದರಿಂದ, ದೃಶ್ಯಗಳು ಇತ್ತೀಚಿನವು ಎಂದು ಹೇಳಿಕೊಂಡು ಆನ್‌ಲೈನ್‌ನಲ್ಲಿ ಪ್ರಸಾರವಾಗಿರುವ ಹೇಳಿಕೆಗಳು ತಪ್ಪು.
ಹೇಳಿಕೆ:
ಮೇ ೩೧, ೨೦೨೪ ರಂದು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ತಮ್ಮ ೪೫ ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಪ್ರಧಾನಿಯವರ ಇತ್ತೀಚಿನ ಭೇಟಿಯ ವಿರುದ್ಧ ತಮಿಳುನಾಡಿನ ಜನರು ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸಲು ಎಕ್ಸ್ ನಲ್ಲಿನ ಬಳಕೆದಾರರು ಹಲವಾರು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಪರಿಶೀಲಿಸಿದ ಬಳಕೆದಾರರೊಬ್ಬರು ಮೇ ೩೦, ೨೦೨೪ ರಂದು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಹೀಗಿದೆ, "ಪ್ರಧಾನಿ ಮೋದಿಯವರ ೨ ದಿನಗಳ ಕನ್ಯಾಕುಮಾರಿ ಭೇಟಿಗೆ # TamilNadu ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ. ಅವರು #SwamiVivekananda ಅವರಿಗೆ ಶ್ರದ್ಧಾಂಜಲಿಯಾಗಿ ನಿರ್ಮಿಸಲಾದ ಸ್ಮಾರಕವಾದ #RockMemorial ನಲ್ಲಿ ಧ್ಯಾನ ಮಾಡಲಿದ್ದಾರೆ. #Kanyakumari. #GoBackModi (ಅನುವಾದಿಸಲಾಗಿದೆ)." ಈ ಪೋಷ್ಟ್ ೩೯ ಸಾವಿರ ವೀಕ್ಷಣೆಗಳು, ೪೮೦ ಇಷ್ಟಗಳು ಮತ್ತು ೨೮೭ ಮರುಪೋಷ್ಟ್ ಗಳನ್ನು ಗಳಿಸಿದೆ.
ಮೇ ೩೦, ೨೦೨೪ ರಂದು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ ದೃಶ್ಯಗಳ ಸ್ಕ್ರೀನ್‌ಶಾಟ್.
ಮತ್ತೊಬ್ಬ ಎಕ್ಸ್ ಬಳಕೆದಾರರು ಮೇ ೩೦, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಅದಲ್ಲದೆ, ದೃಶ್ಯಗಳನ್ನು ಹಂಚಿಕೊಳ್ಳಲು #GoBackModi ಹ್ಯಾಶ್‌ಟ್ಯಾಗ್ ಅನ್ನು ಬಳಸಿರುವುದಾಗಿ ನಾವು ಗಮನಿಸಿದ್ದೇವೆ.
ಪುರಾವೆ:
ವೈರಲ್ ಪೋಷ್ಟ್ ಮೂರು ದೃಶ್ಯಗಳನ್ನು ಒಳಗೊಂಡಿದೆ: ಕನ್ಯಾಕುಮಾರಿ ರೈಲ್ವೆ ನಿಲ್ದಾಣದ ಬೋರ್ಡ್‌ನಲ್ಲಿ ಬರೆಯಲಾದ “ಗೋ ಬ್ಯಾಕ್ ಮೋದಿ” ಎಂಬ ಬರಹ, ಕಪ್ಪು ಬಲೂನ್‌ಗಳನ್ನು ಹಿಡಿದಿರುವ ವ್ಯಕ್ತಿಯ ವೀಡಿಯೋ ಮತ್ತು #GoBackModi ಎಂದು ಬರೆದಿರುವ ಪೋಸ್ಟರ್‌ಗಳು.
"ಗೋ ಬ್ಯಾಕ್ ಮೋದಿ" ಎಂಬ ಬರಹದೊಂದಿಗೆ ಕಾಣಿಸಿಕೊಂಡಿರುವ ಕನ್ಯಾಕುಮಾರಿ ರೈಲ್ವೇ ಸ್ಟೇಷನ್ ಬೋರ್ಡ್‌ನ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಇದು ಚಿತ್ರದ ಎಡಿಟ್ ಮಾಡದ ಆವೃತ್ತಿಯನ್ನು ಹೊಂದಿದೆ ಫೆಬ್ರವರಿ ೧೩, ೨೦೧೬ ರ ವಿಮಿಯೋ ವಿಡಿಯೋದತ್ತ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋದ ಶೀರ್ಷಿಕೆಯು ಹೀಗಿದೆ, "ದಿಬ್ರುಗಢ-ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ಟೈಮ್‌ಲ್ಯಾಪ್ಸ್ (ಅನುವಾದಿಸಲಾಗಿದೆ)."
ವೈರಲ್ ಚಿತ್ರ ಮತ್ತು ವಿಮೆಯೋ ದಲ್ಲಿ ಕಂಡು ಬಂದ ದೃಶ್ಯದ ಚಿತ್ರಗಳ ಮಧ್ಯೆಯ ಹೋಲಿಕೆ.
ಈ ಚಿತ್ರದ ಇದೇ ರೀತಿಯ ಎಡಿಟ್ ಮಾಡಿದ ಆವೃತ್ತಿಯು ೨೦೨೨ ರಲ್ಲಿ ವೈರಲ್ ಆಗಿತ್ತು ಎಂದು ನಾವು ಕಂಡುಕೊಂಡಿದ್ದೇವೆ.
"ಗೋ ಬ್ಯಾಕ್ ಮೋದಿ" ಎಂದು ಬರೆಯಲಾದ ಕಪ್ಪು ಬಲೂನ್‌ಗಳನ್ನು ಬಿಡುಗಡೆ ಮಾಡುವ ವ್ಯಕ್ತಿಯ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಏಪ್ರಿಲ್ ೮, ೨೦೨೩ ರಂದು ಪ್ರಕಟವಾದ ದಿ ನ್ಯೂಸ್ ಮಿನಿಟ್ ವರದಿಗೆ ನಮ್ಮನ್ನು ಕರೆದೊಯ್ಯಿತು. ವರದಿಯ ಪ್ರಕಾರ, ವ್ಯಕ್ತಿ ವೀಡಿಯೋದಲ್ಲಿ ತಮಿಳುನಾಡು ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಂಪಿ ರಂಜನ್ ಕುಮಾರ್ ಎಂದು ಗುರುತಿಸಲಾಗಿದ್ದು, ಪ್ರಧಾನಿಯವರ ಚೆನ್ನೈ ಭೇಟಿಯನ್ನು ವಿರೋಧಿಸಿ ಕಪ್ಪು ಬಲೂನ್‌ಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ಏಪ್ರಿಲ್ ೮, ೨೦೨೩ ರ ದಿ ನ್ಯೂಸ್ ಮಿನಿಟ್ ವರದಿಯ ಸ್ಕ್ರೀನ್‌ಶಾಟ್.
ಆದರೆ, ವೈರಲ್ ಪೋಷ್ಟ್ ನಲ್ಲಿ #GoBackModi ಪೋಸ್ಟರ್‌ಗಳ ವೀಡಿಯೋವಿಗೆ ಸಂಬಂಧಿಸಿದಂತೆ, ಪೋಸ್ಟರ್‌ನ ಚಿತ್ರವನ್ನು ಹೊಂದಿರುವ ಮೇ ೩೦, ೨೦೨೪ ರಿಂದ ಈ ಟಿವಿ ಭಾರತ್ ತಮಿಳು ವರದಿಯನ್ನು ನಾವು ಕಂಡುಕೊಂಡಿದ್ದೇವೆ. "ಡಿಎಂಕೆ ವಕೀಲ ಹೇಮಂತ್ ಅಣ್ಣಾದೊರೈ ಅವರು ತಮಿಳುನಾಡಿಗೆ ಮೋದಿಯವರ ಭೇಟಿಯನ್ನು ಖಂಡಿಸಿ ‘ಗೋ ಬ್ಯಾಕ್ ಮೋದಿ’ ಎಂಬ ಪೋಸ್ಟರ್‌ಗಳನ್ನು ತಯಾರಿಸಿ ಚೆನ್ನೈನ ಪ್ರಮುಖ ಪ್ರದೇಶಗಳಾದ ತಿರುವಲ್ಲಿಕೇಣಿ, ಪೂಕಡೈ ಮತ್ತು ಪರಿಮುನ ಮೊದಲಾದ ಜಾಗಗಳಲ್ಲಿ ಅಂಟಿಸಿದ್ದಾರೆ (ಅನುವಾದಿಸಲಾಗಿದೆ)," ಎಂದು ವರದಿಯು ಹೇಳಿಕೊಂಡಿದೆ. ಹೇಮಂತ್ ಅಣ್ಣಾದೊರೈ ಅವರು ಮೇ ೩೦, ೨೦೨೪ ರಂದು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಪೋಸ್ಟರ್‌ಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
#GoBackModi ಎಂಬ ಹ್ಯಾಶ್‌ಟ್ಯಾಗ್ ಮೊದಲ ಬಾರಿಗೆ ಏಪ್ರಿಲ್ ೧೮, ೨೦೧೮ ರಂದು ರಕ್ಷಣಾ ಪ್ರದರ್ಶನವನ್ನು ಉದ್ಘಾಟಿಸಲು ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಿದಾಗ ಜನಪ್ರಿಯತೆಯನ್ನು ಗಳಿಸಿತು.
ತೀರ್ಪು:
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇತ್ತೀಚೆಗೆ ನಡೆದ #GoBackModi ಪ್ರತಿಭಟನೆಯನ್ನು ತೋರಿಸುವುದಾಗಿ ಹೇಳಿಕೊಳ್ಳುವ ಕೆಲವು ದೃಶ್ಯಗಳು ಹಳೆಯದಾಗಿವೆ ಮತ್ತು ಅವರ ಇತ್ತೀಚಿನ ಭೇಟಿಗೆ ಸಂಬಂಧಿಸಿಲ್ಲ. ಪ್ರಧಾನಿಯವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಕನ್ಯಾಕುಮಾರಿಯಾದ್ಯಂತ ನಡೆದ ಮೋದಿ ವಿರೋಧಿ ಪ್ರತಿಭಟನೆಗಳಿಂದ ಬಂದಿವೆ ಎಂದು ತೋರಿಸಲು ಹಳೆಯ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.