- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ಕ್ರಿಶ್ಚಿಯನ್...
ಕ್ರಿಶ್ಚಿಯನ್ ಅಧಿಕಾರಿಯನ್ನು ಕುಕ್ಕೆ ದೇವಸ್ಥಾನದ ಮುಖ್ಯ ಅಧಿಕಾರಿಯಾಗಿ ಕಾಂಗ್ರೆಸ್ ಸರ್ಕಾರ ನೇಮಿಸಿಲ್ಲ
ಅನ್ಯ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿಪಡಿಸಲು, ಹಿಂದೂ ದೇವಸ್ಥಾನದ ಹಣವನ್ನು ಬಳಕೆ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿದೆ ಎಂದು ಇತ್ತೀಚೆಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನು ಹಂಚಿಕೊಂಡು ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಅಭಿಪ್ರಾಯ ಬರುವಂತೆ ಹಂಚಿಕೊಳ್ಳಲಾಗಿತ್ತು. ಆದರೆ ಅದು ಸುಳ್ಳು ಅಂತಹ ಯಾವುದೇ ನಿರ್ಧರಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲಎಂಬ ಸ್ಪಷ್ಟನೆಯನ್ನು ನೀಡಲಾಗಿತ್ತು. ಈಗ ಅಂತಹದ್ದೆ ಮತ್ತೊಂದು ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತಿದೆ.
“ಕ್ರಿಶ್ಚಿಯನ್ ಅಧಿಕಾರಿಯನ್ನು ಕುಕ್ಕೆ ದೇವಸ್ಥಾನದ ಮುಖ್ಯ ಅಧಿಕಾರಿಯಾಗಿ ಕಾಂಗ್ರೆಸ್ ಸರ್ಕಾರ ನೇಮಿಸಿದೆ. ಏನಿದರ ಹುನ್ನಾರ..?” ಎಂಬ ಹೇಳಿಕೆಯೊಂದಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ದೇವಸ್ಥಾನಕ್ಕೆ ಅಪಚಾರ ಮಾಡಲು ಹೊರಟಿದೆ ಎಂದು ಪ್ರತಿಪಾದಿಸಿ ಪ್ರಸಾರ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಸುಳ್ಳು ಮಾಹಿತಿಯ ಪೋಸ್ಟರ್
ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಎಕ್ಸ್ ಖಾತೆಯ ಪೋಸ್ಟ್‌ವೊಂದು ಲಭ್ಯವಾಗಿದೆ.
ಯೇಸುರಾಜ್ ಎನ್ನುವ ಹೆಸರಿನ ಕಾರಣಕ್ಕೆ ಅನ್ಯ ಧರ್ಮದವರನ್ನು ಹಿಂದುಗಳ ದೇವಸ್ಥಾನಕ್ಕೆ ನೇಮಕ ಮಾಡಿದ್ದಾರೆಂದು ಹಿಂದು ಸಂಘಟನೆಗಳ ನಾಯಕರು ಆಕ್ಷೇಪಿಸಿದ್ದರು. ಅವರ ಧರ್ಮದ ಹಿನ್ನೆಲೆಯ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದರು. ಈ ವಿಚಾರ ಆಕ್ಷೇಪಕ್ಕೆ ಗುರಿಯಾದ ಬೆನ್ನಲ್ಲೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಯೇಸುರಾಜ್ ಅವರ ಹಿನ್ನೆಲೆ, ಗೋತ್ರಗಳ ದಾಖಲೆಯನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
“ಯೇಸುರಾಜ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಬಿಜೆಪಿಯ ಮತ್ತೊಂದು ಸುಳ್ಳು ಸುದ್ದಿ ಹಬ್ಬಿಸುವ ವಾಟ್ಸಪ್ ಫೇಕ್ ಯುನಿವರ್ಸಿಟಿಯ ಆಟವಾಗಿದೆ. ಯೇಸುರಾಜ್ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ದಾಖಲೆಗಳು ಇಲ್ಲಿವೆ ಎಂದು ಅವುಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಇನ್ನೊಂದು ಹಂತದ ಚುನಾವಣೆ ಇರುವುದರಿಂದ ಜರನ್ನು ದಾರಿ ತಪ್ಪಿಸಿ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಇದೆಂದು ಟೀಕಿಸಿದ್ದಾರೆ”
ಮೈಸೂರು ಜಿಲ್ಲೆಯ ಸಿದ್ಧಾರ್ಥ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ನಲ್ಲಿ ಪರಿಶಿಷ್ಟ ಜಾತಿಯೆಂದು ನಮೂದಾಗಿರುವ ದಾಖಲೆ, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕು ಕೃಷ್ಣರಾಜನಗರ ವಾರ್ಡ್ ನಿವಾಸಿಯಾಗಿರುವ ಎಸ್.ಜೆ. ಯೇಸುದಾಸ್ ಅವರಿಗೆ ಕಂದಾಯ ಇಲಾಖೆ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಚಿವ ರಾಮಲಿಂಗಾರೆಡ್ಡಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಹಿಂದು, ಪರಿಶಿಷ್ಟ ಜಾತಿಯೆಂದು ನಮೂದಾಗಿರುವುದನ್ನು ತೋರಿಸಲಾಗಿದೆ. ಆಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ ಎಂಬುದನ್ನು ಸಚಿವರು ತೋರಿಸಿದ್ದಾರೆ.
ಎರಡು ದಿನಗಳ ಹಿಂದೆ ಎಸ್.ಜೆ ಯೇಸುರಾಜ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪ್ರಭಾರ ಎಇಓ ಆಗಿದ್ದ ಪರಮೇಶ್ ಅಧಿಕಾರ ಹಸ್ತಾಂತರ ಮಾಡಿದ್ದರೆ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರು ಸ್ವಾಗತಿಸಿದ್ದರು. ಇದರ ಬಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿ ತುಣುಕನ್ನು ಮುಂದಿಟ್ಟು ಹಿಂದು ಸಂಘಟನೆಗಳು ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದು ಭಾರೀ ವೈರಲ್ ಆಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಓ ಏಸುರಾಜ್ ಅವರ ಹೆಸರನ್ನು ಕ್ರಿಶ್ಚಿಯನ್ ಧರ್ಮದವರೆಂದು ತಿಳಿದು ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುಳ್ಳು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ ಮತ್ತು ಕೋಮು ಸೌಹಾರ್ದತೆಯನ್ನು ಕದಡುವಂತಿದೆ.