ದೆಹಲಿ ಸಿಎಂ ಕೇಜ್ರಿವಾಲ್ ಕಚೇರಿಯಲ್ಲಿ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಎಂದು ಹೇಳಿಕೊಂಡು ಸಂಬಂಧವಿಲ್ಲದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯದರ್ಶಿ ಮತ್ತು ಆಮ್ ಆದ್ಮಿ (ಎಎಪಿ) ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವುದಾಗಿ ಹೇಳಿಕೊಂಡು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ದೆಹಲಿಯ ತಿಜ್ ಹಜಾರಿ ನ್ಯಾಯಾಲಯದಲ್ಲಿ ನಡೆದ ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಲಿವಾಲ್ ಅವರ ಮೇಲೆ ನಡೆದ ಆಪಾದಿತ ಹಲ್ಲೆಗೂ ಈ ವಿಡಿಯೋವಿಗೂ ಸಂಬಂಧಿಸಿಲ್ಲ. ಹೀಗಾಗಿ, ಈ ವೈರಲ್ ವೀಡಿಯೋದೊಂದಿಗೆ ಹಂಚಿಕೊಂಡ ಹೇಳಿಕೆಗಳು ತಪ್ಪು.
ಹೇಳಿಕೆ:
ಸಾಮಾಜಿಕ ಮಾಧ್ಯಮ ಬಳಕೆದಾರರು ಅಜ್ಞಾತ ಸ್ಥಳದಲ್ಲಿ ವ್ಯಕ್ತಿಗಳ ನಡುವಿನ ಜಗಳದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಮೇ ೧೪, ೨೦೨೪ ರಂದು ಹೀಗೆ ಹೇಳಿಕೊಂಡು ವೀಡಿಯೋವನ್ನು ಹಂಚಿಕೊಂಡಿದ್ದಾರೆ, "ಇದು ಸಂಭವಿಸುತ್ತದೆ. ಸ್ವಾತಿ ಮಲಿವಾಲ್ ಅವರನ್ನು ಥಳಿಸಲಾಗಿದೆ. ಕೇಜ್ರಿವಾಲ್ ಅವರ ಪಿಎ ಇದನ್ನು ಮಾಡಿದ್ದಾರೆ. ಸಿಎಂಒ ದಲ್ಲಿ ತುಂಬಾ ಗಲಭೆಯಾಗಿತ್ತು ಎಂದು ವರದಿಗಳಿವೆ. ಕಾರಣವೆಂದರೆ ಸ್ವಾತಿ, ಸಂಜಯ್, ಎಲ್ಲರೂ ಮುಖ್ಯಮಂತ್ರಿಯಾಗಲು ಬಯಸುತ್ತಾರೆ ... (ಕನ್ನಡಕ್ಕೆ ಅನುವಾದಿಸಲಾಗಿದೆ)."
ದೆಹಲಿ ಸಿಎಂಒ ನಲ್ಲಿ ಸ್ವಾತಿ ಮಲಿವಾಲ್ ಮೇಲೆ ನಡೆದ ಹಲ್ಲೆ ಎಂದು ಹೇಳಿಕೊಂಡು ಹಂಚಿಕೊಳ್ಳಲಾದ ಪೋಷ್ಟ್ ನ ಸ್ಕ್ರೀನ್‌ಶಾಟ್.
೧೦೧.೪ ಸಾವಿರ ಅನುಯಾಯಿಗಳಿರುವ ಮತ್ತೊಬ್ಬ ಪರಿಶೀಲಿಸಿದ ಎಕ್ಸ್ ಬಳಕೆದಾರರು ಮೇ ೧೪, ೨೦೨೪ ರಂದು ಅದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು "ಚಲನಚಿತ್ರದ ದೃಶ್ಯವಲ್ಲ" ಎಂದು ಬಳಕೆದಾರರು ಹೇಳಿದ್ದಾರೆ ಮತ್ತು #SwatiMaliwalAssaulted ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ. ಈ ಪೋಷ್ಟ್ ೧೮.೬ ಸಾವಿರ ವೀಕ್ಷಣೆಗಳನ್ನು ಮತ್ತು ೧೪೮ ಇಷ್ಟಗಳನ್ನು ಗಳಿಸಿದೆ.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಮತ್ತು ಇದು ಮೇ ೧೨, ೨೦೨೪ ರಂದು ಹಂಚಿಕೊಂಡಿರುವ ನ್ಯೂಸ್ ಇಂಡಿಯಾದ ಹಿರಿಯ ಸಹಾಯಕ ಸಂಪಾದಕರ ಎಕ್ಸ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು.
ಮೇ ೧೨, ೨೦೨೪ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಈ ಎಕ್ಸ್ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಘರ್ಷಣೆ/ಸಂಪೂರ್ಣ ನಾಟಕ - ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಕುಟುಂಬ ಸದಸ್ಯರು ಮಧ್ಯಸ್ಥಿಕೆ ಕೊಠಡಿಯಲ್ಲಿ ಪರಸ್ಪರ ಜಗಳವಾಡುವುದನ್ನು ತೋರಿಸುವ ವೀಡಿಯೋ ಕಾಣಿಸಿಕೊಂಡಿದೆ. ಅವರು ತಮ್ಮ ಮಧ್ಯೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಬಂದರು ಆದರೆ ಪರಸ್ಪರ ಸಂಘರ್ಷದಲ್ಲಿ ಕೊನೆಗೊಂಡರು (ಕನ್ನಡಕ್ಕೆ ಅನುವಾದಿಸಲಾಗಿದೆ) ." ಈ ಪೋಷ್ಟ್ ೧೧.೨ ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಮಿರರ್ ನೌ ಅವರ ಅಧಿಕೃತ ಖಾತೆಯ ಮೂಲಕ ಮೇ ೧೩, ೨೦೨೪ ರಂದು ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಷ್ಟ್ ಅನ್ನು ಕೂಡ ಕಂಡುಕೊಂಡಿದ್ದೇವೆ.
ಮಿರರ್ ನೌ ಪೋಷ್ಟ್ ನ ಸ್ಕ್ರೀನ್‌ಶಾಟ್.
ಮಧ್ಯಸ್ಥಿಕೆ ಕೊಠಡಿಯಲ್ಲಿ ಕುಟುಂಬ ಸದಸ್ಯರು ಜಗಳವಾಡಿದ ವೀಡಿಯೋ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಿಂದ ಬಂದಿದೆ ಎಂದು ಪೋಷ್ಟ್ ನೊಂದಿಗೆ ಇರುವ ಶೀರ್ಷಿಕೆಯಲ್ಲಿ ಹೇಳಲಾಗಿದೆ.
ಮತ್ತೊಂದು ಸುದ್ದಿ ಸಂಸ್ಥೆ ಲೋಕಮತ್ ಟೈಮ್ಸ್ ಕೂಡ ಮೇಲಿನ ಅದೇ ವಿವರಗಳನ್ನು ವಿವರಿಸಿ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಮಧ್ಯಸ್ಥಿಕೆ ಕೊಠಡಿಯಲ್ಲಿ ಕುಟುಂಬ ಸದಸ್ಯರ ನಡುವೆ ನಡೆದ ಜಗಳವನ್ನು ತೋರಿಸುತ್ತದೆ. ನವ ದೆಹಲಿಯ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸ್ವಾತಿ ಮಲಿವಾಲ್ ಅವರ ಮೇಲೆ ನಡೆದ ಆಪಾದಿತ ಹಲ್ಲೆಗೂ ಈ ವೀಡಿಯೋವಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ, ಆನ್‌ಲೈನ್ ನಲ್ಲಿ ಈ ವೀಡಿಯೋವನ್ನು ಮಲಿವಾಲ್ ಅವರ ಆಪಾದಿತ ಹಲ್ಲೆಗೆ ಸಂಬಂಧಿಸಿ ಮಾಡಲಾದ ಹೇಳಿಕೆಗಳು ತಪ್ಪು.