- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ನರೇಂದ್ರ ಮೋದಿ ಮತ್ತೊಮ್ಮೆ...
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳುತ್ತಿರುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ
ಸಾರಾಂಶ:
೨೦೨೪ ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವುದಾಗಿ ತೋರಿಸಲು ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದರೆ, ಈ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ರಾಹುಲ್ ಗಾಂಧಿ ಎಂದಿಗೂ ಅಂತಹ ಹೇಳಿಕೆಯನ್ನು ನೀಡಿಲ್ಲ. ಈ ವೀಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಹೇಳಿಕೆ:
ಸಾಮಾಜಿಕ ಮಾಧ್ಯಮ ಬಳಕೆದಾರರು ರಾಹುಲ್ ಗಾಂಧಿಯವರ ಕಿರು ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗುತ್ತಾರೆ ಎಂದು ಹೇಳುವುದನ್ನು ಕೇಳಬಹುದು. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಸ್ವತಃ ರಾಹುಲ್ ಗಾಂಧಿ ನೇ ಒಪ್ಪಿಕೊಂಡ 2024ರಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗುವರು ಎಂದು. ಗುಲಾಮರೇ ಇನ್ನಾದರೂ ವ್ಯರ್ಥ ಪ್ರಯತ್ನ ಮಾಡುವುದನ್ನು ಬಿಡಿ."
ವೈರಲ್ ವಿಡಿಯೋದೊಂದಿಗೆ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಎಕ್ಸ್ (ಹಿಂದೆ ಟ್ವಿಟ್ಟರ್), ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಇತರ ಭಾಷೆಗಳಲ್ಲಿ ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಅದೇ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.
ಪುರಾವೆ:
ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ೨೦೨೪ ರ ಮೇ ೧೦ ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೋದ ಶೀರ್ಷಿಕೆಯು, "ರಾಹುಲ್ ಗಾಂಧಿಯವರು "ಟಾಟಾ ಬೈ" ಎಂದು ಹೇಳುವ ಮೂಲಕ ಪಿಎಂ ಮೋದಿಯನ್ನು ಅಣಕಿಸುತ್ತಾರೆ | ಲೋಕಸಭಾ ಚುನಾವಣೆ ೨೦೨೪, ” ಎಂದು ಹೇಳಿಕೊಂಡಿದೆ. ಈ ವೀಡಿಯೋದ ಸುಮಾರು ೨೦ ಸೆಕೆಂಡ್ ಗಳ ಸಮಯದಲ್ಲಿ, ವೈರಲ್ ವಿಡಿಯೋದಲ್ಲಿ ನೋಡಿದಂತೆಯೇ ರಾಹುಲ್ ಗಾಂಧಿ ಹೇಳುವುದನ್ನು ಕೇಳಬಹುದು. ಆದರೆ "ಜೂನ್ ೪, ೨೦೨೪ ರಂದು ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದಿಲ್ಲ," ಎಂದು ಹೇಳುವ ಭಾಗವನ್ನು ವೈರಲ್ ವೀಡಿಯೋದಲ್ಲಿ ಎಡಿಟ್ ಮಾಡಲಾಗಿದೆ. ಅಲ್ಲಿ, "ನರೇಂದ್ರ ಮೋದಿ ಅವರು ಜೂನ್ ೪, ೨೦೨೪ ರಂದು ಪ್ರಧಾನಿಯಾಗುತ್ತಾರೆ," ಎಂದು ಬದಲಿಸಲಾಗಿದೆ.
ಮೇ ೧೦, ೨೦೨೪ ರಂದು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾದ ದಿ ಇಂಡಿಯನ್ ಎಕ್ಸ್‌ಪ್ರೆಸ್ ವೀಡಿಯೋದ ಸ್ಕ್ರೀನ್‌ಶಾಟ್.
"ಕಾನ್ಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ೨೦೨೪ ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಮತ್ತೊಮ್ಮೆ ಪ್ರತಿಪಾದಿಸಿದರು. ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ-ರ‍್ಯಾಲಿಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ," ಎಂದು ಯೂಟ್ಯೂಬ್ ವೀಡಿಯೋದ ವಿವರಣೆಯು ಓದುತ್ತದೆ.
ಈ ವಿವರಣೆಯಿಂದ ಸುಳಿವುಗಳನ್ನು ತೆಗೆದುಕೊಂಡು ನಡೆಸಿದ ಹೆಚ್ಚಿನ ಹುಡುಕಾಟವು ೧೦ ಮೇ ೨೦೨೪ ರಂದು ಕಾನ್ಪುರದಲ್ಲಿ ನಡೆದ ಈವೆಂಟ್‌ನ ಯೂಟ್ಯೂಬ್ ಲೈವ್‌ಸ್ಟ್ರೀಮ್‌ಗೆ ನಮ್ಮನ್ನು ಕರೆದೊಯ್ಯಿತು. ಇದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಂಚಿಕೊಂಡಿದೆ. ಈ ವೀಡಿಯೋದ ಸುಮಾರು ೪೬ ನಿಮಿಷಗಳ ಸಮಯದಲ್ಲಿ, "ನರೇಂದ್ರ ಮೋದಿ ಅವರು ಜೂನ್ ೪, ೨೦೨೪ ರಂದು ಭಾರತದ ಪ್ರಧಾನಿಯಾಗಿರುವುದಿಲ್ಲ" ಎಂದು ರಾಹುಲ್ ಗಾಂಧಿಯವರು ಹೇಳುವ ಅದೇ ಟೀಕೆಗಳನ್ನು ನಾವು ನೋಡಬಹುದು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದ ಸ್ಕ್ರೀನ್‌ಶಾಟ್.
ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಮೂಲ ಎಡಿಟ್ ಮಾಡದ ವೀಡಿಯೊವು ಮೇ ೧೦, ೨೦೨೪ ರಂದು ಕಾನ್ಪುರದಲ್ಲಿ ನಡೆದ ರ‍್ಯಾಲಿಯಿಂದ ಬಂದಿದೆ ಎಂದು ಇದು ಖಚಿತಪಡಿಸುತ್ತದೆ.
ತೀರ್ಪು:
ಜೂನ್ ೪, ೨೦೨೪ ರಂದು ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳುತ್ತಿರುವುದಾಗಿ ತೋರಿಸುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಮೇ ೧೦, ೨೦೨೪ ರಂದು ಕಾನ್ಪುರದಲ್ಲಿ ರಾಹುಲ್ ಗಾಂಧಿಯವರ ರ‍್ಯಾಲಿಯಿಂದ ಮೂಲ ವೀಡಿಯೋ ಬಂದಿದೆ. ಅಲ್ಲಿ ಅವರು ಜೂನ್ ೪ ರಂದು ಮೋದಿ ಭಾರತದ ಪ್ರಧಾನಿಯಾಗುವುದಿಲ್ಲ ಎಂದು ಹೇಳುವುದನ್ನು ಕೇಳಬಹುದು.