- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಇಲ್ಲ, ಪ್ರಧಾನಿ ಮೋದಿಯವರು...
ಇಲ್ಲ, ಪ್ರಧಾನಿ ಮೋದಿಯವರು ಕರ್ನಾಟಕದ ಜನತೆಯನ್ನು ಪಾಪಿಗಳು ಎಂದು ಕರೆದಿಲ್ಲ.
ಸಾರಾಂಶ:
ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೋ ತುಣುಕನ್ನು ಶೇರ್ ಮಾಡಿದ್ದು, ಅದರಲ್ಲಿ ಕರ್ನಾಟಕದ ಜನರು ತಾವು ಮಾಡಿದ ಪಾಪಗಳಿಗೆ ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಶಿಕ್ಷೆ ಅನುಭವಿಸಬೇಕು ಎಂದು ಹೇಳುವುದನ್ನು ಕಾಣಬಹುದು. ಈ ಕ್ಲಿಪ್ ಅನ್ನು ಮೋದಿ ಅವರು ಕರ್ನಾಟಕದ ಜನರನ್ನು ಪಾಪಿಗಳು ಎಂದು ಕರೆದಿದ್ದಾರೆ ಮತ್ತು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕದಿದ್ದಕ್ಕಾಗಿ ಅವರನ್ನು ದ್ವೇಷಿಸುತ್ತಾರೆ ಎಂಬ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ, ಬೆಳಗಾವಿಯಲ್ಲಿ ಅವರು ಇತ್ತೀಚೆಗೆ ಮಾಡಿದ ಭಾಷಣದ ಸಂಪೂರ್ಣ ವೀಡಿಯೋ ಅವರು ಕರ್ನಾಟಕದ ಕಾಂಗ್ರೆಸ್ ಅನ್ನು ಉಲ್ಲೇಖಿಸುತ್ತಿದ್ದಾರೆ, ಕರ್ನಾಟಕದ ನಿವಾಸಿಗಳನ್ನಲ್ಲ ಎಂದು ತೋರಿಸುತ್ತದೆ. ಆದ್ದರಿಂದ ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಏಪ್ರಿಲ್ ೨೯, ೨೦೨೪ ರಂದು ಪ್ರಚಾರದ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ದಾವಣಗೆರೆ ಮತ್ತು ಬೆಳಗಾವಿಯಲ್ಲಿ ರ‍್ಯಾಲಿಗಳನ್ನು ನಡೆಸಿದರು. ಈ ರ‍್ಯಾಲಿಯ ಮೋದಿಯವರ ಭಾಷಣದ ಏಳು ಸೆಕೆಂಡುಗಳ ವೀಡಿಯೋ ಕ್ಲಿಪ್ ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು “ಈ ಚುನಾವಣೆಯಲ್ಲಿ ಈ ‘ಕರ್ನಾಟಕದ ಜನರನ್ನು’ ಅವರು ಮಾಡಿದ ಪಾಪಕ್ಕಾಗಿ ನೀವು ಶಿಕ್ಷಿಸಬೇಕು" ಎಂದು ಹೇಳುವುದನ್ನು ಕಾಣಬಹುದು. ರಾಜ್ಯದಲ್ಲಿ ಬಿಜೆಪಿಗೆ ಮತ ಹಾಕದೆ ಕನ್ನಡಿಗರು ಪಾಪ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ ಮತ್ತು ಅವರು ಕನ್ನಡಿಗರನ್ನು ಏಕೆ ದ್ವೇಷಿಸುತ್ತಾರೆ ಎಂದು ಕೇಳುವ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಪ್ರಧಾನಿ ಮೋದಿಯವರು ಕರ್ನಾಟಕದ ಜನತೆಯನ್ನು ಪಾಪಿಗಳು ಎಂದು ಕರೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ಎಕ್ಸ್ (ಎಡ) ಮತ್ತು ಫೇಸ್‌ಬುಕ್ (ಬಲ) ನಲ್ಲಿ ಹಂಚಿಕೊಳ್ಳಲಾದ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ಏಪ್ರಿಲ್ ೨೮ ರಿಂದ ಪ್ರಧಾನಿ ಮೋದಿಯವರ ಸಂಪೂರ್ಣ ಭಾಷಣವನ್ನು ಪರಿಶೀಲಿಸಿದ ನಂತರ, ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 'ಪ್ರಧಾನಿ ಮೋದಿ ಲೈವ್ | ಕರ್ನಾಟಕದ ಬೆಳಗಾವಿಯಲ್ಲಿ ಸಾರ್ವಜನಿಕ ಸಭೆ | ಲೋಕಸಭಾ ಚುನಾವಣೆ ೨೦೨೪' ಎಂಬ ಶೀರ್ಷಿಕೆಯೊಂದಿಗೆ ಲೈವ್-ಸ್ಟ್ರೀಮ್ ಮಾಡಲಾದ ವೀಡಿಯೋದ ೩೨:೦೦ ನಿಮಿಷದ ಅವಧಿಯಲ್ಲಿ ಮೋದಿಯವರು ಕ್ಲಿಪ್ ನಲ್ಲಿರುವಂತೆಯೇ ಪ್ರಶ್ನಾರ್ಹ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಕಂಡುಬಂದಿತು. ಆದರೆ, ಹಂಚಿಕೊಂಡಿರುವ ಕ್ಲಿಪ್ ಭಾಷಣದ ನೈಜ ಸಂದರ್ಭವನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ.
ಯೂಟ್ಯೂಬ್ ನಲ್ಲಿ ಏಪ್ರಿಲ್ ೨೮, ೨೦೨೪ ರಂದು ಲೈವ್-ಸ್ಟ್ರೀಮ್ ಮಾಡಲಾದ ಬೆಳಗಾವಿಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ಸ್ಕ್ರೀನ್‌ಶಾಟ್.
ವೀಡಿಯೊದ ಸರಿಸುಮಾರು ೨೯:೦೦ ನಿಮಿಷದ ಅವಧಿಯಿಂದ ಪ್ರಾರಂಭಿಸಿ ಭಾಷಣದಲ್ಲಿ, ಮೋದಿ ಬಿಜೆಪಿಯ ಆಡಳಿತದಲ್ಲಿ ಭಾರತೀಯ ರೈತರು ಪಡೆದ ಅನುಕೂಲಗಳ ಬಗ್ಗೆ ಚರ್ಚಿಸಿದರು. ಸುಮಾರು ೩೧:೦೪ ನಿಮಿಷದ ಅವಧಿಯತ್ತ, ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ಅವರು ಹಿಂದಿಯಲ್ಲಿ ಹೀಗೆ ಹೇಳಿದರು, "ಕಾಂಗ್ರೆಸ್ 'ಇಲ್ಲಿ' ರೈತರಿಗೆ ದ್ರೋಹ ಮಾಡುವುದು ದೊಡ್ಡ ಪಾಪ" (ಅನುವಾದಿಸಲಾಗಿದೆ). 'ಇಲ್ಲಿ' ಎಂಬುದು ಕರ್ನಾಟಕ ರಾಜ್ಯವೆಂದು ಸ್ಪಷ್ಟವಾಗಿದೆ.
ನಂತರ ಹೀಗೆಂದು ಹೇಳಿದರು, ''ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಖಾತೆಗೆ ₹೧೦ ಸಾವಿರ ಜಮಾ ಆಗುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ₹೪,೦೦೦ ನೀಡುವುದನ್ನು ನಿಲ್ಲಿಸಿತು. ಅವರು ತಮ್ಮ ಮತವನ್ನು ಭದ್ರಪಡಿಸಿದ ನಂತರ, ಅವರು ರೈತರ ಮತ್ತು ಅವರ ಕೆಲಸದ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದರು. ಉಳಿದ ₹೬,೦೦೦ ಮೋದಿ ಸರ್ಕಾರ ನೀಡುತ್ತದೆ, ಅದನ್ನು ರೈತರು ಪಡೆಯುತ್ತಾರೆ. ಅವರು ಇಲ್ಲಿ ನೀಡಿದ ಹಣದ ಭಾಗವನ್ನು ಕಡಿತಗೊಳಿಸಿದರು” (ಅನುವಾದಿಸಲಾಗಿದೆ). ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
"ಈ ಚುನಾವಣೆಯಲ್ಲಿ ಈ ಕರ್ನಾಟಕದವರು ಮಾಡಿದ ಪಾಪಗಳಿಗೆ ನೀವು ಶಿಕ್ಷೆ ನೀಡಬೇಕು ಮತ್ತು ದೆಹಲಿಯಿಂದ ಏನು ಕಳುಹಿಸುತ್ತಿದ್ದೇವೋ ಅದು ಮುಂಬರುವ ವರ್ಷಗಳಲ್ಲಿ ಮುಂದುವರಿಯುತ್ತದೆ ಎಂದು ಮೋದಿ ಭರವಸೆ ನೀಡುತ್ತಾರೆ" ಎಂದು ಅವರು ಹೇಳಿದರು. ಮೋದಿಯವರ ಭಾಷಣದ ಸಂಪೂರ್ಣ ಸನ್ನಿವೇಶವು, ವಿಶೇಷವಾಗಿ ೩೧:೦೦ ನಿಮಿಷದ ಅವಧಿಯ ನಂತರ, ಅವರ ಟೀಕೆಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿರಿಸಿಕೊಂಡಿದೆ ಎಂದು ಸೂಚಿಸುತ್ತದೆ, ಅವರನ್ನು ಅವರು 'ಕರ್ನಾಟಕ ವಾಲೋ' ಎಂದು ಉಲ್ಲೇಖಿಸಿದ್ದಾರೆ.
ಮೋದಿಯವರ ವೆಬ್‌ಸೈಟ್‌ನಲ್ಲಿ ಅವರ ಭಾಷಣದ ಅಧಿಕೃತ ಪ್ರತಿಲೇಖನವು ಈ ವ್ಯಾಖ್ಯಾನವನ್ನು ಖಚಿತಪಡಿಸುತ್ತದೆ. ಅದರಲ್ಲಿ ಹೀಗೆಂದು ಹೇಳಲಾಗಿದೆ, "ಈ ಚುನಾವಣೆಯಲ್ಲಿ ಈ ಕಾಂಗ್ರೆಸ್ಸಿಗರು ಮಾಡಿದ ಪಾಪಗಳಿಗೆ ಶಿಕ್ಷೆಯಾಗಬೇಕು" (ಅನುವಾದಿಸಲಾಗಿದೆ).
ಏಪ್ರಿಲ್ ೨೮, ೨೦೨೪ ರಂದು ಬೆಳಗಾವಿಯಲ್ಲಿ ಪ್ರಧಾನಿ ಮೋದಿಯವರ ಮಡಿದ ಭಾಷಣದ ಪ್ರತಿಲೇಖನದ ಸ್ಕ್ರೀನ್‌ಶಾಟ್.
‘ರೈತರಿಗೆ ವಾರ್ಷಿಕ ೪,೦೦೦ ರೂಪಾಯಿ ಪಾವತಿಯನ್ನು ಪುನರಾರಂಭಿಸಿ: ಕರ್ನಾಟಕ ಸರ್ಕಾರಕ್ಕೆ ಬಿಜೆಪಿ’ ಎಂಬ ಶೀರ್ಷಿಕೆಯಯೊಂದಿಗೆ ಪ್ರಕಟಿಸಲಾದ ಆಗಸ್ಟ್ ೧೦, ೨೦೨೩ ರ ಡೆಕ್ಕನ್ ಹೆರಾಲ್ಡ್ ನ ಸುದ್ದಿ ವರದಿಯು ಮೋದಿಯವರ ‘ಕಾಂಗ್ರೆಸ್ ರೈತರಿಗೆ ₹೪,೦೦೦ ನಿಲ್ಲಿಸಿದೆ’ ಎಂಬ ಹೇಳಿಕೆಗಳು ನಿಜವಾಗಿಯೂ ಕರ್ನಾಟಕವನ್ನು ಉಲ್ಲೇಖಿಸಿವೆ ಎಂದು ಸ್ಪಷ್ಟಪಡಿಸುತ್ತದೆ.
ತೀರ್ಪು:
ಈ ಹೇಳಿಕೆಯ ವಿಶ್ಲೇಷಣೆಯು ಸ್ಪಷ್ಟಪಡಿಸುವುದೇನೆಂದರೆ ಮೋದಿಯವರು "ಕರ್ನಾಟಕದ ಜನರು" ಅವರ "ಪಾಪಗಳಿಗೆ" ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಶಿಕ್ಷೆಯಾಗಬೇಕು ಎಂದು ಕ್ಲಿಪ್ ನಲ್ಲಿ ಹೇಳಿದ್ದಾರೆಂದು ತಪ್ಪಾಗಿ ಹೇಳಿಕೊಳ್ಳಲಾಗಿದೆ. ಅವರು ಟೀಕಿಸಿದ್ದು ಕಾಂಗ್ರೆಸ್ ಅನ್ನು ಹೊರತು ರಾಜ್ಯದ ಜನರನ್ನು ಅಲ್ಲ ಎಂಬುದಕ್ಕೆ ಪುರಾವೆಗಳಿವೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.