Begin typing your search above and press return to search.
    ಈವೆಂಟ್

    ಉತ್ತರ ಪ್ರದೇಶದಲ್ಲಿ "ಜಿಹಾದಿಗಳು" ರೈಲ್ವೇ ಹಳಿಗಳನ್ನು ಹಾಳು ಮಾಡಿದ್ದಾರೆ ಎಂಬ ಆರೋಪ ತಪ್ಪು

    IDTU - Karnataka
    25 Sep 2024 10:40 AM GMT
    ಉತ್ತರ ಪ್ರದೇಶದಲ್ಲಿ ಜಿಹಾದಿಗಳು ರೈಲ್ವೇ ಹಳಿಗಳನ್ನು ಹಾಳು ಮಾಡಿದ್ದಾರೆ ಎಂಬ ಆರೋಪ ತಪ್ಪು
    x

    ಸಾರಾಂಶ:

    ಸಾಮಾಜಿಕ ಮಾಧ್ಯಮ ಬಳಕೆದಾರರು ರೈಲ್ವೇ ಹಳಿ ಮೇಲೆ ಹಾಕಿರುವ ಕಂಬದ ಚಿತ್ರವನ್ನು ಉತ್ತರ ಪ್ರದೇಶದ ರಾಮ್‌ಪುರದಲ್ಲಿ ರೈಲನ್ನು ಉರುಳಿಸಲು “ಜಿಹಾದಿಗಳು” ಕಬ್ಬಿಣದ ರಾಡ್ ಅನ್ನು ರೈಲ್ವೆ ಹಳಿ ಮೇಲೆ ಇರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಇಬ್ಬರು ಹಿಂದೂ ವ್ಯಕ್ತಿಗಳು, ಟೆಲಿಕಾಂ ಕಂಬವನ್ನು ಕದಿಯಲು ಪ್ರಯತ್ನಿಸಿದಾಗ, ರೈಲು ಸಮೀಪಿಸಿದಾಗ ಭಯದಿಂದ ರೈಲ್ವೆ ಹಳಿಗಳ ಮೇಲೆ ಅದನ್ನು ತ್ಯಜಿಸಿದಾಗ ಈ ಘಟನೆ ಸಂಭವಿಸಿದೆ. ಇದೊಂದು ದರೋಡೆ ಪ್ರಕರಣ, ವಿಧ್ವಂಸಕ ಕೃತ್ಯವಲ್ಲ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.


    ಹೇಳಿಕೆ:

    ಸೆಪ್ಟೆಂಬರ್ ೨೦, ೨೦೨೪ ರಂದು, ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ರೈಲ್ವೇ ಟ್ರ್ಯಾಕ್‌ನಲ್ಲಿ ಇರಿಸಲಾಗಿರುವ ವಿದ್ಯುತ್ ಕಂಬದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದದೊಂದಿಗೆ ಹಂಚಿಕೊಂಡ ಶೀರ್ಷಿಕೆ ಹೀಗಿದೆ, “ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಪಲ್ಟಿ ಮಾಡಬೇಕು ಅಂತ ಜೀಹಾದಿಗಳು ರೈಲ್ವೆ ಹಳಿ ಮೇಲೆ ಸುಮಾರು 8 ರಿಂದ 9 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ.ಆದರೆ,ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ನ ಜಾಣತನದಿಂದ ಅನಾಹುತ ತಪ್ಪಿದೆ.ಕಬ್ಬಿಣದ ಕಂಬವನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು.” ಫೇಸ್‌ಬುಕ್ ಬಳಕೆದಾರರು ಅದೇ ಹೇಳಿಕೆ ಮತ್ತು ಚಿತ್ರವನ್ನು ಈ ಕೋಮುವಾದಿ ಹೇಳಿಕೆಯ ಜೊತೆಗೆ ಹಂಚಿಕೊಂಡಿದ್ದಾರೆ, “ಆದರೆ ಎಷ್ಟು ಕಾಲ? ಎಲ್ಲಿಯವರೆಗೆ, ಎಲ್ಲಿ ಮತ್ತು ಹೇಗೆ ನಾವು ಉಳಿಸಲ್ಪಡುತ್ತೇವೆ ಏಕೆಂದರೆ ಅವರು ನಮ್ಮನ್ನು ಎಲ್ಲಾ ಕಡೆಯಿಂದ ಸುತ್ತುವರೆದಿದ್ದಾರೆ!"

    ಸೆಪ್ಟೆಂಬರ್ ೨೦ ಮತ್ತು ೨೧, ೨೦೨೪ ರಂದು ವೈರಲ್ ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ (ಎಡ) ಮತ್ತು ಫೇಸ್‌ಬುಕ್ (ಬಲ) ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.


    ಪುರಾವೆ:

    ನಾವು ವೈರಲ್ ಚಿತ್ರವನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಸೆಪ್ಟೆಂಬರ್ ೧೮, ೨೦೨೪ ರಂದು ಪ್ರಕಟಿಸಲಾದ ಟೈಮ್ಸ್ ಆಫ್ ಇಂಡಿಯಾದ ಸುದ್ದಿ ವರದಿಯನ್ನು ಕಂಡುಕೊಂಡಿದ್ದೇವೆ. ವರದಿಯು ಅದೇ ಚಿತ್ರವನ್ನು ಒಳಗೊಂಡಿದೆ. ಅದರ ಪ್ರಕಾರ ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಇಬ್ಬರು ವ್ಯಕ್ತಿಗಳು ಟೆಲಿಕಾಂ ಕಂಬವನ್ನು ಕದಿಯಲು ಯತ್ನಿಸಿದ್ದಾರೆ. ರೈಲು ಸಮೀಪಿಸಿದಾಗ ಭಯಭೀತರಾದ ಅವರು ಕಂಬವನ್ನು ರೈಲ್ವೆ ಹಳಿಗಳ ಮೇಲೆ ಬಿಟ್ಟಿದ್ದಾರೆ. ನಂತರ ಇಬ್ಬರು ವ್ಯಕ್ತಿಗಳು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡರು ಮತ್ತು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಿಸಿಟಿವಿ ಮೂಲಕ ಇಬ್ಬರನ್ನು ಗುರುತಿಸಿ ಬಂಧಿಸಲಾಗಿದೆ. ಅವರು ತಮ್ಮ ಮಾದಕ ವ್ಯಸನಕ್ಕೆ ಹಣ ಪಡೆಯಲು ಕಂಬವನ್ನು ಕದಿಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

    ಸೆಪ್ಟೆಂಬರ್ ೨೩, ೨೦೨೪ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯ ಸ್ಕ್ರೀನ್‌ಶಾಟ್.


    ಸೆಪ್ಟೆಂಬರ್ ೨೩, ೨೦೨೪ ರಂದು ಘಟನೆಯನ್ನು ಇದೇ ರೀತಿಯಲ್ಲಿ ವರದಿ ಮಾಡಿದ ಈಟಿವಿ ಭಾರತ್‌ನಿಂದ ಮತ್ತೊಂದು ಸುದ್ದಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ವರದಿಯಲ್ಲಿ ಅವರನ್ನು ಸಂದೀಪ್ ಮತ್ತು ವಿಜೇಂದ್ರ ಎಂದು ಗುರುತಿಸಲಾಗಿದೆ. ನೈನಿ ಜನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ದೆಹ್ರಾದೂನ್‌ನಿಂದ ಕಾಠ್ಗೋದಾಂ ಚಲಿಸುತ್ತಿತ್ತು ಮತ್ತು ಲೊಕೊ ಪೈಲಟ್ ಮತ್ತು ಸ್ಟೇಷನ್ ಮಾಸ್ಟರ್‌ನಂತಹ ಸಂಬಂಧಪಟ್ಟ ವ್ಯಕ್ತಿಗಳು ಸಮಯಕ್ಕೆ ಅಡಚಣೆಯ ಬಗ್ಗೆ ಸಂವಹನ ನಡೆಸಿದರು. ರೈಲನ್ನು ನಿಲ್ಲಿಸಲಾಯಿತು ಮತ್ತು ಸುರಕ್ಷಿತವಾಗಿ ಮರು-ಪ್ರಾರಂಭಿಸುವ ಮೊದಲು ಹಳಿಯನ್ನು ತೆರವುಗೊಳಿಸಲಾಯಿತು.

    ತಪ್ಪಿತಸ್ಥರು "ಜಿಹಾದಿಗಳು" ಅಲ್ಲ ಎಂದು ಇದು ತೋರಿಸುತ್ತದೆ, ಇದು ದರೋಡೆಯ ಪ್ರಕರಣವಾಗಿದೆ ಮತ್ತು ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಉದ್ದೇಶದಿಂದ ರೈಲ್ವೆ ಹಳಿ ಹಾನಿಗೊಳಿಸುವ ಪ್ರಯತ್ನವಲ್ಲ.

    ಸೆಪ್ಟೆಂಬರ್ ೨೩, ೨೦೨೪ ರಂದು ಪ್ರಕಟಿಸಲಾದ ಈಟಿವಿ ಭಾರತ್ ವರದಿಯ ಸ್ಕ್ರೀನ್‌ಶಾಟ್.


    ತೀರ್ಪು:

    ಈ ಹೇಳಿಕೆಯ ವಿಶ್ಲೇಷಣೆಯು ಘಟನೆಯು "ಜಿಹಾದಿಗಳನ್ನು" ಒಳಗೊಂಡಿಲ್ಲ ಎಂದು ತಿಳಿಸುತ್ತದೆ. ಇಬ್ಬರು ಹಿಂದೂ ವ್ಯಕ್ತಿಗಳು ತಮ್ಮ ಮಾದಕ ವ್ಯಸನಕ್ಕೆ ಹಣ ಪಡೆಯಲು ಟೆಲಿಕಾಂ ಕಂಬವನ್ನು ಕದಿಯಲು ಯತ್ನಿಸಿದ ಪ್ರಕರಣ ಇದಾಗಿದೆ. ರೈಲು ಬರುತ್ತಿರುವುದನ್ನು ಅರಿತ ಅವರು ಕಂಬವನ್ನು ಹಳಿಗಳ ಮೇಲೆ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಆದ್ದರಿಂದ, ಈ ಹೇಳಿಕೆ ತಪ್ಪು.

    Claim Review :   Allegation of “Jihadis” sabotaging railway tracks in Uttar Pradesh is false
    Claimed By :  X user
    Fact Check :  False
    IDTU - Karnataka

    IDTU - Karnataka