Begin typing your search above and press return to search.
    Others

    ಕೇರಳದ ವಯನಾಡಿನ ದೇವಸ್ಥಾನವೊಂದರ ಅಡಿಯಲ್ಲಿ ಮಾಂಸದ ಅಂಗಡಿಯಿದೆ ಎಂಬ ಆರೋಪಗಳು ತಪ್ಪು.

    IDTU - Karnataka
    3 May 2024 1:40 PM GMT
    ಕೇರಳದ ವಯನಾಡಿನ ದೇವಸ್ಥಾನವೊಂದರ ಅಡಿಯಲ್ಲಿ ಮಾಂಸದ ಅಂಗಡಿಯಿದೆ ಎಂಬ ಆರೋಪಗಳು ತಪ್ಪು.
    x

    ಸಾರಾಂಶ:

    ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ದೇವಸ್ಥಾನದ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅದ್ರಲಿಇರುವ ಸ್ಥಳ ಕೇರಳದ ವಯನಾಡ್ - ರಾಹುಲ್ ಗಾಂಧಿಯವರ ಸಂಸದೀಯ ಕ್ಷೇತ್ರವಾಗಿದೆ ಮತ್ತು ಆ ದೇವಸ್ಥಾನದ ಅಡಿಯಲ್ಲಿ ಕೋಳಿ ಮಾಂಸದ ಅಂಗಡಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇದು ಪಾಕಿಸ್ತಾನದಲ್ಲಿನ ಒಂದು ಖಾಲಿ ದೇವಾಲಯದ ವೀಡಿಯೋವನ್ನು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ ಈ ಹೇಳಿಕೆ ತಪ್ಪು.


    ಹೇಳಿಕೆ:

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕೇರಳದ ವಯನಾಡ್ ಕ್ಷೇತ್ರದಲ್ಲಿ ಒಂದು ದೇವಸ್ಥಾನದ ಕೆಳಗೆ ಕೋಳಿ ಮಾಂಸದ ಅಂಗಡಿಯೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ೨೭ ಸೆಕೆಂಡುಗಳ ಒಂದು ವೀಡಿಯೋ ಕ್ಲಿಪ್ ಆರೋಪಿಸಿದೆ. ವೀಡಿಯೋವು ದೇವಾಲಯವನ್ನು ಹೋಲುವ ಕಟ್ಟಡದ ಕೆಳಗೆ ಇರುವ ಒಂದು ಸಣ್ಣ ಸ್ಥಾಪನೆಯನ್ನು ತೋರಿಸುತ್ತದೆ ಹಾಗು "ಸ್ನೇಹಿತರೇ, ಇದು ಸೀತಾ ರಾಮ ದೇವಾಲಯ, ಮತ್ತು ಅದರ ಕೆಳಗೆ ಒಂದು ಅಂಗಡಿಯಿದೆ. ಇದು ಕೋಳಿ ಮಾಂಸವನ್ನು ಮಾರಾಟ ಮಾಡುವ ಅಂಗಡಿಯಾಗಿದೆ. ಇದು ದೇವಾಲಯದ ಚೌಕ, ಮತ್ತು ಆ ಕಟ್ಟಡವು ಸೀತಾ ರಾಮನ ದೇವಾಲಯವಾಗಿದೆ, ಮತ್ತು ನೀವು ನೋಡಿದರೆ, ಹಿಂದಿಯಲ್ಲಿರುವ ಬರವಣಿಗೆಯನ್ನು ನೋಡುವಿರಿ" (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

    ವೀಡಿಯೋದಲ್ಲಿ ನಮೂದಿಸಿರುವ ಪಠ್ಯವು ಮಾಂಸದ ಅಂಗಡಿಯ ಉದ್ಘಾಟನೆಗೆ ರಾಹುಲ್ ಗಾಂಧಿ ಕಾರಣ ಎಂದು ಅದು ಹೇಳುತ್ತದೆ: "ಹಿಂದೂಗಳೇ ಎಚ್ಚರಗೊಳ್ಳಿ, ಎದ್ದೇಳಿ. ಇದು ಕೇರಳದ ವಯನಾಡ್‌ನಲ್ಲಿರುವ ಸೀತಾ ರಾಮ ದೇವಾಲಯವಾಗಿದೆ, ಇಲ್ಲಿ ರಾಹುಲ್ ಗಾಂಧಿ ಅವರಿಂದ ಕೋಳಿ ಮಾಂಸದ ಅಂಗಡಿಯನ್ನು ಉದ್ಘಾಟಿಸಲಾಗಿದೆ. ಇದು ರಾಹುಲ್ ಗಾಂಧಿಯವರ ಸಂಸದೀಯ ಕ್ಷೇತ್ರವಾಗಿದೆ" (ಅನುವಾದಿಸಲಾಗಿದೆ).

    ಕೇರಳದ ವಯನಾಡಿನಲ್ಲಿನ ದೇವಸ್ಥಾನವೆಂದು ಹೇಳಿಕೊಂಡು ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ವೈರಲ್ ಪೋಷ್ಟ್ ನ ಅಡಿಯಲ್ಲಿ ಹಲವಾರು ಕಾಮೆಂಟ್‌ಗಳು ವೀಡಿಯೋ ಪಾಕಿಸ್ತಾನದಿಂದ ಹುಟ್ಟಿಕೊಂಡಿದೆ ಎಂದು ಸೂಚಿಸಿವೆ. ಈ ಸೂಚನೆಯನ್ನು ಉಪಯೋಗಿಸಿಕೊಂಡು "ಮಖನ್ ರಾಮ್ ಜೈಪಾಲ್ ವ್ಲಾಗ್ಸ್" ಹೆಸರಿನ ಯೂಟ್ಯೂಬ್ ಚಾನಲ್‌ಗೆ ಆಗಸ್ಟ್ ೨೫, ೨೦೨೩ ರಂದು ಅಪ್‌ಲೋಡ್ ಮಾಡಿರುವ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಇದು ವೈರಲ್ ಪೋಷ್ಟ್ ನಲ್ಲಿರುವ ದೇವಸ್ಥಾನವನ್ನು ಹೋಲುವ ದೇವಾಲಯವನ್ನು ಒಳಗೊಂಡಿದೆ. ವ್ಲಾಗ್‌ನಲ್ಲಿ ಕಾಣಿಸಿಕೊಂಡಿರುವ ದೇವಾಲಯವು ಪಾಕಿಸ್ತಾನದ ಪಂಜಾಬ್ ಪ್ರದೇಶದ ಝಾಂಗ್ ಜಿಲ್ಲೆಯ ಅಹ್ಮದ್‌ಪುರ ಸಿಯಾಲ್‌ನಲ್ಲಿದೆ. ಈ ವೀಡಿಯೋದಲ್ಲಿ ಸರಿಸುಮಾರು ೧:೧೫ ನಿಮಿಷದ ಅವಧಿಯಲ್ಲಿ, ವ್ಲಾಗರ್ ದೇವಸ್ಥಾನವನ್ನು ಮತ್ತು ಅದರ ಸಮೀಪದಲ್ಲಿರುವ ಕೋಳಿ ಮಾಂಸದ ಅಂಗಡಿಯನ್ನು ಪ್ರಸ್ತುತಪಡಿಸುತ್ತಾನೆ. ಈ ಯೂಟ್ಯೂಬ್ ಚಾನಲ್ ಪಾಕಿಸ್ತಾನದಿಂದ ಹುಟ್ಟಿಕೊಂಡ ವ್ಲಾಗ್‌ಗಳನ್ನು ಒಳಗೊಂಡಿದೆ ಎಂದು ನಾವು ಗಮನಿಸಿದ್ದೇವೆ.

    ಆಗಸ್ಟ್ ೨೫, ೨೦೨೩ ದಿನಾಂಕದ ಪಾಕಿಸ್ತಾನಿ ವ್ಲಾಗ್‌ನ ಸ್ಕ್ರೀನ್‌ಶಾಟ್.


    ಅದೇ ಯೂಟ್ಯೂಬ್ ವಿಡಿಯೋವನ್ನು ರೀಲ್‌ನ ರೂಪದಲ್ಲಿ ಏಪ್ರಿಲ್ ೧೭, ೨೦೨೪ ರಂದು ಆ ವ್ಲಾಗರ್ ನ ಇನ್ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ನಿರ್ದಿಷ್ಟ ರೀಲ್ ನಲ್ಲಿರುವ ದೇವಾಲಯ ವಯನಾಡಿನಲ್ಲಿ ಸ್ಥಾಪಿತವಾಗಿದೆ ಎಂದು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಸೀತಾ ರಾಮ ಮಂದಿರವು ಪಾಕಿಸ್ತಾನದ ಪಂಜಾಬ್‌ನಲ್ಲಿದೆ ಎಂದು ಮೂಲ ವೀಡಿಯೋದಲ್ಲಿನ ಪಠ್ಯ ಮತ್ತು ಇನ್‌ಸ್ಟಾಗ್ರಾಮ್ ಪೋಷ್ಟ್ ನ ಶೀರ್ಷಿಕೆಯು ಸ್ಪಷ್ಟಪಡಿಸುತ್ತದೆ.

    ಮೇ ೧೨, ೨೦೧೭ ರಂದು ಪ್ರಕಟವಾದ ಪಾಕಿಸ್ತಾನಿ ಜಾಲತಾಣ ದಿ ಫ್ರೈಡೇ ಟೈಮ್ಸ್‌ನ ವರದಿಯು ಈ ಸೀತಾ ರಾಮ ದೇವಾಲಯದ ಛಾಯಾಚಿತ್ರವನ್ನು ಒಳಗೊಂಡಿದೆ. ಈ ಚಿತ್ರ ಮತ್ತು ಯೂಟ್ಯೂಬ್ ವೀಡಿಯೋಗಳ ನಡುವಿನ ಹೋಲಿಕೆಯು ದೇವಾಲಯದ ಮೇಲೆ "ಓಂ" ಮತ್ತು "ಸೀತಾ ರಾಮ್" ಎಂಬ ಹಿಂದಿ ಶಾಸನಗಳನ್ನು ಒಳಗೊಂಡಿದೆ ಎಂದು ತಿಳಿಸುತ್ತದೆ.

    ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಸೀತಾ ರಾಮ ದೇವಾಲಯದ ಚಿತ್ರವನ್ನು ಒಳಗೊಂಡಿರುವ ದಿ ಫ್ರೈಡೆ ಟೈಮ್ಸ್ ವರದಿಯ ಸ್ಕ್ರೀನ್‌ಶಾಟ್.


    ಝಾಂಗ್ ಜಿಲ್ಲೆಯ ಅಹ್ಮದ್‌ಪುರ ಸಿಯಾಲ್‌ನ ತೆಹಸಿಲ್‌ನಲ್ಲಿರುವ ಸೀತಾ ರಾಮ ದೇವಾಲಯವು ೧೯ ನೇ ಶತಮಾನದಷ್ಟು ಹಿಂದಿನ ವಾಸ್ತುಶಿಲ್ಪದ ಹೆಗ್ಗುರುತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐತಿಹಾಸಿಕವಾಗಿ, ಅಹ್ಮದ್‌ಪುರ್ ಸಿಯಾಲ್ ಪ್ರಧಾನವಾಗಿ ಹಿಂದೂ ಪ್ರದೇಶವಾಗಿದ್ದು, ಹಲವಾರು ದೇವಾಲಯಗಳು ಮತ್ತು ಇತರ ಪೂಜಾ ಸ್ಥಳಗಳಿಗೆ ನೆಲೆಯಾಗಿತ್ತು. ೧೯೯೨ ರಲ್ಲಿ ಭಾರತದಲ್ಲಿ ನಡೆದ ಬಾಬರಿ ಮಸೀದಿ ಘಟನೆಯ ನಂತರ ಈ ದೇವಾಲಯವನ್ನು ಜನಸಮೂಹವು ಗುರಿಯಾಗಿರಿಸಿಕೊಂಡಿದೆ ಎಂದು ಸ್ಥಳೀಯ ಇತಿಹಾಸಕಾರರು ವಿವರಿಸಿದ್ದಾರೆ ಎಂದು ವರದಿಯು ಹೇಳುತ್ತದೆ. ಈ ದೇವಾಲಯದ ಮೂಲ ಉದ್ದೇಶವನ್ನು ಪೂರೈಸುವುದನ್ನು ನಿಲ್ಲಿಸಲಾಗಿದೆ ಮತ್ತು ಅದನ್ನು ಮಾರುಕಟ್ಟೆಯಾಗಿ ಪರಿವರ್ತಿಸಲಾಗಿದೆ. ದೇವಾಲಯದ ಅನೇಕ ಬೆಲೆಬಾಳುವ ವಸ್ತುಗಳನ್ನು ಸ್ಥಳೀಯ ಜನರು ತೆಗೆದುಕೊಂಡು ಹೋಗಿದ್ದಾರೆ ಎಂದೂ ವರದಿಯಾಗಿದೆ.

    ನಾವು ಈ ದೇವಾಲಯವನ್ನು ಗೂಗಲ್ ಮ್ಯಾಪ್ಸ್ ನಲ್ಲಿ ಪತ್ತೆಹಚ್ಚಿದ್ದೇವೆ, ಅದನ್ನು ಹಲವಾರು ಫೋಟೋಗಳೊಂದಿಗೆ ಹೋಲಿಸಿದ್ದೇವೆ ಮತ್ತು ಅವುಗಳು ಒಂದೇ ದೇವಾಲಯವನ್ನು ಚಿತ್ರಿಸುತ್ತವೆ ಎಂದು ಖಚಿತಪಡಿಸಲು ಅವುಗಳನ್ನು ಹೋಲಿಕೆ ಮಾಡಿದ್ದೇವೆ. ಪ್ರಸ್ತುತ, ದೇವಾಲಯವನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಪಟ್ಟಿ ಮಾಡಲಾಗಿದೆ ಮತ್ತು ಪಾಕಿಸ್ತಾನದ ಪಂಜಾಬ್‌ನ ಝಾಂಗ್ ಜಿಲ್ಲೆಯ ಅಹ್ಮದ್‌ಪುರ ಸಿಯಾಲ್‌ನಲ್ಲಿದೆ.


    ತೀರ್ಪು:

    ಈ ಹೇಳಿಕೆಯ ವಿಶ್ಲೇಷಣೆಯು ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ದೇವಾಲಯದ ಕಟ್ಟಡವು ಪಾಕಿಸ್ತಾನದಲ್ಲಿದೆ, ಕೇರಳದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಈ ವೀಡಿಯೋ ಕ್ಲಿಪ್ ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ಈ ಹೇಳಿಕೆಯನ್ನು ತಪ್ಪು ಎಂದು ಪರಿಗಣಿಸಿದ್ದೇವೆ.

    Claim Review :   Allegations of a meat shop operating under a temple in Wayanad, Kerala, are false.
    Claimed By :  X user
    Fact Check :  False
    IDTU - Karnataka

    IDTU - Karnataka