ಇಲ್ಲ, ಬಿಜೆಪಿಯು ಪ್ರಶಾಂತ್ ಕಿಶೋರ್ ಅವರನ್ನು ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿಲ್ಲ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇಮಕಾತಿ ಪತ್ರವನ್ನು ಹಂಚಿಕೊಂಡಿದ್ದಾರೆ, ಅದು ಭಾರತೀಯ ರಾಜಕೀಯ ಸಲಹೆಗಾರ ಮತ್ತು ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ಪಕ್ಷವು ನೇಮಿಸಿದೆ ಎಂದು ಹೇಳುತ್ತದೆ. ಆದರೆ, ವೈರಲ್ ಪತ್ರವು ನಕಲಿಯಾಗಿದೆ, ಏಕೆಂದರೆ ಪ್ರಶಾಂತ್ ಕಿಶೋರ್ ಅವರ ನೇಮಕಾತಿಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣಗಳು ಅಥವಾ ಪತ್ರಿಕಾ ಪ್ರಕಟಣೆಗಳಿಲ್ಲ.
ಹೇಳಿಕೆ:
ಎಕ್ಸ್ ನಲ್ಲಿನ ಬಳಕೆದಾರರು ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಹೇಳಿಕೊಂಡು ನೇಮಕಾತಿ ಪತ್ರದ ಚಿತ್ರವನ್ನು ಹಂಚಿಕೊಂಡಿದ್ದಾರೆ. ೮.೫ ಸಾವಿರ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರು ಮೇ ೨೨, ೨೦೨೪ ರಂದು ಈ ಚಿತ್ರವನ್ನು ಪೋಷ್ಟ್ ಮಾಡಿದ್ದಾರೆ, ಇದು ೩೨ ಸಾವಿರ ವೀಕ್ಷಣೆಗಳು, ೪೮೫ ಇಷ್ಟಗಳು ಮತ್ತು ೧೩೭ ಮರುಪೋಷ್ಟ್ ಗಳನ್ನು ಗಳಿಸಿದೆ.
ಬಿಜೆಪಿಯ ನೇಮಕಾತಿ ಪತ್ರವನ್ನು ತೋರಿಸುವುದಾಗಿ ಹೇಳಿಕೊಂಡು ಎಕ್ಸ್‌ನಲ್ಲಿ ಪೋಷ್ಟ್ ಮಾಡಿದ ಚಿತ್ರದ ಸ್ಕ್ರೀನ್‌ಶಾಟ್.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಈ ಆಪಾದಿತ ನೇಮಕಾತಿ ಪತ್ರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೈರಲ್ ಚಿತ್ರವನ್ನು ವಿಶ್ಲೇಷಿಸಿದಾಗ ಪತ್ರದಲ್ಲಿನ ದಿನಾಂಕ ಮೇ ೨೨, ೨೦೨೪ ಎಂದು ತೋರಿಸುತ್ತದೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಕೆಳಗೆ ಸಹಿ ಮಾಡಿದ್ದಾರೆ ಎಂದು ನೋಡಬಹುದು. ಅರುಣ್ ಸಿಂಗ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಅಥವಾ ಅವರ ಅಧಿಕೃತ ವೆಬ್‌ಸೈಟ್ ಪತ್ರವನ್ನು ಒಳಗೊಂಡ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ ಎಂದು ನಾವು ಗಮನಿಸಿದ್ದೇವೆ. ಬಿಜೆಪಿ, ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅಥವಾ ಪ್ರಶಾಂತ್ ಕಿಶೋರ್, ಅವರ ನೇಮಕದ ಬಗ್ಗೆ ಅಧಿಕೃತ ಧೃಡೀಕರಣವನ್ನು ಎಲ್ಲೂ ನೀಡಿಲ್ಲ.
ಮೇ ೨೨, ೨೦೨೪ ರಂದು ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಏಳು ಪತ್ರಿಕಾ ಪ್ರಕಟಣೆಗಳಿವೆ. ಆದರೆ ಇದರಲ್ಲಿ ಯಾವುದೂ ಪ್ರಶಾಂತ್ ಕಿಶೋರ್ ಅವರ ನೇಮಕಾತಿಯ ಬಗ್ಗೆ ಅಲ್ಲ. ವೆಬ್‌ಸೈಟ್‌ನಲ್ಲಿ ಒದಗಿಸಲಾದ ರಾಷ್ಟ್ರೀಯ ವಕ್ತಾರರ ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್ ಅವರ ಹೆಸರನ್ನು ಪಟ್ಟಿ ಮಾಡಲಾಗಿಲ್ಲ.
ನಾವು ಮೇ ೨೨, ೨೦೨೪ ರಂದು ಪ್ರಶಾಂತ್ ಕಿಶೋರ್ ಅವರ ರಾಜಕೀಯ ಪಕ್ಷವಾದ ಜನ್ ಸುರಾಜ್, ಈ ವೈರಲ್ ಹೇಳಿಕೆಯನ್ನು ನಿರಾಕರಿಸುವ ಮತ್ತು ಕಾಂಗ್ರೆಸ್ ನಕಲಿ ನೇಮಕಾತಿ ಪತ್ರವನ್ನು ಹಂಚಿಕೊಂಡಿದೆ ಎಂದು ಆರೋಪಿಸಿ ಎಕ್ಸ್ ಪೋಷ್ಟ್ ಅನ್ನು ಹಂಚಿಕೊಂಡಿರುವುದಾಗಿ ಕಂಡುಕೊಂಡಿದ್ದೇವೆ. ಈ ಪೋಷ್ಟ್ ನಲ್ಲಿ ಕಂಡುಬಂದ ಸ್ಕ್ರೀನ್‌ಶಾಟ್ ನಲ್ಲಿ ಕಾಂಗ್ರೆಸ್ ಪಕ್ಷದ ಸಂವಹನಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವೈರಲ್ ಪತ್ರವನ್ನು ಹಂಚಿಕೊಳ್ಳುತ್ತಿರುವುದನ್ನು ಕೂಡ ತೋರಿಸುತ್ತದೆ.
ಮೇ ೨೨, ೨೦೨೪ ರಂದು ಜನ್ ಸುರಾಜ್ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ತೀರ್ಪು:
ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿ ತನ್ನ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿದೆ ಎಂಬ ನಕಲಿ ನೇಮಕಾತಿ ಪತ್ರ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ ಎಂದು ವೈರಲ್ ಪತ್ರದ ವಿಶ್ಲೇಷಣೆ ದೃಢಪಡಿಸುತ್ತದೆ.