ಇಲ್ಲ, ಈ ವೀಡಿಯೋ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿವಾಸಿಗಳು ಭಾರತಕ್ಕೆ ಬೆಂಬಲವನ್ನು ಪ್ರತಿಜ್ಞೆ ಮಾಡುವುದನ್ನು ತೋರಿಸುತ್ತಿಲ್ಲ
ಸಾರಾಂಶ:
ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ನಿವಾಸಿಗಳು ಭಾರತ ಮತ್ತು ಭಾರತೀಯ ಸೇನೆಗೆ ತಮ್ಮ ಬೆಂಬಲವನ್ನು ವಾಗ್ದಾನ ಮಾಡುವುದನ್ನು ತೋರಿಸುವ ಈ ವೈರಲ್ ವೀಡಿಯೋ ತಪ್ಪು. ೨೦೨೩ ರ ಆಗಸ್ಟ್‌ನಲ್ಲಿ ತಮ್ಮ ಮೀಸಲಾತಿ ಹಕ್ಕುಗಳಿಗಾಗಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಉರಿಯ ಗುಜ್ಜರ್-ಬಕರ್ವಾಲ್ ಸಮುದಾಯಗಳ ಸದಸ್ಯರನ್ನು ವೀಡಿಯೋ ವಾಸ್ತವವಾಗಿ ಚಿತ್ರಿಸುತ್ತದೆ.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಪಾಕಿಸ್ತಾನ-ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುತ್ತಿದೆ.
ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) (ಬಕ್ಕರ್ ವಾಲ್) ಇಂದು ಭಾರತ ಮತ್ತು ನಮ್ಮ ಸೇನೆಯನ್ನು ಬೆಂಬಲಿಸುವುದಾಗಿ ಪ್ರತಿಜ್ಞೆ ಮಾಡಿದೆ. ೭೦ ವರ್ಷಗಳ ಕಾಲ ಸಾಧ್ಯವಾಗದೇ ಇದ್ದದ್ದು ಈಗ ಅನಾಯಾಸವಾಗಿ ನಡೆಯುತ್ತಿದೆ. ಜೈ ಹಿಂದ್.”
ಪಿಒಕೆ ಯ ಜನರು ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳುವ ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಸುಮಾರು ೧:೩೯ ನಿಮಿಷಗಳ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಜನಸಮೂಹವನ್ನು ಉದ್ದೇಶಿಸಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ತೋರಿಸುತ್ತದೆ. ಇದರಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸುವ ಮತ್ತು ಭಾರತದ ಕಾನೂನು ಮತ್ತು ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆಗಳು ಕೂಡ ಒಳಗೊಂಡಿವೆ.
"ಭಾರತದ ಕಾನೂನು ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ದೇಶದ ಪ್ರಗತಿಗೆ ಕೆಲಸ ಮಾಡಲು ನಾವು ಭಾರತೀಯ ಸೇನೆಯೊಂದಿಗೆ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತೇವೆ. ನಾವು, ಗುಜ್ಜರ್ ಬಕರ್ವಾಲ್ ಜನರು ದೇಶಕ್ಕಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡುತ್ತೇವೆ (ಹಿಂದಿಯಿಂದ ಅನುವಾದಿಸಲಾಗಿದೆ)," ಎಂದು ವೀಡಿಯೋದಲ್ಲಿ ಕೇಳಿಬರುತ್ತಿರುವ ಪ್ರಮಾಣವಚನದ ಭಾಗವಾಗಿದೆ.
ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು “जम्मू कश्मीर के गुर्जर बकरवाल अपनी जान की बाजी लगाने से भी पीछे नहीं हटेगा। जय हिंद” (ಜಮ್ಮು ಮತ್ತು ಕಾಶ್ಮೀರದ ಗುರ್ಜರ್ ಬಕರ್ವಾಲ್ ತಮಾ ಪ್ರಾಣವನ್ನು ಪಣಕ್ಕಿಡಲು ಹಿಂಜರಿಯುವುದಿಲ್ಲ. ಜೈ ಹಿಂದ್) ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೋಗೆ ಕರೆದೊಯ್ಯಿತು. ಈ ವೀಡಿಯೋ ಆಗಸ್ಟ್ ೨೦, ೨೦೨೩ ರಂದು ಭರತ್ ಕೆ ಗುರ್ಜರ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಆಗಸ್ಟ್ ೨೦೨೩ ರಲ್ಲಿ ಗುಜ್ಜರ್-ಬಕರ್ವಾಲ್ ಪ್ರದರ್ಶನದ ವೀಡಿಯೋವನ್ನು ಅಪ್‌ಲೋಡ್ ಮಾಡಿಧ ಭಾರತ್ ಕೆ ಗುರ್ಜರ್ ಯೂಟ್ಯೂಬ್ ಚಾನೆಲ್‌ನ ಸ್ಕ್ರೀನ್‌ಶಾಟ್.
ಹೆಚ್ಚಿನ ಹುಡುಕಾಟವು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಗುಜ್ಜರ್ ಬಕರ್ವಾಲ್ ಸಮುದಾಯಗಳ ಪ್ರತಿಭಟನೆ ಸೆರೆಹಿಡಿದಿದೆ ಎಂದು ಸ್ಪಷ್ಟವಾಗಿ ಹೇಳುವ ಶೀರ್ಷಿಕೆಗಳೊಂದಿಗೆ ದಿ ಗುಜ್ಜರ್ಸ್ ಆಫ್ ಉರಿ ಜೆ & ಕೆ, ದಿ ಪೀಪಲ್ಸ್ ವಾಯ್ಸ್ ಮತ್ತು ಚೌಧರಿ ನವಾಬ್ ಅಫೀಷಿಯಲ್ ಆಗಸ್ಟ್ ೨೦೨೩ ರ ಫೇಸ್‌ಬುಕ್ ಪೋಷ್ಟ್ ಗಳಿಗೆ ನಮ್ಮನ್ನು ಕರೆದೊಯ್ಯಿತು. ವೈರಲ್ ವೀಡಿಯೋದಲ್ಲಿ ಮೈಕ್ರೊಫೋನ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿಯನ್ನು ನಾವು ಉರಿಯ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ಅಧ್ಯಕ್ಷ ರಫೀಕ್ ಬಲೋಟೆ ಎಂದು ಗುರುತಿಸಿದ್ದೇವೆ.
ವೀಡಿಯೋವನ್ನು ವಿಶ್ಲೇಷಿಸುವ ಮೂಲಕ, ಇದು ಆಗಸ್ಟ್ ೧೯, ೨೦೨೩ ರಂದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಗುಜ್ಜರ್ ಬಕರ್ವಾಲ್ ಸಮುದಾಯ ನಡೆಸಿದ ಪ್ರತಿಭಟನೆಯೆಂದು ಸ್ಪಷ್ಟವಾಗಿದೆ. ನಿರ್ದಿಷ್ಟ ಮೇಲ್ಜಾತಿ ಸಮುದಾಯಗಳಿ
ಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನವನ್ನು ನೀಡಲು ಲೋಕಸಭೆಯಲ್ಲಿ ಪ್ರಸ್ತಾಪಿಸಲಾದ ಮಸೂದೆಯನ್ನು ಈ ಸಮುದಾಯಗಳು ತಮ್ಮ ಹಕ್ಕುಗಳು ಮತ್ತು ಮೀಸಲಾತಿಗಳಿಗೆ ಬೆದರಿಕೆಯಾಗುತ್ತದೆ ಎಂದು, ಅದರ ವಿರುದ್ಧ ನಡೆಸಿದ "ಎಸ್‌ಟಿ ಬಚಾವೋ ಆಂದೋಲನ" ದ ಭಾಗವಾಗಿ ಈ ಪ್ರತಿಭಟನೆ ನಡೆಯಿತು.
ಜಮ್ಮು ಮತ್ತು ಕಾಶ್ಮೀರದ ಈ ಬುಡಕಟ್ಟು ಸಮುದಾಯಗಳ ಒಳಗೊಳ್ಳುವಿಕೆಯನ್ನು ಸೂಚಿಸುವ "ಗುಜ್ಜರ್ ಬಕರ್ವಾಲ್ ಏಕ್ತಾ ಜಿಂದಾಬಾದ್" (ಗುಜ್ಜರ್-ಬಕರ್ವಾಲ್ ಏಕತೆ ಚಿರಾಯುವಾಗಲಿ) ಎಂಬ ಪಠ್ಯವನ್ನು ಹೊಂದಿರುವ ಪ್ರತಿಭಟನಾಕಾರರೊಬ್ಬರು ಹಿಡಿದಿರುವ ಫಲಕವನ್ನು ವೀಡಿಯೋ ಸ್ಪಷ್ಟವಾಗಿ ತೋರಿಸುತ್ತದೆ.
ವೀಡಿಯೋದ ಈ ಸ್ಕ್ರೀನ್‌ಶಾಟ್‌ಗಳು "ಗುಜ್ಜರ್ ಬಕರ್ವಾಲ್ ಏಕ್ತಾ ಜಿಂದಾಬಾದ್" ಎಂಬ ಫಲಕವನ್ನು ನಮಗೆ ಸ್ಪಷ್ಟವಾಗಿ ತೋರಿಸುತ್ತವೆ.
ತೀರ್ಪು:
ವೈರಲ್ ವೀಡಿಯೋ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ನಿವಾಸಿಗಳು ಭಾರತಕ್ಕೆ ಬೆಂಬಲವನ್ನು ಪ್ರತಿಜ್ಞೆ ಮಾಡುವುದನ್ನು ಚಿತ್ರಿಸುವುದಿಲ್ಲ. ಬದಲಾಗಿ, ಇದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿನ ಗುಜ್ಜರ್ ಮತ್ತು ಬಕರ್ವಾಲ್ ಸಮುದಾಯಗಳ ಸದಸ್ಯರನ್ನು ಅವರ ಮೀಸಲಾತಿ ಹಕ್ಕುಗಳ ಕುರಿತು ಆಗಸ್ಟ್ ೨೦೨೩ ರಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ತೋರಿಸುತ್ತದೆ. ವೀಡಿಯೋ ಪಿಒಕೆ ಯಿಂದ ಎಂದು ಸೂಚಿಸುವ ಹೇಳಿಕೆಗಳು ತಪ್ಪು.