- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ರಾಮೇಶ್ವರಂ ಕೆಫೆ...
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಮಚಂದ್ರ ಕಲ್ಸಂಗ್ರ ಎಂಬ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಎನ್‌ಐಎ ಬಂಧಿಸಿದೆ ಎಂಬ ಹೇಳಿಕೆ ತಪ್ಪು
ಸಾರಾಂಶ:
ಮಧ್ಯಪ್ರದೇಶ ಮೂಲದ ರಾಮಚಂದ್ರ ಕಲ್ಸಂಗ್ರಾ ಅವರು ೨೦೦೭ ರ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದು, ಎನ್‌ಐಎ ಅವರ ಮೇಲೆ ₹೧೦ ಲಕ್ಷ ನಗದು ಬಹುಮಾನ ಇಟ್ಟಿತ್ತು. ಕಲ್ಸಂಗ್ರಾ ೨೦೦೮ ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯೂ ಆಗಿದ್ದು, ತಲೆಮರೆಸಿಕೊಂಡಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿರುವ ಬಗ್ಗೆ ಎನ್‌ಐಎ ಯಾವುದೇ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಇದು ಈ ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ವೈಟ್ ಫೀಲ್ಡ್ ಪ್ರದೇಶದಲ್ಲಿರುವ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧, ೨೦೨೪ ರಂದು ಮಧ್ಯಾಹ್ನ ೧.೦೦ ಗಂಟೆಗೆ ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿತು, ಸುಮಾರು ಹತ್ತು ಜನರು ಗಾಯಗೊಂಡರು. ಬೆಂಗಳೂರಿನ ಕ್ರೈಂ ಬ್ರಾಂಚ್ ತನಿಖೆಯ ನೇತೃತ್ವ ವಹಿಸಿತ್ತು, ನಂತರ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಏನ್ಐಎ) ವಹಿಸಿಕೊಂಡಿತು. ತರುವಾಯ, ಎನ್‌ಐಎ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತನ ಅನೇಕ ಸಿಸಿಟಿವಿ ಚಿತ್ರಗಳನ್ನು ಬಿಡುಗಡೆ ಮಾಡಿತು ಮತ್ತು ಶಂಕಿತನ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿಗೆ ₹೧೦ ಲಕ್ಷ ನಗದು ಬಹುಮಾನವನ್ನು ಸಹ ಘೋಷಿಸಿತು.
ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ ₹೧೦ ಲಕ್ಷ ಬಹುಮಾನ ನೀಡುವುದಾಗಿ ಏನ್ಐಎ ಪ್ರಕಟಿಸಿದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಮುಂದಿನ ದಿನಗಳಲ್ಲಿ, ಶಂಕಿತನನ್ನು ಬಂಧಿಸಲಾಗಿದೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಮತ್ತು ಸುದ್ದಿವಾಹಿನಿಯ ಮಾಧ್ಯಮಗಳಲ್ಲಿ ಪ್ರಸಾರವಾದ ಸಂದರ್ಭಗಳಿವೆ, ಈ ವಿಷಯವನ್ನು ಸ್ಪಷ್ಟಪಡಿಸಲು ಅಧಿಕಾರಿಗಳನ್ನು ಪ್ರೇರೇಪಿಸಿತು. ಅದೇ ರೀತಿ, ಮಾರ್ಚ್ ೧೬ ರಂದು, ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ನಲ್ಲಿ ಭಾಗಿಯಾಗಿರುವ ರಾಮಚಂದ್ರ ಕಲ್ಸಂಗ್ರಾ ಅವರನ್ನು ಎನ್‌ಐಎ ಬಂಧಿಸಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳಲು ಪ್ರಾರಂಭಿಸಿದರು.
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಮಚಂದ್ರ ಕಲ್ಸಂಗ್ರ ಎಂಬ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಹೇಳುವ ಪೋಷ್ಟ್ ಗಳ ಜೊತೆಗೆ ಹಂಚಿಕೊಳ್ಳಲಾದ ಚಿತ್ರದ ಸ್ಕ್ರೀನ್‌ಶಾಟ್.
ಈ ಪೋಷ್ಟ್ ಗಳ ಜೊತೆಗೆ “ರಾಮೇಶ್ವರಂ ಕೆಫೆ ಸ್ಫೋಟ, ಭಯೋತ್ಪಾದಕ ಆರ್‌ಎಸ್‌ಎಸ್ ಕಾರ್ಯಕರ್ತ ರಾಮಚಂದ್ರ ಕಲ್ಸಂಗ್ರಾ ಅವರನ್ನು ಎನ್‌ಐಎ ಬಂಧಿಸಿದೆ” ಎಂದು ಬರೆಯಲಾಗಿದೆ. ಬಂಧಿತ ಆರೋಪಿಯು ಕರ್ನಾಟಕದ ಬಲಪಂಥೀಯ ವ್ಯಾಖ್ಯಾನಕಾರ ಮತ್ತು ಬರಹಗಾರ ಚಕ್ರವರ್ತಿ ಸೂಲಿಬೆಲೆ ಅವರ ಆಪ್ತ ಸಹಾಯಕ ಎಂದು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ, ಈ ಪೋಷ್ಟ್ ಗಳಲ್ಲಿ ಎನ್‌ಐಎ ಬಿಡುಗಡೆ ಮಾಡಿದ ಶಂಕಿತ ವ್ಯಕ್ತಿಯ ನಿಖರವಾದ ಚಿತ್ರ ಮತ್ತು ಬಂಧಿತ ರಾಮಚಂದ್ರ ಕಲ್ಸಂಗ್ರಾ ಎಂದು ಹೇಳಿಕೊಳ್ಳುವ ಮತ್ತೊಂದು ಫೋಟೋ ಕೂಡ ಇದೆ, ಇದು ಎನ್‌ಐಎ ಬಿಡುಗಡೆ ಮಾಡಿದ ಸಿಸಿಟಿವಿ ಚಿತ್ರದಲ್ಲಿರುವ ವ್ಯಕ್ತಿ ಎಂದು ಸೂಚಿಸುತ್ತದೆ.
ಪುರಾವೆ:
ರಾಮಚಂದ್ರ ಕಲ್ಸಂಗ್ರ ಎಂಬ ಹೆಸರನ್ನು ಹುಡುಕಿದಾಗ, ೨೦೦೭ ರಲ್ಲಿ ನವದೆಹಲಿಯ ಉತ್ತರದ ಪಾಣಿಪತ್ ಬಳಿ ಸಂಭವಿಸಿದ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಲ್ಲಿ ತಲೆಮರೆಸಿಕೊಂಡಿರುವ ಶಂಕಿತರಲ್ಲಿ ಒಬ್ಬ ಎಂದು ಹೆಸರಿಸಲಾಯಿತು ಎಂದು ಕಂಡುಕೊಂಡೆವು. ಈ ಘಟನೆಯು ಫೆಬ್ರವರಿ ೧೮, ೨೦೦೭ ರ ಮಧ್ಯರಾತ್ರಿ ಸಂಭವಿಸಿತು, ಎಪ್ಪತ್ತು ಜನರು ಸತ್ತರು ಮತ್ತು ಡಜನ್ಗಟ್ಟಲೆ ಗಾಯಗೊಂಡರು. ಎನ್‌ಐಎ ಜಾಲತಾಣದ ಪ್ರಕಾರ, ರಾಮಚಂದ್ರ ಕಲ್ಸಂಗ್ರಾ ಮಧ್ಯಪ್ರದೇಶ ಮೂಲದವರಾಗಿದ್ದು, ಅವರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅವರ ಹೆಸರಿದೆ. ೨೦೦೮ ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡವರ ಪಟ್ಟಿಯಲ್ಲಿದ್ದಾರೆ.
ರಾಮಚಂದ್ರ ಕಲ್ಸಂಗ್ರಾ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸುವ ಎನ್‌ಐಎ ಜಾಲತಾಣದಲ್ಲಿ ಪ್ರಕಟವಾದ ಮೋಸ್ಟ್ ವಾಂಟೆಡ್ ಲಿಸ್ಟ್‌ನ ಸ್ಕ್ರೀನ್‌ಶಾಟ್.
ಬ್ಯುಸಿನೆಸ್ ಸ್ಟ್ಯಾಂಡರ್ಡ್‌ನ ೨೦೧೩ ರ ಸುದ್ದಿ ವರದಿಯು ೨೦೦೭ ರ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಭಾಗಿಯಾಗಿರುವ ಮೂರು ಶಂಕಿತರನ್ನು ಬಂಧಿಸಲು ಕಾರಣವಾಗುವ ಮಾಹಿತಿಗಾಗಿ ಎನ್‌ಐಎ ನಗದು ಬಹುಮಾನವನ್ನು ಘೋಷಿಸಿದೆ ಎಂದು ಗಮನಿಸಿದೆ. ಸಂದೀಪ್ ಡಾಂಗೆ ಮತ್ತು ರಾಮಚಂದ್ರ ಕಲ್ಸಂಗ್ರ ಅವರ ಮೇಲೆ ₹೧೦ ಲಕ್ಷ ಮತ್ತು ಇನ್ನೊಬ್ಬ ಆರೋಪಿ ಅಶೋಕ್ ಮೇಲೆ ₹೨ ಲಕ್ಷ ಇನಾಮು ಹೊಂದಿದ್ದರು ಎಂದು ಅದು ಗಮನಿಸಿದೆ. ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಸ್ವಾಮಿ ಅಸೀಮಾನಂದ ಅವರು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು.
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಮುಖ ಬಂಧನಗಳನ್ನು ಎನ್‌ಐಎ ಖಚಿತಪಡಿಸಿಲ್ಲ. ಇದಲ್ಲದೆ, ತನಿಖಾ ಸಂಸ್ಥೆಯು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪಿ ಅಥವಾ ಬಂಧಿತ ವ್ಯಕ್ತಿಯ ಹೆಸರನ್ನು ಬಿಡುಗಡೆ ಮಾಡಿಲ್ಲ. ಎನ್‌ಐಎ ಬಿಡುಗಡೆ ಮಾಡಿದ ಚಿತ್ರದಲ್ಲಿನ ವ್ಯಕ್ತಿಯ ಬಂಧನ ಅಥವಾ ಬಂಧನಕ್ಕೆ ಕಾರಣವಾಗುವ ಮಾಹಿತಿಗಾಗಿ ₹೧೦ ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
ಇದಲ್ಲದೆ, ೨೦೦೭ ರ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ರಾಮಚಂದ್ರ ಕಲ್ಸಂಗ್ರಾ ಬಂಧನಕ್ಕೆ ಸಂಬಂಧಿಸಿದಂತೆ ಯಾವುದೇ ಸುದ್ದಿ ವರದಿಗಳು ಅಥವಾ ಅಧಿಕೃತ ದೃಢೀಕರಣಗಳಿಲ್ಲ. ಇತ್ತೀಚೆಗೆ, ಫೆಬ್ರವರಿ ೨೦೨೪ ರಲ್ಲಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಮೇಲ್ವಿಚಾರಣೆಯ ವಿಶೇಷ ಎನ್‌ಐಎ ನ್ಯಾಯಾಲಯವು ರಾಮಚಂದ್ರ ಕಲ್ಸಂಗ್ರ ಅವರ ವಿರುದ್ಧ ಅನೇಕ ವಾರಂಟ್‌ಗಳನ್ನು ಹೊರಡಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಕಾರಣ ಅವರ ಆಸ್ತಿಯನ್ನು ಜಪ್ತಿ ಮಾಡಲು ಆದೇಶಿಸಿತು.
ತೀರ್ಪು:
ಮಾರ್ಚ್ ೨೦೨೪ ರ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಮಚಂದ್ರ ಕಲ್ಸಂಗ್ರ ಎಂಬ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ. ಅವರು ತಮ್ಮ ಜಾಲತಾಣದಲ್ಲಿ ಏನ್ಐಎಯ ಮೋಸ್ಟ್ ವಾಂಟೆಡ್‌ಗಳಲ್ಲಿ ಒಬ್ಬರೆಂದು ಪಟ್ಟಿಮಾಡಲಾಗಿದೆ ಮತ್ತು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ವರ್ಗೀಕರಿಸಲಾಗಿದೆ. ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯಲ್ಲಿ ಯಾವುದೇ ಬಂಧನಗಳ ಬಗ್ಗೆ ಅಧಿಕಾರಿಗಳು ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪು.