- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಕೇರಳದ ಭಾರತಪುಳ ನದಿಯ...
ಕೇರಳದ ಭಾರತಪುಳ ನದಿಯ ನೀರಿನ ಮಟ್ಟ ಹೆಚ್ಚಿರುವ ವೀಡಿಯೋ ಕರ್ನಾಟಕದ ನೇತ್ರಾವತಿ ನದಿಯದೆಂದು ವೈರಲ್ ಆಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ತುಂಬಿ ಹರಿಯುತ್ತಿರುವ ನದಿಯೊಂದನ್ನು ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಇತ್ತೀಚೆಗೆ ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಯನ್ನು ದೃಶ್ಯಗಳು ತೋರಿಸುತ್ತವೆ ಎಂದು ಶೀರ್ಷಿಕೆ ಸೂಚಿಸುತ್ತದೆ. ಆದರೆ, ಕೇರಳದ ಪಾಲಕ್ಕಾಡ್‌ನ ಪಟ್ಟಾಂಬಿಯಲ್ಲಿ ತುಂಬಿ ಹರಿಯುತ್ತಿರುವ ಭಾರತಪುಳ ನದಿಯನ್ನು ವೀಡಿಯೋ ತೋರಿಸುತ್ತದೆ. ಹಾಗಾಗಿ ಈ ಹೇಳಿಕೆ ತಪ್ಪು.
ಹೇಳಿಕೆ:
ಜುಲೈ ೨೦೨೪ ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಪ್ರಬಲವಾದ ಮುಂಗಾರು ಮಳೆಯಿಂದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಪ್ರವಾಹಗಳಾಗಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಉಕ್ಕಿ ಹರಿಯುತ್ತಿರುವ ನದಿಯ ೩೦ ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ನದಿಯಲ್ಲಿ ಹೆಚ್ಚಿನ ನೀರಿನ ಮಟ್ಟವನ್ನು ವೀಡಿಯೋ ತೋರಿಸುತ್ತದೆ ಎಂದು ಶೀರ್ಷಿಕೆ ಸೂಚಿಸುತ್ತದೆ. ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಜುಲೈ ೩೦, ೨೦೨೪ ರಂದು ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ - "ನೇತ್ರಾವತಿ ನದಿಯ ನೀರಿನ ಮಟ್ಟವು ಕರ್ನಾಟಕದ ಉಪ್ಪಿನಂಗಡಿ, ಪುತ್ತೂರಿನಲ್ಲಿ ಅಪಾಯದ ಮಟ್ಟವನ್ನು ತಲುಪಿದೆ." ಯೂಟ್ಯೂಬ್‌ನಲ್ಲಿ ಇನ್ನೊಬ್ಬರು ಆಗಸ್ಟ್ ೩ ರಂದು ವೀಡಿಯೋವನ್ನು ಹಂಚಿಕೊಂಡು, ಅದರ ಶೀರ್ಷಿಕೆಯಲ್ಲಿ ಅದು ಶಿವಮೊಗ್ಗ ಬೈಪಾಸ್ ಬಳಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದನ್ನು ತೋರಿಸುತ್ತದೆ ಎಂದು ಸೂಚಿಸಿದ್ದಾರೆ.
ಜುಲೈ ೩೦, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಅದು ನಮ್ಮನ್ನು ಜುಲೈ ೩೦, ೨೦೨೪ ರಂದು ಕೇರಳದ ವಿದ್ಯುತ್ ಸಚಿವ ಕೆ ಕೃಷ್ಣನ್‌ಕುಟ್ಟಿ ಅವರ ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತು. ವೀಡಿಯೋದ ಮಲಯಾಳಂ ಶೀರ್ಷಿಕೆಯು ಹೀಗೆಂದು ಹೇಳುತ್ತದೆ - "ಪಾಲಕ್ಕಾಡ್ ಜಿಲ್ಲಾಧಿಕಾರಿಗಳ ಸೂಚನೆ. ಭಾರತಪುಳ ತುಂಬಿ ಹರಿಯುತ್ತಿರುವುದರಿಂದ ಪಟ್ಟಾಂಬಿ ಸೇತುವೆ ಮೂಲಕ ಸಂಚಾರ ನಿಷೇಧಿಸಲಾಗಿದೆ. ಅಗತ್ಯ ವಿಷಯಗಳಿಗೆ ಪ್ರಯಾಣಿಸಬೇಕಾದವರು ಬೇರೆ ಮಾರ್ಗಗಳಲ್ಲಿ ಪ್ರಯಾಣ ಮುಂದುವರಿಸಬೇಕು" (ಅನುವಾದಿಸಲಾಗಿದೆ).
ಜುಲೈ ೩೦, ೨೦೨೪ ರಂದು ಕೆ ಕೃಷ್ಣನ್‌ಕುಟ್ಟಿಯವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಕೇರಳದ ಪಾಲಕ್ಕಾಡ್‌ನ ಪಟ್ಟಾಂಬಿ ಸೇತುವೆಯ ಬಳಿ ಭಾರತಪುಳ ನದಿ ಉಕ್ಕಿ ಹರಿಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಎಕ್ಸ್ ಪೋಸ್ಟ್ ಹೇಳುತ್ತದೆ. ಇದನ್ನು ಸುಳಿವಾಗಿ ತೆಗೆದುಕೊಂಡು ನಾವು "ಪಟ್ಟಾಂಬಿ ಸೇತುವೆ," "ಪಾಲಕ್ಕಾಡ್," "ಭಾರತಪುಳ," ಮತ್ತು "ಓವರ್ ಫ್ಲೋಯಿಂಗ್" ನಂತಹ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಇದು ಜುಲೈ ೩೦, ೨೦೨೪ ರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ನಮ್ಮನ್ನು ಕರೆದೊಯ್ಯಿತು.
ವರದಿಯ ಪ್ರಕಾರ, ಜುಲೈ ೩೦ ರಂದು ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳನ್ನು ಸಂಪರ್ಕಿಸುವ ಪಟ್ಟಾಂಬಿ ಸೇತುವೆಯನ್ನು ಜಿಲ್ಲಾಧಿಕಾರಿಗಳು ಮುಚ್ಚಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚುವುದಾಗಿ ಜಿಲ್ಲಾಧಿಕಾರಿಗಳು ಘೋಷಿಸಿದರು.
ಜುಲೈ ೩೦, ೨೦೨೪ ರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಸ್ಕ್ರೀನ್‌ಶಾಟ್.
ನಾವು ವೈರಲ್ ವೀಡಿಯೋವನ್ನು ಪಟ್ಟಾಂಬಿ ಸೇತುವೆಗೆ ಜಿಯೋಲೊಕೇಟ್ ಮಾಡಿದ್ದೇವೆ. ಇತರ ಸುದ್ದಿ ಮಾಧ್ಯಮಗಳಾದ ದಿ ಟೈಮ್ಸ್ ಆಫ್ ಇಂಡಿಯಾ ಮತ್ತು ಏಷ್ಯಾನೆಟ್ ನ್ಯೂಸ್ ಜುಲೈ ೨೦೨೪ ರಲ್ಲಿ ಈ ಘಟನೆಯನ್ನು ವರದಿ ಮಾಡಿವೆ. ಈ ವರದಿಗಳು ಕೇರಳದ ಭಾರತಪುಳ ನದಿಯನ್ನು ವೀಡಿಯೋ ತೋರಿಸುತ್ತದೆ ಎಂದು ಸ್ಪಷ್ಟಪಡಿಸುತ್ತದೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಕೇರಳದ ಪಾಲಕ್ಕಾಡ್‌ನ ಪಟ್ಟಾಂಬಿ ಸೇತುವೆಯ ಬಳಿ ಉಕ್ಕಿ ಹರಿಯುತ್ತಿರುವ ಭಾರತಪುಳ ನದಿಯನ್ನು ತೋರಿಸುತ್ತದೆ ಎಂದು ಬಹಿರಂಗಪಡಿಸುತ್ತದೆ. ಹಾಗಾಗಿ ಈ ವೀಡಿಯೋ ಕರ್ನಾಟಕದದ್ದು ಎಂಬ ಹೇಳಿಕೆ ತಪ್ಪು.