- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಹೈದರಾಬಾದ್ ಪೂಜಾ...
ಹೈದರಾಬಾದ್ ಪೂಜಾ ಪೆಂಡಾಲ್‌ನಲ್ಲಿ ಧ್ವಂಸಗೊಂಡಿರುವ ದುರ್ಗಾ ಮೂರ್ತಿಯ ವೀಡಿಯೋವನ್ನು ತಪ್ಪು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ
ಸಾರಾಂಶ:
ಪೂಜಾ ಪೆಂಡಾಲ್‌ನಲ್ಲಿ ಹಾನಿಗೊಳಗಾದ ದುರ್ಗಾ ಮೂರ್ತಿಯ ವೀಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ ಮತ್ತು ಅದು ಹೈದರಾಬಾದ್‌ನಲ್ಲಿ ನಡೆದಿದೆ ಮತ್ತು ವಿಧ್ವಂಸಕತೆಗೆ ಮುಸ್ಲಿಮರೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಆದರೆ, ಅಸ್ಥಿರ ಮಾನಸಿಕ ಸ್ಥಿತಿಯಲ್ಲಿದ್ದ ಹಿಂದೂ ವ್ಯಕ್ತಿಯೊಬ್ಬ ಹಸಿವಿನಿಂದ ಹಾನಿಯನ್ನುಂಟುಮಾಡಿದ್ದಾನೆ ಮತ್ತು ಯಾವುದೇ ಧಾರ್ಮಿಕ ಉದ್ದೇಶಗಳನ್ನು ಒಳಗೊಂಡಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಹೈದರಾಬಾದ್‌ನ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ವಿಧ್ವಂಸಕ ದೃಶ್ಯವನ್ನು ತೋರಿಸುವ ೪೫ ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ದುರ್ಗಾ ದೇವಿಯ ಮುರಿದುಹಾಕಿರುವ ಮೂರ್ತಿಯನ್ನು ತೋರಿಸುತ್ತದೆ, ಅದರ ಒಂದು ಕೈ ಮುರಿದು ನೆಲದ ಮೇಲೆ ಬಿದ್ದಿರುತ್ತದೆ. ವೀಡಿಯೋವು ಪೂಜಾ ಪೆಂಡಾಲ್ ಆದ್ಯಂತ, ಅಲ್ಲಲ್ಲಿ ಬಿಸಾಡಿರುವ ಕಾಣಿಕೆಗಳು ಮತ್ತು ಅಲಂಕಾರಗಳನ್ನು ತೋರಿಸುತ್ತದೆ, ಉದ್ದೇಶಪೂರ್ವಕ ಅಪವಿತ್ರ ಕ್ರಿಯೆಯನ್ನು ಸೂಚಿಸುತ್ತದೆ. ವೀಡಿಯೋದೊಂದಿಗೆ ಹಂಚಿಕೊಂಡಿರುವ ಶೀರ್ಷಿಕೆಯು ಹೀಗಿದೆ, "ಇದು ಎಲ್ಲೋ ದೂರದ ಪಾಕಿಸ್ತಾನ ಮತ್ತು ಪಕ್ಕದ ಬಾಂಗ್ಲಾದೇಶದಲ್ಲಿ ನಡೆದಿರುವ ಘಟನೆ ಅಲ್ಲವೇ ಅಲ್ಲ. ನಮ್ಮ ಪಕ್ಕದ ಕಾಂಗ್ರೆಸ್ ಆಡಳಿತದ ತೆಲಂಗಾಣದ ಹೈದರಾಬಾದ್ ನಗರದಲ್ಲಿ...ದುರ್ಗಾ ಮಾತೆಯನ್ನ ಧ್ವಂಸ ಮಾಡಿದ್ದಾರೆ." ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿನ ಇತರ ಬಳಕೆದಾರರು ಸಹ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ಮುಸ್ಲಿಮರಿಂದ ಹಿಂದೂ ಧಾರ್ಮಿಕ ಸ್ಥಳದ ಮೇಲೆ ಉದ್ದೇಶಿತ ದಾಳಿಯಾಗಿದೆ ಎಂದು ಸೂಚಿಸಿದ್ದಾರೆ.
ಅಕ್ಟೋಬರ್ ೧೨, ೨೦೨೪ ರಂದು ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ವೈರಲ್ ವೀಡಿಯೋ ಮತ್ತು ಹೇಳಿಕೆಯ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದು ಪ್ರತಿಷ್ಠಿತ ಸ್ಥಳೀಯ ಮತ್ತು ರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಂದ ಹಲವಾರು ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಅಕ್ಟೋಬರ್ ೧೧, ೨೦೨೪ ರಂದು ಹೈದರಾಬಾದ್‌ನ ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ತೆಲಂಗಾಣ ಟುಡೇ ವರದಿ ಮಾಡಿದೆ. ವರದಿಯ ಪ್ರಕಾರ, ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಹಂಚಿಕೊಂಡಿರುವ ನಿರೂಪಣೆಯು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡ ಸತ್ಯಗಳಿಗಿಂತ ಭಿನ್ನವಾಗಿದೆ. ಎಎನ್‌ಐ ನ್ಯೂಸ್ ಜೊತೆ ಮಾತನಾಡಿದ ಡಿಸಿಪಿ ಅಕ್ಷಾಂಶ್ ಯಾದವ್, ಸುತ್ತಾಮುತ್ತಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಶಂಕಿತನನ್ನು ಅದೇ ರಾತ್ರಿ ೮:೧೫ ರ ವೇಳೆಗೆ ಬಂಧಿಸಿದ್ದಾರೆ ಎಂದು ಹೇಳಿದರು. ಆರೋಪಿಯನ್ನು ನಾಗರಕರ್ನೂಲ್ ಜಿಲ್ಲೆಯ ಕೃಷ್ಣಯ್ಯ ಗೌಡ್ (೩೨) ಎಂದು ಗುರುತಿಸಿದ್ದಾರೆ.
ಅಕ್ಟೋಬರ್ ೧೨, ೨೦೨೪ ರಂದು ಎಏನ್ಐ ನ್ಯೂಸ್ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪೊಲೀಸರು ಕೃಷ್ಣಯ್ಯ ಗೌಡ್ ಅನ್ನು ಹಿಂದೂ ಎಂದು ಗುರುತಿಸಿದ್ದಾರೆ ಮತ್ತು ಆತನ ಮಾನಸಿಕ ಸ್ಥಿತಿ ಅಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಅವನು ಬೆಳಗಿನ ಜಾವವೇ ಪೂಜೆ ಪೆಂಡಾಲ್ ಗೆ ಅಲೆದಾಡಿದ್ದು, ಹಸಿವಿನಿಂದ ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿ ಮೂರ್ತಿಯನ್ನು ಹಾನಿಗೊಳಿಸಿದ್ದಾನೆ ಮತ್ತು ಆಹಾರ ಸಿಗದ ಕಾರಣ ಕಾಣಿಕೆಗಳನ್ನು ಚದುರಿಸಿದ್ದಾರೆ ಎಂದು ಡಿಸಿಪಿ ಯಾದವ್ ವಿವರಿಸಿದರು. ವಿಧ್ವಂಸಕ ಕೃತ್ಯದ ಸಮಯದಲ್ಲಿ ಯಾವುದೇ ಸಂಘಟಕರು ಪೆಂಡಾಲ್‌ನಲ್ಲಿ ಇರಲಿಲ್ಲದ ಕಾರಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಕಾರ್ಯಕ್ರಮ ಸಂಘಟಕರ ವಿರುದ್ಧ ಕೂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಅಕ್ಟೋಬರ್ ೧೧, ೨೦೨೪ ರಂದು ಪ್ರಕಟವಾದ ತೆಲಂಗಾಣ ಟುಡೇ ವರದಿಯ ಸ್ಕ್ರೀನ್‌ಶಾಟ್.
ಯಾವುದೇ ವಿಶ್ವಾಸಾರ್ಹ ವರದಿಗಳು ಘಟನೆಯಲ್ಲಿ ಯಾವುದೇ ಮುಸ್ಲಿಂ ವ್ಯಕ್ತಿಗಳ ಒಳಗೊಳ್ಳುವಿಕೆಯನ್ನು ಅಥವಾ ಕೋಮುವಾದಿ ನಿರೂಪಣೆಯನ್ನು ಉಲ್ಲೇಖಿಸಿಲ್ಲ. ಇದು ಅಸ್ಥಿರ ಮಾನಸಿಕ ಸ್ಥಿತಿಯಲ್ಲಿ ಹಸಿದ ವ್ಯಕ್ತಿಯನ್ನು ಒಳಗೊಂಡ ಘಟನೆಯೇ ಹೊರತು ಯಾವುದೇ ಧಾರ್ಮಿಕ ಗುಂಪಿನ ಉದ್ದೇಶಿತ ದಾಳಿಯಲ್ಲ ಎಂದು ಪೊಲೀಸ್ ಹೇಳಿಕೆಗಳು ದೃಢಪಡಿಸುತ್ತವೆ.
ತೀರ್ಪು:
ವೈರಲ್ ವೀಡಿಯೋವಿನ ವಿಶ್ಲೇಷಣೆಯು ಹೈದರಾಬಾದ್‌ನ ಪೂಜಾ ಪೆಂಡಾಲ್‌ನಲ್ಲಿ ಮಾನಸಿಕವಾಗಿ ಅಸ್ಥಿರನಾಗಿದ್ದ ವ್ಯಕ್ತಿಯೊಬ್ಬ ದುರ್ಗಾ ಮೂರ್ತಿಯನ್ನು ಧ್ವಂಸಗೊಳಿಸಿದ್ದಾನೆ ಎಂದು ಬಹಿರಂಗಪಡಿಸುತ್ತದೆ. ವಿಧ್ವಂಸಕ ಕೃತ್ಯದಲ್ಲಿ ಮುಸ್ಲಿಂ ವ್ಯಕ್ತಿ ಅಥವಾ ಧಾರ್ಮಿಕ ಉದ್ದೇಶಗಳು ಭಾಗಿಯಾಗಿಲ್ಲ. ಆದ್ದರಿಂದ, ಈ ವೀಡಿಯೋ ಕ್ಲಿಪ್‌ನೊಂದಿಗೆ ಹಂಚಿಕೊಂಡಿರುವ ಕೋಮುವಾದಿ ಹೇಳಿಕೆ ತಪ್ಪು.