- Home
- /
- ಸತ್ಯ ಪರಿಶೀಲನೆಗಳು
- /
- ಲೋಕಸಭಾ ಚುನಾವಣೆಯಲ್ಲಿ...
ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗೆಲ್ಲಬೇಕೆಂದು ಗೋವನ್ನು ಬಲಿ ಕೊಡಲಾಗಿದೆ ಎಂಬುದು ಸುಳ್ಳು
ಮರಕ್ಕೆ ಕಟ್ಟಿ ಹಸುವೊಂದರ ತಲೆಗೆ ಗುರಿ ಇಟ್ಟು ಗುಂಡು ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಕೆಲವು ಎಕ್ಸ್ ಖಾತೆಯ ಬಳಕೆದಾರರು ಈ ವಿಡಿಯೋವನ್ನು ಕಾಂಗ್ರೆಸ್‌ಗೆ ಸಂಬಂಧಿಸಿದೆ ಎಂದು ಆರೋಪಿಸಿ ಹಂಚಿಕೊಂಡಿದ್ದಾರೆ.
“ಕಾಂಗ್ರೆಸ್ ಪಕ್ಷವು ಹಿಂದೂಗಳ ಮೇಲಿನ ದ್ವೇಷದ ಉತ್ತುಂಗವನ್ನು ದಾಟಿದೆ. ಈ ಕಿಡಿಗೇಡಿಯ ಹೆಸರು ಮೊಹಮ್ಮದ್ ಮುಜಾಹಿದ್ ಇಸ್ಲಾಂ ಮತ್ತು ಈತ ಕೇರಳ ಕಾಂಗ್ರೆಸ್‌ನ ಮಾಧ್ಯಮ ಉಸ್ತುವಾರಿ || ರಾಹುಲ್ ಗಾಂಧಿ ಗೆಲುವಿಗಾಗಿ ಗೋವನ್ನು ಗುಂಡಿಟ್ಟು ಬಲಿ ಕೊಟ್ಟದ್ದು ಹಿಂದೂಗಳ ಮೇಲಿನ ದ್ವೇಷದ ಪರಮಾವಧಿ ಈ ವೀಡಿಯೋವನ್ನು ತುಂಬಾ ಶೇರ್ ಮಾಡಿ ಅದು ಭಾರತದ ಗೃಹ ಸಚಿವಾಲಯವನ್ನು ತಲುಪುತ್ತದೆ ಮತ್ತು ಅವನು ಬಂಧನಕ್ಕೊಳಗಾಗುತ್ತಾನೆ” ಎಂಬ ಹೇಳಿಕೆಯೊಂದಿಗೆ ಫೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಬರಹವನ್ನೊಳಗೊಂಡ ಪೋಸ್ಟ್ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿಯೂ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂದು, ಕೇರಳದ ಮೊಹಮ್ಮದ್ ಮುಜಾಹಿದ್ ಎಂಬ ಮುಸ್ಲಿಂ ವ್ಯಕ್ತಿ ಹಸುವನ್ನು ಬಲಿಕೊಟ್ಟಿದ್ದಾನೆ ಎಂದು ಪ್ರತಿಪಾದಿಸಿ ಕೋಮು ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಸುವಿಗೆ ಶೂಟ್ ಮಾಡುತ್ತಿರುವ ದೃಶ್ಯಗಳನ್ನು ಮತ್ತೊಬ್ಬ ವ್ಯಕ್ತಿ ಚಿತ್ರೀಕರಿಸುವುದನ್ನು ನೋಡಬಹುದು. ಹಾಗಿದ್ದರೆ ಈ ವೈರಲ್ ವಿಡಿಯೋದಲ್ಲಿರುವ ದೃಶ್ಯಗಳು ಕೇರಳ ಕಾಂಗ್ರೆಸ್‌ಗೆ ಸಂಬಂಧಿಸಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 7 ಮೇ 2024ರಂದು ಫ್ರೀ ಪ್ರೆಸ್ ಜರ್ನಲ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.
ಫ್ರೀ ಪ್ರೆಸ್ ಜರ್ನಲ್ ಪ್ರಕಟಿಸಿದ ವರದಿಯ ಪ್ರಕಾರ, ಮಣಿಪುರದ ಕುಕಿ ಸಮುದಾಯದ ವ್ಯಕ್ತಿಯೊಬ್ಬ ಹಸುವಿನ ತಲೆಗೆ ಎರಡು ಬಾರಿ ಗುಂಡು ಹಾರಿಸುತ್ತಿರುವುದನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಕ್ತಿಯ ವಿರುದ್ಧ ಆಕ್ರೋಶ ಹೊರಹಾಕಿ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಮುಂದುವರೆದು ವರದಿಯಲ್ಲಿ ಎಕ್ಸ್ ಬಳಕೆದಾರರು ಹಂಚಿಕೊಂಡ ಪೋಸ್ಟ್‌ಅನ್ನು ಉಲ್ಲೇಖಿಸಲಾಗಿದ್ದು, ಸುನಂದಾ ರಾಯ್ ಎಂಬ ಎಕ್ಸ್ ಬಳಕೆದಾರರ ಪೋಸ್ಟ್‌ನ ಹೇಳಿಕೆಯ ಪ್ರಕಾರ “ಕ್ರಿಶ್ಚಿಯನ್ ಕುಕಿ ಉಗ್ರಗಾಮಿಯೊಬ್ಬ ಮಣಿಪುರದಲ್ಲಿ ಹಿಂದೂಗಳನ್ನು ಅಪಹಾಸ್ಯ ಮಾಡಲು ಹಸುವಿನ ತಲೆಗೆ ಎರಡು ಬಾರಿ ಗುಂಡು ಹಾರಿಸಿ ಅದನ್ನು ಚಿತ್ರೀಕರಿಸಿಕೊಂಡಿದ್ದಾನೆ. ಕುಕಿ ಭಯೋತ್ಪಾದಕರು ಸಾವಿರಾರು ಮೈತೇಯಿ ಜನರನ್ನು ಕೊಲ್ಲುತ್ತಿದ್ದಾರೆ.
ಮೈತೇಯಿ ರೈತರು ಜೀವನ ನಿರ್ವಹಣೆ ಮತ್ತು ಡೈರಿ ಉತ್ಪನ್ನಗಳಿಗಾಗಿ ಸಾಕಿರುವ ಜಾನುವಾರು ಮತ್ತು ಹಸುಗಳನ್ನು ಕೊಲ್ಲುವುದು ಕಾನೂನುಬಾಹಿರ ಆದರೆ ಕುಕಿಗಳು ಮೋಜಿಗಾಗಿ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆಪಾಧಿಸಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಎಂದು ವರದಿಯಾಗಿದೆ.
ವಿಡಿಯೋ ವೈರಲ್ ಆಗುತ್ತಿದಂತೆ ಪ್ರತಿಕ್ರಿಸಿರುವ PETA( People for the Ethical Treatment of Animals) ತಂಡ. ಘಟನೆಗೆ ಸಂಬಂಧಿಸಿದಂತೆ ಮಣಿಪುರ ಪೊಲೀಸ್ ಸೈಬರ್ ಕ್ರೈಮ್ ತಂಡವನ್ನು ಸಂಪರ್ಕಿಸಿ ಮತ್ತಷ್ಟು ವಿವರಗಳನ್ನು ಕಲೆಹಾಕುತ್ತಿದ್ದೇವೆ, ಆರೋಪ ಖಚಿತವಾದ ನಂತರ ನಾವು ಎಫ್‌ಐಆರ್ ದಾಖಲಿಸಲು ಸಂಬಂಧಪಟ್ಟ ಜಿಲ್ಲಾ ಪೊಲೀಸರೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆಂದು PETA ಪ್ರತಿಕ್ರಿಯಿಸಿದೆ ಎಂದು ವರದಿಯಾಗಿದೆ.
ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ ವೈರಲ್ ವಿಡಿಯೋದಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ಕೇರಳದಲ್ಲ. ಬದಲಿಗೆ ಹಿಂಸಾಚಾರದಿಂದ ನಲುಗುತ್ತಿರುವ ಮಣಿಪುರದ್ದು ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಣಿಪುರದ ಕುಕಿ ವ್ಯಕ್ತಿಯೊಬ್ಬ ಹಸುವಿನ ತಲೆಗೆ ಗುಂಡು ಹೊಡೆದ ದೃಶ್ಯಗಳನ್ನು ಕೇರಳ ಕಾಂಗ್ರೆಸ್ ಮುಸ್ಲಿಂ ಕಾರ್ಯಕರ್ತ 2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಗೆಲ್ಲಬೇಕೆಂದು ಹಸುವನ್ನು ಬಲಿಕೊಟ್ಟಿದ್ದಾನೆ ಎಂದು ಕೋಮು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುವ ಮೂಲಕ ಜನರನ್ನು ತಪ್ಪುದಾರಿಗೆಳೆಯಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.