- Home
- /
- ಸತ್ಯ ಪರಿಶೀಲನೆಗಳು
- /
- ಹೈದರಾಬಾದ್‌ನಿಂದ ಪಶ್ಚಿಮ...
ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಬದಲಿಸಿದ್ದರು ಎಂಬುವುದು ಸುಳ್ಳು
“ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ. ಕಾವಲುಗಾರ ವಾಹನ ಹೀಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರೂ ಜಿಹಾದಿಗಳು ವಾಹನವನ್ನು ಹೀಗೆ ಕಳುಹಿಸಲು ಹಠ ಹಿಡಿದಿದ್ದಾರೆ. ಇದು ಯಾವ ರೀತಿಯ ಮನಸ್ಥಿತಿ? ಯಾವುದೇ ಸುದ್ದಿ ವಾಹಿನಿಯು ಈ ಸುದ್ದಿಯನ್ನು ತೋರಿಸುತ್ತಿಲ್ಲ, ದಯವಿಟ್ಟು ಇದನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಇದರಿಂದ ಕೇಂದ್ರ ಸರ್ಕಾರವು ಇದರ ಬಗ್ಗೆ ಗಮನ ಹರಿಸಬೇಕು ಮತ್ತು ಅಂತಹ ಮೂರ್ಖರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂಬ ಬರಹದೊಂದಿಗೆ ರೈಲಿನ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿರುವ ರೈಲಿನ ಮುಂಭಾಗವನ್ನು ಗುಂಬಝ್ ರೀತಿಯ ಬ್ಯಾನರ್‌ನಿಂದ ಅಲಂಕರಿಸಲಾಗಿದೆ. ರೈಲಿನ ಬಲ ಬದಿಯಲ್ಲಿ ಅರಬಿಕ್ ಭಾಷೆಯ ಬ್ಯಾನರ್‌ವೊಂದು ಕಾಣಿಸುತ್ತಿದೆ. ಅಲ್ಲದೆ, ಕೆಲ ವ್ಯಕ್ತಿಗಳು ರೈಲಿಗೆ ಯಾವುದೋ ಸ್ಟಿಕ್ಕರ್ ಅಂಟಿಸುವುದನ್ನು ನೋಡಬಹುದು.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಮಾಹಿತಿ ಹುಡುಕಿದಾಗ ಹಲವಾರು ಮಾಧ್ಯಮಗಳು ಈ ಕುರಿತು ಈಗಾಗಲೇ ಫ್ಯಾಕ್ಟ್‌ಚೆಕ್ ಸುದ್ದಿ ಪ್ರಕಟಿಸಿರುವುದು ಕಂಡು ಬಂದಿದೆ.
ಕನ್ನಡದ ಏನ್‌ಸುದ್ದಿ ವೆಬ್‌ಸೈಟ್ ಮಾಡಿರುವ ಫ್ಯಾಕ್ಟ್‌ಚೆಕ್ ಅನ್ನು ನಾವು ಪರಿಶೀಲಿಸಿದಾಗ ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ವಾಡಿಯ ಬಳಿಯ ಹಲ್ಕಟ್ಟಾ ಶರೀಫ್‌ನ ಉರೂಸ್ ಪ್ರಯುಕ್ತ ದಕ್ಷಿಣ ಮಧ್ಯ ರೈಲ್ವೇ ವಿಶೇಷ ರೈಲಿನ ವ್ಯವಸ್ಥೆ ಮಾಡಿತ್ತು. ಅದಕ್ಕೆ ಮುಸ್ಲಿಮರು ಈ ರೀತಿ ಅಲಂಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
2023ರ ಆಗಸ್ಟ್ 1 ರಂದು ಹೈದರಾಬಾದ್‌ನಿಂದ ಕಲಬುರಗಿಯ ವಾಡಿ ಜಂಕ್ಷನ್‌ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ಹಲ್ಕಟ್ಟಾ ಶರೀಫ್‌ನಲ್ಲಿ ಹಝರತ್ ಖ್ವಾಜಾ ಸೈಯದ್ ಮೊಹಮ್ಮದ್ ಬಡೇಶ ಕ್ವಾದ್ರಿ ಚಿಸ್ತಿ ಯಮಾನಿ ಅವರ ಉರೂಸ್ ಆಚರಣೆಯಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನಾಲ್ಕು ವಿಶೇಷ ರೈಲುಗಳನ್ನು ಓಡಿಸಲಾಗಿತ್ತು ಎಂಬ ಮಾಹಿತಿ ದೊರೆತಿದೆ.
ಜುಲೈ 27, 2023 ರಂದು ದಕ್ಷಿಣ ಮಧ್ಯ ರೈಲ್ವೆ ಉರೂಸ್ ಪ್ರಯುಕ್ತ ಹೈದರಾಬಾದ್-ವಾಡಿ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿತ್ತು. ಅದನ್ನು ಕೆಳಗೆ ನೋಡಬಹುದು.
ಹಲ್ಕಟ್ಟಾ ದರ್ಗಾ ಶರೀಫ್ ಉರೂಸ್ ಪ್ರಯುಕ್ತ ವಿಶೇಷ ರೈಲಿನ ವ್ಯವಸ್ಥೆ ಮಾಡಿರುವ ಕುರಿತು ಅನೇಕರು ಯೂಟ್ಯೂಬ್‌ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ಲಿಂಕ್ ಕೆಳಗಿದೆ.
ವೈರಲ್ ವಿಡಿಯೋಲ್ಲಿರುವ ರೈಲು ಮತ್ತು ಯೂಟ್ಯೂಬ್ ವಿಡಿಯೋದಲ್ಲಿರುವ ರೈಲು ಒಂದೇ ಎಂಬುವುದನ್ನು ಕೆಳಗಿನ ಫೋಟೋ ಮೂಲಕ ಖಚಿತಪಡಿಸಬಹುದು.
ನಮ್ಮ ಪರಿಶೀಲನೆಯಲ್ಲಿ ಕಂಡು ಬಂದ ಅಂಶವೆಂದರೆ, ಹಲ್ಕಟ್ಟಾ ಶರೀಫ್ ದರ್ಗಾಕ್ಕೆ ನಿಗದಿಪಡಿಸಲಾದ ವಿಶೇಷ ರೈಲನ್ನು ಮುಸ್ಲಿಮರು ಅಲಂಕರಿಸಿದ ವಿಡಿಯೋವನ್ನು ಹಂಚಿಕೊಂಡು “ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ” ಎಂದು ಸುಳ್ಳು ಸುದ್ದಿ ಹರಿಬಿಡಲಾಗಿದೆ.