- Home
- /
- ಸತ್ಯ ಪರಿಶೀಲನೆಗಳು
- /
- ಕರ್ನಾಟಕದಲ್ಲಿ ಮುಸ್ಲಿಮರು...
ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು
“ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ” ಎಂದು ಎಕ್ಸ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ.
ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಅದಕ್ಕೂ ಮುನ್ನ ವಿಡಿಯೋವನ್ನು ಸರಿಯಾಗಿ ಗಮನಿಸಿದ್ದೇವೆ. ಈ ವೇಳೆ ಜೀಪ್ ಮುಂಭಾಗ ಫಾರೆಸ್ಟ್ ಎಂದು ಬರೆದಿರುವುದು ಮತ್ತು ಹಸುವಿನ ಕಳೇಬರದ ಮೇಲೆ ಶ್ರದ್ದಾಂಜಲಿ ಅರ್ಪಿಸಿದಂತೆ ಹೂವು ಹಾಕಿರುವುದು ಮತ್ತು ಜೀಪ್ ಹಿಂಭಾಗದ ಕಟ್ಟಡದ ಮೇಲೆ ಮಳಯಾಲಂ ಭಾಷೆಯಲ್ಲಿ ಬೋರ್ಡ್ ಹಾಕಿರುವುದು ನಾವು ನೋಡಿದ್ದೇವೆ.
ಈ ಅಂಶಗಳ ಆಧಾರದಲ್ಲಿ ಗೂಗಲ್‌ನಲ್ಲಿ ಮಾಹಿತಿ ಹುಡುಕಿದಾಗ 17 ಫೆಬ್ರವರಿ 2024ರಂದು ಆಂಗ್ಲ ಭಾಷೆಯ ಫ್ರೀ ಪ್ರೆಸ್ ಜರ್ನಲ್ ಪ್ರಕಟಿಸಿದ್ದ ಸುದ್ದಿಯೊಂದು ದೊರೆತಿದೆ. “Video: Angry Mob Ties Dead Cow Over Forest Department Jeep In Protest Against Wild Animal Attacks In Kerala’s Wayanad” ಎಂಬ ಶೀರ್ಷಿಕೆಯ ಸುದ್ದಿಯಲ್ಲಿ, ‘ಕೇರಳದ ವಯನಾಡಿನಲ್ಲಿ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಆಡಳಿತಾರೂಢ ಎಲ್‌ಡಿಎಫ್, ಪ್ರತಿಪಕ್ಷ ಯುಡಿಎಫ್ ಮತ್ತು ಬಿಜೆಪಿ ಜಿಲ್ಲಾದ್ಯಂತ ಕರೆ ನೀಡಿರುವ ಹರತಾಳ ಶನಿವಾರ ಪುಲ್ಪಲ್ಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವಾಹನಕ್ಕೆ ಹಾನಿ ಮಾಡಿ, ಹುಲಿ ದಾಳಿಯಿಂದ ಮೃತಪಟ್ಟಿದೆ ಎನ್ನಲಾದ ಹಸುವಿನ ಕಳೇಬರವನ್ನು ಅದಕ್ಕೆ ಕಟ್ಟಿದ್ದಾರೆ’ ಎಂದು ಹೇಳಲಾಗಿದೆ.
ಫೆಬ್ರವರಿ 17,2024ರಂದು ಆನ್ ಮನೋರಮಾ ಈ ಕುರಿತು ವರದಿ ಪ್ರಕಟಿಸಿತ್ತು, ವರದಿಯಲ್ಲಿ “ಪ್ರತಿಭಟನಾಕಾರರು ಅರಣ್ಯ ಇಲಾಖೆ ವಾಹನದ ಮೇಲೆ ದಾಳಿ ನಡೆಸಿದ್ದು, ಅದರ ಚಕ್ರದ ಗಾಳಿಯನ್ನು ತೆಗೆದು ಟಾಪ್ ಹರಿದಿದ್ದಾರೆ. ಹುಲಿ ದಾಳಿಗೆ ಬಲಿಯಾದ ಹಸುವಿನ ಕಳೇಬರವನ್ನು ಜೀಪಿನ ಬಾನೆಟ್ ಮೇಲೆ ಕಟ್ಟಿದ್ದರು. ಈ ಘಟನೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾದ ಕಾರಣ ಪೋಲಿಸರು ಎರಡು ಬಾರಿ ಲಾಠಿ ಚಾರ್ಜ್ ನಡೆಸಿದ್ದು, ಉದ್ರಿಕ್ತರ ಗುಂಪು ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪುಲ್ಪಲ್ಲಿ ನಗರದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದೆ” ಎಂದು ಹೇಳಲಾಗಿದೆ.
ಫೆಬ್ರವರಿ 18,2024ರಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‘ Wayanad human-wildlife conflict: Anger boils over as protests spill onto streets in Pulpally ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ “ಶುಕ್ರವಾರ ಕಾಡಾನೆ ದಾಳಿಯಲ್ಲಿ ಅರಣ್ಯ ಇಲಾಖೆ ವೀಕ್ಷಕ ವಿ ಪಿ ಪೌಲ್ ಸಾವನ್ನಪ್ಪಿದ್ದನ್ನು ಖಂಡಿಸಿ ರಾಜಕೀಯ ಬೇಧವಿಲ್ಲದೆ ನೂರಾರು ಜನರು ಶನಿವಾರ ಪುಲ್ಪಲ್ಲಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಆಕ್ರೋಶಗೊಂಡ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ದೃಶ್ಯಗಳಿಗೆ ಪುಲ್ಪಲ್ಲಿ ಪಟ್ಟಣ ಸಾಕ್ಷಿಯಾಯಿತು. ಜನಸಂದಣಿಯು ಅರಣ್ಯ ಇಲಾಖೆಯ ಜೀಪ್ ಅನ್ನು ಅಡ್ಡಗಟ್ಟಿ ಹಾನಿಗೊಳಿಸಿದಾಗ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಮೂಡನಕೊಲ್ಲಿಯಲ್ಲಿ ಹುಲಿ ದಾಳಿಯಿಂದ ಹತ್ಯೆಯಾದ ಹಸುವಿನ ಕಳೇಬರವನ್ನು ತಂದು ಜೀಪಿನ ಬಾನೆಟ್ ಮೇಲೆ ಕಟ್ಟಿದ್ದರು ಎಂದಿದೆ.
ನಾವು ನಡೆಸಿದ ಪರಿಶೀಲನೆಯಲ್ಲಿ, ‘ಕೇರಳದ ವಯನಾಡಿನಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಹುಲಿ ದಾಳಿಯಿಂದ ಸಾವನ್ನಪ್ಪಿದ್ದ ಹಸುವಿನ ಕಳೇಬರವನ್ನು ಅರಣ್ಯ ಇಲಾಖೆಯ ಜೀಪಿನ ಬಾನೆಟ್‌ಗೆ ಕಟ್ಟಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಇದು ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ನಡೆಸಿದ ವಿಡಿಯೋ ಅಲ್ಲ.