Begin typing your search above and press return to search.
    ಸತ್ಯ ಪರಿಶೀಲನೆಗಳು

    ಯಾದಗಿರಿಯಲ್ಲಿ ರೈತನ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಂಡಿದೆ ಎಂಬುವುದು ಸುಳ್ಳು

    IDTU - Karnataka
    7 Jun 2024 10:04 AM GMT
    ಯಾದಗಿರಿಯಲ್ಲಿ ರೈತನ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಂಡಿದೆ ಎಂಬುವುದು ಸುಳ್ಳು
    x

    ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ರೈತರೊಬ್ಬರ ಜಮೀನನನ್ನು ವಕ್ಫ್ ಬೋರ್ಡ್‌ ಕಿತ್ತುಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹಬ್ಬಿದೆ.

    ಡಿಜಿಟಲ್ ನ್ಯೂಸ್ ಆಪ್‌ ಒಂದರಲ್ಲಿ ತೆಲುಗು ಭಾಷೆಯಲ್ಲಿ ಪ್ರಕಟಗೊಂಡ ಸುದ್ದಿಯನ್ನು ಹಲವು ಬಲಪಂಥೀಯ ಎಕ್ಸ್‌ ಬಳಕೆದಾರರು ಹಂಚಿಕೊಂಡಿದ್ದಾರೆ.

    Tathvam-asi(@ssaratht) ಎಂಬ ಎಕ್ಸ್ ಬಳಕೆದಾರೊಬ್ಬರು ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡು ” ಮತ್ತೊಂದು ಲ್ಯಾಂಡ್ ಜಿಹಾದ್. ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ರೈತ ಅರ್ಜುನಪ್ಪ ತಮ್ಮ ಜಮೀನು ವಕ್ಫ್ ಮಂಡಳಿ ಸ್ವಾಧೀನಪಡಿಸಿಕೊಂಡಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ”

    “ಅವರ ಜಮೀನಿನಲ್ಲಿ ಬಹಳ ಹಿಂದೆಯೇ ದರ್ಗಾ ನಿರ್ಮಿಸಲಾಗಿದ್ದು, ಮಗಳ ಮದುವೆಗಾಗಿ ಜಮೀನು ಮಾರಾಟ ಮಾಡಲು ಮುಂದಾದಾಗ ಅಧಿಕಾರಿಗಳು ಈ ಜಮೀನು ವಕ್ಫ್ ಮಂಡಳಿಗೆ ಸೇರಿದ್ದು, ಅದರ ಮೇಲೆ ತನಗೆ ಯಾವುದೇ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.”

    https://naanugauri.com/wp-content/uploads/2024/06/fdhgfjhgf.jpg

    “ಒಂದು ವೇಳೆ ಭೂಮಿಯನ್ನು ಮರಳಿ ಪಡೆಯಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ರೈತನ ಆಯ್ಕೆಯಾಗಿದೆ. ಅವರು 3 ವರ್ಷಗಳಿಂದ ಇದಕ್ಕಾಗಿ ಹೋರಾಡುತ್ತಿದ್ದಾರೆ. ಇದು ಹಿಂದೂಗಳ ಭವಿಷ್ಯ. ಇದು ಎಲ್ಲೆಡೆ ನಡೆಯುತ್ತಿದೆ. ತಮಿಳುನಾಡು, ತೆಲಂಗಾಣ ಅಥವಾ ಕರ್ನಾಟಕವಾಗಲಿ ವಕ್ಫ್ ಭೂ ಕಬಳಿಕೆ ನಿಜ.”

    “ಇತ್ತೀಚೆಗೆ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ದೊಡ್ಡ ಸಂಸ್ಥೆಗಳಿಗೂ ಈ ತೊಂದರೆ ಎದುರಾಗಿದೆ ಎಂಬುವುದನ್ನು ನೆನಪಿಸಿಕೊಳ್ಳಿ. ಅವರು ಶ್ರೀಮಂತರು ಮತ್ತು ಪ್ರಸಿದ್ಧರು, ಅವರು ನ್ಯಾಯಾಲಯಗಳಿಗೆ ಹೋಗಿ ವಕ್ಫ್ ವಿರುದ್ದ ಹೋರಾಡಿದು. ಆದರೆ, ಒಬ್ಬ ಬಡ ಹಿಂದೂ 3 ವರ್ಷಗಳಿಂದ ಯಾವುದೇ ಬೆಂಬಲವಿಲ್ಲದೆ ಹೋರಾಡುತ್ತಿದ್ದಾನೆ. ಕಾನೂನು ಶ್ರೀಮಂತರಿಗೆ ಮಾತ್ರ ಎಂಬುವುದು ಇದರಿಂದ ಸಾಬೀತಾಗಿದೆ.” ಎಂದು ಬರೆದುಕೊಂಡಿದ್ದಾರೆ.

    ‘My India My Pride'(@munothbharath) ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಅದೇ ರೀತಿ ಪೋಸ್ಟ್ ಹಾಕಲಾಗಿದೆ.

    https://naanugauri.com/wp-content/uploads/2024/06/gfdhfgjgh.jpg

    ಫ್ಯಾಕ್ಟ್‌ಚೆಕ್ : ವೈರಲ್ ಸುದ್ದಿಯ ಸತ್ಯಾಸತ್ಯತೆ ತಿಳಿಯಲು ನಾವು ಮೊದಲು ಯಾದಗಿರಿ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ರೈತನಿಂದ ಜಮೀನು ವಾಪಸ್ ಪಡೆದುಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆಗಿದೆಯಾ? ಎಂದು ಪರಿಶೀಲಿಸಿದ್ದೇವೆ. ಈ ವೇಳೆ ಅಂತಹ ಯಾವುದೇ ಸುದ್ದಿ ನಮಗೆ ಕಂಡು ಬಂದಿಲ್ಲ.

    ಯಾದಗಿರಿ ಜಿಲ್ಲೆಯಲ್ಲಿ ಶಾಬಾದ್‌ ಎಂಬ ಗ್ರಾಮ ಇದೆಯೇ ಎಂಬ ಬಗ್ಗೆ ನಾವು ಪರಿಶೀಲಿಸಿದ್ದೇವೆ. ಯಾದಗಿರಿ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್‌ನಲ್ಲಿ ‘ಶಾಬಾದ್‌’ ಎಂಬ ಗ್ರಾಮದ ಹೆಸರು ಕಂಡು ಬಂದಿಲ್ಲ.

    ವೈರಲ್ ಸುದ್ದಿಯಲ್ಲಿರುವ ದರ್ಗಾ ಎನ್ನಲಾದ ಕಟ್ಟಡದ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ಅದು ‘ನಾಗ್ಪುರದಲ್ಲಿರುವ ಬಾಬಾ ಆಶಿಕ್‌ ಶಾಲ ಮಶೂಕ್‌ ಶಾ ರಹ್ಮತುಲ್ಲಾ ಅಲೈಹಿ ಇಸಾಸನಿ ತೆಕ್ಡಿ’ ಹೆಸರಿನ ದರ್ಗಾ ಎಂದು ಕಂಡು ಬಂದಿದೆ. ಈ ಕುರಿತ ಫೇಸ್‌ಬುಕ್ ಪೇಜ್ ಕೂಡ ಲಭ್ಯವಾಗಿದೆ.

    https://naanugauri.com/wp-content/uploads/2024/06/dfsdgfh.jpg

    ಗೂಗಲ್ ಮ್ಯಾಪ್‌ನಲ್ಲಿ ಸರ್ಚ್ ಮಾಡಿದಾಗ ನಾಗ್ಪುರದ ಇಸಸಾನಿಯಲ್ಲಿ ‘ಬಾಬಾ ಆಶಿಕ್‌ ಶಾಲ ಮಶೂಕ್‌ ಶಾ ರಹ್ಮತುಲ್ಲಾಹಿ ಅಲೈಹಿ’ ದರ್ಗಾ ಇದೆ ಎಂದು ಕಂಡುಕೊಂಡಿದ್ದೇವೆ.

    https://naanugauri.com/wp-content/uploads/2024/06/WhatsApp-Image-2024-06-07-at-3.15.29-PM-300x198.jpeg

    ಗೂಗಲ್ ಮ್ಯಾಪ್ ಫೋಟೋ


    https://naanugauri.com/wp-content/uploads/2024/06/WhatsApp-Image-2024-06-07-at-3.15.12-PM-300x232.jpeg


    ವೈರಲ್ ಸುದ್ದಿಯಲ್ಲಿರುವ ಫೋಟೋ

    ವೈರಲ್‌ ಸುದ್ದಿಯಲ್ಲಿರುವ ಫೋಟೋ ಮತ್ತು ಗೂಗಲ್‌ ಮ್ಯಾಪ್‌ ಫೋಟೋ ಎರಡನ್ನೂ ಪರಿಶೀಲಿಸಿದ ವೇಳೆ ಎರಡರಲ್ಲೂ ಸಾಮ್ಯತೆ ಕಂಡು ಬಂದಿದೆ.

    ಈ ಕುರಿತು ಇನ್ನಷ್ಟು ಖಚಿತಪಡಿಸಿಕೊಳ್ಳಲು ಯಾದಗಿರಿ ಜಿಲ್ಲೆಯ ವಕ್ಫ್ ಅಧಿಕಾರಿಯೊಬ್ಬರ ಜೊತೆ ನಾವು ದೂರವಾಣಿ ಮೂಲಕ ಮಾತನಾಡಿದ್ದೇವೆ. ಅವರು “ಈ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ವೈರಲ್ ಸುದ್ದಿಯಲ್ಲಿರುವ ಜಮೀನಿನ ಸರ್ವೆ ನಂಬರ್ ಕೊಟ್ಟರೆ ನಾವು ಪರಿಶೀಲನೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.

    ವೈರಲ್ ಸುದ್ದಿಯಲ್ಲಿ ವಕ್ಫ್ ಇಲಾಖೆ ರೈತನ ಜಮೀನು ಕಿತ್ತುಕೊಂಡಿದೆ ಎಂದು ಹೇಳಲಾಗಿದೆ. ಆದರೆ, ವಕ್ಫ್ ಅಧಿಕಾರಿ ಈ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ. ಅಲ್ಲದೆ, ವೈರಲ್ ಸುದ್ದಿಯಲ್ಲಿರುವ ದರ್ಗಾ ಎನ್ನಲಾದ ಕಟ್ಟಡದ ಫೋಟೋವನ್ನು ಗೂಗಲ್‌ನಲ್ಲಿ ಹುಡುಕಿದಾಗ, ಅದು ನಾಗ್ಪುರದ ಒಂದು ದರ್ಗಾವನ್ನು ತೋರಿಸುತ್ತಿದೆ. ಆದ್ದರಿಂದ ವೈರಲ್ ಸುದ್ದಿ ಸುಳ್ಳು ಎಂದು ಹೇಳಬಹುದು.


    Claim Review :   It is a lie that the waqf board acquired the land of a farmer in yadagiri
    Claimed By :  X user
    Fact Check :  False
    IDTU - Karnataka

    IDTU - Karnataka