- Home
- /
- ಸತ್ಯ ಪರಿಶೀಲನೆಗಳು
- /
- ಕರ್ನಾಟಕದಲ್ಲಿ ಮೋದಿ...
ಕರ್ನಾಟಕದಲ್ಲಿ ಮೋದಿ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ ತಗುಲಿದೆ ಎಂಬುವುದು ಸುಳ್ಳು
ಕರ್ನಾಟಕದಲ್ಲಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ ತಗುಲಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
“ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಹೋದಾಗ, ಐದು ಜನ ಕಾಂಗ್ರೆಸ್ ಕಾರ್ಯಕರ್ತರ (ಲುಂಗಿ) ಪಂಚೆಗೆ ಬೆಂಕಿ ತಗುಲಿ ಎಲ್ಲರೂ ಓಡಿ ಹೋದ ಘಟನೆ ನಡೆದಿದೆ. ಈಗ ಮೋದಿ ಪ್ರತಿಕೃತಿ ಕೂಡ ವಿರೋಧಿಗಳಿಗೆ ಪಾಠ ಕಲಿಸಲು ಪಾರಂಭಿಸಿದೆ. ಇದೇ ಮೋದಿ ಹೆಸರಿಗಿರುವ ಶಕ್ತಿ” ಎಂದು ಪ್ರತಿಪಾದಿಸಿ ಎಂದು ಬರೆದುಕೊಂಡು ಅನೇಕರು ವಿಡಿಯೋ ಹಂಚಿಕೊಂಡಿದ್ದಾರೆ.
ಒಟ್ಟು 29 ಸೆಕೆಂಡ್‌ಗಳ ಅವಧಿಯ ಈ ವಿಡಿಯೋದಲ್ಲಿ ಪ್ರತಿಭಟನಾಕಾರರ ಗುಂಪೊಂದು ನೀಲಿ ಬಣ್ಣದ ಧ್ವಜಗಳನ್ನು ಹಿಡಿದು, ಘೋಷಣೆ ಕೂಗುತ್ತಾ ಬಂದು ವೃತ್ತವೊಂದರ ಬಳಿ ಪ್ರತಿಕೃತಿಯನ್ನು ದಹಿಸಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ, ಪಂಚೆ ಮತ್ತು ಬಟ್ಟೆಗೆ ಬೆಂಕಿ ತಗುಲಿ ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋಗುವುದನ್ನು ನೋಡಬಹುದು.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲನೆ ನಡೆಸಿದ್ದೇವೆ. ವಿಡಿಯೋ ಸ್ಕ್ರೀನ್ ಶಾಟ್ ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದಾಗ ವೆಬ್‌ಸೈಟ್ ಒಂದರಲ್ಲಿ “KSU march at Pathanamthitta, fire accident” ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಕಾಣಿಸಿಕೊಂಡಿದೆ.
“KSU march at Pathanamthitta, fire accident” ಎಂಬುವುದನ್ನು ನಾವು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಮಲಯಾಳಂನ ಏಷ್ಯಾನೆಟ್ ನ್ಯೂಸ್ (Asianetnews) 5 ಜುಲೈ 2012ರಂದು ‘Lucky Fire Escape for KSU workers in Pathanamthitta’ ಎಂಬ ಹೆಸರಿನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ.
ವಿಡಿಯೋ ಲಿಂಕ್ ಇಲ್ಲಿದೆ
ವಿಡಿಯೋದಲ್ಲಿ ಹೇಳುವಂತೆ ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ (ಎಂಜಿ) ವಿಶ್ವ ವಿದ್ಯಾನಿಲಯದ ಉಪ ಕುಲಪತಿ ವಿರುದ್ದ ಭಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆ ಪತ್ತನಂತಿಟ್ಟ ಜಿಲ್ಲಾ ಕೇರಳ ಸ್ಟೂಡೆಂಟ್ ಯೂನಿಯನ್ (ಕೆಎಸ್‌ಯು) ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯ ಕೊನೆಯಲ್ಲಿ ಪತ್ತನಂತಿಟ್ಟದ ಸೆಂಟ್ರಲ್ ಜಂಕ್ಷನ್‌ನಲ್ಲಿ ಎಂ.ಜಿ ವಿವಿ ಉಪಕುಲಪತಿಯ ಪ್ರತಿಕೃತಿ ದಹಿಸಲು ಪ್ರತಿಭಟನಾನಿರತರು ಮುಂದಾಗಿದ್ದರು. ಈ ವೇಳೆ ಅವರ ಪಂಚೆಗೆ ಬೆಂಕಿ ತಗುಲಿದೆ. ಆಗ ಅಪಾಯದಿಂದ ತಪ್ಪಿಸಿಕೊಳ್ಳಲು ಅವರು ದಿಕ್ಕಾಪಾಲಾಗಿ ಓಡಿದ್ಧಾರೆ. ಕೆಲವರು ಪ್ರಾಣ ರಕ್ಷಣೆಗಾಗಿ ಬೆಂಕಿ ತಗುಲಿದ್ದ ತಮ್ಮ ಪಂಚೆ ಬಿಟ್ಟು ಓಡಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಜುಲೈ 24, 2012ರಂದು ಟೈಮ್ಸ್ ಆಫ್ ಇಂಡಿಯಾ “Petion Seeks statewide ban on effigy burning” ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಈ ಸುದ್ದಿಯಲ್ಲಿ ಪ್ರತಿಭಟನೆಗಳ ವೇಳೆ ಪ್ರತಿಕೃತಿ ದಹಿಸುವುದಕ್ಕೆ ನಿಷೇಧ ಹೇರುವಂತೆ ಕೋರಿ ವ್ಯಕ್ತಿಯೊಬ್ಬರು ಕೇರಳ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರ ಬಗ್ಗೆ ತಿಳಿಸಲಾಗಿತ್ತು. ಸುದ್ದಿಯಲ್ಲಿ ನಾವು ಮೇಲೆ ಉಲ್ಲೇಖಿಸಿದ ಪತ್ತನಂತಿಟ್ಟದ ಲುಂಗಿಗೆ ಬೆಂಕಿ ತಗುಲಿದೆ ಘಟನೆಯನ್ನು ಉಲ್ಲೇಖಿಸಲಾಗಿತ್ತು.
ಹಾಗಾಗಿ, ಕರ್ನಾಟಕದಲ್ಲಿ ಪ್ರಧಾನಿ ಮೋದಿಯವರ ಪ್ರತಿಕೃತಿ ದಹಿಸುವಾಗ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ ತಗುಲಿದೆ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್ ಸುಳ್ಳು. ಕರ್ನಾಟಕದಲ್ಲಿ ಆ ರೀತಿಯ ಘಟನೆ ನಡೆದ ಬಗ್ಗೆ ಎಲ್ಲೂ ವರದಿಯಾಗಿಲ್ಲ.